ಬೆಂಗಳೂರು: 'ಕೇಂದ್ರ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಮಿಕ ಸಮುದಾಯವನ್ನು ಬೀದಿಗೆ ತಳ್ಳಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಟೀಕಿಸಿದರು.
ಕೆಪಿಸಿಸಿ ಕಚೇರಿಯ ಭಾರತ್ ಜೋಡೊ ಭವನದಲ್ಲಿ ಶನಿವಾರ ನಡೆದ 'ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್' (ಇಂಟಕ್) ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, 'ದುಡಿಯುವ ಕಾರ್ಮಿಕರ ಶಕ್ತಿಯೇ, ಈ ದೇಶದ ಶಕ್ತಿ. ದೇಶದಲ್ಲಿ ಪ್ರಬಲ ಕಾರ್ಮಿಕ ಶಕ್ತಿಯಾಗಿ ಇಂಟಕ್ ಬೆಳೆಯಬೇಕಿದೆ' ಎಂದರು.
'ದುಡಿಯುವ ಕೈಗಳಿಗೆ ಕೆಲಸ ನೀಡಲು ಯುಪಿಎ ಸರ್ಕಾರ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತಂದಿತ್ತು. ಇದು ಕೇವಲ ಕಾರ್ಯಕ್ರಮವಾಗಿರದೆ ಉದ್ಯೋಗ ಖಾತರಿಪಡಿಸುವ ಕಾನೂನು ಆಗಿತ್ತು. ಈ ಯೋಜನೆಯನ್ನೆ ಬುಡಮೇಲು ಮಾಡಲು ಮೋದಿ ಸರ್ಕಾರ ಹೊರಟಿದೆ. ಇದರ ವಿರುದ್ಧ ತೀವ್ರ ಹೋರಾಟವನ್ನು ಸಂಘಟಿಸಬೇಕಿದೆ. ಕಾರ್ಮಿಕರ ಹಕ್ಕುಗಳಿಗಾಗಿ ಕಾಂಗ್ರೆಸ್ ಪಕ್ಷ ಬೀದಿಗಿಳಿದು ಹೋರಾಟ ಮಾಡಲಿದೆ' ಎಂದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಮಾತನಾಡಿ, '12 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ರೈತರು ಹಾಗೂ ಕಾರ್ಮಿಕರ ಹಿತಾಸಕ್ತಿಯನ್ನು ನಿರಂತರವಾಗಿ ಕಡೆಗಣಿಸಿದೆ. ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿ ಕಾಯುವುದನ್ನೇ ತನ್ನ ಆಡಳಿತದ ಪ್ರಮುಖ ಆದ್ಯತೆಯನ್ನಾಗಿ ಮಾಡಿಕೊಂಡಿದೆ. ಇದರಿಂದಾಗಿ ಕಾರ್ಮಿಕರ ಹಕ್ಕುಗಳು ದುರ್ಬಲಗೊಂಡಿವೆ' ಎಂದು ದೂರಿದರು.
'ಉದ್ಯೋಗ ಭದ್ರತೆ, ನ್ಯಾಯಯುತ ವೇತನ ಮತ್ತು ಸಾಮಾಜಿಕ ಭದ್ರತೆಯಂತಹ ಮೂಲಭೂತ ಹಕ್ಕುಗಳ ಮೇಲೂ ಕೇಂದ್ರ ಸರ್ಕಾರದ ನೀತಿಗಳು ಪ್ರತಿಕೂಲ ಪರಿಣಾಮ ಬೀರಿವೆ. ದುಡಿಯುವ ವರ್ಗದ ಧ್ವನಿಯನ್ನು ನಿರ್ಲಕ್ಷಿಸಿ ಕಾರ್ಪೊರೇಟ್ ಪರ ನೀತಿಗಳನ್ನು ಜಾರಿಗೊಳಿಸಿರುವುದು ದೇಶದ ಕಾರ್ಮಿಕ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯವಾಗಿದೆ' ಎಂದರು.
ಕಾರ್ಮಿಕ ನಾಯಕ ಹಾಗೂ ಮಾಜಿ ಸಂಸದ ಸಂಜೀವ್ ರೆಡ್ಡಿ, ಎನ್.ಎಂ. ಅಡ್ಯಂತಾಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಮತ್ತಿತರರು ಇದ್ದರು.

