ಕಾಸರಗೋಡು: ಕೇರಳ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕೆಎಸ್‌ಆರ್‌ಸಿಟಿಇ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆಯಿಂದ ಖಾಸಗಿ ಬಸ್ ಉದ್ದಿಮೆ ಕಂಗೆಟ್ಟಿದ್ದು, ಈ ವಲಯದ ಪುನಶ್ಚೇತನಕ್ಕೆ ತಕ್ಷಣ ಅಗತ್ಯದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲೆಯಲ್ಲಿ ಜುಲೈ 6ರಂದು ಖಾಸಗಿ ಬಸ್ ಮಾಲೀಕರ ಮುಷ್ಕರ ನಡೆಯಲಿದೆ.
ಖಾಸಗಿ ಬಸ್ ಮಾಲೀಕರ ಫೆಡೆರೇಶನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ, ಎಲ್ಲ ಕಾರ್ಮಿಕ ಸಂಘಟನೆಗಳ ಸಹಭಾಗಿತ್ವದಲ್ಲಿ ಈ ಮುಷ್ಕರ ನಡೆಯಲಿದ್ದು, ಅಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಸಮಿತಿ ಅಧ್ಯಕ್ಷ ಕೆ.ಗಿರೀಶ್ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಸ್ಯೆಯ ಪರಿಹಾರ ನಿಟ್ಟಿನಲ್ಲಿ ಶೇ 50 ರಿಯಾಯಿತಿ ದರದಲ್ಲಿ ಇಂಧನ ಒದಗಿಸಬೇಕು. ಉಚಿತ ಯಾತ್ರಾ ಸೌಲಭ್ಯವನ್ನು ಒಬ್ಬ ಮಹಿಳೆಗೆ ದಿನಕ್ಕೆ ಒಂದು ಬಾರಿ ಮಾತ್ರ ಗುರುತು ಚೀಟಿ ಪರಿಶೀಲಿಸಿ ಒದಗಿಸಬೇಕು. ಅಂತರರಾಜ್ಯ ಸಾರಿಗೆಯಲ್ಲಿ ಈ ಸೌಲಭ್ಯ ಜಾರಿಗೊಳಿಸಬಾರದು. ಖಾಸಗಿ ಬಸ್ ಕಾರ್ಮಿಕ ಕಲ್ಯಾಣನಿಧಿಯ ಪೂರ್ಣರೂಪದ ಕಂತನ್ನೂ ಸರ್ಕಾರವೇ ವಹಿಸಿಕೊಳ್ಳಬೇಕು. ರಸ್ತೆ ತೆರಿಗೆ ತೆರವುಗೊಳಿಸಬೇಕು. ಸರ್ಕಾರಿ ನೌಕರಿ ಹೊಂದಿರುವ ಮಹಿಳೆಯರನ್ನು ಈ ಸೌಲಭ್ಯದಿಂದ ಹೊರತುಪಡಿಸಿ, ವಿದ್ಯಾರ್ಥಿಗಳು ಮತ್ತು 65 ವರ್ಷದ ಮೇಲ್ಪಟ್ಟ ಮಹಿಳೆಯರಿಗೆ ಮತ್ತು ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿ ಈ ಮುಷ್ಕರ ನಡೆಸಲಾಗುತ್ತಿದೆ ಎಂದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-29-534950998

