ಕೃಷ್ಣಗಿರಿ: ಪ್ರತಿಷ್ಠೆಯನ್ನು ಬಿಟ್ಟು ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳು ಕಾವೇರಿ ನೀರಿನ ಸದ್ಬಳಕೆಯ ವಿಚಾರದಲ್ಲಿ ಮಾತುಕತೆ ನಡೆಸಿ ಸೂತ್ರ ರೂಪಿಸಿಕೊಳ್ಳಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ರಾಷ್ಟ್ರೀಯ ಸಹ ಸಂಚಾಲಕ ಕುರುಬೂರು ಶಾಂತಕುಮಾರ್ ಸಲಹೆ ನೀಡಿದರು.
ತಮಿಳುನಾಡಿನ ಕೃಷ್ಣಗಿರಿಯಲ್ಲಿ ರೈತ ಮುಖಂಡ ದಿವಂಗತ ನಾರಾಯಣಸ್ವಾಮಿ ನಾಯ್ಡು ನೆನಪಿನ ದಿನ ಅಂಗವಾಗಿ ತಮಿಳುನಾಡು ರೈತ ಸಂಘದ ರಾಜ್ಯಾಧ್ಯಕ್ಷ ರಾಮನಗೌoಡರ್ ಭಾನುವಾರ ಆಯೋಜಿಸಿದ್ದ ರೈತರ ರ‍್ಯಾಲಿ ಹಾಗೂ ರೈತ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಭಾರತ ರಾಜ್ಯಗಳಲ್ಲಿ ಎಲ್ ನಿನೊ ಪರಿಣಾಮವಾಗಿ ಶೇ 50ರಷ್ಟು ಮಳೆ ಪ್ರಮಾಣ ಕಡಿಮೆ ಎನ್ನುವ ವರದಿಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ ಇದು ರೈತರಿಗೆ ಆತಂಕ ಸೃಷ್ಟಿಸುತ್ತಿದೆ. ಈಗಾಗಲೇ ಕರ್ನಾಟಕ 170ಕ್ಕೂ ಹೆಚ್ಚು ತಾಲೂಕುಗಳಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ 15 ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆ ಪ್ರಮಾಣಕ್ಕೆ ಇಳಿದಿದೆ ಎಂದು ಹೇಳಿದರು.
ಕಳೆದ ವರ್ಷ ಉತ್ತಮ ಮಳೆಯಾದ ಕಾರಣ ಕಾವೇರಿ ನದಿ ಮೂಲಕ ಹರಿದ ಹೆಚ್ಚುವರಿ 250 ಟಿಎಂಸಿ ನೀರು ಸಮುದ್ರಕ್ಕೆ ಹೋಯಿತು. ಕರ್ನಾಟಕ ತಮಿಳುನಾಡು ಒಂದಾಗಿ ಜಲಾಶಯ ನಿರ್ಮಿಸಿ ನೀರು ಸಂಗ್ರಹಿಸಿ ಇಟ್ಟುಕೊಂಡಿದ್ದರೆ ಈ ವರ್ಷ ಎರಡು ರಾಜ್ಯಗಳಿಗೂ ರೈತರಿಗೆ ಕೃಷಿ ಬಳಕೆಗೆ ಹಾಗು ವಿದ್ಯುತ್ ಉತ್ಪಾದನೆಗೆ ಅನುಕೂಲವಾಗುತ್ತಿತ್ತು ಎಂದು ತಿಳಿಸಿದರು.
ಇಂತಹ ವಿಚಾರದಲ್ಲಿ ಎರಡು ಸರ್ಕಾರಗಳು ಪ್ರತಿಷ್ಠೆಯ ರಾಜಕಾರಣ ಮಾಡದೇ ರಾಜ್ಯದ ಮುಖ್ಯಮಂತ್ರಿಗಳು ಕೇಂದ್ರ ಜಲಸಂಪನ್ಮೂಲ ಸಚಿವರ ಅಧ್ಯಕ್ಷತೆಯಲ್ಲಿ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಂಡು ನೀರು ಸದ್ಬಳಕೆಗೆ ತೀರ್ಮಾನ ಕೈಗೊಳ್ಳಬೇಕು. ಇದರಿಂದ ಎರಡು ರಾಜ್ಯಗಳ ರೈತರಿಗೂ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.
1993ರಲ್ಲಿ ನಡೆದ ವಿಶ್ವ ವ್ಯಾಪಾರ ಒಪ್ಪಂದದ ಪರಿಣಾಮ ದೇಶಾದ್ಯಂತ ರೈತರು ಹಲವಾರು ಸಂಕಷ್ಟಗಳಿಗೆ ಗುರಿಯಾಗಿದ್ದಾರೆ. ಈಗ ಕೇಂದ್ರ ಸರ್ಕಾರ ಭಾರತ ಅಮೆರಿಕ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಇದು ದೇಶದ ರೈತರ ಮರಣ ಶಾಸನವಾಗಲಿದ್ದು, ಇದನ್ನು ನಾವೆಲ್ಲರೂ ವಿರೋಧಿಸ ಬೇಕಾಗಿದೆ ಎಂದು ಹೇಳಿದರು.
ಅಮೆರಿಕದಲ್ಲಿ ಕೃಷಿ ಉತ್ಪನ್ನಗಳಿಗೆ ಶೇ 280 ಸಹಾಯಧನ ನೀಡುತ್ತಾರೆ. ಭಾರತ ದೇಶದಲ್ಲಿ ಶೇ.2ರಷ್ಟು ಸಹಾಯಧನ ಸಿಗುತ್ತಿದೆ. ಇಂತಹ ಸ್ಥಿತಿಯಲ್ಲಿ ರೈತರು ಅಮೆರಿಕ ಕೃಷಿ ಉತ್ಪನ್ನಗಳ ಜೊತೆ ಪೈಪೋಟಿ ನಡೆಸಿ ಲಾಭಗಳಿಸಲು ಸಾಧ್ಯವಿಲ್ಲ. ಅದಕ್ಕಾಗಿ ದೇಶ ವ್ಯಾಪಿ ಚಳುವಳಿಗೆ ಸಿದ್ದರಾಗಬೇಕು ಎಂದು ಕಿವಿಮಾತು ಹೇಳಿದರು.
ನಾವು ಕೇಳುತ್ತಿರುವುದು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ. ಈ ಕುರಿತು ಕಾನೂನು ಜಾರಿ ಮಾಡಲು ಕೇಂದ್ರ ಸರ್ಕಾರ ಮೀನ ಮೇಷ ಎಣಿಸುತ್ತಿದೆ. 31 ಜನರ ಕೃಷಿ ಸಂಸದೀಯ ಸಮಿತಿ ಈ ಬಗ್ಗೆ ವರದಿ ನೀಡಿದೆ. ಸುಪ್ರೀಂ ಕೋರ್ಟ್ ನೇಮಿಸಿದ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯ ಸಮಿತಿ ಸಹ ವರದಿ ಸಲ್ಲಿಸಿದೆ. ಎಂಎಸ್‌ಪಿ ಗ್ಯಾರಂಟಿ ಕಾನೂನು ಜಾರಿಗೆ ತರುವುದು ಅತ್ಯಗತ್ಯ. ಕೇಂದ್ರ ಸರ್ಕಾರ ಕೂಡಲೇ ತೀರ್ಮಾನ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಒತ್ತಾಯಿಸಿದರು.
ತಮಿಳುನಾಡು ರೈತ ಸಂಘಟನೆ ಅಧ್ಯಕ್ಷ ರಾಮನ್ ಗೌoಡರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ರೈತ ನಾಯಕ ಪಿ.ಆರ್.ಪಾಂಡಿಯನ್, ಕೊಯಂಬತ್ತೂರಿನ ರೈತ ಸಂಘಟನೆಯ ಮುಖಂಡ ಎ ಎಸ್ ಬಾಬು, ಕರ್ನಾಟಕದ ರೈತ ಸಂಘಟನೆಯ ಅತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್ ಉಪಸ್ಥಿತರಿದ್ದರು.

