Thursday, 03 Dec, 10.25 am ಪ್ರಜಾವಾಣಿ

ಜಿಲ್ಲೆ
ಕಾವೇರಿ ವನ್ಯಧಾಮದಲ್ಲಿ ಜಿಂಕೆ ಬೇಟೆ: ತಮಿಳುನಾಡಿನ ವ್ಯಕ್ತಿ ಬಂಧನ

ಹನೂರು: ಕಾವೇರಿ ವನ್ಯಧಾಮದಲ್ಲಿ ಅಕ್ರಮ ಪ್ರವೇಶ ಮಾಡಿ ಜಿಂಕೆಯನ್ನು ಬೇಟೆಯಾಡಿ ಮಾಂಸ ವನ್ನು ಸಾಗಿಸುತ್ತಿದ್ದ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ನಟರಾಪಾಳ್ಯ ಗ್ರಾಮದ ಶಕ್ತಿ ಎಂಬವರನ್ನು ಅರಣ್ಯಾ ಧಿಕಾರಿಗಳು ಬಂಧಿಸಿದ್ದಾರೆ.

ಗೋಪಿನಾಥಂ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಜಿಂಕೆಯನ್ನು ಬೇಟೆಯಾಡಿ ಮಾಂಸ ಮಾರಾಟಕ್ಕೆ ಬರುತ್ತಿರುವ ಮಾಹಿತಿ ಆಧರಿಸಿ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.

ಮಂಗಳವಾರ ಹೊಗೇನಕಲ್ ಕಡೆ ಬೈಕ್‌ನಲ್ಲಿ ಬರುತ್ತಿದ್ದ ಶಕ್ತಿಯನ್ನು ತಡೆದು, ಸಾಗಿಸುತ್ತಿದ್ದ 18 ಪ್ಲಾಸ್ಟಿಕ್ ಕವರ್‌ನಲ್ಲಿ ತುಂಬಿದ್ದ ವಸ್ತು ಪರಿಶೀಲಿಸಿದಾಗ ಮಾಂಸ ಇರುವುದು ಪತ್ತೆಯಾಗಿದೆ.

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಪರೇಕಟ್ಟು ಅರಣ್ಯ ಪ್ರದೇಶ ಪುಂಗುಮ್ ಗಸ್ತುವಿನಲ್ಲಿ ಬೇಟೆಯಾಡಿರುವುದಾಗಿ ತಿಳಿಸಿದ್ದಾನೆ. ಬಳಿಕ ಆರೋಪಿಯನ್ನು ಪರೆಕಟ್ಟು ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋದಾಗ ಅಲ್ಲಿ ಬಚ್ಚಿಟ್ಟಿದ್ದ ನಾಡ ಬಂದೂಕು, ಜಿಂಕೆಯ ತಲೆ ಮತ್ತು ಕಾಲು ಇರುವ ಜಾಗವನ್ನು ತೋರಿಸಿದ್ದಾನೆ. ನಂತರ ಆರೋಪಿಯನ್ನು ಬಂಧಿಸಿದ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

25 ಕೆ.ಜಿ ಜಿಂಕೆ ಮಾಂಸ, ಚರ್ಮ, ತಲೆ, ಕಾಲು, ಒಂದು ಬೈಕ್‌, 2 ಚೂರಿ, ಮೊಬೈಲ್, ನಾಡಬಂದೂಕು, ತಲೆ ಬ್ಯಾಟರಿ ಹಾಗೂ ಗನ್ ಪೌಡರ್ ವಶಪಡಿಸಿಕೊಳ್ಳಲಾಗಿದೆ.

ದಾಳಿಯಲ್ಲಿ ವಲಯ ಅರಣ್ಯಾಧಿಕಾರಿ ಎಂ.ಎನ್.ನಿಶ್ಚಿತ್, ಉಪ ವಲಯ ಅರಣ್ಯಾಧಿಕಾರಿ ಬಿ.ಬಿ.ದಿನೇಶ್, ಅರಣ್ಯ ರಕ್ಷಕರಾದ ಚಂದ್ರಶೇಖರ ಕುಂಬಾರ, ಜಮೀರ್ ಮುಲ್ಲಾ ಪಾಲ್ಗೊಂಡಿದ್ದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top