Dailyhunt Logo
  • Light mode
    Follow system
    Dark mode
    • Play Story
    • App Story
ಕಾವೇರಿ ವಿಚಾರದಲ್ಲಿ ಸದ್ಯ ಬಂದ್‌ ಬೇಡ, ನಾಲೆಗಳಿಗೆ ಮೊದಲು ನೀರು ಹರಿಸಲು ಆಗ್ರಹ

ಕಾವೇರಿ ವಿಚಾರದಲ್ಲಿ ಸದ್ಯ ಬಂದ್‌ ಬೇಡ, ನಾಲೆಗಳಿಗೆ ಮೊದಲು ನೀರು ಹರಿಸಲು ಆಗ್ರಹ

ಬೆಂಗಳೂರು: ಕಾವೇರಿ ನೀರು ಹರಿಸುವ ವಿಚಾರದಲ್ಲಿ ವಿವಿಧ ಸಂಘಟನೆಗಳು ಆಗಸ್ಟ್‌ 13ರಂದು ಕರೆ ನೀಡಿರುವ ಕರ್ನಾಟಕ ಬಂದ್ ಅನ್ನು ಮುಂದೂಡಿಸುವುದು ಒಳ್ಳೆಯದು. ಈಗಾಗಲೇ ತಮಿಳುನಾಡಿಗೆ ಬೇಡಿಕೆಗಿಂತ ಹೆಚ್ಚು ನೀರು ಹರಿಸಲಾಗಿದ್ದು ತಕ್ಷಣವೇ ಕಾವೇರಿ ಕಣಿವೆಯ ಜಲಾಶಯಗಳಿಂದ ನಾಲೆಗಳಿಗೆ ನೀರು ಹರಿಸಬೇಕು ಎಂದು ಕರ್ನಾಟಕ ನೆಲ ಜಲ ಪರಿಸರ ಸಂರಕ್ಷಣಾ ಸಮಿತಿ ಆಗ್ರಹಿಸಿದೆ.

ಶುಕ್ರವಾರ ಬೆಂಗಳೂರಿನ ಗಾಂಧಿಭವನದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಿ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕರ್ನಾಟಕ ನೆಲ ಜಲ ಸಂರಕ್ಷಣಾ ಸಮಿತಿ ಸಂಚಾಲಕ ಕುರುಬೂರು ಶಾಂತಕುಮಾರ್, ಒಂದು ವಾರದಲ್ಲಿ ಕಬಿನಿಯಿಂದ ಕನಿಷ್ಠ 15 ಟಿಎಂಸಿ ನೀರು ತಮಿಳುನಾಡಿಗೆ ಬಿಡಲಾಗಿದೆ. ಈಗಲೂ ಪ್ರತಿನಿತ್ಯ 2 ಟಿಎಂಸಿ ಹೆಚ್ಚುವರಿ ನೀರು ಬಿಡಲಾಗುತ್ತಿದೆ. ಕಾವೇರಿ ನೀರು ಮೇಲುಸ್ತುವಾರಿ ಪ್ರಾಧಿಕಾರದ ಆದೇಶದಂತೆ 4.5 ಟಿಎಂಸಿಯನ್ನು 15 ದಿನದಲ್ಲಿ ಬಿಡಬೇಕು ಎನ್ನುವ ತೀರ್ಮಾನಕ್ಕಿಂತ ಹೆಚ್ಚು ನೀರು ಹರಿಸಲಾಗಿದೆ ಎಂದರು.

ಈಗ ಕೆ ಆರ್ ಎಸ್ ಜಲಾಶಯದಲ್ಲಿ ನೀರು 106 ಆಡಿಗೆ ಏರಿಕೆಯಾಗಿದೆ. ಕೆರೆ ತುಂಬಿಸಲು ಕಾಲುವೆಗಳಿಗೆ ನೀರು ಹರಿಸಲಾಗಿದೆ. ರೈತರು ವ್ಯವಸಾಯ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ರೈತರ ಹಾಗೂ ಜನರ ಹಿತಕ್ಕಾಗಿ ಮಾಡುವ ಕರ್ನಾಟಕ ಬಂದ್ ಸದ್ಯಕ್ಕೆ ಮುಂದೂಡುವುದು ಸೂಕ್ತ. ಈ ಬಗ್ಗೆ ಚಳುವಳಿಗಾರರು ವಿಶಾಲ ತಳದಿ ಮೇಲೆ ಚಿಂತನೆ ನಡೆಸಬೇಕು ಎಂದು ಹೇಳಿದರು.

ಕರ್ನಾಟಕ ನೆಲ ಜಲ ಸಂರಕ್ಷಣಾ ಸಮಿತಿ ಸಂಚಾಲಕ ಮುಖ್ಯಮಂತ್ರಿ ಚಂದ್ರು ಮಾತನಾಡಿ, ನಾಡಿನ ಹಿತಕ್ಕಾಗಿ ಎಲ್ಲಾ ಪಕ್ಷಗಳ ಶಾಸಕರು, ಸಂಸದರು ಒಂದಾಗಿ ಹೋರಾಟ ಮಾಡುವುದು ಒಳ್ಳೆಯದು. ಬಂದ್‌ ಸಂದರ್ಭ ಇದಲ್ಲ. ನಮ್ಮ ಜನರಿಗೆ ನಾವೇ ತೊಂದರೆ ಕೊಡುವುದು ಸೂಕ್ತವೂ ಅಲ್ಲ. ಮೇಕೆದಾಟು ಎತ್ತಿನಹೊಳೆ ಮಹದಾಯಿ ನೀರಿನ ಹೋರಾಟಕ್ಕೆ ಸಮಗ್ರ ಕರ್ನಾಟಕ ಹೋರಾಟ ಮಾಡೋಣ ಎಂದರು.

ಜಿ ನಾರಾಯಣ ಕುಮಾರ್ ಕನ್ನಡ ಚಳವಳಿಯ ಗುರುದೇವ ನಾರಾಯಣ ಕುಮಾರ್, ರೈತ ಮುಖಂಡರಾದ ಮಂಡ್ಯ ರಾಜ್ಯ ರೈತ ಸಂಘದ ಜಿಲ್ಲೆಯ ಮಂಜೇಶ್ ಗೌಡ, ರಾಜ್ಯ ಕಬ್ಬು ಬೆಳೆಗಾರ ಸಂಘದ ಸಂಘಟನಾ ಕಾರ್ಯದರ್ಶಿ ಅತ್ತಳ್ಳಿ ದೇವರಾಜ್, ಗ್ರೀನ್ ಬಟ್ ಆಗ್ರೋ ಠೇವಣಿದಾರರ ರಾಜ್ಯ ಕಾರ್ಯದರ್ಶಿ ಬರಡನಪುರ ನಾಗರಾಜ್, ಪೋಷಕರ ಸಂಘದ ರಾಜ್ಯಾಧ್ಯಕ್ಷ ಯೋಗಾನಂದ, ಕಬಿನಿ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗೌರಿಶಂಕರ, ಚಿಕ್ಕಬಳ್ಳಾಪುರ ಅಧ್ಯಕ್ಷ ಶ್ರೀನಿವಾಸ್‌ ಬೈರಾರೆಡ್ಡಿ, ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ವೇದಿಕೆ ಅಧ್ಯಕ್ಷ ನರಸರೆಡ್ಡಿ. ಜಲ ಜಾಗೃತಿ ಸಮಿತಿ ಅಧ್ಯಕ್ಷ ವೀರಭದ್ರಸ್ವಾಮಿ, ಕಿರಗಸೂರು ಶಂಕರ್ ಉಪಸ್ಥಿತರಿದ್ದರು.

ನಿರ್ಣಯಗಳೇನು

ಮೇಕೆದಾಟು ನಿರ್ಮಾಣ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಸೌಹಾರ್ದಯುತವಾಗಿ ಮಾತುಕತೆ ನಡೆಸಿ ಪರಿಣಿತರು, ರೈತ ಮುಖಂಡರು ಒಳಗೊಂಡಂತೆ ಸಮನ್ವಯ ಸಮಿತಿ ರಚಿಸಬೇಕು. ಸಂಕಷ್ಟ ಕಾಲದಲ್ಲಿ ತುರ್ತು ಸಭೆ ನಡೆಸಿ ಚರ್ಚಿಸಲು ಅನುಕೂಲವಾಗುತ್ತದೆ. ಈ ದಿಕ್ಕಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು.

ಕಾವೇರಿ ಸಂಕಷ್ಟ ಕಾಲದಲ್ಲಿ ಸರ್ಕಾರಕ್ಕೆ ಮುಜುಗರ ತಪ್ಪಿಸಿರುವ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬಾಗಿನ ಸಲ್ಲಿಸಬೇಕು. ನಿರ್ಲಕ್ಷ್ಯ ಮಾಡಿದರೆ ರೈತರೇ ಈ ಕಾರ್ಯ ನಡೆಸಬೇಕಾಗುತ್ತದೆ.

ಕಬಿನಿ, ಹೇಮಾವತಿ, ಹಾರಂಗಿ, ಕೆ ಆರ್ ಎಸ್ ಜಲಾಶಯ ಅಚ್ಚುಕಟ್ಟು ನಾಲೆಗಳಿಗೆ ರೈತರ ವ್ಯವಸಾಯ ಚಟುವಟಿಕೆಗಳಿಗೆ ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು.

ಕಾವೇರಿ ನೀರಿನ ಹೋರಾಟ, ರೈತಪರ ಹೋರಾಟ, ಕನ್ನಡ ಚಳುವಳಿ ಹೋರಾಟ ಮಾಡಿರುವ ಮುಖಂಡರ ಮೇಲೆ ಇರುವ ಎಲ್ಲಾ ಪೊಲೀಸ್ ಮೊಕದ್ದಮೆ ಕೂಡಲೇ ವಾಪಸ್ ಪಡೆಯಬೇಕು.

ಬೆಂಗಳೂರಿನಲ್ಲಿ ವಾಸ ಮಾಡುವ ವಿವಿಧ ರಾಜ್ಯಗಳ ಪರಭಾಷಿಕರು ರಾಜ್ಯದ ನೆಲ ಜಲ ವಿಚಾರ ಬಂದಾಗ ನಿರ್ಲಕ್ಷ್ಯ ಮನೋಭಾವನೆ ತೋರದೆ ನಾಡಿನ ಜನ ಹಿತಕ್ಕೆ ಸಕ್ರಿಯವಾಗಿ ಹೋರಾಟಕ್ಕೆ ಬೆಂಬಲಿಸಬೇಕು.

Dailyhunt
Disclaimer: This content has not been generated, created or edited by Dailyhunt. Publisher: Prajavani