Dailyhunt Logo
  • Light mode
    Follow system
    Dark mode
    • Play Story
    • App Story
ಕಾವೇರಿ ವಿವಾದದಲ್ಲಿ ಕುಮಾರಸ್ವಾಮಿ, ಪ್ರಲ್ಹಾದ ಜೋಶಿ ಪಾತ್ರ: ಎಂ.ಲಕ್ಷ್ಮಣ ಆರೋಪ

ಕಾವೇರಿ ವಿವಾದದಲ್ಲಿ ಕುಮಾರಸ್ವಾಮಿ, ಪ್ರಲ್ಹಾದ ಜೋಶಿ ಪಾತ್ರ: ಎಂ.ಲಕ್ಷ್ಮಣ ಆರೋಪ

ಮೈಸೂರು: 'ತಮಿಳುನಾಡಿಗೆ ನೀರು ಹರಿಸಬೇಕೆಂಬ ವಿಚಾರದಲ್ಲಿ ಕೇಂದ್ರ ಸಚಿವರಾದ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಪ್ರಲ್ಹಾದ ಜೋಶಿ ಅವರ ಪಾತ್ರವಿದೆ. ರಾಜ್ಯ ಸರ್ಕಾರಕ್ಕೆ ತೊಂದರೆ ಕೊಡಬೇಕೆಂಬ ಉದ್ದೇಶದಿಂದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯುಎಂಎ) ಮೇಲೆ ಪ್ರಭಾವ ಬೀರುತ್ತಿದ್ದಾರೆ' ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆರೋಪಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕಾವೇರಿ ಕಣಿವೆಯ ರೈತರು ಬೆಳೆ ಹಾಕಬಾರದೆಂದು ತಿಳಿಸಿ ಕುಡಿಯುವ ಉದ್ದೇಶಕ್ಕೆಂದು ಸಂಗ್ರಹಿಸಿಕೊಂಡಿರುವ ನೀರನ್ನು ತಮಿಳುನಾಡಿನವರ ಬೆಳೆಗಾಗಿ ಹರಿಸುವಂತೆ ಕೇಳುತ್ತಿರುವುದು ಮೂರ್ಖತನದ ಪರಮಾವಧಿಯಲ್ಲವೇ?' ಎಂದು ಕೇಳಿದರು.

'ನಮ್ಮ ರಾಜ್ಯದವರಾದ ಕೇಂದ್ರ ಸಚಿವರು ಕಾವೇರಿ ವಿಚಾರದಲ್ಲಿ ಧ್ವನಿ ಎತ್ತುತ್ತಿಲ್ಲವೇಕೆ' ಎಂದು ಪ್ರಶ್ನಿಸಿದರು.

'ನಮ್ಮ ಕೆಆರ್‌ಎಸ್, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳಲ್ಲಿನ ವಾಸ್ತವ ಸ್ಥಿತಿಯನ್ನು ಸಮರ್ಥವಾಗಿ ಮನವರಿಕೆ ಮಾಡಿಕೊಡುವಲ್ಲಿ ತಜ್ಞರ ಸಮಿತಿಯು ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ. ಜಲಾಶಯಗಳಲ್ಲಿರುವ 'ಡೆಡ್‌ಸ್ಟೋರೇಜ್' ನೀರನ್ನೂ ಪರಿಗಣಿಸಲಾಗುತ್ತಿದೆ. ಡೆಡ್‌ಸ್ಟೋರೇಜ್ ಬಿಟ್ಟರೆ ನಮ್ಮಲ್ಲಿ ಈಗ ಇರುವುದು 66 ಟಿಎಂಸಿ ಅಡಿ ನೀರು ಮಾತ್ರ. ಇದನ್ನು ಪರಿಗಣಿಸಿಲ್ಲ. ಎಲ್ಲೋ ಒಂದು ಕಡೆ ಮಳೆಯಾಗಿದ್ದನ್ನು ಎಲ್ಲ ಕಡೆಯೂ ಮಳೆಯಾಗಿದೆ ಎಂದು ಪರಿಗಣಿಸಲಾಗಿದೆ. ಇದರಿಂದಾಗಿ ರಾಜ್ಯಕ್ಕೆ ಸಮಸ್ಯೆಯಾಗುತ್ತಿದೆ' ಎಂದು ತಿಳಿಸಿದರು.

'ತಮಿಳುನಾಡಿನವರು, ನಾವು ಉಳಿಸಿಕೊಂಡಿರುವ ನಮ್ಮ ಪಾಲಿನಲ್ಲಿ ಪಾಲು ಕೇಳುತ್ತಿದ್ದಾರೆ. ಇದು ಸರಿಯಲ್ಲ. ಏಪ್ರಿಲ್‌ನಿಂದ ಇಲ್ಲಿಯವರೆಗೆ ಆದ ಮಳೆಯಲ್ಲಿ ಎಷ್ಟು ಪ್ರಮಾಣದಲ್ಲಿ ನೀರು ಹಂಚಿಕೆ ಆಗಬೇಕು ಎಂಬುದನ್ನು ನಮ್ಮ ತಜ್ಞರ ತಂಡದವರು ಮನವರಿಕೆ ಮಾಡಿಕೊಡಬೇಕು. 45 ಟಿಎಂಸಿ ಅಡಿ ನೀರು ಕುಡಿಯುವ ಉದ್ದೇಶಕ್ಕೆಂದೇ ಬೇಕು. ಈ ಆಂಶಗಳನ್ನೆಲ್ಲಾ ಸುಪ್ರೀಂ ಕೋರ್ಟ್‌ನಲ್ಲಿ ಪರಿಣಾಮಕಾರಿಯಾಗಿ ಮಂಡಿಸಬೇಕು' ಎಂದು ಸರ್ಕಾರವನ್ನು ಒತ್ತಾಯಿಸಿದರು.

'ವಿಧಾನಪರಿಷತ್‌ ಮಾಜಿ ಸದಸ್ಯ ಎ.ಎಚ್. ವಿಶ್ವನಾಥ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಾಯಿಚಪಲಕ್ಕೆ ಮಾತನಾಡುತ್ತಿದ್ದಾರೆ. ಘನತೆಗೆ ತಕ್ಕುದಾಗಿ ಮಾತನಾಡದಿರುವುದು ದುರಂತದ ಸಂಗತಿ. ಡಾ.ಯತೀಂದ್ರ ಮಂತ್ರಿಯಾಗಿದ್ದನ್ನು ಸಹಿಸದೇ ಆರೋಪ ಮಾಡುತ್ತಿದ್ದಾರೆ. ಯತೀಂದ್ರ ಅವರು ಯಾವುದರಲ್ಲಿ ಕಡಿಮೆ ಇದ್ದಾರೆ ಎಂಬುದನ್ನು ಹೇಳಲಿ' ಎಂದು ಸವಾಲು ಹಾಕಿದರು.

'ಮೈಸೂರಿನ ತನ್ವೀರ್ ಸೇಠ್, ಡಾ.ಎಚ್‌.ಸಿ. ಮಹದೇವಪ್ಪ, ಕೆ. ವೆಂಕಟೇಶ್ ಅವರನ್ನು ಮಂತ್ರಿಯನ್ನಾಗಿ ಮಾಡಬೇಕು ಎಂಬುದು ನಮ್ಮ ಒತ್ತಾಯವಾಗಿತ್ತು. ಆದರೆ, ಹೈಕಮಾಂಡ್ ಮಾಡಲಿಲ್ಲ. ನಮ್ಮ ಪಕ್ಷದ ಉಸಾಬರಿ ನಿಮಗೇಕೆ ಬೇಕು? ಎಂದು ವಿಶ್ವನಾಥ್ ಅವರನ್ನು ಕೇಳಿದರು.

ಪಕ್ಷದ ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್. ಮೂರ್ತಿ, ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್‌, ಪ್ರಧಾನ ಕಾರ್ಯದರ್ಶಿಗಳಾದ ಎಂ.ಶಿವಣ್ಣ, ಹೇಮಂತ್ ಪಾಲ್ಗೊಂಡಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Prajavani