Dailyhunt Logo
  • Light mode
    Follow system
    Dark mode
    • Play Story
    • App Story
ಕಬ್ಬಿನ ಬೆಲೆ ನಿಗದಿಗೆ ಆಗ್ರ ಹ: ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಯತ್ನ

ಕಬ್ಬಿನ ಬೆಲೆ ನಿಗದಿಗೆ ಆಗ್ರ ಹ: ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಯತ್ನ

ಮೈಸೂರು: ಕಬ್ಬಿಗೆ ಎಸ್‌ಆರ್‌ಪಿ ದರ ನಿಗದಿ ಹಾಗೂ ಎಫ್‌ಆರ್‌ಪಿ ದರ ಏರಿಕೆ ಮಾಡಬೇಕು ಎಂದು ಒತ್ತಾಯಿಸಿ ಕಬ್ಬು ಬೆಳೆಗಾರರ ಸಮನ್ವಯ ಸಮಿತಿ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ರಸ್ತೆಯಲ್ಲೇ ಅಡುಗೆ ಮಾಡಿ ಊಟ ಮಾಡಿದರು.

ಸಿದ್ಧಾರ್ಥ ನಗರದ ಹಾಲಿನ ಡೇರಿ ಮುಂಭಾಗದ ಬುದ್ಧ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಅಲ್ಲಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಕಡೆಗೆ ತೆರಳಿದರು. ಕಬ್ಬಿನ ಜಲ್ಲೆಗಳನ್ನು ಹೊತ್ತು, ಹಣೆಗೆ ಮೂರು ನಾಮವಿಟ್ಟು 'ಸರ್ಕಾರದ ಭರವಸೆಗಳೆಲ್ಲಾ ಗೋವಿಂದ, ಗೋವಿಂದ' ಎಂದು ಕೂಗುತ್ತಾ ಸಾಗಿದರು.

ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಪ್ರಯತ್ನಿಸಿದಾಗ ಪೊಲೀಸರು ಬ್ಯಾರಿಕೇಡ್‌ ಅಳವಡಿಸಿದರು. ರೈತರು ಆಕ್ರೋಶದಿಂದ ಬ್ಯಾರಿಕೇಡ್‌ಗಳನ್ನು ಕಿತ್ತು ರಸ್ತೆಗೆ ಬಿಸಾಡಿದರು. ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ತಡೆ ನಡೆಸಿ, ಅಲ್ಲೆ ಮಲಗಿದರು. ವಾಹನಗಳು ತೆರಳದಂತೆ ತಡೆದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಭಾವಚಿತ್ರಕ್ಕೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯಲ್ಲೇ ಅಡುಗೆ ತಯಾರಿಸಿ ಊಟ ಮಾಡಿದರು. ಸುಮಾರು 3 ಗಂಟೆಗೂ ಅಧಿಕ ಕಾಲ ರಸ್ತೆ ತಡೆ ನಡೆಸಿದ ಕಾರಣ ಪರ್ಯಾಯ ರಸ್ತೆಗಳಲ್ಲಿ ವಾಹನಗಳು ತೆರಳಿದವು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಪಂಜಾಬ್ ರಾಜ್ಯದಲ್ಲಿ ಎಸ್‌ಎಪಿ ರಾಜ್ಯ ಸಲಹಾ ಬೆಲೆ ₹4,480, ಉತ್ತರಪ್ರದೇಶದಲ್ಲಿ ₹ 4,200, ತಮಿಳುನಾಡಿ ನಲ್ಲಿ ₹ 4 ಸಾವಿರ ನಿಗದಿ ಮಾಡಿದ್ದಾರೆ. ಆದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಮಗೆ ಬೆಲೆ ನಿಗದಿ ಮಾಡುವ ಅಧಿಕಾರ ಇಲ್ಲವೆಂದು ಕುಂಟು ನೆಪ ಹೇಳುತ್ತಾ ರೈತರನ್ನು ದಿಕ್ಕು ತಪ್ಪಿಸಿ, ರೈತರ ಪರವಾಗಿ ಮೊಸಳೆ ಕಣ್ಣೀರು ಸುರಿಸುತ್ತಾ ಇದ್ದಾರೆ ಎಂದು ಟೀಕಿಸಿದರು.

ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರ ಹೋರಾಟವನ್ನು ದಿಕ್ಕು ತಪ್ಪಿಸಲು ಯತ್ನಿಸುತ್ತಿರುವುದು ಖಂಡನೀಯ. ಕೇಂದ್ರ ಸರ್ಕಾರವು ಕಬ್ಬಿನ ಎಫ್‌ಆರ್‌ಪಿ ಬೆಲೆಯನ್ನು ಕಡಿಮೆ ನಿಗದಿ ಮಾಡಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ದೇಶದಲ್ಲಿ ಕಬ್ಬಿನ ಉತ್ಪಾದನೆ ಕಡಿಮೆಯಾಗಿ ಸಕ್ಕರೆ ಉತ್ಪಾದನೆ ಕಡಿಮೆಯಾಗುವ ಸಂಭವವಿದ್ದರೂ ರೈತರನ್ನು ಪ್ರೋತ್ಸಾಹಿಸುವ ಕಬ್ಬು ಎಫ್‌ಆರ್‌ಪಿ ದರ ಏರಿಕೆ ಮಾಡಲು ಮೀನಾಮೇಷ ಎಣಿಸುತ್ತಿದೆ. ಸರ್ಕಾರಗಳ ಇಬ್ಬಗೆಯ ನೀತಿ ಖಂಡಿಸಲು ರೈತ ಸಂಘಟನೆಗಳು ರಾಜ್ಯದ ರೈತರ ಹಿತಾಸಕ್ತಿಗಾಗಿ ಒಂದಾಗಿ ಹೋರಾಟಕ್ಕೆ ಇಳಿದಿವೆ ಎಂದರು.

ಸಾಮೂಹಿಕ ನಾಯಕತ್ವದ ರೈತ ಸಂಘದ ಮುಖಂಡ ಮಂಜು ಕಿರಣ್ ಮಾತನಾಡಿ, ರೈತರ ಚಳವಳಿ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದ್ದಾರೆ. ಮುಂದಿನ ದಿನಗಳಲ್ಲಿ ಇವರನ್ನು ಅಧಿಕಾರದಿಂದ ಕಿತ್ತೊಗೆಯ್ಯುವ ಚಳವಳಿ ಮಾಡಬೇಕಾಗುತ್ತದೆ ಎಂದು ಹೇಳಿದರು.

ಸುದೀರ್ಘ ‍‍ಪ್ರತಿಭಟನೆ ಬಳಿಕ ಡಿಸಿ‍ಪಿಗಳಾದ ಹರ್ಷಾ ಪ್ರಿಯಂವದ ಹಾಗೂ ಕೆ.ಎಸ್‌.ಸುಂದರ್‌ರಾಜು ಅವರು ರೈತ ಮುಖಂಡರ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಪ್ರತಿಭಟನಕಾರರು ಜಿಲ್ಲಾಧಿಕಾರಿ ಕಚೇರಿಯ ಆವರಣಕ್ಕೆ ತೆರಳಲು ಅವಕಾಶ ನೀಡಬೇಕು ಎಂದು ಪಟ್ಟುಹಿಡಿದರು. ನಂತರ ಎಡಿಸಿ ಐಶ್ವರ್ಯಾ ಅವರಿಗೆ ರೈತ ಸಂಘದ ಹೊಸಕೋಟೆ ಬಸವರಾಜ ಒತ್ತಾಯ ಪತ್ರ ಸಲ್ಲಿಸಿದ್ದರು.

ರೈತ ಮುಖಂಡರಾದ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಅತ್ತಹಳ್ಳಿ ದೇವರಾಜ್, ಹೊಸೂರು ಕುಮಾರ್, ಪಿ.ಸೋಮಶೇಖರ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ನೇತ್ರಾವತಿ, ವರಕೋಡು ನಾಗೇಶ್, ಕೆ.ಜಿ.ಗುರುಸ್ವಾಮಿ, ಲಕ್ಷ್ಮೀಪುರ ವೆಂಕಟೇಶ್, ವಿಜಯೇಂದ್ರ, ನೀಲಕಂಠಪ್ಪ, ಗೌರಿಶಂಕರ್, ಕೆಂಡಗಣ್ಣಪ್ಪ ಭಾಗವಹಿಸಿದ್ದರು.

 ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಕಬ್ಬು ಬೆಳೆಗಾರರ ಸಮನ್ವಯ ಸಮಿತಿ ಸದಸ್ಯರು ಕಬ್ಬಿಗೆ ಎಸ್‌ಆರ್‌ಪಿ ದರ ನಿಗದಿ ಹಾಗೂ ಎಫ್‌ಆರ್‌ಪಿ ದರ ಏರಿಕೆ ಮಾಡಬೇಕು ಎಂದು ಒತ್ತಾಯಿಸಿ ರಸ್ತೆ ತಡೆ ನಡೆಸಿದರು- ಪ್ರಜಾವಾಣಿ ಚಿತ್ರ ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯ ಬಳಿ ಕಬ್ಬು ಬೆಳೆಗಾರರ ಸಮನ್ವಯ ಸಮಿತಿ ಸದಸ್ಯರು ಕಬ್ಬಿಗೆ ಎಸ್‌ಆರ್‌ಪಿ ದರ ನಿಗದಿ ಹಾಗೂ ಎಫ್‌ಆರ್‌ಪಿ ದರ ಏರಿಕೆ ಮಾಡಬೇಕು ಎಂದು ಒತ್ತಾಯಿಸಿ ರಸ್ತೆ ತಡೆ ನಡೆಸಿದರು- ಪ್ರಜಾವಾಣಿ ಚಿತ್ರ

ಬೇಡಿಕೆ ಈಡೇರದಿದ್ದರೆ ಚಳವಳಿ ವಿಸ್ತರಣೆ

ಎರಡು ಸರ್ಕಾರಗಳು ರೈತರ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರುತ್ತಿವೆ. ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಭೆ ನಡೆಸಿ ಎರಡು ದಿನ ಕಾಲಾವಕಾಶ ಕೋರಿ ನಂತರ ಯಾವುದೇ ಕ್ರಮ ಕೈಗೊಂಡಿಲ್ಲ. ಬರಗಾಲ ಸಂಕಷ್ಟದಿಂದ ರೈತರು ಬಳಲಿದ್ದಾರೆ. ಬೇಡಿಕೆ ಈಡೇರದಿದ್ದರೆ ಶುಕ್ರವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ರೈತರ ಪ್ರತಿಭಟನೆ ನಡೆಸಲಾಗುವುದು. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಹಳ್ಳಿ ಹಳ್ಳಿಗಳಲ್ಲಿ 1980ರ ನಂಜುಂಡಸ್ವಾಮಿ ಚಳವಳಿ ನೆನಪಿಸುವ ಹೋರಾಟ ರೂಪಿಸುತ್ತೇವೆ ಎಂದುರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Prajavani