Dailyhunt
ಕಬಿನಿ ಜಲಾಶಯದಿಂದ 12,500 ಕ್ಯುಸೆಕ್‌ ನೀರು ಹೊರಕ್ಕೆ

ಕಬಿನಿ ಜಲಾಶಯದಿಂದ 12,500 ಕ್ಯುಸೆಕ್‌ ನೀರು ಹೊರಕ್ಕೆ

ಎಚ್.ಡಿ.ಕೋಟೆ: ತಾಲ್ಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದ್ದು, ಇದೇ ಮೊದಲ ಬಾರಿಗೆ 12,500 ಕ್ಯುಸೆಕ್‌ ನೀರನ್ನು ಹೊರಬಿಡಲಾಗಿದೆ.

ಜಲಾಶಯದ ನೀರಿನ ಮಟ್ಟ 2,284 ಅಡಿ ಇದ್ದು, 2,280 ಅಡಿಯಷ್ಟು ಭರ್ತಿಯಾಗಿದೆ. ಗರಿಷ್ಠ ಮಟ್ಟ ತಲುಪಲು ಕೇವಲ 4 ಅಡಿ ಬಾಕಿ ಇದೆ. ಒಳಹರಿವು 18 ಸಾವಿರ ಕ್ಯುಸೆಕ್‌ ಇದ್ದು, ಶುಕ್ರವಾರ ಬೆಳಿಗ್ಗೆ ವೇಳೆಗೆ ಜಲಾಶಯ ಭರ್ತಿಯಾಗುವ ನಿರೀಕ್ಷೆ ಇದೆ.

ಕೇರಳದಲ್ಲಿ ಮುಂದಿನ 5 ದಿನಗಳವರೆಗೆ ಧಾರಾಕಾರ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಹೀಗಾಗಿ, ಜಲಾಶಯದ ಹೊರಹರಿವು ಮತ್ತಷ್ಟು ಹೆಚ್ಚಲಿದ್ದು, ನದಿ ಪಾತ್ರದ ಜನರು ಸೂಕ್ತ ಸ್ಥಳಗಳಿಗೆ ತೆರಳಬೇಕು ಎಂದು ತಹಶೀಲ್ದಾರ್‌ ಎಸ್.ಎನ್.ನರಗುಂದ ಗುರುವಾರ ಮನವಿ ಮಾಡಿದ್ದಾರೆ.

ಈ ಸಂಬಂಧ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಕಂದಾಯ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕರು, ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕು ಪಂಚಾಯಿತಿಯ ಇಒಗಳಿಗೆ, ಪೊಲೀಸ್‌ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಬಿನಿ ಜಲಾಶಯದ ಎಇಇ ಜನಾರ್ದನ್‌ ಮಾತನಾಡಿ, '4 ಕ್ರಸ್ಟ್‌ ಗೇಟ್‌ ಮೂಲಕ ನೀರನ್ನು ಹರಿಸಲಾಗುತ್ತಿದೆ. ನದಿ ಪಾತ್ರದ ಜನರು ಎಚ್ಚರಿಕೆ ವಹಿಸಬೇಕು' ಎಂದು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani