Dailyhunt
ಕದನ ವಿರಾಮ ಒಪ್ಪಂದದಿಂದ ಲೆಬನಾನ್‌ ಹೊರಗಿಟ್ಟು, ದಾಳಿ ಮುಂದುವರಿಸಿದ US, ಇಸ್ರೇಲ್

ಕದನ ವಿರಾಮ ಒಪ್ಪಂದದಿಂದ ಲೆಬನಾನ್‌ ಹೊರಗಿಟ್ಟು, ದಾಳಿ ಮುಂದುವರಿಸಿದ US, ಇಸ್ರೇಲ್

ವಾಷಿಂಗ್ಟನ್‌: ಲೆಬನಾನ್‌ ಅನ್ನು ಕದನ ವಿರಾಮ ಒಪ್ಪಂದದ ಭಾಗವಾಗಿಸಲು ಇಸ್ರೇಲ್‌ ಹಾಗೂ ಅಮೆರಿಕ ನಿರಾಕರಿಸಿವೆ.

ಅಮೆರಿಕವು ಇರಾನ್‌ ಜೊತೆಗೆ 14 ದಿನಗಳ ಮಟ್ಟಿಗೆ ಮಂಗಳವಾರ (ಏ.7) ಕದನ ವಿರಾಮ ಒಪ್ಪಂದ ಮಾಡಿಕೊಂಡಿದೆ. ಆದರೆ, ಇಸ್ರೇಲ್‌ ಸೇನೆ ಲೆಬನಾನ್‌ ಮೇಲೆ ದಾಳಿ ಮುಂದುವರಿಸಿದೆ.

ಬುಧವಾರ ನಡೆದ ಭೀಕರ ದಾಳಿ ವೇಳೆ ಕನಿಷ್ಠ 203 ಜನರು ಮೃತಪಟ್ಟಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್‌ ಆರೋಗ್ಯ ಸಚಿವಾಲಯ ತಿಳಿಸಿದೆ.

ಇರಾನ್‌ ಬೆಂಬಲಿತ ಹಿಜ್ಬೊಲ್ಲಾ ಸಂಘಟನೆಯ ನೆಲೆಗಳನ್ನು ಗುರಿಯಾಗಿಸಿ ಲೆಬನಾನ್‌ ಮೇಲೆ ದಾಳಿ ಮಾಡುತ್ತಿರುವುದಾಗಿ ಇಸ್ರೇಲ್‌ ಹೇಳಿಕೊಂಡಿದೆ.

ಆದರೆ, ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ನಡೆದ ಈ ದಾಳಿಯಿಂದ, ಜನವಸತಿ ಪ್ರದೇಶಗಳಲ್ಲಿಯೂ ಅಪಾರ ಹಾನಿ ಸೃಷ್ಟಿಯಾಗಿದೆ. ಇಸ್ರೇಲ್‌ನದ್ದು 'ಮೃಗೀಯ ವರ್ತನೆ' ಎಂದು ಲೆಬನಾನ್‌ ಅಧ್ಯಕ್ಷ ಜೋಸೆಫ್‌ ಔನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಜ್ಬೊಲ್ಲಾ ನಾಯಕ ನಯಿಮ್‌ ಕಾಸ್ಸೆಮ್‌, ಆತನ ಸಹಾಯಕ ಹಾಗೂ ಸಂಬಂಧಿ ಅಲಿ ಯೂಸುಫ್‌ ಹರ್ಷಿಯನ್ನು ಹತ್ಯೆ ಮಾಡಿದ್ದೇವೆ ಎಂದು ಇಸ್ರೇಲ್‌ ಗುರುವಾರ ಹೇಳಿಕೊಂಡಿತ್ತು.

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರೂ, 'ಸಂಪೂರ್ಣ ಸಾಮರ್ಥ್ಯ, ನಿಖರ ದಾಳಿ ಹಾಗೂ ದೃಢ ನಿಶ್ಚಯದೊಂದಿಗೆ ಆಕ್ರಮಣ ಮುಂದುವರಿಸುತ್ತೇವೆ' ಎಂದು ಹೇಳಿದ್ದಾರೆ. ಇದರ ಪರಿಣಾಮ ಲೆಬನಾನ್‌ ಮೇಲಷ್ಟೇ ಅಲ್ಲದೆ, ಇರಾನ್‌ - ಅಮೆರಿಕ ಕದನ ವಿರಾಮದ ಮೇಲೂ ಉಂಟಾಗುವ ಸಾಧ್ಯತೆ ಇದೆ.

ಶಾಂತಿ ಮಾತುಕತೆ
ಫೆಬ್ರುವರಿ 28ರಂದು ಜಂಟಿ ದಾಳಿ ನಡೆಸಿದ್ದ ಅಮೆರಿಕ ಹಾಗೂ ಇಸ್ರೇಲ್‌ ಪಡೆಗಳು, ಇರಾನ್‌ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಸೇರಿದಂತೆ ಹಲವು ನಾಯಕರು ಹತ್ಯೆ ಮಾಡಿದ್ದವು. ಇದರಿಂದ ಕೆರಳಿದ ಇರಾನ್‌ ಪತ್ರಿದಾಳಿ ಆರಂಭಿಸಿತ್ತು.

ಅಮೆರಿಕ, ಇಸ್ರೇಲ್‌ ಮಿತ್ರ ರಾಷ್ಟ್ರಗಳ ವಿರುದ್ಧವೂ ಕ್ಷಿಪಣಿ, ಡ್ರೋನ್‌ ದಾಳಿ ಮಾಡಿತ್ತು. ಇದರಿಂದಾಗಿ ಪಶ್ಚಿಮ ಏಷ್ಯಾದಾದ್ಯಂತ ಉದ್ವಿಗ್ನತೆ ನಿರ್ಮಾಣವಾಗಿತ್ತು. ಸದ್ಯ ಅಮೆರಿಕ, ಇರಾನ್‌ ಎರಡು ವಾರಗಳ ಮಟ್ಟಿಗೆ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದು, ಪಾಕಿಸ್ತಾನ ಆತಿಥ್ಯದಲ್ಲಿ ಸಂಘರ್ಷ ಅಂತ್ಯಗೊಳಿಸುವ ಸಂಬಂಧ ಮಾತುಕತೆಗೆ ಮುಂದಾಗಿವೆ.

ಇರಾನ್‌ ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪುವ ಮುನ್ನ ಅಮೆರಿಕದ ಎದುರು 10 ಅಂಶಗಳ ಷರತ್ತುಗಳನ್ನು ಇರಿಸಿತ್ತು. ಅದರಲ್ಲಿ, ಲೆಬನಾನ್‌ ವಿಚಾರವೂ ಸೇರಿತ್ತು. ಆದರೆ, ಇದೀಗ ಲೆಬನಾನ್‌ ವಿರುದ್ಧ ದಾಳಿ ಮುಂದುವರಿದಿದೆ.

ಇದನ್ನೇ ಉಲ್ಲೇಖಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಇರಾನ್‌ ಸಂಸತ್ತಿನ ಸ್ಪೀಕರ್‌ ಎಂ.ಬಿ ಗಾಲಿಬಾಫ್, ಲೆಬನಾನ್‌ ಮೇಲಿನ ದಾಳಿ ಸೇರಿದಂತೆ ಮೂರು ಷರತ್ತುಗಳನ್ನು ಉಲ್ಲಂಘಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani