ಕಲಬುರಗಿ: ನಗರದಲ್ಲಿ ರಸ್ತೆ ಸಂಚಾರ ನಿಯಮಗಳ ಪಾಲನೆಯಲ್ಲಿ ವಾಹನ ಸವಾರರ ನಿರ್ಲಕ್ಷ್ಯ ಮುಂದುವರಿದಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ 31,805 ಪ್ರಕರಣಗಳಲ್ಲಿ ವಾಹನಗಳ ಸವಾರರು ಬರೋಬ್ಬರಿ ₹1.63 ಕೋಟಿ ದಂಡ ತೆತ್ತಿರುವುದು ಇದಕ್ಕೆ ನಿದರ್ಶನ.
ಒಟ್ಟು ₹1.63 ಕೋಟಿ ದಂಡದಲ್ಲಿ ಹೆಲ್ಮೆಟ್ ರಹಿತ ಪ್ರಯಾಣಕ್ಕಾಗಿ ವಾಹನಗಳ ಸವಾರರು ಪಾವತಿಸಿದ ದಂಡದ ಮೊತ್ತವೇ ₹1.08 ಕೋಟಿಯಷ್ಟಿದೆ.
ನಗರ ಪೊಲೀಸರ ರ್ಯಾಲಿ, ಸರಣಿ ಜಾಗೃತಿ, ಮನವೊಲಿಕೆ ಹಾಗೂ ದಂಡಾಸ್ತ್ರಕ್ಕೂ ಜನ ಎಚ್ಚೆತ್ತುಕೊಂಡಿಲ್ಲ ಎಂಬುದು ಇದರಿಂದ ವೇದ್ಯವಾಗುತ್ತದೆ.
ರಾಜ್ಯದಲ್ಲಿ ದ್ವಿಚಕ್ರ ವಾಹನಗಳ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿ 10 ವರ್ಷಗಳೇ ಉರುಳಿವೆ. ಅದಾಗ್ಯೂ, ಕಲಬುರಗಿಯಲ್ಲಿ ಇಂದಿಗೂ ಹೆಲ್ಮೆಟ್ ಧರಿಸುವವರ ಪ್ರಮಾಣ ಗೌಣವೇ ಆಗಿದೆ. 'ನೆಪ' ಹೇಳುತ್ತ ವರ್ಷವಿಡೀ 'ಹೆಲ್ಮೆಟ್'ನಿಂದ ಅಂತರ ಕಾಯ್ದುಕೊಳ್ಳುವವರ ಸಂಖ್ಯೆಯೇ ಅಧಿಕವಾಗಿದೆ.
ಹೆಲ್ಮೆಟ್ ರಹಿತ ಪ್ರಯಾಣಕ್ಕಾಗಿ ಜನವರಿಯಲ್ಲಿ 119 ಪ್ರಕರಣ ದಾಖಲಿಸಿದ್ದ ಸಂಚಾರ ಠಾಣೆಗಳ ಪೊಲೀಸರು ₹59 ಸಾವಿರ ದಂಡ ಸಂಗ್ರಹಿಸಿದ್ದರು. ಫೆಬ್ರುವರಿಯಲ್ಲಿ 889 ಪ್ರಕರಣಗಳನ್ನು ದಾಖಲಿಸಿ, ₹4.48 ಲಕ್ಷ, ಮಾರ್ಚ್ನಲ್ಲಿ 5,794 ಮಂದಿಗೆ ₹28.97 ಲಕ್ಷ, ಏಪ್ರಿಲ್ನಲ್ಲಿ 5,683 ಪ್ರಕರಣಗಳಲ್ಲಿ ₹28.41 ಲಕ್ಷ, ಮೇ ತಿಂಗಳಲ್ಲಿ 5,922 ಮಂದಿಗೆ ₹29.61 ಲಕ್ಷ ಹಾಗೂ ಜೂನ್ನಲ್ಲಿ 3,193 ಪ್ರಕರಣಗಳಲ್ಲಿ ₹15.96 ಲಕ್ಷ ದಂಡ ವಿಧಿಸಿದ್ದಾರೆ. ಪೊಲೀಸರ ದಂಡಾಸ್ತ್ರಕ್ಕೂ ಜನ ಮಣಿಯುತ್ತಿಲ್ಲ!
'ಹೆಲ್ಮೆಟ್ ಧರಿಸದೇ ಬೈಕ್, ಸ್ಕೂಟರ್, ಮೊಪೆಡ್ಗಳಿಂದ ಬಿದ್ದು ಸತ್ತ ದುರ್ಘಟನೆಗಳನ್ನು ವಾಹನಗಳ ಸವಾರರು, 'ಪಕ್ಕದ ಮನೆಯ ಬೆಂಕಿ'ಯಾಗಿ ನೋಡುವ ಪ್ರವೃತ್ತಿ ಬದಲಾಗಿಲ್ಲ. ಕಳೆದ ಎರಡ್ಮೂರು ತಿಂಗಳಲ್ಲಿ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುವವರ ಪ್ರಮಾಣ ಚೇತರಿಕೆಯಾಗಿದೆ. ಆದರೂ, ಬಹುತೇಕರು ಇಂದಿಗೂ ಹೆಲ್ಮೆಟ್ ಅನ್ನು ಫುಟ್ಬೋರ್ಡ್, ಪೆಟ್ರೋಲ್ ಟ್ಯಾಂಕ್, ಕೈಗೆ ಸಿಕ್ಕಿಸಿಕೊಂಡು ಓಡಾಡುತ್ತಿದ್ದಾರೆ. ಪೊಲೀಸರನ್ನು ಕಂಡಲ್ಲಿ ಹೆಲ್ಮೆಟ್ ತಲೆಗೇರಿಸಿಕೊಳ್ಳುತ್ತಾರೆ. ಮತ್ತೆ ಮುಂದೆ ಹೋಗಿ ಮತ್ತೆ ಹೆಲ್ಮೆಟ್ ತೆಗೆದು ಗಾಡಿ ಓಡಿಸಿಕೊಂಡು ಹೋಗುತ್ತಾರೆ. ಈ ಸಂಸ್ಕೃತಿ ಬದಲಾಗಬೇಕು. ಹೆಲ್ಮೆಟ್ ಧರಿಸುವುದು ತಮ್ಮ ಜೀವದ ರಕ್ಷಣೆಗೇ ಎಂಬ ಕಾಳಜಿ ಜನರಲ್ಲಿ ಇನ್ನೂ ಮೂಡಿಲ್ಲ' ಎಂಬುದು ಹಿರಿಯ ಪೊಲೀಸ್ ಅಧಿಕಾರಿಗಳ ಬೇಸರ.
'ಜಾಗೃತಿಗೆ ಸ್ಪಂದಿಸದಿದ್ದರೆ ದಂಡ ಅನಿವಾರ್ಯ'
'ಕಲಬುರಗಿಯಲ್ಲಿ ಹೆಲ್ಮೆಟ್ ಧರಿಸುವಿಕೆ ಸೇರಿದಂತೆ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುವವರ ಪ್ರಮಾಣ ಕ್ರಮೇಣ ಸುಧಾರಿಸುತ್ತಿದೆ. ಮಾರ್ಚ್ನಿಂದ ನಾವು ಸಂಚಾರ ನಿಯಮಗಳ ಪಾಲನೆ ಕಲಬುರಗಿಯಲ್ಲಿ ಬಿಗಿಗೊಳಿಸಿದ್ದು, ಮೂರು ತಿಂಗಳಲ್ಲಿ ಶೇ20ರಿಂದ ಶೇ25ರಷ್ಟು ಚೇತರಿಕೆ ಕಂಡಿದೆ. ವಾಹನಗಳ ಸವಾರರಿಗೆ ದಂಡ ವಿಧಿಸುವ ಅಗತ್ಯ ನಮಗಿಲ್ಲ. ರಸ್ತೆ ಸಂಚಾರ ನಿಯಮಗಳ ಪಾಲಿಸಬೇಕೆಂಬ ಜಾಗೃತಿ, ಮನವಿಗಳಿಗೆ ಜನ ಸ್ಪಂದಿಸಬೇಕು. ಇಲ್ಲದಿದ್ದರೆ ದಂಡಾಸ್ತ್ರ ಪ್ರಯೋಗ ನಮಗೆ ಅನಿವಾರ್ಯ' ಎನ್ನುತ್ತಾರೆ ಕಲಬುರಗಿ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ.
'ಜುಲೈ ತಿಂಗಳಲ್ಲಿ ರಸ್ತೆ ಸಂಚಾರ ನಿಯಮಗಳ ಪಾಲನೆಗೆ ವಿಶೇಷ ಒತ್ತು ನೀಡಲು ನಿರ್ಧರಿಸಲಾಗಿದೆ. ಡಿಸಿಪಿಗಳು, ಎಸಿಪಿಗಳನ್ನು ಒಳಗೊಂಡ 14 ತಂಡಗಳನ್ನು ರಚಿಸಲಾಗಿದೆ. ನಗರದ ಯಾವುದೇ ಭಾಗದಲ್ಲಿ ದಿಢೀರ್ ತಪಾಸಣೆ ನಡೆಸಿ ದಂಡ ವಿಧಿಸುವ ಕಾರ್ಯಾಚರಣೆ ನಡೆಸಲಾಗುವುದು. ತಿಂಗಳಾಂತ್ಯದ ಹೊತ್ತಿಗೆ ಶೇ70ರಷ್ಟು ಮಂದಿ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ಜಾಗೃತಗೊಳಿಸುವ ಗುರಿ ಹೊಂದಲಾಗಿದೆ' ಎಂದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260703-34-1880537767

