Dailyhunt
ಕಲಬುರ್ಗಿಯಲ್ಲೇ ಜ್ಯುವೆಲ್ಲರಿ ಪಾರ್ಕ್‌: ಮುರುಗೇಶ್ ನಿರಾಣಿ

ಕಲಬುರ್ಗಿಯಲ್ಲೇ ಜ್ಯುವೆಲ್ಲರಿ ಪಾರ್ಕ್‌: ಮುರುಗೇಶ್ ನಿರಾಣಿ

ಬೆಂಗಳೂರು: ಕಲಬುರ್ಗಿಯಲ್ಲಿ ಆಭರಣ ತಯಾರಿಕೆ ಘಟಕ (ಜ್ಯುವೆಲ್ಲರಿ ಪಾರ್ಕ್‌) ಆರಂಭಿಸಲು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ನಿರ್ಧರಿಸಿದ್ದಾರೆ.

ಕಲಬುರ್ಗಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಭಾನುವಾರ ನೇಮಕಗೊಂಡ ಬೆನ್ನಲ್ಲೇ ಅವರು ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಘಟಕವನ್ನು ಬೀದರ್ ಅಥವಾ ಕಲಬುರ್ಗಿಯಲ್ಲಿ ಆರಂಭಿಸುವುದಾಗಿ ಅವರು ಈ ಹಿಂದೆ ಹೇಳಿದ್ದರು.

ಸರ್ಕಾರಿ- ಖಾಸಗಿ ಸಹಭಾಗಿತ್ವದಲ್ಲಿ ಸುಮಾರು 50ರಿಂದ 75 ಎಕರೆ ಜಾಗದಲ್ಲಿ ಜ್ಯುವೆಲ್ಲರಿ ಪಾರ್ಕ್ ನಿರ್ಮಿಸಲಾಗುವುದು. ಅಭರಣಗಳ‌ ತಯಾರಿಕೆ, ಗ್ರಾಹಕರು ಒಂದೇ ಸೂರಿನಡಿ ಖರೀದಿಗೆ ಅವಕಾಶ ಮಾಡಿಕೊಡುವುದರ ಜೊತೆಗೆ, ದೇಶ- ವಿದೇಶಕ್ಕೆ ಇಲ್ಲಿಂದಲೇ ಪೂರೈಕೆ ಮಾಡಲಾಗುವುದು ಎಂದು ನಿರಾಣಿ ತಿಳಿಸಿದ್ದಾರೆ.

ಹಿಂದುಳಿದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಒತ್ತು ಕೊಡುವ ಸಂವಿಧಾನದ 371ನೇ (ಜೆ) ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಗೂ ಅವಕಾಶ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಈ ಭಾಗದ ಶಾಸಕರು, ಸಂಸದರು ಸೇರಿದಂತೆ ಪಕ್ಷಾತೀತವಾಗಿ‌ ಎಲ್ಲ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ‌ಅಭಿವೃದ್ದಿಗೆ ಶ್ರಮಿಸುತ್ತೇನೆ. ಶೀಘ್ರದಲ್ಲಿ ಜಿಲ್ಲೆಯ ಅಧಿಕಾರಿಗಳ ಸಭೆ ಕರೆದು ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸುತ್ತೇನೆ' ನಡೆಸುತ್ತೇನೆ' ಎಂದು ನಿರಾಣಿ ಹೇಳಿದ್ದಾರೆ.

'ಇಂಥದ್ದೇ ಜಿಲ್ಲೆಯ ಉಸ್ತುವಾರಿ ಕೊಡುವಂತೆ ಮುಖ್ಯಮಂತ್ರಿ ಬಳಿ ಬೇಡಿಕೆ ಇಟ್ಟಿರಲಿಲ್ಲ. ಸಚಿವ ಸಂಪುಟಕ್ಕೆ ತೆಗೆದುಕೊಳ್ಳುವಾಗ ಮತ್ತು ಖಾತೆ ಹಂಚಿಕೆ ಮಾಡುವಾಗಲೂ ಯಾವುದೇ ಒತ್ತಡ ಹಾಕಿರಲಿಲ್ಲ. ಮೊದಲಿನಿಂದಲೂ ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ' ಎಂದು ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani