Tuesday, 20 Oct, 6.08 am ಪ್ರಜಾವಾಣಿ

ಬೆಂಗಳೂರು
ಕಣಸೂರ ಪುನರ್ವಸತಿಗೆ ಆಗ್ರಹಿಸಿ ಪಾದಯಾತ್ರೆ

ಕಾಳಗಿ: ತಾಲ್ಲೂಕಿನ ಕಣಸೂರ ಗ್ರಾಮಕ್ಕೆ ಪದೇ ಪದೇ ಬೆಣ್ಣೆತೊರಾ ಮತ್ತು ಮಳೆ ನೀರು ಒಳನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಮಾಡುತ್ತಿದೆ. ಆದ್ದರಿಂದ ಈ ಕೂಡಲೇ ಇಲ್ಲಿನ ಜನತೆಗೆ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಸೋಮವಾರ ಕಣಸೂರ ಗ್ರಾಮದಿಂದ ಕಾಳಗಿ ತಹಶೀಲ್ ಕಚೇರಿವರೆಗೆ 7 ಕಿ.ಮೀ ಪಾದಯಾತ್ರೆ ಹಮ್ಮಿಕೊಂಡು ಬಳಿಕ ಪ್ರತಿಭಟನೆ ನಡೆಸಿದರು.

ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದ ಹಾನಿಯಾದ ಬೆಳೆಗೆ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು. ಪ್ರವಾಹ ಸಂತ್ರಸ್ತರಿಗೆ 6 ತಿಂಗಳಿಗೆ ಆಗುವಷ್ಟು ಉಚಿತ ಆಹಾರ ಧಾನ್ಯಗಳನ್ನು ವಿತರಿಸಬೇತು/ ಮನೆಗಳು ಬಿದ್ದ ಕುಟುಂಬಸ್ಥರಿಗೆ ₹50 ಸಾವಿರ ಪರಿಹಾರ ಕೊಟ್ಟು ಹೊಸ ಮನೆ ಮಂಜೂರು ಮಾಡಬೇಕು. ರೈತರ ಜಮೀನುಗಳಿಗೆ ನರೇಗಾ ಯೋಜನೆಯಡಿಯಲ್ಲಿ ತಡೆಗೋಡೆ ಬದು ನಿರ್ಮಾಣಕ್ಕೆ ಅನುಮತಿ ಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಇಡೀ ಕಲ್ಯಾಣ ಕರ್ನಾಟಕ ಪ್ರದೇಶ ಅತಿವೃಷ್ಟಿ, ನೆರೆ ಹಾವಳಿಗೆ ತತ್ತರಿಸಿದೆ. ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ರೈತರಿಗೆ ಉಚಿತವಾಗಿ ಬೀಜ, ಗೊಬ್ಬರ ಕೊಟ್ಟು ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ನರೇಗಾ ಯೋಜನೆಯಡಿ ಜಲಾನಯನ ಇಲಾಖೆಯು ತ್ವರಿತ ಗತಿಯಲ್ಲಿ ರೈತರ ಜಮೀನುಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಸರ್ಕಾರಕ್ಕೆ ಬರೆದ ಮನವಿಪತ್ರವನ್ನು ತಹಶೀಲ್ದಾರ್ ನೀಲಪ್ರಭಾ ಬಬಲಾದ ಮೂಲಕ ರವಾನಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಮಹಿಳಾ ಪ್ರತಿನಿಧಿ ಮಲ್ಲಮ್ಮ ಕೋಡ್ಲಿ, ಮುಖಂಡ ಅಶೋಕ ಮ್ಯಾಗೇರಿ, ಕಾಶಿನಾಥ ಬಂಡಿ ಮಾತನಾಡಿದರು. ಗುರುನಂದೇಶ ಕೋಣಿನ, ಬಾಬು ಕಂಬಾರ, ಸೇನಾಪತಿ ಕಡಬೂರ, ರೇವಯ್ಯ ಸಾಲಿ, ಶ್ರೀನಾಥ ಹುಳಗೇರಿ, ಸಿದ್ದಣ್ಣ ಕಲಶೆಟ್ಟಿ, ರಸೂಲ ಪಟೇಲ್, ಗೀತಾ ಶೆಳ್ಳಗಿ ಇದ್ದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top