ಇನ್ಫೊಸಿಸ್ ವಿಜ್ಞಾನ ಪ್ರತಿಷ್ಠಾನವು, ಮೂಲ-ಅನ್ವಯಿಕ ವಿಜ್ಞಾನ, ಮಾನವಿಕ ಶಾಸ್ತ್ರಗಳಲ್ಲಿ ಅವಿರತವಾಗಿ ದುಡಿದ ಆರು ವಿಜ್ಞಾನಿಗಳು ಮತ್ತು ಸಂಶೋಧಕರಿಗೆ 2025ನೇ ಸಾಲಿನ ಇನ್ಫೊಸಿಸ್ ಪ್ರಶಸ್ತಿಗಳನ್ನು ಪ್ರದಾನ ಮಾಡಿದೆ.
ಷಿಕಾಗೊ ವಿಶ್ವವಿದ್ಯಾಲಯದಲ್ಲಿ ಸಮಾಜ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಆಯಂಡ್ರಿವ್ ಒಲೆಟ್ ಅವರೂ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸದ್ಯ, ಷಿಕಾಗೊ ವಿಶ್ವವಿದ್ಯಾಲಯದಲ್ಲೇ ಪ್ರಾಧ್ಯಾಪಕಿಯಾಗಿರುವ ಸಾರಾ ಪಿಯರ್ಸ್ ಟೇಲರ್ ಜೊತೆ ಸೇರಿ 9ನೇ ಶತಮಾನದ ಕಾವ್ಯಮೀಮಾಂಸೆ 'ಕವಿರಾಜಮಾರ್ಗ' ಗ್ರಂಥದ ಅನುವಾದದಲ್ಲಿ ತೊಡಗಿರುವ ಒಲೆಟ್, ಪ್ರಶಸ್ತಿ ಸ್ವೀಕರಿಸುವ ಸಲುವಾಗಿ ಇದೇ ವರ್ಷ ಜನವರಿಯಲ್ಲಿ ಬೆಂಗಳೂರಿಗೆ ಬಂದಿದ್ದರು. ಆಗ 'ಪ್ರಜಾವಾಣಿ'ಯ ಸೋದರ ಪತ್ರಿಕೆ 'ಡೆಕ್ಕನ್ ಹೆರಾಲ್ಡ್'ಗೆ ಮಾತಿಗೆ ಸಿಕ್ಕ ಅವರು ಕನ್ನಡ, ಸಂಸ್ಕೃತ, ಪ್ರಾಕೃತ ಭಾಷೆಗಳ ನಂಟು ಸೇರಿದಂತೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಆಯ್ದ ಕೆಲವು ಅಂಶಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ.
ಕೇಳಿಯೇ ಇರದ ಪ್ರಾಕೃತದ ಬಗ್ಗೆ ಮೊಳೆತ ಆಸಕ್ತಿ
ನ್ಯೂಯಾರ್ಕ್ ಉಪನಗರಗಳಲ್ಲಿ ಪ್ರಾಕೃತ ಭಾಷೆಯನ್ನು ಕೇಳುವುದು ಸಾಧ್ಯವೇ ಇಲ್ಲ. ಹೀಗಿರುವಾಗ ಅಧ್ಯಯನದ ಜಾಡು ಹಿಡಿದು ಪ್ರಾಕೃತದ ಬೆನ್ನತ್ತಿ ಹೊರಟದ್ದು ಹೇಗೆ ಎಂಬುದರ ಬಗ್ಗೆ ಒಲೆಟ್ ಮಾತನಾಡಿದ್ದಾರೆ.
ಕಾಲೇಜು ದಿನಗಳಲ್ಲಿ ಪ್ರಾಚೀನ ಗ್ರೀಕ್ ಇತಿಹಾಸದ ಅಧ್ಯಯನ ಕೈಗೆತ್ತಿಕೊಂಡಿದ್ದ ಒಲೆಟ್ಗೆ ಅವರ ಪ್ರಾಧ್ಯಾಪಕರು, ಸಂಸ್ಕೃತ ಭಾಷೆಯ ಪ್ರಕಾರಗಳನ್ನು ಉಲ್ಲೇಖಿಸಿ, ಆಸಕ್ತಿ ಕೆರಳಿಸಿದ್ದರು. ಹಾಗಾಗಿ, ಒಲೆಟ್ ಅವರು ಸಂಸ್ಕೃತದತ್ತ ಕಣ್ಣಾಯಿಸಿದ್ದರು. ಆಸಕ್ತಿದಾಯಕವೆನಿಸಿದ ಕಾರಣ, ಅಧ್ಯಯನವನ್ನೂ ಶುರುಮಾಡಿದ್ದರು. ಅದೇ ಹೊತ್ತಿನಲ್ಲಿ ಅವರ ಮಾರ್ಗದರ್ಶಕರಾಗಿದ್ದ ಶೆಲ್ಡನ್ ಪೊಲಾಕ್ ಅವರು, ಇತಿಹಾಸಕಾರ ಹಾಲನ ʼಗಾಥಸಪ್ತಶತಿʼ ಕೃತಿಯಲ್ಲಿ ಉಲ್ಲೇಖವಾಗಿರುವ ಪ್ರಾಕೃತದಂತಹ ಭಾರತೀಯ ಭಾಷೆಗಳನ್ನು ಗ್ರೀಕ್ ಸಾಹಿತ್ಯಿಕ ಉಪಭಾಷೆಗಳೊಂದಿಗೆ ತುಲನೆ ಮಾಡಲು ಹೇಳಿದ್ದರು. ಅಲ್ಲಿಂದಾಚೆಗೆ, ಪ್ರಾಕೃತ ಭಾಷೆಯ ಮೂಲ ಹುಡುಕಿ ಹೊರಟರಂತೆ ಒಲೆಟ್.
ಉತ್ತರದ ಪ್ರಾಕೃತದಿಂದ ದಕ್ಷಿಣದ ಕನ್ನಡದವರೆಗೆ
ಭಾಷೆಗಳ ಕೊಡುಕೊಳ್ಳುವಿಕೆ ವಿಚಾರವನ್ನು ಕೆದಕುವುದರಲ್ಲಿ ಒಲೆಟ್ಗೆ ಮೊದಲಿಂದಲೂ ಆಸಕ್ತಿ. ಕನ್ನಡವು ದ್ರಾವಿಡ ಭಾಷೆಯಾಗಿದ್ದರೂ, ಸಂಸ್ಕೃತದೊಂದಿಗೆ ನಿಕಟ ಸಂಬಂಧ ಹೊಂದಿರುವುದು ಅವರಿಗೆ ಗೊತ್ತಾದದ್ದು ಪೊಲಾಕ್ ಅವರಿಂದ. ಅಲ್ಲಿಂದಾಚೆಗೆ ಕನ್ನಡದ ಬೆನ್ನುಬಿದ್ದು, ಆರಂಭದಲ್ಲಿ ಜಿನಸೇನನ ʼಆದಿಪುರಾಣʼ ಮತ್ತು ದಂಡಿನ್ ಬರೆದ ʼಕಾವ್ಯಾದರ್ಶʼ ಕಾವ್ಯಗಳ ಮೇಲೆ ಕೆಲಸ ಮಾಡಿದ್ದರು. ಡಾಕ್ಟರೇಟ್ ಪೂರೈಸಿದ ನಂತರ, ಕನ್ನಡದ ಪ್ರಾದೇಶಿಕ ಸೊಗಡನ್ನು ಅರಿಯಲು ಹೆಚ್ಚಿನ ಅಭ್ಯಾಸ ಆರಂಭಿಸಿದರು.
ಕನ್ನಡವನ್ನು ಕಲಿಯಲು ಒಲೆಟ್ ಅವರೇನು ಔಪಚಾರಿಕ ತರಗತಿಗಳಿಗೆ ಹೋಗಿಲ್ಲ. ಹಾರ್ವರ್ಡ್ನಲ್ಲಿ ಫೆಲೋಷಿಪ್ ಮಾಡುತ್ತಿದ್ದ ವೇಳೆ, ಪಂಪ ಭಾರತ ಮತ್ತು ಕರ್ನಾಟಕ ಪಂಚತಂತ್ರ ಓದುಗ ಬಳಗವನ್ನು ಸೇರಿಕೊಂಡಿದ್ದರು. ಜೊತೆಗೆ ಸ್ವತಃ ಅಭ್ಯಾಸ ಮಾಡಿದ್ದರು. ಆದಾಗ್ಯೂ ಅವರಿಗೆ ಔಪಚಾರಿಕ ಅಭ್ಯಾಸ ಸಾಧ್ಯವಾಗದ್ದಕ್ಕೆ ವಿಷಾದವಿದೆ.
ಷಿಕಾಗೊ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರಜ್ಞರಾಗಿದ್ದ, ಮೈಸೂರು ಮೂಲದ ಎ.ಕೆ. ರಾಮಾನುಜನ್ ಅವರ ಪರಂಪರೆಯನ್ನು ಗೌರವಿಸುವುದಾಗಿ ಹೇಳುವ ಒಲೆಟ್, ವಿವಿಯಲ್ಲೀಗ ನಿಯಮಿತವಾಗಿ ಕನ್ನಡ ಕಲಿಕೆ ನಡೆಯುತ್ತಿಲ್ಲ ಎಂದೂ ಬೇಸರ ವ್ಯಕ್ತಪಡಿಸುತ್ತಾರೆ.
ಷಿಕಾಗೊ ವಿವಿಯಲ್ಲಿ ರಾಮಾನುಜನ್ ಅವರ ಉತ್ತರಾಧಿಕಾರಿ ಎಂಬಂತೆ ತಮ್ಮನ್ನು ಕಾಣುತ್ತಿರುವುದು ದೊಡ್ಡ ಗೌರವವೇ ಸರಿ ಎನ್ನುವ ಅವರು, ಆದಾಗ್ಯೂ, ತಮಗಿಲ್ಲ ಅಷ್ಟು ಅರ್ಹತೆ ಎನ್ನುವ ದೊಡ್ಡತನ ತೋರಿದ್ದಾರೆ.

ಆಯಂಡ್ರಿವ್ ಒಲೆಟ್
'ಕಾವ್ಯಾಲಂಕಾರಕ್ಕಿಂತ ಅಲಂಕಾರ ದಪ್ಪಣ ಹಳೆಯದು'
ಒಲೆಟ್ ಅವರು ಪ್ರಾಕೃತದ ಅಲಂಕಾರ ದಪ್ಪಣ ಕೃತಿಯ ಅನುವಾದದ ಒಂದು ಭಾಗವನ್ನು ಇತ್ತೀಚೆಗೆ ಪುಸ್ತಕವಾಗಿ ಪ್ರಕಟಿಸಿದ್ದಾರೆ. ಬಾಮಹ ಸಂಸ್ಕೃತದಲ್ಲಿ ಬರೆದಿರುವ ಕಾವ್ಯಾಲಂಕಾರದೊಂದಿಗೆ ನಿಕಟ ಸಂಬಂಧ ಹೊಂದಿರುವ ಅಲಂಕಾರ ದಪ್ಪಣ, ಅದಕ್ಕಿಂತಲೂ (ಕಾವ್ಯಾಲಂಕಾರಕ್ಕಿಂತಲೂ) 500-550 ವರ್ಷ ಹಿಂದಿನದು. ಕನ್ನಡದ ಕವಿರಾಜಮಾರ್ಗಕ್ಕಿಂತಲೂ ಹಿಂದಿನದ್ದಿರಬಹುದು ಎಂಬುದಾಗಿ ಪ್ರದಿಪಾದಿಸುತ್ತಾರೆ.
ಹಾಗೆಯೇ, ಕವಿರಾಜಮಾರ್ಗವನ್ನು ಬರೆದ ಶ್ರೀವಿಜಯನು, ದಂಡಿನ್ ಹಾಗೂ ಬಾಮಹನ ಕೃತಿಗಳನ್ನು ಓದಿಕೊಂಡಿದ್ದ. ಆದರೆ, ಅಲಂಕಾರ ದರ್ಪಣವನ್ನು ಅಭ್ಯಸಿಸಿರಬಹುದು ಎಂಬುದಕ್ಕೆ ಕುರುಹುಗಳಿಲ್ಲ. ಹೀಗಾಗಿ, ಕವಿರಾಜಮಾರ್ಗಕ್ಕೆ ಅಲಂಕಾರ ದಪ್ಪಣ ಸ್ಫೂರ್ತಿ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಕವಿರಾಜಮಾರ್ಗಕಾರನು, ಸಂಸ್ಕೃತದ ವಿಚಾರಗಳನ್ನೂ ತನ್ನ ಕೃತಿಗಳಲ್ಲಿ ಆಮೂಲಾಗ್ರವಾಗಿ ಬಳಸಿಕೊಂಡಿದ್ದಾನೆ. ಉದಾಹರಣೆಗೆ, ದಂಡಿನ್ ಆರಂಭದಲ್ಲಿ ಅರ್ಥಾಲಂಕಾರಗಳನ್ನು ನಂತರ, ಶಬ್ದಲಂಕಾರಗಳನ್ನು ಪರಿಗಣಿಸಿದ್ದಾನೆ. ಇದನ್ನೇ ವಿಮರ್ಶೆಗೊಳಪಡಿಸಿರುವ ಶ್ರೀವಿಜಯ, ಶಬ್ದಲಂಕಾರಕ್ಕೆ ಆದ್ಯತೆ ನೀಡಿದ್ದಾನೆ. ಅನಗತ್ಯ ವಿರಾಮ ನೀಡುವ ಸಂಸ್ಕೃತದಲ್ಲಿನ ದೋಷಗಳು ಕನ್ನಡದಲ್ಲಿ ಕಾವ್ಯದ ಸೊಬಗನ್ನು ಹೆಚ್ಚಿಸುವ ಉತ್ತಮ ಅಂಶಗಳಾಗಿ ಬದಲಾಗಿವೆ ಎಂಬುದನ್ನು ಕಂಡುಕೊಂಡಿದ್ದಾನೆ ಎಂದು ಒಲೆಟ್ ವಿವರಿಸಿದ್ದಾರೆ.
ʼತ್ರಿಪದಿಗಳನ್ನು ಶಾಸನಗಳಲ್ಲಿ ಬಳಸಲಾಗಿದೆಯಾದರೂ, ಕವಿರಾಜಮಾರ್ಗದಲ್ಲಿ ಅವುಗಳ ಉಲ್ಲೇಖವಿಲ್ಲʼ ಎನ್ನುವ ಒಲೆಟ್, ʼಈ ಪ್ರಕಾರದ ಸಾಹಿತ್ಯವನ್ನು ಆದಿ ಕವಿ ಪಂಪ 10ನೇ ಶತಮಾನದಲ್ಲಿ ಬಳಸಿದ್ದಾನೆʼ ಎನ್ನುತ್ತಾರೆ.ತ್ರಿಪದಿ ಕನ್ನಡದ ಹಳೆಯ ಕಾವ್ಯ ಪ್ರಕಾರವೇ?ಸಂಸ್ಕೃತ ಮತ್ತು ಪ್ರಾಕೃತದೊಂದಿಗಿನ ಕನ್ನಡದ ಪಯಣ
ʼಕನ್ನಡದಲ್ಲಿ ಸಂಸ್ಕೃತ ಬಳಸುವುದಕ್ಕೆ ಕವಿರಾಜಮಾರ್ಗದಲ್ಲೊಂದು ಮಾಪನವಿದೆ. ಅದು ಗೀಳಿನಂತಾಗಿದೆ ಎನ್ನಬಹುದು. ಸಮಾಸ ರಚನೆ ಮತ್ತು ಕೆಲವು ಸಂಸ್ಕೃತ ಪದಗಳ ಬಳಕೆ ಬಗ್ಗೆ ಆ ಮಾಪನದಲ್ಲಿ ನಿಯಮಗಳಿವೆ. ಸಮಸಂಸ್ಕೃತದಂತಹ ಪದಗಳು ವ್ಯಾಕರಣಗಳಲ್ಲಿ ತತ್ಸಮ ಮತ್ತು ತದ್ಭವಗಳಾಗಿ ರೂಪುಗೊಂಡವು. ಸಂಸ್ಕೃತ ಹಾಗೂ ಕನ್ನಡದ ಈ ರೀತಿಯ ಸಂಧಾನ ಈಗಲೂ ಮುಂದುವರಿದಿದೆʼ ಎನ್ನುತ್ತಾರೆ.
ʼಪ್ರಾಕೃತವನ್ನು ಸರ್ಪ ಭಾಷೆ (ಹಾವುಗಳ ಭಾಷೆ) ಎಂದು ಬಣ್ಣಿಸುತ್ತೀರಿ. ಆ ಹೆಸರು ಹೇಗೆ ಬಂದದ್ದು ಹೇಗೆ? ಕನ್ನಡವು ಪ್ರಾಕೃತದ ಪ್ರಭಾಕ್ಕೆ ಒಳಗಾಗಿದೆಯೇ?ʼ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಒಲೆಟ್, '17ನೇ ಶತಮಾನದ ಗ್ರಂಥಗಳಲ್ಲಿ ಈ ಬಳಕೆ ಇದೆ. ಪರ್ಶಿಯನ್ ಕವಿ ಮಿರ್ಜಾ ಖಾನ್ ತನ್ನ ತುಹ್ಫತ್-ಉಲ್-ಹಿಂದ್ ಕೃತಿಯಲ್ಲಿ, ಸಂಸ್ಕೃತವನ್ನು ದೇವವಾಣಿ (ದೇವತೆಗಳ ಭಾಷೆ) ಎಂದೂ, ಸ್ಥಳೀಯ ಭಾಷೆಗಳನ್ನು ನರವಾಣಿ (ಮಾನವರ ಭಾಷೆ) ಎಂತಲೂ, ಪ್ರಾಕೃತವನ್ನು ಪಾತಾಳವಾಣಿ (ಸರ್ಪಗಳ ಭಾಷೆ) ಎಂತಲೂ ವರ್ಣಿಸಿದ್ದಾರೆ. ಜೈನ ಸಂಪ್ರದಾಯದಲ್ಲಿ, ಪ್ರಾಕೃತ ಭಾಷೆಯ ಕುರಿತು ಕನ್ನಡದ ವ್ಯಾಖ್ಯಾನಗಳನ್ನು ಕಾಣಬಹುದು. ʼವಡ್ಡಾರಾಧನೆʼ ಕೃತಿಯಲ್ಲಿ ಪ್ರಾಕೃತದ ಶಬ್ದಗಳಿವೆ. ಕನ್ನಡ ಮತ್ತು ಪ್ರಾಕೃತ ಎರಡೂ ಭಾಷೆಯಲ್ಲಿ 'ತುಪ್ಪ' ಬಳಕೆಯಲ್ಲಿದೆʼ ಎಂದಿದ್ದಾರೆ.
ʼತೀಕ್ಷ್ಣ ಗ್ರಂಥವಾದ ಕವಿರಾಜಮಾರ್ಗವನ್ನು ಅರ್ಥಮಾಡಿಕೊಳ್ಳಬೇಕಾದರೆ, ಭಾಮಹ ಮತ್ತು ದಂಡಿಯ ಬಗ್ಗೆಯೂ ತಿಳಿದುಕೊಳ್ಳುವುದು ಅಗತ್ಯ. ಶ್ರೀವಿಜಯನು ಅವರ ವ್ಯಾಖ್ಯಾನಗಳನ್ನು ಬದಲಿಸಿ, ಅವರ ನಿಯಮಗಳನ್ನು ಮೀರಿ, ತನ್ನದೇ ಮಾರ್ಗದಲ್ಲಿ ಸಾಗಿದ್ದಾನೆ. ಇತಿಹಾಸವನ್ನೂ ಅಭ್ಯಾಸ ಮಾಡಿದ್ದೇನೆ. ಕನ್ನಡ ಜ್ಞಾನದ ಪರಿಚಯವು ನನಗೆ ಕವಿರಾಜಮಾರ್ಗದ ಮೂಲಕವೇ ಆಗಿದೆ. ಕನ್ನಡ ವ್ಯಾಕರಣ, ಛಂದಸ್ಸು, ಅಲಂಕಾರ ಶಾಸ್ತ್ರ, ನಿಘಂಟು ರಚನೆಯಲ್ಲಿ ಅಪಾರ ಕೆಲಸ ಮಾಡಿರುವ ಭಾಷಾ ವಿದ್ವಾಂಸ ಡಾ.ಟಿ.ವಿ. ವೆಂಕಟಾಚಲ ಶಾಸ್ತ್ರಿ ಅವರಂತಹವರ ಕೃತಿಗಳಿಂದ ಜ್ಞಾನ ಸಂಪಾದಿಸುವುದೇ ಅದ್ಭುತʼ ಎಂದು ಹೇಳಿದ್ದಾರೆ.
ಕನ್ನಡವು ತಮಿಳಿನಿಂದ ಹುಟ್ಟಿದ್ದೇ?- ಆಯಂಡ್ರಿವ್ ಒಲೆಟ್, ಭಾಷಾ ವಿದ್ವಾಂಸನಾನು ತೌಲನಿಕ ದ್ರಾವಿಡ ಭಾಷಾಶಾಸ್ತ್ರದ ಮಹಾನ್ ವಿದ್ವಾಂಸರಲ್ಲಿ ಒಬ್ಬರಾದ ಭದ್ರಿರಾಜು ಕೃಷ್ಣಮೂರ್ತಿ ಅವರ ಕೃತಿಗಳನ್ನು ಓದಿದ್ದೇನೆ. ಭಾಷಾ ವಂಶವೃಕ್ಷವು ಭಾಷೆಗಳ ನಡುವಣ ಸಂಬಂಧವನ್ನು ಸರಳಗೊಳಿಸಬಹುದಷ್ಟೇ. ಸಮರ್ಪಕ ನಿರೂಪಣೆ ನೀಡಲಾರವು. ದ್ರಾವಿಡ ಭಾಷೆಗಳ ವಂಶವೃಕ್ಷದಲ್ಲಿ ಉತ್ತರ ದ್ರಾವಿಡ ಮತ್ತು ದಕ್ಷಿಣ ದ್ರಾವಿಡ ಭಾಷೆಗಳ ಹಲವು ಶಾಖೆಗಳಿವೆ. ದಕ್ಷಿಣ ದ್ರಾವಿಡ ಭಾಷೆಗಳಲ್ಲಿ, ತಮಿಳು, ಮಲಯಾಳಂ, ಕನ್ನಡ ಬರುತ್ತವೆ. ಕೊಡವ ಸೇರಿದಂತೆ ಇತರ ಭಾಷೆಗಳೂ ಇವೆ. ಈ ಮಾದರಿಯಲ್ಲಿ ನಾವು ಒಂದನ್ನೊಂದು ಸೋದರ ಭಾಷೆಗಳೆಂದು ಹೇಳಬಹುದು. ಹಾಗೆಯೇ, ಆಯಾ ಭಾಷೆಗಳು ಕಾಲಾನಂತರದಲ್ಲಿ ಹೇಗೆ ವಿಕಸನಗೊಂಡವು? ಪರಸ್ಪರ ಸಂಬಂಧ ಹೇಗಿದೆ ಎಂಬುದರ ಸರಳ ನಿರೂಪಣೆಯನ್ನೂ ವಂಶವೃಕ್ಷ ನೀಡುತ್ತದೆ. ಭಾಷಾಶಾಸ್ತ್ರದ ದೃಷ್ಟಿಯಲ್ಲಿ ನೋಡುವುದಾದರೆ, ಕನ್ನಡದ ವ್ಯಾಕರಣದಲ್ಲಿ ಕೆಲವು ವೈಶಿಷ್ಟ್ಯಗಳಿವೆ. ಅವುಗಳನ್ನು, ತಮಿಳಿನಿಂದ ಬಂದಿವೆ ಎಂದು ಪ್ರತಿಪಾದಿಸಿ ವಿವರಿಸಲು ಸಾಧ್ಯವಿಲ್ಲ.
