Dailyhunt Logo
  • Light mode
    Follow system
    Dark mode
    • Play Story
    • App Story
ಕನ್ನಡ ಹೋರಾಟಗಾರರಿಗೆ ಉದ್ಯಮಿಗಳು ನೆರವಾಗಲಿ: ವಿಜಯ್‌ಕುಮಾರ್

ಕನ್ನಡ ಹೋರಾಟಗಾರರಿಗೆ ಉದ್ಯಮಿಗಳು ನೆರವಾಗಲಿ: ವಿಜಯ್‌ಕುಮಾರ್

ಮೈಸೂರು: 'ಕನ್ನಡಕ್ಕಾಗಿ ಹೋರಾಡಿದ ಸಾಕಷ್ಟು ಮಂದಿಯ ವಯಸ್ಸು 70 ವರ್ಷ ದಾಟಿದೆ. ಕೆಲವರು ಅನಾರೋಗ್ಯಕ್ಕೆ ಒಳಗಾಗಿದ್ದು, ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ. ಅಂಥವರಿಗೆ ಇನ್ಫೊಸಿಸ್‌ ಮೊದಲಾದ ಕಂಪನಿಗಳ ಉದ್ಯಮಿಗಳು ನೆರವಾಗಬೇಕು' ಎಂದು ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ.

ವಿಜಯ್‌ಕುಮಾರ್‌ ಕೋರಿದರು.

ಇಲ್ಲಿನ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ವಿಶ್ವ ಪತ್ರಿಕಾ ದಿನಾಚರಣೆ ಪ್ರಯುಕ್ತ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ, ಜಿಲ್ಲಾ ಮಹಿಳಾ ಘಟಕ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು.

'ಒಂದು ಕಾಲಕ್ಕೆ ಪ್ರಬಲ ಶಕ್ತಿಯಾಗಿದ್ದ, ಗುಡುಗಿದರೆ ಸರ್ಕಾರವನ್ನೇ ಅಲುಗಾಡಿಸುತ್ತಿದ್ದ ದಲಿತ, ರೈತ ಹಾಗೂ ಕನ್ನಡ ಸಂಘಟನೆಗಳು ಹರಿದು ಹಂಚಿ ಹೋಗಿವೆ. ಇವುಗಳು ಒಗ್ಗೂಡದಿರುವುದರಿಂದಲೇ ಸಾಕಷ್ಟು ಸಮಸ್ಯೆಗಳನ್ನು ಕನ್ನಡಿಗರು ಎದುರಿಸಬೇಕಾಗಿದೆ' ಎಂದು ಹೇಳಿದರು.

'ಗೋಕಾಕ್‌ ವರದಿ, ಸರೋಜಿನಿ ಮಹಿಷಿ ವರದಿ, ಬರಗೂರು ರಾಮಚಂದ್ರಪ್ಪ ವರದಿ, ಮುಖ್ಯಮಂತ್ರಿ ಚಂದ್ರು ವರದಿ ಸೇರಿದಂತೆ ಯಾವುದನ್ನೂ ಸರ್ಕಾರಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲಿಲ್ಲ. ಮಹಿಷಿ ವರದಿ ಜಾರಿಯಾಗಿದ್ದರೆ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಸಿಗುತಿತ್ತು' ಎಂದರು.

ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್‌, ಎಂ. ರವಿಕುಮಾರ್‌, ದೊಡ್ಡನಹುಂಡಿ ರಾಜಣ್ಣ, ಚೇತನ್‌ ಜೋಯ್ಸ್‌, ಎಸ್‌. ಬೀರೇಗೌಡ, ಉಮೇಶ್‌ ಕೋಟೆ, ನಿತಿನ್‌ ಅರಸು ಮತ್ತು ಕೃಷ್ಣ ಅವರಿಗೆ 'ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾಯರ ಪ್ರಶಸ್ತಿ' ಪ್ರದಾನ ಮಾಡಲಾಯಿತು.

ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಚ.ಗು. ನಾಗರಾಜ್‌, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌ ಮಾತನಾಡಿದರು. ಚಿನ್ನ- ಬೆಳ್ಳಿ ಕೆಲಸಗಾರರ ಸಂಘದ ಗೋಲ್ಡನ್‌ ಸುರೇಶ್‌, ಬಿಜೆಪಿ ಮುಖಂಡ ಎಸ್‌.ಡಿ. ಮುರಳೀಧರ, ನಂಜನಗೂಡು ಅನುರಾಗ ಮಕ್ಕಳಮನೆ ಸೇವಾ ಟ್ರಸ್ಟ್‌ ಸಂಸ್ಥಾಪಕ ಅಧ್ಯಕ್ಷ ಡಿ.ಜಿ. ಸೋಮಶೇಖರಮೂರ್ತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ವಿನಯ್‌ಕುಮಾರ್‌, ಜಿಲ್ಲಾಧ್ಯಕ್ಷ ಸಂತೋಷ್ ಕುಮಾರ್, ಪ್ರಾಂತ್ಯ ಗೌರವಾಧ್ಯಕ್ಷ ಸಿಂಧುವಳ್ಳಿ ಶಿವಕುಮಾರ್‌, ಪ್ರಧಾನ ಕಾರ್ಯದರ್ಶಿ ಗೌತಮ್‌ ವಿಶ್ವಕರ್ಮ, ಜಿಲ್ಲಾ ಗೌರವಾಧ್ಯಕ್ಷ ಮನುಗೌಡ, ಗ್ರಾಮಾಂತರ ಅಧ್ಯಕ್ಷ ಕೆ. ರವಿ, ಯುವ ಘಟಕದ ಅಧ್ಯಕ್ಷ ಕೀರ್ತಿಕುಮಾರ್‌, ಸಂಘಟನಾ ಕಾರ್ಯದರ್ಶಿ ಎಚ್.ಆರ್. ಮಧುಕುಮಾರ್‌, ಮಾಧ್ಯಮ ಪ್ರಚಾರಕ ಎಸ್. ಅನಿಲ್‌ಕುಮಾರ್‌, ಮಹಿಳಾ ಘಟಕದ ಅಧ್ಯಕ್ಷೆ ಎಂ.ಎಸ್. ಸುಶೀಲಾ, ಪ್ರಧಾನ ಕಾರ್ಯದರ್ಶಿ ಬಿ. ಕಾತ್ಯಾಯಿನಿ ಇದ್ದರು.

ಉರುಗಲವಾಡಿ ರಾಮಯ್ಯ ಮತ್ತು ತಂಡದವರು ಕನ್ನಡಗೀತೆಗಳನ್ನು ಹಾಡಿದರು. ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ ಸ್ವಾಗತಿಸಿದರು. ಸುಮಾ ರಾಜ್‌ಕುಮಾರ್‌ ನಿರೂಪಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Prajavani