Dailyhunt Logo
  • Light mode
    Follow system
    Dark mode
    • Play Story
    • App Story
ಕನ್ನಡ ಕಡೆಗಣನೆ, ನಾಮಫಲಕಗಳಲ್ಲಿ ಇಂಗ್ಲಿಷ್ ಅಕ್ಷರಗಳೇ ರಾಚುತ್ತಿವೆ

ಕನ್ನಡ ಕಡೆಗಣನೆ, ನಾಮಫಲಕಗಳಲ್ಲಿ ಇಂಗ್ಲಿಷ್ ಅಕ್ಷರಗಳೇ ರಾಚುತ್ತಿವೆ

ಮುಳಬಾಗಿಲು: ತಾಲ್ಲೂಕಿನ ಗಡಿ ಹಾಗೂ ಪ್ರಮುಖ ವ್ಯಾಪಾರ, ಸಂಪರ್ಕ ಕೇಂದ್ರಗಳಲ್ಲಿ ಕನ್ನಡ ಲಿಪಿ ಮಾಯವಾಗಿದ್ದು, ಇಂಗ್ಲಿಷ್ ಅಕ್ಷರಗಳೇ ಕಣ್ಣಿಗೆ ರಾಚುತ್ತಿವೆ.

ಬೆಂಗಳೂರಿನ ಕೆ.ಆರ್.ಪುರಂನಿಂದ ನೆರೆಯ ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕೆಲವು ಬಸ್ ನಿಲ್ದಾಣಗಳನ್ನು ಸೂಚಿಸುವ, ಆರ್.ಟಿ.ಒ ಕಚೇರಿಯ ನಾಮ ಫಲಕಗಳು, ಇಂಧನ ಕೇಂದ್ರಗಳು, ಪೆಟ್ರೋಲ್‌ ಬಂಕ್‌, ಹೆದ್ದಾರಿ ಸೂಚನಾ ಫಲಕಗಳಲ್ಲಿ ಕೇವಲ ಇಂಗ್ಲೀಷ್‌ನಲ್ಲಿ ಬರೆಯಲಾಗಿದ್ದು ಕನ್ನಡವನ್ನು ಕಡೆಗಣಿಸಲಾಗಿದೆ.

ರಾಷ್ಟ್ರೀಕೃತ ಬ್ಯಾಂಕ್‌, ಅಂಚೆ ಕಚೇರಿ ಮತ್ತಿತರ ಹೆಸರುಗಳನ್ನು ಇಂಗ್ಲಿಷ್‌ನಲ್ಲಿ ಬರೆದರೂ ಕನ್ನಡದಲ್ಲೂ ಬರೆಯಲಾಗಿರುತ್ತದೆ. ಆದರೆ ಹೆದ್ದಾರಿಯ ಉದ್ದಕ್ಕೂ ಇರುವ ಸೂಚನಾ ಫಲಕ ಹಾಗೂ ಕೆಲವು ವ್ಯಾಪಾರ ವಹಿವಾಟು ಕೇಂದ್ರಗಳ ಮೇಲೆ ಕೇವಲ ಇಂಗ್ಲಿಷ್ ಅಕ್ಷರಗಳಲ್ಲಿ ಮಾತ್ರ ಮಾಹಿತಿ ಬರೆಯಲಾಗಿದೆ.

ತಾಲ್ಲೂಕಿನ ಹೆದ್ದಾರಿಯಲ್ಲಿನ ಬಹುತೇಕ ಎಲ್ಲಾ ಪೆಟ್ರೋಲ್ ಬಂಕ್‌ಗಳ ಮೇಲೆ ಕೇವಲ ಇಂಗ್ಲಿಷ್ ಅಕ್ಷರಗಳು ಬಿಟ್ಟರೆ ಕನ್ನಡದ ಅಕ್ಷರಗಳೇ ಮಾಯವಾಗಿವೆ. ಹೆದ್ದಾರಿಯ ಕೆಲವೆಡೆ ಮಾತ್ರ ಕೆಲವು ಸಂಚಾರ ದೀಪಗಳಲ್ಲಿ ಕನ್ನಡದಲ್ಲಿ ಸಣ್ಣ ಅಕ್ಷರಗಳಲ್ಲಿ ಬರೆದಿದ್ದರೆ, ಉಳಿದಂತೆ ಬಹುತೇಕ ಕಡೆ ಕನ್ನಡ ಮಾಯವಾಗಿದೆ.

ತಾಲ್ಲೂಕಿನ ಪದ್ಮಘಟ್ಟ ಹಾಗೂ ತಾತಿಕಲ್ಲು ಗ್ರಾಮಗಳ ನಡುವಿನ ಆರ್‌ಟಿಒ ತನಿಖಾ ಠಾಣೆ ಇದೆ. ಆರ್‌ಟಿಒ ಗುರುತಿನ ನಾಮಫಲಕ ಮತ್ತಿತರರ ಎಲ್ಲಾ ಫಲಕಗಳು ಇಂಗ್ಲೀಷಿನಲ್ಲೇ ಇವೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಹೆದ್ದಾರಿಯಲ್ಲಿ ಹಲವು ರಾಜ್ಯಗಳ ವಾಹನ ಸವಾರರು ಸಂಚರಿಸುವ ಕಾರಣದಿಂದ ಇಂಗ್ಲೀಷ್‌ ನಾಮಫಲಕಗಳನ್ನು ಅಳವಡಿಸಲಾಗಿದೆ ಎಂದು ಸಮಜಾಯಿಷಿ ನೀಡುತ್ತಾರೆ.

ಹೆದ್ದಾರಿಯಲ್ಲಿ ಅಳವಡಿಸಿರುವ ಕೆಲವು ನಾಮಫಲಕಗಳಲ್ಲಿ ಕನ್ನಡ ಭಾಷೆಯ ಪದಗಳನ್ನು ತಪ್ಪಾಗಿ ಬರೆದಿದ್ದಾರೆ ಎಂದು ಕನ್ನಡಾಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani