Dailyhunt Logo
  • Light mode
    Follow system
    Dark mode
    • Play Story
    • App Story
ಕನ್ನಡ ಕಟ್ಟಲು ಎ.ಐ ಹೊಸ ಹಾದಿ ಎಂ ಶಿವಕುಮಾರ್

ಕನ್ನಡ ಕಟ್ಟಲು ಎ.ಐ ಹೊಸ ಹಾದಿ ಎಂ ಶಿವಕುಮಾರ್

ಚನ್ನರಾಯಪಟ್ಟಣ (ದೇವನಹಳ್ಳಿ): ಕೃತಕ ಬುದ್ಧಿಮತ್ತೆ(ಎ.ಐ) ಹಾಗೂ ತಂತ್ರಜ್ಞಾನ ಯುಗದಲ್ಲಿ ಕನ್ನಡಕ್ಕೆ ಹೊಸ ಅವಕಾಶಗಳೊಂದಿಗೆ ಸವಾಲುಗಳೂ ಇವೆ. ಇದಕ್ಕೆ ಅನುಗುಣವಾಗಿ ಹಾಗೂ ಮುಂದಿನ ಪೀಳಿಗೆಯ ದೃಷ್ಟಿಯಲ್ಲಿ ಕನ್ನಡ ಕಟ್ಟಬೇಕಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಎಂ ಶಿವಕುಮಾರ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕಿನ ಯಲಿಯೂರಿನಲ್ಲಿ ಸೋಮವಾರ ಆಯೋಜಿಸಿದ್ದ 29ನೇ ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.

'ಕೃತಕ ಬುದ್ಧಿಮತ್ತೆ(ಎ.ಐ), ಡಿಜಿಟಲ್ ತಂತ್ರಜ್ಞಾನ ಮತ್ತು ಜಾಗತಿಕ ಸಂಪರ್ಕದ ಯುಗದಲ್ಲಿದ್ದೇವೆ. ತಂತ್ರಜ್ಞಾನ ನಮ್ಮ ಜೀವನದ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂಬದಲಾಯಿಸುತ್ತಿದೆ. ಶಿಕ್ಷಣ, ಉದ್ಯೋಗ, ಸಂವಹನ, ವ್ಯಾಪಾರ ಮತ್ತು ಜ್ಞಾನಾರ್ಜನೆಗೆ ಹೊಸ ಮಾರ್ಗಗಳು ತೆರೆದುಕೊಳ್ಳುತ್ತಿದೆ. ಇಂತಹ ಕಾಲಘಟ್ಟದಲ್ಲಿ ಮೊಬೈಲ್ ಮತ್ತು ತಂತ್ರಜ್ಞಾನವನ್ನುಸಂಪೂರ್ಣವಾಗಿ ತ್ಯಜಿಸುವುದಲ್ಲ. ಅವುಗಳನ್ನು ಜವಾಬ್ದಾರಿಯುತವಾಗಿ ಬಳಸಬೇಕು. ಅವುಗಳನ್ನು ಕನ್ನಡ ಕಟ್ಟಲು ಬಳಸಿಕೊಳ್ಳಬೇಕು. ಜೊತೆಗೆ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸುವುದೇ ಗುರಿಯಾಗಬೇಕು' ಎಂದರು.

ಕನ್ನಡ ಡಿಜಿಟಲ್ ಗ್ರಂಥಾಲಯ ಮತ್ತು ಸ್ಥಳೀಯ ಸಾಹಿತ್ಯದ ಡಿಜಿಟಲ್ ದಾಖಲೆಗಳ ವ್ಯವಸ್ಥೆ ರೂಪಿಸಬೇಕು. 'ಮೊಬೈಲ್ ಬಿಡಿ ಪುಸ್ತಕ ಹಿಡಿ' ಎಂಬ ಸಂದೇಶವನ್ನು ಕೇವಲ ಘೋಷಣೆಯಾಗಿ ಉಳಿಸದೆ ಬದುಕಿನ ಅಭ್ಯಾಸವಾಗಿ ರೂಪಿಸಬೇಕು' ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್. ಕೃಷ್ಣಪ್ಪ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಯಲಿಯೂರು ದೇವರಾಜ್ ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, 5ನೇ ಹಣಕಾಸು ಆಯೋಗ ಅಧ್ಯಕ್ಷ ಸಿ.ನಾರಾಯಣಸ್ವಾಮಿ,ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಜಗನ್ನಾಥ್‌, ತಹಶೀಲ್ದಾರ್ ಎಂ.ಅನಿಲ, ತಾ.ಪಂ ಇಒ ಮುನಿರಾಜು, ಗ್ರೇಡ್ -2 ತಹಶೀಲ್ದಾರ್ ಜಯಕುಮಾರ್‌, ಸಾಹಿತ್ಯ ಪರಿಷತ್ ಕೋಶ್ಯಾಧ್ಯಕ್ಷ ಮುನಿರಾಜು, ಸಹ ಕಾರ್ಯದರ್ಶಿ ಎಸ್ ರಮೇಶ್ ಕುಮಾರ್‌, ತಾಲ್ಲೂಕು ಕೋಶ್ಯಾಧ್ಯಕ್ಷ ರಾಮಾಂಜಿನಪ್ಪ, ಗೌರವ ಕಾರ್ಯದರ್ಶಿ ಐ.ಟಿ. ರಾಮಾಂಜಿನಪ್ಪ, ಎನ್ ಜನಾರ್ದನ, ಚನ್ನರಾಯಪಟ್ಟಣ ಹೋಬಳಿ ಅಧ್ಯಕ್ಷ ಕೆ.ರಮೇಶ್ ಗೌಡ, ಪಿ ಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಕೆ. ಹನುಮಪ್ಪ, ಯಲಿಯೂರು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಎಚ್.ಆನಂದ್ ಗೌಡ, ಮಾಜಿ ಸದಸ್ಯ ಎ.ಆನಂದ, ಸುನಿಲ್ ಕುಬೇರ, ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ ಇದ್ದರು.

ಗ್ರಂಥಾಲಯ ಸ್ಥಾಪಿಸಿ

ದೇವನಹಳ್ಳಿ ಪಟ್ಟಣದಲ್ಲಿ ಸುಸಜ್ಜಿತ ಕನ್ನಡ ಸಾಹಿತ್ಯ ಭವನ ನಿರ್ಮಾಣವಾಗಬೇಕು. ತಾಲ್ಲೂಕಿನಲ್ಲಿ ಸಾಹಿತಿಗಳ ಕೃತಿಗಳು, ಸ್ಥಳೀಯ ಇತಿಹಾಸ, ಜಾನಪದ ಸಾಹಿತ್ಯ, ಅಪರೂಪದ ಪುಸ್ತಕಗಳು ಮತ್ತು ಹಳೆಯ ದಾಖಲೆಗಳನ್ನು ಸಂಗ್ರಹಿಸುವ ಗ್ರಂಥಾಲಯವು ಇಲ್ಲಿ ಸ್ಥಾಪನೆಯಾಗಬೇಕು ಎಂದು ಸಮ್ಮೇಳನಾಧ್ಯಕ್ಷ ಎಂ ಶಿವಕುಮಾರ್ ಒತ್ತಾಯಿಸಿದರು.

ಕನ್ನಡ ಕಲಿಯುವರನ್ನು ಪ್ರೋತ್ಸಾಹಿಸಬೇಕು. ಅವರ ತಪ್ಪುಗಳನ್ನು ಹಾಸ್ಯ ಮಾಡುವುದಕ್ಕಿಂತ ಸರಿಪಡಿಸಿ ಪ್ರೋತ್ಸಾಹ ನೀಡಬೇಕು. ಭಾಷೆ ಜನರನ್ನು ಬೆಸೆಯುವ ಸೇತುವೆಯಾಗಬೇಕೇ ಹೊರತು ದೂರ ಮಾಡುವ ಗೋಡೆ ಆಗಬಾರದು.

ಎಂ.ಶಿವಕುಮಾರ, ಸಮ್ಮೇಳನಾಧ್ಯಕ್ಷ

261103-15-52601837

Dailyhunt
Disclaimer: This content has not been generated, created or edited by Dailyhunt. Publisher: Prajavani