ಕನ್ನಡ ಸಾಹಿತ್ಯ ಪರಿಷತ್ತನ್ನು ಅದರ ಸ್ಥಾಪನೆಯ ಮೂಲ ಉದ್ದೇಶಗಳಿಗೆ ಅನುಗುಣವಾಗಿ ಮುನ್ನಡೆಸುವ, ಕುಗ್ಗಿದ ಅದರ ಘನತೆಯನ್ನು ಮರುಸ್ಥಾಪಿಸುವ ಮಾತುಗಳು ಈಗ ಮತ್ತೆ ಮತ್ತೆ ಕೇಳಿ ಬರುತ್ತಿವೆ.
ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂಬ ಭಾವನೆ ಜನರಲ್ಲಿದೆ.
ಆದರೆ ಅದು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಆಗಿ ಉಳಿದಿದೆಯೇ? ಈ ಪ್ರಶ್ನಗೆ ಉತ್ತರ ಹೇಳುವವರು ಯಾರು?
ಈ ವರ್ಷಾಂತ್ಯದಲ್ಲಿ ಪರಿಷತ್ತಿನ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ. ಮಾಧ್ಯಮಗಳಲ್ಲಿ, ಜಾಲ ತಾಣಗಳಲ್ಲಿ, ಕನ್ನಡ ಸಂಘಟನೆಗಳ ಮೊಗಸಾಲೆಗಳಲ್ಲಿ, ಸಾವರ್ಜನಿಕ ಹರಟೆಗಳಲ್ಲಿ ಚುನಾವಣೆ ಕುರಿತ ಮಾತುಗಳು ಕೇಳಿ ಬರುತ್ತಿವೆ. ಈ ಮಾತು, ಅಭಿಪ್ರಾಯಗಳ ತಾತ್ಪರ್ಯವನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು.
ಇತ್ತೀಚಿನ ವರ್ಷಗಳಲ್ಲಿ ಪರಿಷತ್ತಿನ ಸ್ಥಾಪನೆಯ ಉದ್ದೇಶವನ್ನು ಕಡೆಗಣಿಸಲಾಗಿದೆ. ಪರಿಷತ್ತಿನ ಘನತೆಯನ್ನು ಅದರ ಅಧ್ಯಕ್ಷರೇ ಕುಗ್ಗಿಸಿದ್ದಾರೆ. ಕೆಲ ಅಧಿಕಾರ ದಾಹಿ ಅಧ್ಯಕ್ಷರು ಮೂಲ ನಿಮಯಗಳನ್ನು ಉಲ್ಲಂಘಿಸಿದ್ದಾರೆ. ಹಲವು ತಿದ್ದುಪಡಿಗಳನ್ನು ತಂದಿದ್ದಾರೆ. ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ. ಕನ್ನಡ, ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲದವರು, ಸಾಹಿತ್ಯದ ಗಂಧ, ಗಾಳಿ ಇಲ್ಲದವರು, ಕನ್ನಡಕ್ಕೆ ಅಪಾಯ ಎದುರಾದಾಗ ಪ್ರತಿಭಟಿಸುವ ಶಕ್ತಿ ಇಲ್ಲದ ದುರ್ಬಲ ವ್ಯಕ್ತಿಗಳು ಅಧ್ಯಕರಾಗಿದ್ದೇ ಪರಿಷತ್ತಿನ ಇಂದಿನ ದುಃಸ್ಥಿತಿಗೆ ಕಾರಣ ಎಂಬ ಆಕ್ರೋಶ, ಹತಾಶೆ ವ್ಯಕ್ತವಾಗುತ್ತಿದೆ.
ಹಲವು ಮಹನೀಯರು ಅಧ್ಯಕ್ಷರಾಗಿ ಪರಿಷತ್ತನ್ನು ಮುನ್ನಡೆಸುವ ಪ್ರಯತ್ನ ಮಾಡಿದ್ದಾರೆ. ಅವರ ಪರಿಶ್ರಮದ ಫಲವಾಗಿ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂಬ ಗೌರವಕ್ಕೆ ಪಾತ್ರವಾಯಿತು. ಇತ್ತೀಚಿನ ದಶಕಗಳಲ್ಲಿ ಪರಿಷತ್ತು ಮೂಲ ಆಶಯಗಳಿಂದ ದೂರ ಸರಿದಿದೆ ಎನ್ನುವ ಮಾತುಗಳು ಕೇಳಿ ಬಂದವು. ಈ ದುಃಸ್ಥಿತಿಗೆ ಯಾರು ಹೊಣೆ? ಪರಿಷತ್ತಿನಲ್ಲಿ ಏನೇನು ನಡೆಯಿತು, ಎನ್ನುವುದನ್ನಾಲೀ, ಅಥವಾ ಅಲ್ಲಿ ನಡೆದಿದೆ ಎಂದು ಹೇಳುವ ಹಣಕಾಸಿನ ಅವ್ಯಹಾರಗಳನ್ನು ಚರ್ಚಿಸುವುದು ಈ ಲೇಖನದ ಉದ್ದೇಶ ಅಲ್ಲ.
ಪರಿಷತ್ತಿನ ದೈನಂದಿನ ಖರ್ಷು ವೆಚ್ಚಗಳಿಗೆ ಸರ್ಕಾರದ ನೆರವು ಸಿಗುತ್ತಿದೆ. ವರ್ಷಕ್ಕೊ, ಎರಡು ವರ್ಷಕ್ಕೊ ನಡೆಯುವ ಅಖಿಲ ಭಾರತ ಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ ಸರ್ಕಾರ ಕೆಲವು ಕೋಟಿ ರೂಗಳನ್ನು ನೀಡುತ್ತಿದೆ. ಪರಿಷತ್ತಿನ ಅಧ್ಯಕ್ಷರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಿದೆ. ಅಧ್ಯಕ್ಷರ ಮಾತುಗಳಿಗೆ ಮಾಧ್ಯಮಗಳಲ್ಲಿ ಪ್ರಚಾರ ಸಿಗುತ್ತದೆ. ಅವರ ದೈನಂದಿನ ಓಡಾಟ, ಸಮ್ಮೇಳನ ಸಿದ್ಧತೆ ಮತ್ತು ಇತರ ಚಟುವಟಿಕೆಗಳಿಗೆ ಪ್ರವಾಸ ಭತ್ಯೆ, ಗೌರವ ಧನ ಇತ್ಯಾದಿಗಳು ಸಿಗುತ್ತವೆ. ಹೀಗಾಗಿ ಅಧ್ಯಕ್ಷ ಸ್ಥಾನ ಗೌರವದ ಹುದ್ದೆಯಾಗಿದೆ. ಅನೇಕರು ಅದರ ಮೇಲೆ ಕಣ್ಣಿಟ್ಟಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿಗೆ ಈಗ 111 ವರ್ಷ. ಈ ಅವಧಿಯಲ್ಲಿ ಅದು ಹಲವು ಏಳು, ಬೀಳುಗಳನ್ನು ಕಂಡಿದೆ. ಪರಿಷತ್ತಿನ ಅಧ್ಯಕ್ಷರು ಮತ್ತು ಕಾರ್ಯಕಾರಿ ಮಂಡಳಿ ಆಗಾಗ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಅನೇಕ ಸಾಹಿತಿಗಳು ಇಂತಹ ನಿರ್ಧಾರಗಳಿಗೆ ಅಸಮಾಧಾನ ವ್ಯಕ್ತಪಡಿಸಿ ಪರಿಷತ್ತಿನಿಂದ ದೂರ ಸರಿದಿದ್ದಾರೆ. ಕೆಲ ಸಮಯದ ನಂತರ ಅಸಮಾಧಾನಗಳನ್ನು ಮರೆತಿದ್ದಾರೆ. ಪರಿಷತ್ತಿನ ಒಳಗೆ ಏನು ನಡೆಯುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದೆ. ಸರ್ಕಾರದ ಹಣ ಸದುಪಯೋಗ ಆಗುತ್ತಿದೆಯೇ ಎಂದು ಕಣ್ಣಿಟ್ಟು ಕಾಯುವವರಿದ್ದಾರೆ. ಇಷ್ಟಾದರೂ ಪರಿಷತ್ತು ಅವ್ಯವಹಾರಗಳಿಂದ ಮುಕ್ತವಾಗಿಲ್ಲ. ಹೊಸ ಬಗೆಯ ಅಕ್ರಮಗಳು ನಡೆಯುತ್ತಲೇ ಇವೆ.
ಕನ್ನಡಕ್ಕೆ ಅಪಾಯಗಳು ಎದುರಾದಾಗ ತಕ್ಷಣ ಪ್ರತಿಭಟಿಸುವ ವಿಷಯದಲ್ಲಿ ಅಧ್ಯಕ್ಷರು ವಿಳಂಬ ಧೋರಣೆ ಅನುಸರಿಸಿದ ಹಲವು ಉದಾಹರಣೆಗಳಿವೆ. ಕನ್ನಡಿಗರ ಭಾವನೆಗಳನ್ನು ಅರ್ಥ ಮಾಡಿಕೊಂಡು ಸರ್ಕಾರವನ್ನು ಎಚ್ಚರಿಸಬೇಕಾದ ಮುಖ್ಯ ಕೆಲಸವನ್ನೇ ಮರೆತವರೂ ಇದ್ದಾರೆ.
ಇತ್ತೀಚಿನ ಅಧ್ಯಕ್ಷರುಗಳ ಗಮನ ಸಾಹಿತ್ಯ ಸಮ್ಮೇಳನಗಳನ್ನು ಅದ್ಧೂರಿಯಾಗಿ ಸಂಘಟಿಸುವುದರ ಕಡೆಗಿದೆ. ಹೀಗಾಗಿ ಪರಿಷತ್ತಿನ ಅಧ್ಯಕ್ಷರ ಮುಖ್ಯ ಕೆಲಸವೆಂದರೆ ಸಾಹಿತ್ಯ ಸಮ್ಮೇಳನ ನಡೆಸುವುದು, ಪರಿಷತ್ತಿನ ದತ್ತಿ ಪ್ರಶಸ್ತಿ, ಇತರ ಪುರಸ್ಕಾರಗಳನ್ನು ಹಂಚುವುದು ಎಂದು ಜನ ಭಾವಿಸುವಂತಾಗಿದೆ. ಪರಿಷತ್ತಿನ ಅಧ್ಯಕ್ಷರಾಗಿ ಹೇಳಲೇ ಬೇಕಾದ ಮಾತುಗಳನ್ನೂ ಸಕಾಲದಲ್ಲಿ ಹೇಳದೆ "ಊರವರೆಲ್ಲ ನಕ್ಕ ಮೇಲೆ ನಮ್ಮ ಮನೆಯ ಕಿವುಡ ನಕ್ಕʼ ಎಂಬ ಗಾದೆಯನ್ನು ನೆನಪಿಸುವಂತೆ ಪತ್ರಿಕಾ ಹೇಳಿಕೆ ಕೊಟ್ಟು ಕೈ ತೊಳೆದುಕೊಂಡವರೂ ಇದ್ದಾರೆ.
ಮೂರ್ನಾಲ್ಕು ದಶಕಗಳಿಂದೀಚೆಗೆ ಪರಿಷತ್ತಿಗೆ ಜಾತಿ ಸೋಂಕು ತಗುಲಿದೆ. ಅಧ್ಯಕ್ಷರ ಆಯ್ಕೆಯಲ್ಲಿ ಜಾತಿ ಪ್ರಮುಖ ಪಾತ್ರ ವಹಿಸುತ್ತ ಬಂದಿದೆ. ಪರಿಷತ್ತು ಜಾಡು ತಪ್ಪಿದ್ದಕ್ಕೆ ಇದೂ ಒಂದು ಕಾರಣ. ತಪ್ಪಿದ ಜಾಡನ್ನು ಸರಿಪಡಿಸುವ, ಮೂಲ ಉದ್ದೇಶಗಳನ್ನು ಮರು ಸ್ಥಾಪಿಸಿ ಮುನ್ನಡೆಸಿಕೊಂಡು ಹೋಗುವ ಸಮರ್ಥರು ಯಾರು? ಜಾತಿ, ಹಣ ಮುಖ್ಯವಾಗಿರುವ ಈ ಕಾಲದಲ್ಲಿ ಆಮಿಷಕ್ಕೆ ಒಳಗಾಗದೆ ಸಮರ್ಥ ವ್ಯಕ್ತಿಯನ್ನು ಅಧಕ್ಷರನ್ನಾಗಿ ಆಯ್ಕೆ ಮಾಡುವ ದೊಡ್ಡ ಜವಾಬ್ದಾರಿ ಪರಿಷತ್ತಿನ ಸದಸ್ಯರ ಮೇಲಿದೆ.
ಎಂಬತ್ತರ ದಶಕದಲ್ಲಿ ಕವಿ ಗೋಪಾಲಕೃಷ್ಣ ಅಡಿಗರು ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಜಡತ್ವದ ಸಂಕೇತ ಎಂದು ಟೀಕಿಸಿದ್ದರು. ಅವರ ಲೇಖನ ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು. ಪರಿಷತ್ತು ತನ್ನ ಜಡತ್ವದಿಂದ ಹೊರ ಬರಬೇಕು ಎನ್ನುವುದು ಅಡಿಗರ ಆಶಯವಾಗಿತ್ತು. ಅವರು ಯಾರನ್ನು ಗಮನದಲ್ಲಿ ಇಟ್ಟುಕೊಂಡು ಲೇಖನ ಬರೆದರು ಎನ್ನುವುದು ಮುಖ್ಯವಲ್ಲ. ಪರಿಷತ್ತು ನಿಜವಾದ ಅರ್ಥದಲ್ಲಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಆಗಬೇಕು ಎಂಬ ಕಾಳಜಿ ಲೇಖನದಲ್ಲಿತ್ತು. ವ್ಯಂಗ್ಯ ಮತ್ತು ವಿನೋದದ ಧಾಟಿಯಲ್ಲಿ ಪರಿಷತ್ತಿನ ಚಟುವಟಿಕೆಗಳನ್ನು ಲೇವಡಿ ಮಾಡಿದ್ದರು. ಪರಿಷತ್ತು ಬದಲಾಗಬೇಕು ಎಂಬ ಕಾಳಜಿ ಮುಖ್ಯವಾಗಿತ್ತು. ಪರಿಷತ್ತಿನ ವಿರುದ್ಧ ಅಡಿಗರು ಮತ್ತು ಇತರರು ಮಾಡಿದ ಟೀಕೆಗಳನ್ನು ಅದರ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಗಂಭೀರವಾಗಿ ಪರಿಗಣಿಸಲಿಲ್ಲ.
ಪರಿಷತ್ತಿನಿಂದ ಹೆಚ್ಚಿದನ್ನು ನಿರೀಕ್ಷಿಸುವುದು ವ್ಯರ್ಥ. ಹೆಚ್ಚೆಂದರೆ ಅದು ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡಪರ ನಿರ್ಣಯ ಅಂಗೀಕರಿಸಬಹುದಷ್ಟೆ. ಪರಿಷತ್ತಿನ ನಿರ್ವಹಣೆಗೆ ಸರ್ಕಾರ ಅನುದಾನ ಕೊಡುವುದರಿಂದ ನಿರ್ಣಯಗಳ ಜಾರಿ ವಿಷಯದಲ್ಲಿ ಅದರ ಜತೆ ಸಂಘರ್ಷಕ್ಕೆ ಇಳಿಯುತ್ತದೆ ಎಂದು ಯಾರೂ ಭಾವಿಸುವುದಿಲ್ಲ.
ಭಾರತೀಯ ಭಾಷೆಗಳ ಅಭಿವೃದ್ಧಿ ಮತ್ತು ಸಾಹಿತ್ಯಿಕ ಚಟುವಟಿಕೆಗಳನ್ನು ಮುನ್ನಡೆಸಲು ದೇಶದ ಉದ್ದಗಲದಲ್ಲಿ ಇರುವ ವ್ಯವಸ್ಥೆಯನ್ನು ಗಮನಿಸಿದರೆ ಕನ್ನಡ ಸಾಹಿತ್ಯ ಪರಿಷತ್ತಿನ ಮಹತ್ವ ಗೊತ್ತಾಗುತ್ತದೆ. ತಮಿಳುನಾಡಿನಲ್ಲಿ ವಿಶ್ವ ತಮಿಳು ಸಂಘಂ ಹೆಸರಿನ ಸಂಘಟನೆ ಮದುರೈನಲ್ಲಿದೆ. ಆದರೆ ಅದು ವಿಕೇಂದ್ರೀಕರಣಗೊಂಡ ಪ್ರಜಾಸತ್ತಾತ್ಮಕ ಸಂಘಟನೆ ಅಲ್ಲ. 1911ರಲ್ಲೇ ಆಂಧ್ರ ಸಾಹಿತ್ಯ ಪರಿಷತ್ತು ಅಸ್ಥಿತ್ವಕ್ಕೆ ಬಂದಿತು. ಅದೂ ಅಷ್ಟೇ. ಕೇರಳದಲ್ಲಿ ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ ಹೆಸರಿನ ಸಂಘಟನೆ ಇದೆ. ವಿಕೇಂದ್ರೀಕರಣಕ್ಕೆ ಬದ್ಧವಾದ ಮತ್ತು ಚುನಾವಣೆ ಮೂಲಕ ಆಯ್ಕೆಯಾದ ಅಧ್ಯಕ್ಷರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುವ ಪ್ರಜಾಸತ್ತಾತ್ಮಕ ಸಂಘಟನೆ ಯಾವುದಾದರೂ ಇದ್ದರೆ ಅದು ಕನ್ನಡ ಸಾಹಿತ್ಯ ಪರಿಷತ್ತು ಮಾತ್ರವೇ.
ಕನ್ನಡಕ್ಕೆ ಹಲವು ಸವಾಲುಗಳಿವೆ. ರಾಜಧಾನಿ ಬೆಂಗಳೂರಿನಲ್ಲಿ ವಲಸೆ ಬಂದ ಅನ್ಯ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರೈತರ ಭೂಮಿ ಅನ್ಯರ ಪಾಲಾಗುತ್ತಿದೆ. ಸರ್ಕಾರವೇ ಕೃಷಿಯೇತರ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದೆ. ಕನ್ನಡದ ಸೊಲ್ಲು ಕ್ಷೀಣಿಸುತ್ತಿದೆ. ಜತೆಗೆ ನಗರವಾಸಿಗಳಲ್ಲಿ ಇಂಗ್ಲಿಷಿನ ವ್ಯಾಮೋಹ ಹೆಚ್ಚುತ್ತಿದೆ. ಕನ್ನಡಿಗರ ಮೇಲೆ ಹಿಂದಿಯನ್ನು ಹೇರುವ ಪ್ರಯತ್ನಗಳು ನಡೆಯುತ್ತಲೇ ಇವೆ. ಒಟ್ಟಾರೆ ಕನ್ನಡಿಗರು ಅತಂತ್ರ ಭಾವದಲ್ಲಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಹೊಸ ಆವಿಷ್ಕಾರಗಳಿಂದಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರು ನಿರುದ್ಯೋಗಿಗಳಾಗುತ್ತಿದ್ದಾರೆ. ಈ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿ ಕನ್ನಡಿಗರ ಹಿತ ರಕ್ಷಣೆಗೆ ಪರಿಷತ್ತು ಪ್ರಯತ್ನಿಸಬೇಕು.
ಪರಿಷತ್ತು ಪಾರದರ್ಶಕವಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಕನ್ನಡ, ಕರ್ನಾಟಕದ ಅಭಿವೃದ್ಧಿಗೆ ಅಡ್ಡಿಯಾಗುತ್ತಿರುವ ಹೊಸ ಬಗೆಯ ಅಪಾಯಗಳನ್ನು ಗ್ರಹಿಸುವುದು ಮತ್ತು ಅದಕ್ಕೆ ಪರ್ಯಾಯ ಮಾರ್ಗಗಳನ್ನು ಹುಡುಕುವುದು ಪರಿಷತ್ತಿನ ಮುಖ್ಯ ಕೆಲಸ ಆಗಬೇಕು. ಅದು ಸಾಧ್ಯವಾದರೆ ಪರಿಷತ್ತು ನಿಜವಾದ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಆದೀತು.

