Dailyhunt Logo
  • Light mode
    Follow system
    Dark mode
    • Play Story
    • App Story
ಕನ್ನಡದ ಮೊದಲ ಪತ್ರಿಕೆ: 'ಕಂನಡ' ಸಮಾಚಾರವಾಯಿತು ಮಂಗಳೂರ ಸಮಾಚಾರ...

ಕನ್ನಡದ ಮೊದಲ ಪತ್ರಿಕೆ: 'ಕಂನಡ' ಸಮಾಚಾರವಾಯಿತು ಮಂಗಳೂರ ಸಮಾಚಾರ...

ಮೊದಲ ಕನ್ನಡ ಪತ್ರಿಕೆ 'ಮಂಗಳೂರ ಸಮಾಚಾರ' ಆರಂಭವಾದ ಮಂಗಳೂರು ನಗರವು ಕನ್ನಡ ಪತ್ರಿಕೋದ್ಯಮ ಕ್ಷೇತ್ರಕ್ಕೆ ಪ್ರಬಲ ಬುನಾದಿಯನ್ನು ಹಾಕಿಕೊಟ್ಟಿತು. ಮಂಗಳೂರಿನಿಂದ 16 ಸಂಚಿಕೆಗಳಲ್ಲಿ (15 ದಿನಗಳಿಗೊಮ್ಮೆ) ಪ್ರಕಟವಾದ 'ಮಂಗಳೂರ ಸಮಾಚಾರ' ಮುಂದಿನ ದಿನಗಳಲ್ಲಿ 'ಕಂನಡ ಸಮಾಚಾರ' ಎಂಬ ಹೆಸರಿನಿಂದ ಬಳ್ಳಾರಿಯಿಂದ ಪ್ರಕಟವಾಗಲು ಆರಂಭಿಸಿತು ಎಂಬುದು ವಿಶೇಷ.

'ಈ ದೇಶವೆಂಬ ಮನೆಯಲ್ಲಿ ವಾಸಿಸುವ ಜನ ಇಂದಿನವರೆಗೂ ಹೊರಗಿನ ದೇಶಸ್ಥರ ಸಮಾಚಾರಗಳನ್ನು ತಿಳಿಯದೆ ಕಿಟಕಿ ಇಲ್ಲದ ಬಿಡಾರಗಳಲ್ಲಿ ವಾಸಿಸುವವರಂತೆ ಇದ್ದರು. ಈ ಕಾರಣದಿಂದ ಹೊರಗಿನ ಕಾರ್ಯಗಳನ್ನು ಕಾಣುವ ಹಾಗೆ ಒಳಗೆ ಸ್ವಲ್ಪ ಬೆಳಕು ಬೀರುವಂತೆ ನಾಲ್ಕೂ ಕಿಟಕಿಗಳನ್ನು ಮಾಡುವ ಈ ಸಮಾಚಾರ ಕಾಗದವನ್ನು ಸಿದ್ಧಮಾಡಿ, ಓದಬೇಕೆಂದು ಕೊಟ್ಟರೆ ಕಿಟಕಿಗಳನ್ನು ಮಾಡಿದ ಹಾಗೆ ಆಗುತ್ತದೆ' ಎಂಬುದನ್ನು ಮೊದಲ 'ಮಂಗಳೂರ ಸಮಾಚಾರ'ದಲ್ಲಿ ಉಲ್ಲೇಖಿಸಲಾಗಿತ್ತು.

ಹೀಗೆ ಜಗತ್ತಿನ ಪರಿಚಯ ಮಾಡಿಕೊಡುವ ಉದ್ದೇಶವೇ ಈ ಪತ್ರಿಕೆಯ ಉದಯಕ್ಕೆ ಕಾರಣವಾಗಿತ್ತು. ಜತೆಗೆ, ಮಂಗಳೂರು ನಗರದ ಹಾಗೂ ಜಿಲ್ಲೆಯ ಸುದ್ದಿಗಳೂ ಇದರಲ್ಲಿ ಇರುತ್ತಿದ್ದವು.
ಈ ಪತ್ರಿಕೆ ಆರಂಭವಾಗುವುದಕ್ಕೂ ಮೊದಲು ಒಂದು ವಿಷಯದ ಬಗ್ಗೆ ಸುಳ್ಳು ಸುದ್ದಿಗಳೇ ಹರಡುತ್ತಿದ್ದವು. ಪತ್ರಿಕೆ ಆರಂಭವಾಗಲು ಇದೂ ಒಂದು ಕಾರಣವಾಗಿತ್ತು.

ಈ ಅಂಶವನ್ನೂ ಮಂಗಳೂರ ಸಮಾಚಾರದಲ್ಲಿ ಸೊಗಸಾಗಿ ವಿವರಿಸಲಾಗಿತ್ತು. ಒಬ್ಬ ಒಂದು ಸುದ್ದಿಯನ್ನು ಬೆಳಿಗ್ಗೆ ಬಾಯಿಗೆ ಬಂದ ಹಾಗೇ ಇನ್ನೊಬ್ಬನಿಗೆ ತಿಳಿಸಿ ಆ ಸುದ್ದಿ ಸುಳ್ಳು ಸುದ್ದಿಯಾಗಿ ಊರೆಲ್ಲ ಹರಡುತ್ತಿತ್ತು. ನಿನ್ನೆಯ ಸುದ್ದಿ ಸುಳ್ಳು ಎಂಬುದು ಗೊತ್ತಾಗುತ್ತಿದ್ದುದೇ ಮರುದಿನ. ಜನರಿಗೆ ಸತ್ಯ ಸುದ್ದಿಯನ್ನೇ ಪೂರೈಸಬೇಕು ಎಂದು ಆಲೋಚಿಸಿ ಸುದ್ದಿಗಳನ್ನು ಸಂಗ್ರಹಿಸಿ ಒಂದು ಪಕ್ಷಕ್ಕೆ (15 ದಿನಕ್ಕೊಮ್ಮೆ) ಒಂದು ಕಾಗದ (ಪತ್ರಿಕೆ)ವನ್ನು ಛಾಪಿಸಿ ಸ್ವಲ್ಪ ಬೆಲೆಗೆ ಜನರ ಕೈಗಿಡಬೇಕು ಎಂದು ನಿಶ್ಚಯಿಸಲಾಗಿತ್ತು ಎಂಬ ಅಂಶವೂ ಮೊದಲ ಸಂಚಿಕೆಯಲ್ಲೇ ಪ್ರಕಟಗೊಂಡಿತ್ತು ಎಂಬುದನ್ನು ಡಾ.ಶ್ರೀನಿವಾಸ ಹಾವನೂರ ಅವರು 'ಹೊಸಗನ್ನಡದ ಅರುಣೋದಯ' ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.

ಹಾರಿಕೆಯ ಸುದ್ದಿಯಿಂದ ಯಾವುದೇ ಪ್ರಯೋಜನ ಇಲ್ಲ ಎಂಬುದನ್ನು ಅರಿತುಕೊಂಡ ಜರ್ಮನ್‌ ಇವ್ಯಾಂಜೆಲಿಕಲ್‌ (ಬಾಸೆಲ್) ಮಿಷನ್‌ನವರು ಮುದ್ರಣಯಂತ್ರವನ್ನು ತಂದ ಮರುವರ್ಷವೇ ನಾಲ್ಕು ಪುಟದ 'ಮಂಗಳೂರ ಸಮಾಚಾರ'ವನ್ನು ಮುದ್ರಿಸತೊಡಗಿದರು. ಈ ಪತ್ರಿಕೆ ಮಂಗಳೂರಿನ ಕೊತ್ವಾಲ ಕಟ್ಟೆ ಮುಂಭಾಗ ಮತ್ತು ತಾಲ್ಲೂಕು ಕಚೇರಿಯ ಸಮೀಪ ಇದ್ದ ಇಂಗ್ಲಿಷ್‌ ಶಾಲೆಯಲ್ಲಿ ಮಾರಾಟವಾಗುತ್ತಿತ್ತು. ಪತ್ರಿಕೆಯ ಸ್ವಾಮ್ಯವು ಬಾಸೆಲ್ ಮಿಷನ್‌ನವರಿಗೆ ಸೇರಿದ್ದರೂ ಅದರ ಹೆಸರಿರಲಿಲ್ಲ. ಪ್ರತಿ ಸಂಚಿಕೆಯ ಕೊನೆಯಲ್ಲಿ ಸಂಪಾದಕ 'ಹರ್ಮನ್‌ ಮೋಗ್ಲಿಂಗ್' ಅವರ ಹೆಸರನ್ನು ಅಚ್ಚು ಹಾಕಿಸಲಾಗುತ್ತಿತ್ತು.

ಮಂಗಳೂರ ಸಮಾಚಾರ ಪತ್ರಿಕೆಯನ್ನು ಕಾಗದ ಎಂದೂ ಕರೆಯಲಾಗುತ್ತಿತ್ತು. ಅದರ ಬೆಲೆಯನ್ನು ಒಂದು ದುಡ್ಡು ಎಂದು ನಿಗದಿ ಮಾಡಲಾಗುತ್ತಿತ್ತು. ಇದರಲ್ಲಿ ಅಂಚೆ ವೆಚ್ಚವೂ ಸೇರಿತ್ತು.

'ಮಂಗಳೂರ ಸಮಾಚಾರ' ಪತ್ರಿಕೆಯಾಗಿ ರೂಪುಗೊಂಡ ಬಗೆ

183 ಸಂವತ್ಸರಗಳನ್ನು ದಾಟಿ ಬಂದ 'ಮಂಗಳೂರ ಸಮಾಚಾರ' ಪತ್ರಿಕೆಯಾಗಿ ರೂಪುಗೊಂಡ ಬಗೆಯೇ ವಿಶಿಷ್ಟವಾದುದು. ಪಾಶ್ಚಾತ್ಯ ಪ್ರಪಂಚದಲ್ಲಿ ಜನಜೀವನದ ಮೇಲೆ ಮುದ್ರಣ ಪ್ರಭಾವವು ಮೂರು ನಾಲ್ಕು ಶತಮಾನಗಳಿಂದ ಉಂಟಾಗಿದ್ದರೂ ನಮ್ಮಲ್ಲಿ ಈ ವ್ಯವಸ್ಥೆ ಒಂದೂವರೆ ಶತಮಾನದ ಈಚಿನದು. ಈ ಸೌಲಭ್ಯವನ್ನು ಒದಗಿಸಿಕೊಟ್ಟವರೂ ಪಾಶ್ಚಾತ್ಯರೆ.

ಕನ್ನಡದ ಮುದ್ರಣ ಪ್ರಾರಂಭವಾದದದ್ದು 1817ರಲ್ಲಿ. ಆಗ ಕನ್ನಡ ಮತ್ತು ತೆಲುಗು ಭಾಷೆಗೆ ಒಂದೇ ಅಚ್ಚುಮೊಳೆಗಳನ್ನು ಬಳಸಲಾಗುತ್ತಿತ್ತು. 1841ಕ್ಕಿಂತ ಮೊದಲು ಕನ್ನಡದಲ್ಲಿ ನಿಘಂಟು, ಪಠ್ಯ ಪುಸ್ತಕಗಳನ್ನು ಮುಂಬೈ, ಮದ್ರಾಸುಗಳಲ್ಲಿ ಕಲ್ಲಚ್ಚು ಅಥವಾ ಮರದ ಅಚ್ಚುಗಳಿಂದ ಮುದ್ರಣ ಮಾಡಲಾಗುತ್ತಿತ್ತು. ತುಳುನಾಡಿನಲ್ಲಿ ಶಾಸನ, ತಾಳೆಗರಿ, ತಾಮ್ರದ ಹಾಳೆಗಳಲ್ಲಿ ಬರವಣಿಗೆಗಳು ರೂಡಿಯಲ್ಲಿದ್ದರೂ ಮುದ್ರಣದ ವ್ಯವಸ್ಥೆ ಇರಲಿಲ್ಲ.

1834ರಲ್ಲಿ ಭಾರತಕ್ಕೆ ಬಂದ ಬಾಸೆಲ್ ಮಿಷನರಿಗಳು 1841ರಲ್ಲಿ ತುಳುನಾಡಿನಲ್ಲಿ ಮೊದಲ ಕಲ್ಲಚ್ಚಿನ ಮುದ್ರಣಾಲಯವನ್ನು ಪ್ರಾರಂಭಿಸಿ ಅದೇ ಮುದ್ರಣಾಲಯದಲ್ಲಿ 1843ರಲ್ಲಿ ಕನ್ನಡ ಪತ್ರಿಕೆ 'ಮಂಗಳೂರು ಸಮಾಚಾರ'ದ ಉಗಮವಾಯಿತು.

ಮದ್ರಾಸ್ ಆದಿಪತ್ಯಕ್ಕೆ ಸೇರಿದ್ದ ತುಳು ಜಿಲ್ಲೆಯು ಆಂಗ್ಲರ ಆಳ್ವಿಕೆಯ ಕಾಲದ ಆರಂಭದಲ್ಲಿ ಶಿಕ್ಷಣ, ಕೈಗಾರಿಕೆ, ವ್ಯಾಪಾರ, ಕಲೆ ಮತ್ತು ವ್ಯವಸಾಯ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದರೂ 1896ರವರೆಗೆ ಪತ್ರಿಕೋದ್ಯಮದಲ್ಲಿ ಮುಂದಡಿ ಇಟ್ಟಂತೆ ಕಂಡುಬರುತ್ತಿಲ್ಲ. ಓದು‌-ಬರಹ ಬಲ್ಲವರ ಸಂಖ್ಯೆ ಕಡಿಮೆ ಇದ್ದುದು, ಇತರ ಭಾಷೆಗಳಲ್ಲಿ ಇರುವಷ್ಟು ಮಂದಿ ಸಮರ್ಥ ಪತ್ರಿಕಾ ಲೇಖಕರು ಇದ್ದರೆ ಇದ್ದುದೂ ಇದಕ್ಕೆ ಕಾರಣವೆಂದರೆ ತಪ್ಪಾಗಲಾರದು ಎಂದು ವಿಶ್ಲೇಷಿಸುತ್ತಾರೆ ಕರ್ನಾಟಕ ಥಿಯಲಾಜಿಕಲ್ ಕಾಲೇಜಿನ ನಿವೃತ್ತ ಪತ್ರಾಗಾರ ಸಹಾಯಕ 'ಬೆನೆಟ್‌ ಜಿ.ಅಮ್ಮನ್ನ'.

ಬೆನೆಟ್ ಜಿ.ಅಮ್ಮನ್ನ

ಮಂಗಳೂರ ಸಮಾಚಾರದಲ್ಲೂ ಇಂದಿನ ಪತ್ರಿಕೆಗಳಲ್ಲಿ ಇರುವಂತೆ ಒಟ್ಟು 8 ವಿವಿಧ ಕ್ಷೇತ್ರಗಳ ಸುದ್ದಿಗಳೂ ಪ್ರಕಟವಾಗುತ್ತಿದ್ದವು.

  1. ಊರ ವರ್ತಮಾನ: ಸಾಹುಕಾರ ಅಥವಾ ಸರ್ಕಾರದ ಯಾರಾದರೂ ವಿಶೇಷವಾದ ಕೆಲಸ ಮಾಡಿದರೆ ಜನರು ಅದನ್ನು ತಿಳಿದುಕೊಂಡು ಸ್ವಾಬಿಮಾನದಿಂದ ಅದೇ ನಡೆಯನ್ನು ಅನುಸರಿಸಬೇಕು. ಯಾರಾದರೂ ಅಕ್ರಮವನ್ನು ನಡೆಸಿದರೆ ಆ ವಿಷಯದಲ್ಲೂ ಜನರಿಗೆ ಅಸಹ್ಯ ಹುಟ್ಟಿಸುವಂತೆ ತಿಳಿಸುವ ಕಾರ್ಯವೂ ಈ ವಿಭಾಗದ ಮೂಲಕ ನಡೆಯುತ್ತಿತ್ತು.

  2. ಸರ್ಕಾರದ ನಿರೂಪಗಳು: ಮದ್ರಾಸ್‌ ಗವರ್ನರ್ ದೊರೆಗಳು, ಜಿಲ್ಲಾ ನ್ಯಾಯಾಧೀಶರು ಹೊರಡಿಸುತ್ತಿದ್ದ ಆದೇಶಗಳನ್ನು ಈ ವಿಭಾಗದಲ್ಲಿ ತಿಳಿಸಲಾಗುತ್ತಿತ್ತು.

  3. ಸರ್ವರಾಜ್ಯ ವರ್ತಮಾನಗಳು: ಕಂಪನಿಯವರು ಬೇರೆ ಬೇರೆ ಸಂಸ್ಥಾನಕ್ಕೆ ಸೈನ್ಯವನ್ನು ಕಳುಹಿಸಿದರೆ, ಯುದ್ಧದಲ್ಲಿ ಜಯಾಪಜಯವಾದರೆ, ಒಂದು ದೇಶವನ್ನು ತೆಗೆದುಕೊಂಡರೆ, ಹೊಸ ಸಂಸ್ಥಾನವನ್ನು ಸ್ಥಾಪಿಸಿದರೆ, ಬೇರೆ ಅರಸರ ಜತೆ ಒಡಂಬಡಿಕೆ ಮಾಡಿದ ಸಮಾಚಾರವನ್ನು ಮಂಗಳೂರ ಸಮಾಚಾರದಲ್ಲಿ ಮುದ್ರಿಸಲಾಗುತ್ತಿತ್ತು.

  4. ನೂತನವಾದ ಆಶ್ಚರ್ಯ ಸುದ್ದಿಗಳು: ಹಿಂದೂ ದೇಶದಲ್ಲಾಗಲಿ ಬೇರೆ ಯಾವ ದೇಶದಲ್ಲಾದರೂ ಮನುಷ್ಯರ ಬುದ್ಧಿ ಅಥವಾ ಯುಕ್ತಿ ಶಕ್ತಿಯಿಂದ, ದೇವರ ಚಿತ್ತದಿಂದ ಅಪರೂಪದ ಕಾರ್ಯ ನಡೆದರೆ ಅದನ್ನು ತಿಳಿದುಕೊಂಡು ಮುದ್ರಿಸಲಾಗುತ್ತಿತ್ತು.

  5. ಅನ್ಯರ ನಡತೆಗಳು: ಬೇರೆ ದೇಶಗಳ ರಾಜನೀತಿಯನ್ನು ಈ ವಿಭಾಗದ ಸುದ್ದಿಗಳಲ್ಲಿ ತಿಳಿಸಲಾಗುತ್ತಿತ್ತು. ಬೇರೆ ದೇಶಗಳ ರಾಜನೀತಿಯನ್ನು ಅರಿತುಕೊಂಡರೆ ಅವರ ಕಾರ್ಯಗಳನ್ನು ತಿಳಿದುಕೊಳ್ಳಲು ನೆರವಾಗುವ ಉದ್ದೇಶದಿಂದ ಈ ಸುದ್ದಿಗಳನ್ನು ಪ್ರಕಟಿಸಲಾಗುತ್ತಿತ್ತು.

  6. ಸುಬುದ್ಧಿಗಳು: ಬೇರೆ ಬೇರೆ ದೇಶಗಳ ಗಾದೆಗಳನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಜನರೊಳಗೆ ಪ್ರಸಿದ್ಧಿಯಾದ ಉತ್ತಮ ಬುದ್ಧಿಯ ಮಾತುಗಳನ್ನು ಇಲ್ಲಿ ಪ್ರಕಟಿಸಲಾಗುತ್ತಿತ್ತು.

  7. ಕಥೆಗಳು: ಪಂಚತಂತ್ರ ಮೊದಲಾದ ಬೇರೆ ಬೇರೆ ದೇಶಸ್ಥರ ಪರಂಪರೆಯಾದ ಕಥೆಗಳಲ್ಲಿ ಒಂದೊಂದು ಬಾಲ-ವೃದ್ಧ ಮೊದಲಾದವರ ಸಂತೋಷಕ್ಕಾಗಿ ರೂಢಿ ಭಾಷೆಯ ಕಥೆಗಳನ್ನು ಪ್ರಕಟಿಸಲಾಗುತ್ತಿತ್ತು.

  8. ಯಾರಾದರೂ ಒಂದು ವರ್ತಮಾನ ಅಥವಾ ಒಂದು ಮಾತನ್ನು ಛಾಪಿಸಬೇಕೆಂದು ಬರೆದು ಕಳುಹಿಸಿದರೆ ಆ ಸಂಗತಿ ಸತ್ಯವಾಗಿದ್ದರೆ ಅದನ್ನೂ ಈ ವರ್ತಮಾನ ಕಾಗದದಲ್ಲಿ ಪ್ರಕಟಿಸಲಾಗುತ್ತಿತ್ತು.

ಮಂಗಳೂರು ಸಮಾಚಾರ

ಹೆಸರು ಅಥವಾ ಗುರುತು ರಹಿತ ಪತ್ರಗಳನ್ನು ಇಂದೂ ಪರಿಗಣಿಸಲಾಗುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ಹೆಸರು ಬಹಿರಂಗಪಡಿಸಬಾರದು ಎಂಬ ಉದ್ದೇಶವಿದ್ದರೂ ಲೇಖಕರ ಹೆಸರು, ವಿಳಾಸ ಪತ್ರಿಕಾ ಸಂಪಾದಕರಿಗೆ ತಿಳಿದಿರಬೇಕು ಎಂಬ ಅಂಶವನ್ನು ಮಂಗಳೂರ ಸಮಾಚಾರದಲ್ಲೂ ಪಾಲಿಸಲಾಗುತ್ತಿತ್ತು. ಜಾತ್ಯತೀತವಾದ ಮತ್ತು ಎಲ್ಲ ವರ್ಗದ ಕನ್ನಡಿಗರನ್ನು ಉದ್ದೇಶಿಸಿ ಪತ್ರಿಕೆ ಪ್ರಕಟವಾಗುತ್ತಿತ್ತು. ದಾಸರ ಪದ ಅಥವಾ ಸಂಸ್ಕೃತ ಶ್ಲೋಕಗಳನ್ನು ಪ್ರಕಟಿಸುವ ಜತೆಗೆ ಅದಕ್ಕೆ ಸಮಾನವಾದ ಬೈಬಲ್ ಉಕ್ತಿಗಳನ್ನೂ ವಿವರಿಸಲಾಗುತ್ತಿತ್ತು.

ಕಲ್ಲಚ್ಚಿನಲ್ಲಿ ಮುದ್ರಣಗೊಳ್ಳುತ್ತಿದ್ದ ಮಂಗಳೂರು ಸಮಾಚಾರ ಪತ್ರಿಕೆಯು ಪ್ರಸಾರದ ಸಂಖ್ಯೆ ಹೆಚ್ಚಾದಾಗ (ಸುಮಾರು 5 ಸಾವಿರ) ಅಧಿಕ ಸಂಖ್ಯೆಯಲ್ಲಿ ಪತ್ರಿಕೆಗಳನ್ನು ಮುದ್ರಿಸಬೇಕಾಯಿತು. ಕಲ್ಲಚ್ಚಿನಲ್ಲಿ ನಿಯಮಿತ ಪ್ರತಿಗಳನ್ನು ಮಾತ್ರ ಮುದ್ರಿಸಲು ‌ಸಾಧ್ಯವಾಗುತ್ತಿತ್ತು. ಹೆಚ್ಚಿನ ಪ್ರತಿಗಳಾಗಿ ಆ ಕಲ್ಲುಗಳನ್ನು ತಿರುಗಿ ಅರೆದು ಮುದ್ರಣಕ್ಕೆ ಸಿದ್ಧಗೊಳಿಸಬೇಕಾಗಿತ್ತು. ಈ ಕಾರ್ಯವು ಹೆಚ್ಚು ಶ್ರಮದ ಕೆಲಸವಾಗಿತ್ತು.

ಪತ್ರಿಕೆಯು ವ್ಯವಸ್ಥಿತವಾಗಿ ಮುಂದುವರಿದಿದ್ದಾಗ ಸಂಚಾಲಕರು ಅದರ ಮುದ್ರಣ ಕಾರ್ಯವನ್ನು ಬಳ್ಳಾರಿಯಲ್ಲಿ ನಡೆಸಲು ಮುಂದಾದರು. ಇದನ್ನೂ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿತ್ತು. ಮಂಗಳೂರು, ಮೈಸೂರು, ತುಮಕೂರು, ಬಳ್ಳಾರಿ, ಶಿವಮೊಗ್ಗ, ಹುಬ್ಬಳ್ಳಿ, ಶಿರಸಿ, ಹೊನ್ನಾವರ ಮೊದಲಾದ ಕಡೆ ಕೆಲುವು ನೂರು ಪತ್ರಿಕೆಗಳನ್ನು ಖರೀದಿಸುತ್ತಿದ್ದರು. ಕನ್ನಡ ಭಾಷೆಯಲ್ಲಿ ಬರೆದ ಸಮಾಚಾರವನ್ನು ಓದುವವರ ಸಂಖ್ಯೆ ಹೆಚ್ಚಾದ್ದರಿಂದ ಅದನ್ನು ವೃದ್ಧಿಸುವ ಪ್ರಯತ್ನವಾಗಿ ಮುಂದೆ ಅದನ್ನು ಕಲ್ಲಿನಲ್ಲಿ ಛಾಪಿಸದೆ ಬಳ್ಳಾರಿಯಲ್ಲಿ ಇರುವ ಅಕ್ಷರ ಛಾಪಖಾನೆಯಲ್ಲಿ ಅಚ್ಚುಪಡಿ ಮಾಡಲು ನಿಶ್ಚಯಿಸಿದ್ದೇವೆ. ಕನ್ನಡ ಸೀಮೆಯ ನಾಲ್ಕು ದಿಕ್ಕುಗಳಲ್ಲಿ ಇರುವವರು ಶುದ್ಧವಾದ ಮೊಳೆ ಅಚ್ಚುಗಳಿಂದ ಆಗುವ ಬರಹವನ್ನು ಸುಲಭವಾಗಿ ಓದಬಹುದು. ಹೆಚ್ಚು ವರ್ತಮಾನ, ಚರಿತ್ರೆ, ವಿದ್ಯಾ ಪಾಠಗಳನ್ನೂ ಬುದ್ಧಿ ಮಾತುಗಳನ್ನು ಬರೆಯುವುದಕ್ಕೆ ಸ್ಥಳ ಸಿಗುತ್ತದೆ ಎಂದೂ ತಿಳಿಸಲಾಗಿತ್ತು.

ಕಂನಡ ಸಮಾಚಾರ

ಕನ್ನಡಿಗರ ವಿಷಯದಲ್ಲಿ ಸಮಷ್ಟಿ ಭಾವನೆ ಇಟ್ಟುಕೊಂಡಿದ್ದ ಪತ್ರಿಕಾಕರ್ತರು ಪತ್ರಿಕೆಯನ್ನು ವ್ಯಾಪಕವಾದ ರೀತಿಯಲ್ಲಿ ಹೊರತರಬೇಕೆಂದು ಬಯಸಿದ್ದರು. ಅಲ್ಲದೆ, ಮಂಗಳೂರು ಸಮಾಚಾರವೆಂಬ ಹೆಸರನ್ನು ಬಿಟ್ಟುಕೊಟ್ಟು ಈ ಪತ್ರಿಕೆಯು ಕನ್ನಡ ಭಾಷೆಯನ್ನಾಡುವ ಸಕಲ ಜನರಲ್ಲಿ ಪ್ರಸಿದ್ಧಿಯಾಗಬೇಕು ಎಂಬ ಇಚ್ಛೆಯಿಂದ 'ಕಂನಡ ಸಮಾಚಾರ' ಎಂಬ ಹೆಸರನ್ನು ಇರಿಸಿದರು ಎಂಬುದನ್ನು ಬೆನೆಟ್ ಜಿ.ಅಮ್ಮನ್ನ ಮತ್ತು ಸಾಯಿಗೀತಾ ಅವರು ಸಂಕಲಿಸಿದ, ಮಂಗಳೂರು ವಿವಿಯ ಪ್ರಸಾರಾಂಗ ಪ್ರಕಟಿಸಿದ ಹರ್ಮಿನ್ ಫೆಡ್ರಿಕ್‌ ಮ್ಯೋಗ್ಲಿಂಗ್ ಸಂಪಾದಿಸಿರುವ ಕನ್ನಡ ಮನೊದಲ ಪತ್ರಿಕೆ ಮಂಗಳೂರ ಸಮಾಚಾರ ಮತ್ತು ಕಂನಡ ಸಮಾಚಾರ ಕೃತಿಯಲ್ಲಿ ವಿವರಿಸಿದ್ದಾರೆ.

1843ರ ಜುಲೈ 1ರಂದು ಆರಂಭವಾದ ಮಂಗಳೂರ ಸಮಾಚಾರವು 1844ರ ಮಾರ್ಚ್ ಬಳಿಕ 'ಕಂನಡ ಸಮಾಚಾರ' ಎಂಬ ಹೆಸರಿನಿಂದ ಬಳ್ಳಾರಿಯ ಲಂಡನ್‌ ಮಿಷನ್ ಪ್ರೆಸ್‌ನಲ್ಲಿ ಪ್ರಕಟವಾಗತೊಡಗಿತು. ಆದರೆ, ಅದನ್ನು ನೋಡಿಕೊಳ್ಳಬೇಕಿದ್ದ ಲಂಡನ್‌ ಮಿಷನ್‌ನ ರೀಡ್‌ ಬಳ್ಳಾರಿಯಲ್ಲಿ ಮೃತಪಟ್ಟ ಬಳಿಕ ಕರ್ತೃತ್ವಶಾಲಿಯಾದ ಮಿಶನರಿ ಇರಲಿಲ್ಲ. ದೂರದ ಮಂಗಳೂರಿನಲ್ಲಿ ಕುಳಿತು ಮೊಗ್ಲಿಂಗ್ ವ್ಯವಸ್ಥಿತವಾಗಿ ಲೇಖನ ಸಂಪಾದಕನ ಹೊಣೆ ನಿರ್ವಿಸಲು ಸಾಧ್ಯವಾಗಲಿಲ್ಲ. ಬಳಿಕ 1844ರ ನವೆಂಬರ್‌ವರೆಗೆ ಮಾತ್ರ ಪತ್ರಿಕೆಯು ನಡೆದು ನಿಂತು ಹೋಯಿತು. ಮಂಗಳೂರ ಸಮಾಚಾರವು ನಾಲ್ಕು ಪುಟಗಳಲ್ಲಿ ಪ್ರಕಟವಾಗುತ್ತಿದ್ದರೆ ಕಂನಡ ಸಮಾಚಾರವು 6 ಪುಟಗಳಲ್ಲಿ ಪ್ರಕಟವಾಗುತ್ತಿತ್ತು.

ಮಂಗಳೂರ ಸಮಾಚಾರ ಮೂಲಪ್ರತಿ

Dailyhunt
Disclaimer: This content has not been generated, created or edited by Dailyhunt. Publisher: Prajavani