ಡಾ. ಲಕ್ಷ್ಮಿ ಕೆ. ಎಸ್. ಮೂರ್ತಿ
ನಿಮಗೆ 60 ವರ್ಷ ದಾಟಿದ್ದರೆ, ನಿಮ್ಮ ಮನಸ್ಸಿನಲ್ಲಿ ಎರಡು ಸಾಮಾನ್ಯ ಪ್ರಶ್ನೆಗಳು ಬರಬಹುದು: 'ನನಗೆ ಕಣ್ಣಿನ ಪೊರೆ ಬಂದಿದೆಯಾ?' ಮತ್ತು 'ಬಂದಿಲ್ಲ ಎಂದರೆ, ಅದನ್ನು ತಡೆಯುವುದು ಹೇಗೆ?'
ಈ ಎರಡಕ್ಕೂ ಉತ್ತರ ತಿಳಿಯಲು, ಮೊದಲಿಗೆ ಕಣ್ಣಿನ ಪೊರೆ ಎಂದರೆ ಏನು ಎಂದು ಅರ್ಥಮಾಡಿಕೊಳ್ಳುವುದು ಅಗತ್ಯ.
ನಮ್ಮ ಕಣ್ಣಿನ ಒಳಗೆ ನೈಸರ್ಗಿಕವಾದ, ಸ್ಪಷ್ಟವಾದ ಮಸೂರ (ಲೆನ್ಸ್) ಇರುತ್ತದೆ. ಇದು ಹತ್ತಿರದ ಮತ್ತು ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ತನ್ನ ಆಕಾರವನ್ನು ಬದಲಾಯಿಸಿಕೊಳ್ಳುತ್ತದೆ. ವಯಸ್ಸಾದಂತೆ, ದೇಹದ ಸವೆತದಿಂದಾಗಿ ಈ ಸ್ಪಷ್ಟವಾದ ಲೆನ್ಸ್ ಮೆಲ್ಲಗೆ ತನ್ನ ಪಾರದರ್ಶಕತೆಯನ್ನು ಕಳೆದುಕೊಂಡು ಮಸುಕಾಗಲು ಪ್ರಾರಂಭಿಸುತ್ತದೆ. ಈ ರೀತಿ ಲೆನ್ಸ್ ಮಸುಕಾಗುವುದನ್ನೇ ವೈದ್ಯರು 'ಕ್ಯಾಟರಾಕ್ಟ್' (Cataract) ಅಥವಾ 'ಕಣ್ಣಿನ ಪೊರೆ' ಎಂದು ಕರೆಯುತ್ತಾರೆ.
ಪೊರೆ ಬರುವುದನ್ನು ತಡೆಯಲು ಸಾಧ್ಯವೇ?
ಸರಳವಾಗಿ ಹೇಳಬೇಕೆಂದರೆ, ವಯಸ್ಸಾಗುತ್ತಿದ್ದಂತೆ ಪೊರೆ ಬರುವುದು ಪ್ರಕೃತಿಯ ಸಹಜ ನಿಯಮ. ವಯಸ್ಸಾದಂತೆ ಕೂದಲು ಬೆಳ್ಳಗಾಗುವಂತೆಯೇ, ಕಣ್ಣಿನ ಲೆನ್ಸ್ ಪಾರದರ್ಶಕತೆಯನ್ನು ಕಳೆದುಕೊಳ್ಳುವುದು ಕೂಡ ಸಹಜ. ಸಾಮಾನ್ಯವಾಗಿ 60 ವರ್ಷದ ನಂತರ ಇದು ಕಂಡುಬರುತ್ತದೆ. ಆದರೆ ಆನುವಂಶಿಕ ಕಾರಣಗಳು, ವಾತಾವರಣ, ದೈಹಿಕ ಅನಾರೋಗ್ಯ ಅಥವಾ ಕೆಲವು ಔಷಧಗಳ ಬಳಕೆಯಿಂದಾಗಿ ಕೆಲವರಿಗೆ ಬೇಗನೆ ಬರಬಹುದು. ವಯಸ್ಸಾಗುವ ಪ್ರಕ್ರಿಯೆಯನ್ನು ತಡೆಯುವ ಔಷಧ ಸೃಷ್ಟಿಯಾಗುವವರೆಗೂ, ಪೊರೆ ಬರುವುದನ್ನು ತಡೆಯಲು ಅಥವಾ ಬಂದ ಮೇಲೆ ಅದನ್ನು ಔಷಧದಿಂದ ಸರಿಪಡಿಸಲು ಸಾಧ್ಯವಿಲ್ಲ.
ಕಣ್ಣಿನ ಪೊರೆ ನಿಧಾನವಾಗಿ ಬೆಳೆಯುತ್ತದೆ. ಇದರ ಮುಖ್ಯ ಲಕ್ಷಣಗಳು:
• ಬೆಳಕನ್ನು ನೋಡಲು ಕಷ್ಟವಾಗುವುದು (photophobia) ಮತ್ತು ಕಣ್ಣು ಕೋರೈಸುವುದು.
• ರಾತ್ರಿ ವೇಳೆ ಬೆಳಕಿನ ಮೂಲಗಳ ಸುತ್ತ ಬಣ್ಣ ಬಣ್ಣದ ವೃತ್ತಗಳು (coloured haloes) ಕಾಣಿಸುವುದು.
• ದೃಷ್ಟಿಯ ಸ್ಪಷ್ಟತೆ ನಿಧಾನವಾಗಿ ಕಡಿಮೆಯಾಗುವುದು. ಆರಂಭದ ಹಂತದಲ್ಲಿ, ಕನ್ನಡಕದ ನಂಬರನ್ನು ಬದಲಾಯಿಸುವುದರಿಂದ ಸ್ವಲ್ಪ ಮಟ್ಟಿಗೆ ದೃಷ್ಟಿ ಸರಿಹೋಗಬಹುದು. ಆದರೆ ಇದು ತಾತ್ಕಾಲಿಕ ಪರಿಹಾರ ಮಾತ್ರ.
ಚಿಕಿತ್ಸೆ: ಸರಳ, ನೋವುರಹಿತ ಮತ್ತು ಪರಿಣಾಮಕಾರಿ. ಮಸುಕಾದ ನೈಸರ್ಗಿಕ ಲೆನ್ಸ್ ಅನ್ನು ತೆಗೆದು, ಅದರ ಜಾಗದಲ್ಲಿ ಕೃತಕ ಮಸೂರ /ಇಂಟ್ರಾಆಕ್ಯುಲರ್ ಲೆನ್ಸ್ (IOL)ಅನ್ನು ಅಳವಡಿಸುವ ಶಸ್ತ್ರಚಿಕಿತ್ಸೆಯೇ ಕಣ್ಣಿನ ಪೊರೆಗೆ ಇರುವ ಏಕೈಕ ಶಾಶ್ವತ ಚಿಕಿತ್ಸೆ.ಆಧುನಿಕ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ರೋಗಿಗಳಿಗೆ ಅತ್ಯಂತ ಸರಳವಾಗುವಂತೆ ವಿನ್ಯಾಸಗೊಳಿಸಲಾಗಿದೆ.
ನೋವಿಲ್ಲದ ಚಿಕಿತ್ಸೆ: ಕಣ್ಣಿಗೆ ಸಣ್ಣ ಚುಚ್ಚುಮದ್ದು ಅಥವಾ ಹನಿಔಷಧವನ್ನು (eye drops) ಹಾಕಿ ಮರಗಟ್ಟಿಸಿ ಈ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ರೋಗಿ ಆಸ್ಪತ್ರೆಯಲ್ಲಿ ದಾಖಲಾಗುವ ಅಗತ್ಯವಿರುವುದಿಲ್ಲ, ಅಂದೇ ಮನೆಗೆ ಹೋಗಬಹುದು.
ಹೆಚ್ಚಿನ ಯಶಸ್ಸಿನ ಪ್ರಮಾಣ: ಆಧುನಿಕ ಪೊರೆ ಶಸ್ತ್ರಚಿಕಿತ್ಸೆಯ ಯಶಸ್ಸಿನ ಪ್ರಮಾಣ ಶೇ. 98ರಷ್ಟಿದೆ. (ಭಾರತದ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವಾಗ ಶೇ. 77 ರಷ್ಟು ಅಪಘಾತದ ಅಪಾಯವಿರುತ್ತದೆ ಎಂಬುದಕ್ಕೆ ಹೋಲಿಸಿದರೆ ಇದು ಅತ್ಯಂತ ಸುರಕ್ಷಿತ).
ಉಚಿತ ಚಿಕಿತ್ಸೆ ಲಭ್ಯ: ಕಣ್ಣಿನ ಪೊರೆಯು ಅಂಧತ್ವಕ್ಕೆ ಪ್ರಮುಖ ಕಾರಣವಾಗಿರುವುದರಿಂದ, ಭಾರತ ಸರ್ಕಾರವು 'ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮ'ದಡಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಪೊರೆ-ಶಸ್ತ್ರಚಿಕಿತ್ಸೆಯನ್ನು ಒದಗಿಸುತ್ತದೆ.
ಶಸ್ತ್ರಚಿಕಿತ್ಸೆ ತಡಮಾಡಿದರೆ ಏನಾಗುತ್ತದೆ?: ಪೊರೆಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಕಣ್ಣಿನ ಲೆನ್ಸ್ ದೊಡ್ದದಾಗಿ, ಗಟ್ಟಿಯಾಗಿ ಮತ್ತು ಬಿಳಿಯಾಗುತ್ತದೆ. ಇದರಿಂದ ಕಣ್ಣಿನ ಒಳಗಿನ ಒತ್ತಡ ಹೆಚ್ಚಿ, ಶಾಶ್ವತ ಅಂಧತ್ವಕ್ಕೆ ಕಾರಣವಾಗಬಹುದು. ಈ ಹಂತ ತಲುಪಿದ ಮೇಲೆ ಶಸ್ತ್ರಚಿಕಿತ್ಸೆ ಮಾಡಿದರೂ ದೃಷ್ಟಿ ಹಿಂದಿರುಗುವುದಿಲ್ಲ.
ಸೂಕ್ತವಾದ ಕೃತಕ ಲೆನ್ಸ್ (IOL) ಆಯ್ಕೆ ಮಾಡುವುದು:ಕೃತಕ ಲೆನ್ಸ್ ನಿಮ್ಮ ಕಣ್ಣಿನ ಶಾಶ್ವತ ಭಾಗವಾಗುತ್ತದೆ. ಲೆನ್ಸ್ ಆಯ್ಕೆ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ:
ಇದು ಜೀವನಪರ್ಯಂತದ ನಿರ್ಧಾರ: ಕಾರು ಅಥವಾ ಮನೆಯನ್ನು ಬದಲಾಯಿಸಿದಂತೆ ಕಣ್ಣಿನ ಲೆನ್ಸ್ ಅನ್ನು ಪದೇ ಪದೇ ಬದಲಾಯಿಸಲು ಸಾಧ್ಯವಿಲ್ಲ. ಒಮ್ಮೆ ಅಳವಡಿಸಿದ ಲೆನ್ಸ್ ಜೀವನಪರ್ಯಂತ ಕಣ್ಣಿನಲ್ಲೇ ಇರುತ್ತದೆ.
ಗುಣಮಟ್ಟ ಮತ್ತು ವೆಚ್ಚ: ತಯಾರಾಗುವ ಎಲ್ಲಾ ಲೆನ್ಸ್‌ಗಳು ಸುರಕ್ಷಿತವಾಗಿರುತ್ತವೆ. ಆದರೆ ಬಟ್ಟೆಯ ಗುಣಮಟ್ಟ ಮತ್ತು ಬೆಲೆಯಲ್ಲಿ ವ್ಯತ್ಯಾಸವಿರುವಂತೆಯೇ, ಲೆನ್ಸ್‌ಗಳ ಗುಣಮಟ್ಟ ಮತ್ತು ಸೌಲಭ್ಯಗಳಲ್ಲೂ ವ್ಯತ್ಯಾಸವಿರುತ್ತದೆ.
ವಾಸ್ತವಿಕ ನಿರೀಕ್ಷೆ ಇರಲಿ: ಆಧುನಿಕ ಲೆನ್ಸ್‌ಗಳು ಸ್ಪಷ್ಟ ದೃಷ್ಟಿಯನ್ನು ನೀಡುತ್ತವೆಯಾದರೂ, ಹುಟ್ಟಿನಿಂದ ಬಂದ ನೈಸರ್ಗಿಕ ಲೆನ್ಸ್‌ಗೆ ಯಾವುದೇ ಕೃತಕ ಲೆನ್ಸ್ ಸಂಪೂರ್ಣ ಸಾಟಿಯಾಗಲು ಸಾಧ್ಯವಿಲ್ಲ. ನಿಮಗಾಗಲಿ ಅಥವಾ ನಿಮ್ಮ ಕುಟುಂಬದವರಿಗಾಗಲಿ ಕಣ್ಣಿನ ಪೊರೆ ಇರುವುದು ಪತ್ತೆಯಾದರೆ, ಚಿಕಿತ್ಸೆಯನ್ನು ತಡಮಾಡಬೇಡಿ. ಆರಂಭದಲ್ಲೇ ಕಣ್ಣಿನ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಪಡೆಯಿರಿ.
260908-51-1154324074

