ಚಿಕ್ಕನಾಯಕನಹಳ್ಳಿ: ಎಷ್ಟೇ ಜ್ಞಾನಿಗಳಾಗಿದ್ದರೂ ಓದುವುದು ಅತ್ಯಂತ ಮುಖ್ಯವಾಗಿದ್ದು, ಓದಿಗೆ ಕೊನೆಯೆಂಬುದೇ ಇಲ್ಲ. ಪ್ರತಿಯೊಬ್ಬರೂ ಜೀವನದುದ್ದಕ್ಕೂ ಕಲಿಯುತ್ತಲೇ ಇರಬೇಕು. ಪುಸ್ತಕಗಳು ಮಕ್ಕಳನ್ನು ತಲುಪುವಂತಹ ಕೆಲಸಗಳು ಹೆಚ್ಚಾಗಬೇಕು ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ತಾಲ್ಲೂಕಿನ ಕಂಟಲಗೆರೆಯಲ್ಲಿರುವ ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ಅವರ ತೋಟದಲ್ಲಿ ನಡೆದ 'ಪುಸ್ತಕ ಬೀಜ ಪ್ರಸಾರ ಜಾಥಾ'ದಲ್ಲಿ ಭಾಗವಹಿಸಿ ಮಾತನಾಡಿದರು.
ಓದು ಮನುಷ್ಯನ ಜ್ಞಾನವನ್ನು ವಿಸ್ತರಿಸುವುದರ ಜೊತೆಗೆ ಜೀವನದಲ್ಲಿ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ. ಪಠ್ಯಪುಸ್ತಕಗಳ ಓದಿಗೆ ಮಾತ್ರ ಸೀಮಿತವಾಗದೆ ಕಲೆ, ಸಾಹಿತ್ಯ, ವಿಜ್ಞಾನ ಹಾಗೂ ಇತಿಹಾಸ ಸೇರಿದಂತೆ ವಿವಿಧ ಕ್ಷೇತ್ರಗಳ ಪುಸ್ತಕಗಳು ಮಕ್ಕಳಿಗೆ ಸುಲಭವಾಗಿ ಸಿಗುವಂತಾಗಬೇಕು ಎಂದರು.
ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ಮಾತನಾಡಿ, 'ಪುಸ್ತಕ ಓದುವ ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸುವ ಉದ್ದೇಶದಿಂದ 'ಕಾರಿನಲ್ಲಿ ವಿನೂತನ ಪುಸ್ತಕ ಆಂದೋಲನ ಆರಂಭಿಸಿದ್ದೇನೆ. ನವೆಂಬರ್ ತಿಂಗಳು ಪೂರ್ತಿ ವಿವಿಧ ಹಳ್ಳಿ, ಶಾಲೆ ಹಾಗೂ ಕಾಲೇಜುಗಳಿಗೆ ಭೇಟಿ ನೀಡಿ, ಶೇ50ರಷ್ಟು ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ವಿತರಿಸುವ ಮೂಲಕ ಓದುಗರಿಗೆ ಸುಲಭವಾಗಿ ಪುಸ್ತಕಗಳು ದೊರೆಯುವಂತೆ ಮಾಡಲಾಗುತ್ತಿದೆ' ಎಂದರು.
ನಿವೃತ್ತ ಪ್ರಾಂಶುಪಾಲರಾದ ಎನ್.ಇಂದಿರಮ್ಮ, ಕೃಷಿಕ ಷಡಕ್ಷರಿ ತರಬೇನಹಳ್ಳಿ, ಲೇಖಕ ಕಂಟಲಗೆರೆ ಗುರುಪ್ರಸಾದ್, ಬಿಳಿಗೆರೆ ಮಹಾಲಿಂಗಯ್ಯ, ಜೆ.ಎಂ.ಉಮಾ ಮಹೇಶ್, ಉಮಾದೇವಿ ಉಪಸ್ಥಿತರಿದ್ದರು.
261104-17-1775689565

