Dailyhunt Logo
  • Light mode
    Follow system
    Dark mode
    • Play Story
    • App Story
'ಕರಾವಳಿ' ವಿವಾದ: ಸಂಭಾವನೆ ಬಾಕಿಯಿದೆ ಎಂದ ಪ್ರಜ್ವಲ್‌

'ಕರಾವಳಿ' ವಿವಾದ: ಸಂಭಾವನೆ ಬಾಕಿಯಿದೆ ಎಂದ ಪ್ರಜ್ವಲ್‌

ಬೆಂಗಳೂರು: ಗುರುದತ್‌ ಗಾಣಿಗ ನಿರ್ಮಿಸಿ ನಿರ್ದೇಶಿಸಿರುವ, ಪ್ರಜ್ವಲ್‌ ದೇವರಾಜ್‌ ಮುಖ್ಯಭೂಮಿಕೆಯಲ್ಲಿರುವ 'ಕರಾವಳಿ' ಚಿತ್ರದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮ ಮಂಗಳವಾರ ನಡೆಯಿತು. ಆದರೆ ಸಿನಿಮಾ ಕುರಿತ ಚರ್ಚೆಗಿಂತ ನಟ ಪ್ರಜ್ವಲ್‌ ದೇವರಾಜ್‌ ಅವರ ಅನುಪಸ್ಥಿತಿ ಹಾಗೂ ಅವರ ಅಭಿಮಾನಿಗಳ ಗಲಾಟೆಯೇ ಕಾರ್ಯಕ್ರಮದ ಕೇಂದ್ರಬಿಂದುವಾಯಿತು.

₹1 ಕೋಟಿ ಕೊಟ್ಟಿದ್ದೇವೆ ಎಂದ ನಿರ್ದೇಶಕ

'ಸೋಮವಾರ ರಾತ್ರಿ ತನಕ ಪ್ರಜ್ವಲ್‌ ಅವರು ಕಾರ್ಯಕ್ರಮಕ್ಕೆ ಬರುತ್ತೇನೆ ಎಂದಿದ್ದರು. ನೂರು ಮಂದಿ ಅಭಿಮಾನಿಗಳೂ ಬರುತ್ತಾರೆ ಎಂದು ತಿಳಿಸಿದ್ದರು. ಪ್ರಜ್ವಲ್‌ ಅವರಿಗೆ ಈ ಸಿನಿಮಾಗಾಗಿ ₹1.25 ಕೋಟಿ ಸಂಭಾವನೆ ನಿಗದಿಪಡಿಸಿದ್ದೆವು. ಅದರಲ್ಲಿ ₹1 ಕೋಟಿ ಈಗಾಗಲೇ ನೀಡಿದ್ದೇವೆ. ಉಳಿದ ಹಣವನ್ನೂ ಕೊಡುತ್ತೇವೆ ಎಂದು ಹೇಳಿದ್ದೇವೆ. ಅದಕ್ಕೂ ಅವರು ಒಪ್ಪಿದ್ದರು. ಈ ವಿಚಾರದಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದನ್ನು ನೇರವಾಗಿ ಹೇಳಬಹುದಿತ್ತು. ಸುಮಾರು ಎರಡು ತಿಂಗಳಿಂದ ಅವರೊಂದಿಗೆ ನೇರವಾಗಿ ಮಾತನಾಡಲು ಸಾಧ್ಯವಾಗಿಲ್ಲ. ಸಂದೇಶಗಳಿಗೂ ಪ್ರತಿಕ್ರಿಯೆ ಸಿಕ್ಕಿಲ್ಲ. ಡಬ್ಬಿಂಗ್‌ಗೆ ಮುನ್ನ ಅವರು ಸಿನಿಮಾ ನೋಡಿ, ತಮ್ಮ ಸಿನಿಜೀವನದ ಅತ್ಯುತ್ತಮ ಸಿನಿಮಾ ಎಂದು ಮೆಚ್ಚಿಕೊಂಡಿದ್ದರು' ಎಂದು ಗುರುದತ್‌ ಹೇಳಿದರು.

'ಗಲಾಟೆ ಮಾಡಿದ ಅಭಿಮಾನಿಗಳೆಲ್ಲರೂ ಪರಿಚಯದವರೇ. ಅವರು ಏಕೆ ಹೀಗೆ ವರ್ತಿಸಿದರು ಎಂಬುದು ಗೊತ್ತಿಲ್ಲ. ಪ್ರಜ್ವಲ್‌ ಅವರು ಏಕಾಏಕಿ ಕಾರ್ಯಕ್ರಮಕ್ಕೆ ಬಾರದೇ ಇರಲು ನಿರ್ಧರಿಸಿದ ಕಾರಣವೂ ತಿಳಿದಿಲ್ಲ. ಅವರ ಧ್ವನಿ ಪಾತ್ರಕ್ಕೆ ಹೊಂದಿಕೆಯಾಗುತ್ತದೆಯೇ ಎಂಬ ಬಗ್ಗೆ ಮಾತ್ರ ಸಣ್ಣ ಗೊಂದಲವಿತ್ತು. ಜುಲೈ 24ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಇನ್ನೂ ಅವರಿಂದಲೇ ಡಬ್ಬಿಂಗ್‌ ಮಾಡಿಸಬೇಕು, ಚೆನ್ನಾಗಿ ಬಂದರೆ ಅದನ್ನೇ ಬಳಸಬೇಕು ಎಂಬ ಉದ್ದೇಶ ನಮ್ಮದು. ಇದು ಪ್ರಜ್ವಲ್‌ ಅವರದ್ದೇ ಸಿನಿಮಾ. ಪೋಸ್ಟರ್‌ನಲ್ಲೂ ಅವರ ಹೆಸರೇ ಇದೆ. ಈ ರೀತಿಯ ಘಟನೆ ಉದ್ದೇಶಪೂರ್ವಕವಾಗಿ ಸೃಷ್ಟಿಸಿದಂತಿದೆ' ಎಂದರು.

ಸಂಭಾವನೆ ಬಾಕಿ ಇದೆ ಎಂದ ಪ್ರಜ್ವಲ್‌

ನಡೆದ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಜ್ವಲ್‌ ದೇವರಾಜ್‌, 'ಘಟನೆಯಿಂದ ನನಗೆ ಬೇಸರವಾಗಿದೆ. ಇದು ಬೇಕಾಗಿಯೇ ಇರಲಿಲ್ಲ. ಕೊಟ್ಟ ಮಾತು ಉಳಿಸಿಕೊಳ್ಳಬೇಕು. ನನಗೆ ನಿರ್ಮಾಪಕರು ಸಂಭಾವನೆ ನೀಡುವುದು ಬಾಕಿ ಇದೆ. ಟ್ರೇಲರ್‌ಗೆ ಡಬ್ಬಿಂಗ್‌ ಮಾಡಲು ಸಿದ್ಧವಿದ್ದೆ. ಮ್ಯಾನೇಜರ್‌ಗೆ ನಿರಂತರವಾಗಿ ಸಂಪರ್ಕದಲ್ಲಿರಲು ಹೇಳಿದ್ದೆ. ನಾನು ಕಾರ್ಯಕ್ರಮಕ್ಕೆ ಹೋಗಲೂ ಸಿದ್ಧವಿದ್ದೆ. ಬಹುಶಃ ಬಿಜಿಎಂ ಇಟ್ಟುಕೊಂಡು ಟ್ರೇಲರ್‌ ಮಾಡಿರಬಹುದು ಎಂದುಕೊಂಡಿದ್ದೆ. ಆದರೆ ಸೋಮವಾರ ತಡರಾತ್ರಿ ಟ್ರೇಲರ್‌ ಸಿಕ್ಕಿತು. ಅದನ್ನು ನೋಡಿ ಬೇಸರವಾಯಿತು' ಎಂದಿದ್ದಾರೆ.

'ನಾನು ಇಲ್ಲಿಯವರೆಗೂ ವಿವಾದ ಸೃಷ್ಟಿಸಿದವನಲ್ಲ. ಹೀಗಾಗಿ ಸುಮ್ಮನಿದ್ದೆ. ಅವರು ಹಣ ಬಾಕಿ ಉಳಿಸಿಕೊಂಡಿರುವದರ ಜೊತೆಗೆ ಕೊಟ್ಟಿರುವ ಹಣಕ್ಕೆ ಸುಮಾರು ₹10-11 ಲಕ್ಷ ಜಿಎಸ್‌ಟಿಯನ್ನೂ ನೀಡಿಲ್ಲ. ಅದನ್ನೂ ನಾನು ನನ್ನ ಕೈಯಿಂದ ಭರಿಸಿದ್ದೇನೆ. ನಾನು ಯಾವಾಗಲೂ ನಿರ್ಮಾಪಕರ ಜೊತೆ ಇರುತ್ತೇನೆ. ಕಳೆದ ವರ್ಷ ಬೇರೆ ಬೇರೆ ನಿರ್ಮಾಪಕರಿಗೆ ₹1.50 ಕೋಟಿ ಬಿಟ್ಟಿದ್ದೇನೆ. ಆಗ ನನ್ನ ಕೈಯಲ್ಲಿ ಹಲವು ಸಿನಿಮಾಗಳು ಇದ್ದವು. ಸದ್ಯ ನಾನು ಆ ರೀತಿ ಸ್ಥಿತಿಯಲ್ಲಿ ಇಲ್ಲ. ಕಳೆದ ಮೂರು ವರ್ಷದಿಂದ 'ಕರಾವಳಿ' ಪ್ರಾಜೆಕ್ಟ್‌ನಲ್ಲಿಯೇ ಇದ್ದೇನೆ. ಬದುಕೂ ಮುಖ್ಯ. ನಾನು ಈಗಲೂ ಪ್ರಚಾರ ಮಾಡುತ್ತೇನೆ. ನನಗೆ ಸಿನಿಮಾ ಮುಖ್ಯ. ಪರಿಹಾರವನ್ನು ನಾವು ಕಂಡುಕೊಳ್ಳುತ್ತೇವೆ' ಎಂದಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani