ಬೆಳಗಾವಿ: ಜಿಲ್ಲಾಡಳಿತದಿಂದ ಅನುಮತಿ ಸಿಗದಿದ್ದರೂ, ಕರ್ನಾಟಕ ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ಕರಾಳ ದಿನವನ್ನು ಮಹಾರಾಷ್ಟ್ರ ಏಕೀಕರಣ ಸಮಿತಿಯವರು(ಎಂಇಎಸ್) ನಗರದಲ್ಲಿ ಭಾನುವಾರ ಆಚರಿಸಿದರು.
ಇಲ್ಲಿನ ಮಹಾದ್ವಾರ ರಸ್ತೆಯ ಸಂಭಾಜಿ ಉದ್ಯಾನದಿಂದ ಶಹಾಪುರದ ಎಸ್‌ಪಿಎಂ ರಸ್ತೆ, ಮಹಾತ್ಮಫುಲೆ ರಸ್ತೆ, ಬಸವೇಶ್ವರ ವೃತ್ತದ ಮಾರ್ಗವಾಗಿ ಸಾಗಿ ರೈಲ್ವೆ ಮೇಲ್ಸೇತುವೆ ಬಳಿ ಇರುವ ಮರಾಠ ಮಂದಿರ ಕಲ್ಯಾಣ ಮಂಟಪದವರೆಗೆ ರ್‍ಯಾಲಿ ನಡೆಸಿದರು.
'ಬೆಳಗಾವಿ, ಖಾನಾಪುರ, ಬೀದರ್, ಭಾಲ್ಕಿ, ಕಾರವಾರ, ನಿಪ್ಪಾಣಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ' ಎಂದು ಘೋಷಣೆ ಕೂಗಿ, ತಮ್ಮನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಒತ್ತಾಯಿಸಿದರು.
ಇದರ ಮಧ್ಯೆಯೇ, ರ‍್ಯಾಲಿಗೆ ನುಗ್ಗಲು ಯತ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
'ಜಿಲ್ಲಾಡಳಿತ ಮತ್ತು ನಗರ ಪೊಲೀಸ್ ಕಮಿಷನರೇಟ್‌ನಿಂದ ರ್‍ಯಾಲಿಗೆ ಅನುಮತಿ ನಿರಾಕರಿಸಿದ್ದರೂ, ಎಂಇಎಸ್‌ನವರು ರ‍್ಯಾಲಿ ಮಾಡಿದ್ದು ಸರಿಯಲ್ಲ. ಅವರ ಮೇಲೆ ಕ್ರಮ ಜರುಗಿಸಬೇಕು' ಎಂದು ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ.ನಾರಾಯಣಗೌಡ ಬಣ) ಜಿಲ್ಲಾ ಘಟಕದ ಅಧ್ಯಕ್ಷ ವಾಜೀದ್ ಹಿರೇಕೋಡಿ ಆಗ್ರಹಿಸಿದರು.
ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

