Dailyhunt Logo
  • Light mode
    Follow system
    Dark mode
    • Play Story
    • App Story
Karnataka Politics: ಸಚಿವ ಸಂಪುಟ ರಚನೆ ಕಸರತ್ತು ದೆಹಲಿಗೆ ವರ್ಗ

Karnataka Politics: ಸಚಿವ ಸಂಪುಟ ರಚನೆ ಕಸರತ್ತು ದೆಹಲಿಗೆ ವರ್ಗ

ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರ ಪ್ರಮಾಣ ವಚನಕ್ಕೆ ಮುಹೂರ್ತ ನಿಗದಿಯಾದ ಬೆನ್ನಲ್ಲೇ, ಮಂತ್ರಿ ಮಂಡಲ ರಚನೆಯ ಕಸರತ್ತು ಬಿರುಸು ಪಡೆದಿದೆ.

‌ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕಾಂಗ ಪಕ್ಷದ ನಾಯಕ ಡಿ.ಕೆ. ಶಿವಕುಮಾರ್ ಅವರು ಸೋಮವಾರ (ಜೂನ್ 1) ಹೈಕಮಾಂಡ್ ನಾಯಕರ ಜೊತೆ ದೆಹಲಿಯಲ್ಲಿ ಸಮಾಲೋಚನೆ ನಡೆಸಲಿದ್ದಾರೆ.

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಮತ್ತು ಮೊದಲ ಹಂತದಲ್ಲಿ ಸಚಿವ ಸಂಪುಟಕ್ಕೆ ಯಾರನ್ನೆಲ್ಲ ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಉಭಯ ನಾಯಕರು ಚರ್ಚಿಸಲಿದ್ದಾರೆ. ಬಳಿಕ, ಸಚಿವರಾಗುವವರ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸುವ ಸಾಧ್ಯತೆ ಇದೆ.

ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲಿ ಸಚಿವರಾಗಿದ್ದವರು ಮತ್ತು ಹೊಸಬರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಹುದ್ದೆ ಆಕಾಂಕ್ಷಿ ಶಾಸಕರು ತೆರೆಮರೆ ತಂತ್ರಗಾರಿಕೆಯನ್ನು ಚುರುಕುಗೊಳಿಸಿದ್ದಾರೆ. ನಾಯಕರಿಬ್ಬರು ದೆಹಲಿಗೆ ತೆರಳುವ ಮಾಹಿತಿ ಪಡೆದಿದ್ದ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿಗೆ ದೌಡಾಯಿಸಿದ್ದಾರೆ.

'ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿ ಹಾಗೂ ಮೊದಲ ಹಂತದಲ್ಲಿ ಎಷ್ಟು ಮಂದಿಗೆ ಸಚಿವ ಸ್ಥಾನ ನೀಡಬೇಕೆಂಬ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಇನ್ನೂ ಅಧಿಕೃತ ಚರ್ಚೆ ನಡೆದಿಲ್ಲ. ಒಮ್ಮೆ ಪ್ರಸ್ತಾಪವಾದ ಬಳಿಕ ಎಷ್ಟು ಉಪ ಮುಖ್ಯಮಂತ್ರಿ ಹುದ್ದೆ ಇರಬೇಕು, ಯಾರಿಗೆಲ್ಲ ಸಚಿವ ಸ್ಥಾನ ನೀಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸಲಿದೆ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಸಚಿವ ಸ್ಥಾನ ಆಕಾಂಕ್ಷಿಗಳಲ್ಲಿನ ಪೈಪೋಟಿ ಹೆಚ್ಚಿಸಿದೆ.

ಮುಂದಿನ ಎರಡು ವರ್ಷ ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿಯಲಿರುವ ಶಿವಕುಮಾರ್, ಲೋಕಭವನದಲ್ಲಿ ಜೂನ್ 3ರಂದು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರ ಜೊತೆಗೆ 8ರಿಂದ 10 ಶಾಸಕರು ಸಚಿವರಾಗಿ ಪ್ರಮಾಣವಚನ ತೆಗೆದುಕೊಳ್ಳುವ ಸಾಧ್ಯತೆಯಿದೆ. ಈಗ ಮತ್ತು ಮುಂದಿನ ದಿನಗಳಲ್ಲಿ ನಡೆಯುವ ವಿಸ್ತರಣೆಯೂ ಸೇರಿ, ಸಿದ್ದರಾಮಯ್ಯ ಸಂಪುಟದಲ್ಲಿದ್ದ ಸುಮಾರು 13-14 ಸಚಿವರು ಹೊಸ ಸಂಪುಟದಲ್ಲಿ ಸ್ಥಾನ ಪಡೆಯಬಹುದು. ಈ ಪೈಕಿ, ಕೆಲವರು ಸಿದ್ದರಾಮಯ್ಯ ಕೋಟಾದಡಿ, ಇನ್ನೂ ಕೆಲವರು ಹೈಕಮಾಂಡ್‌ ಕೋಟಾದಡಿ ಮರಳಿ ಸಂಪುಟ ಸೇರಬಹುದು ಎಂದು ಹೇಳಲಾಗುತ್ತಿದೆ. ಉಳಿದಂತೆ, ನಿಗದಿಪಡಿಸಿದ ಮಾನದಂಡಗಳನ್ನು ಪರಿಗಣಿಸಿ ಹೊಸ ಮುಖಗಳಿಗೆ ಹೈಕಮಾಂಡ್‌ ಮಣೆ ಹಾಕಬಹುದೆಂಬ ಚರ್ಚೆ ನಡೆಯುತ್ತಿದೆ.

ಜಿ. ಪರಮೇಶ್ವರ, ಎಂ.ಬಿ. ಪಾಟೀಲ, ಜಮೀರ್ ಅಹಮದ್ ಖಾನ್, ಕೃಷ್ಣ ಬೈರೇಗೌಡ, ಈಶ್ವರ​ ಖಂಡ್ರೆ, ಪ್ರಿಯಾಂಕ್​ ಖರ್ಗೆ, ಎಚ್.ಕೆ. ಪಾಟೀಲ, ಸತೀಶ ಜಾರಕಿಹೊಳಿ, ಶಿವರಾಜ್ ತಂಗಡಗಿ, ರಾಮಲಿಂಗಾ ರೆಡ್ಡಿ, ದಿನೇಶ್ ಗುಂಡೂರಾವ್, ಸಂತೋಷ್ ಲಾಡ್, ಎಂ. ಸಿ. ಸುಧಾಕರ್, ಬೈರತಿ ಸುರೇಶ್ ಈ ಪೈಕಿ ಕೆಲವರಿಗೆ ಶಿವಕುಮಾರ್ ಸಂಪುಟದಲ್ಲಿ ಸ್ಥಾನ ಸಿಗುವುದು ಬಹುತೇಕ ಖಚಿತ.

ಹೊಸಬರ ಪೈಕಿ ವಿಧಾನ ಪರಿಷತ್‌ ಸದಸ್ಯರಾದ ಯತೀಂದ್ರ ಸಿದ್ದರಾಮಯ್ಯ ಸಂಪುಟ ಸೇರುವುದು ಬಹುತೇಕ ನಿರ್ಧರಿತ. ಉಳಿದಂತೆ, ಪರಿಷತ್‌ನಿಂದ ಸಲೀಂ ಅಹಮದ್‌, ಶಾಸಕರಾದ ಟಿ.ಬಿ. ಜಯಚಂದ್ರ, ಯು.ಟಿ. ಖಾದರ್, ಲಕ್ಷ್ಮಣ್ ಸವದಿ, ಎನ್.ಎ. ಹ್ಯಾರಿಸ್, ಮಾಗಡಿ ಬಾಲಕೃಷ್ಣ, ಕೆ. ಷಡಕ್ಷರಿ, ಗುಬ್ಬಿ ಶ್ರೀನಿವಾಸ್, ರಾಘವೇಂದ್ರ ಹಿಟ್ನಾಳ್, ಅಶೋಕ್ ಪಟ್ಟಣ, ತನ್ವೀರ್ ಸೇಠ್, ಪಿ.ಎಂ. ನರೇಂದ್ರ ಸ್ವಾಮಿ, ರೂಪಾ ಶಶಿಧರ್, ಬೇಳೂರು ಗೋಪಾಲಕೃಷ್ಣ ಪೈಕಿ ಕೆಲವು ಹೊಸ ಮುಖಗಳು ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ.

ಡಿಸಿಎಂ ಪ್ರಸ್ತಾವ ಇನ್ನೂ ಬಂದಿಲ್ಲ: ಖರ್ಗೆ

ಕಲಬುರಗಿ: 'ಹೊಸ ಸಚಿವ ಸಂಪುಟದಲ್ಲಿ ಎಷ್ಟು ಜನ ಉಪ ಮುಖ್ಯಮಂತ್ರಿ‌ಗಳನ್ನು (ಡಿಸಿಎಂ) ಮಾಡಬೇಕು ಎಂಬುದರ ಬಗ್ಗೆ ಇನ್ನೂ ಯಾವುದೇ ಪ್ರಸ್ತಾವಗಳು ಬಂದಿಲ್ಲ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪಷ್ಟಪಡಿಸಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ‌ ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿ, 'ಪ್ರಸ್ತಾವಗಳು ಬಂದ ಮೇಲೆ ಎಷ್ಟು ಡಿಸಿಎಂ ಮಾಡಬೇಕು? ಎಷ್ಟು ಶಾಸಕರು ಸಚಿವರಾಗಬೇಕು? ಮಹತ್ವದ ನಿಗಮದ ಅಧ್ಯಕ್ಷ ಸ್ಥಾನಗಳಿಗೂ ಜೊತೆಯಲ್ಲೇ ನೇಮಕ ಮಾಡಬೇಕೇ ಎನ್ನುವ ಚರ್ಚೆಯೂ ನಡೆದಿದೆ. ಈ ಬಗ್ಗೆ ಜೂನ್ 3ರ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ' ಎಂದರು.

'ಶಿವಕುಮಾರ್‌ ಅವರೊಂದಿಗೆ ಎಷ್ಟು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎನ್ನುವ ಪ್ರಸ್ತಾವವೂ ಬಂದಿಲ್ಲ. ಸದ್ಯಕ್ಕೆ ಮೊದಲ ಹಂತದಲ್ಲಿ ಕೆಲವರು ಸಂಪುಟ ಸೇರಲಿ. ಅದಾದ 15 ದಿನ ಅಥವಾ ಒಂದು ತಿಂಗಳು ಬಿಟ್ಟು ಎರಡನೇ ಹಂತದ ಮಂತ್ರಿಮಂಡಲ ರಚಿಸಲಿ ಎಂಬ ವಿಚಾರಗಳಿವೆ. ಆದರೆ, ಮುಖ್ಯಮಂತ್ರಿ ಏನು ವಿಚಾರ ಮಾಡುತ್ತಾರೊ ಅವರಿಗೇ ಬಿಟ್ಟಿದ್ದು' ಎಂದು ಸ್ಪಷ್ಟಪಡಿಸಿದರು.

ಕೆಪಿಸಿಸಿಗೆ ಸೂಕ್ತ ಆಯ್ಕೆ: 'ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ಕೆಪಿಸಿಸಿ ಹುದ್ದೆಗೆ ಮತ್ತೊಬ್ಬರು ಬರಲೇಬೇಕು.‌ ಅದು ಸಹಜ ಪ್ರಕ್ರಿಯೆ. ಒಳ್ಳೆಯವರು, ಕಾಂಬಿನೇಷನ್ ಎಲ್ಲವನ್ನೂ ನೋಡಿ ಕೆಪಿಸಿಸಿಗೆ ನೇಮಿಸಬೇಕಾಗುತ್ತದೆ. ಮುಂಬರುವ ಚುನಾವಣೆಗೆ ಪಕ್ಷದ ಸಿದ್ಧತೆ ಹಾಗೂ ಪಕ್ಷ ಕಟ್ಟುವ ದೃಷ್ಟಿಯಿಂದ ಎಲ್ಲವನ್ನೂ ವಿಚಾರ ಮಾಡಿ ಆಯ್ಕೆ ಮಾಡಬೇಕಾಗುತ್ತದೆ. ಚುನಾವಣೆಗೆ 24 ತಿಂಗಳು ಮಾತ್ರ ಬಾಕಿ ಉಳಿದಿದೆ' ಎಂದರು.

'ಬಹಳ ಕ್ಷಿಪ್ರವಾಗಿ ಕೆಲಸ ಮಾಡಬೇಕಿದೆ.‌ ವೇಗವಾಗಿ, ಸಾಮೂಹಿಕವಾಗಿ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ನಾಯಕನನ್ನು ನಾವು ಹುಡುಕಬೇಕಿದೆ. ಜೊತೆಗೆ, ಅವರಿಗೆ ಸಹಕಾರ‌ ನೀಡುವಂಥ ತಂಡವೂ ಬೇಕು. ಇವೆಲ್ಲ ವಿಚಾರ ಮಾಡಿ ಅಧ್ಯಕ್ಷರ ಆಯ್ಕೆ ಮಾಡುತ್ತೇವೆ' ಎಂದರು.

- ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನನ್ನ ಜೊತೆ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆಯೇ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ಎಲ್ಲ ಆಯಾಮದಲ್ಲಿ ಆಲೋಚಿಸಿ ಪಕ್ಷದ ಹೈಕಮಾಂಡ್ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ
Dailyhunt
Disclaimer: This content has not been generated, created or edited by Dailyhunt. Publisher: Prajavani