Dailyhunt Logo
  • Light mode
    Follow system
    Dark mode
    • Play Story
    • App Story
ಕರುನಾಡೋತ್ಸವ: ಬ್ರಾಹ್ಮಿಯಿಂದ ಅರಳಿದ 'ಕನ್ನಡ' ಲಿಪಿ

ಕರುನಾಡೋತ್ಸವ: ಬ್ರಾಹ್ಮಿಯಿಂದ ಅರಳಿದ 'ಕನ್ನಡ' ಲಿಪಿ

ವಿಶ್ವಲಿಪಿಗಳ ರಾಣಿ ಎಂದು ಕನ್ನಡ ಲಿಪಿಯನ್ನು ಕರೆಯಲಾಗುತ್ತದೆ. ಸುಂದರವಾದ ಸುಳಿಗಳುಲ್ಲ ಮತ್ತು ವೃತ್ತಾಕಾರದಲ್ಲಿ ಇರುವ ಕಾರಣಕ್ಕೆ ಈ ರೀತಿ ಕರೆಯಲಾಗಿದೆ. ಜಗತ್ತಿನ ಬೆರಳೆಣಿಕೆಯ ಲಿಪಿಗಳಿಗಷ್ಟೇ ಈ ರೀತಿಯ ಮೆಚ್ಚುಗೆಗೆ ಪಾತ್ರವಾಗಿವೆ. ಕನ್ನಡ ಲಿಪಿಯ ಇತಿಹಾಸವನ್ನು ತಿಳಿಯುವ ಮೊದಲು ಲಿಪಿಗಳ ಸೃಷ್ಟಿಗೆ ಕಾರಣವೇನು ಎಂಬುದನ್ನು ಅರಿಯೋಣ.

ಎಲ್ಲ ಪ್ರಾಣಿಗಳಂತೆ ಅಲೆದಾಡುತ್ತಾ ನಿದ್ರೆ, ಆಹಾರ, ಮೈಥುನಕ್ಕೆ ಸೀಮಿತವಾಗಿದ್ದ ಮನುಷ್ಯ ಪ್ರಾಣಿಗೆ ನಿಧಾನಕ್ಕೆ ಬುದ್ಧಿ ಬೆಳೆಯುತ್ತಾ ಹೋಗಿದ್ದರಿಂದ ಅಲೆಮಾರಿತನ ಕೊನೆಗೊಳಿಸಿ ಒಂದು ಕಡೆ ನೆಲೆ ನಿಲ್ಲತೊಡಗಿದ. ಬಳಿಕ ಸಂಜ್ಞೆ, ಸಂಕೇತಗಳ ಮೂಲಕ ಮಾತು ಆರಂಭಗೊಂಡಿತು. ಆನಂತರ ಸರಳ ಚಿತ್ರಗಳನ್ನು ಬರೆಯುವ ಮೂಲಕ ಕೆಲವು ಸಂಕೇತಗಳನ್ನು ನೀಡತೊಡಗಿದರು. ಇದುವೇ ಮುಂದೆ ಚಿತ್ರಕಲೆಗೂ, ಚಿತ್ರಲಿಪಿಗೂ ಕಾರಣವಾಯಿತು.

ಸರಳ ಚಿತ್ರದಿಂದ ಆರಂಭವಾದ ಲಿಪಿಗಳನ್ನು ಚಿತ್ರಲಿಪಿಗಳೆಂದು ಕರೆಯಲಾಯಿತು. ಮುಂದೆ ಸಂಕೇತದ ಜೊತೆಗೆ ಭಾವನೆಗಳನ್ನು ವ್ಯಕ್ತಪಡಿಸುವ ಚಿತ್ರಗಳನ್ನು ಬಿಡಿಸಲು ಮನುಷ್ಯರು ಆರಂಭಿಸಿದರು. ಅದು ಮುಂದೆ ಭಾವಲಿಪಿಯಾಯಿತು. ವರ್ಣಲಿಪಿಗಳಿಗೆ ಇದುವೇ ಮೂಲವಾಯಿತು.

ಕನ್ನಡವೂ ಸೇರಿದಂತೆ ಭಾರತದ ಎಲ್ಲ ಲಿಪಿಗಳು ವರ್ಣ ಲಿಪಿಗಳೇ ಆಗಿವೆ. ಭಾರತ ಮಾತ್ರವಲ್ಲ ಅನೇಕ ದೇಶಗಳ ಲಿಪಿಗಳು ಕೂಡ ವರ್ಣಲಿಪಿಗಳು . ಆದರೂ ಚೀನಾ, ಜಪಾನ್‌ನಂಥ ದೇಶಗಳಲ್ಲಿ ಈಗಲೂ ಅರೆವರ್ಣ-ಅರೆಭಾವ ಲಿಪಿಗಳೇ ಉಳಿದಿವೆ. ಹಾಗಾಗಿ ಅವುಗಳನ್ನು ನೋಡುವಾಗ ರೇಷ್ಮೆ ಬಟ್ಟೆಗಳ ಮೇಲೆ ಬಿಡಿಸುವ ಕಲಾಕೃತಿಗಳಂತೆ ಲಿಪಿಗಳು ಕಾಣುತ್ತವೆ.

ಇನ್ನು ಭಾರತದ ಲಿಪಿಗಳ ವಿಚಾರಕ್ಕೆ ಬರುವುದಾದರೆ ಸಿಂಧೂ ನಾಗರಿಕತೆಯ ಕಾಲದಲ್ಲಿಯೇ ಲಿಪಿಗಳು ಇದ್ದಿದ್ದು ಪತ್ತೆಯಾಗಿವೆ. ಆದರೆ, ಆ ಲಿಪಿಗಳನ್ನು ಓದಲು ಇನ್ನೂ ಸಾಧ್ಯವಾಗಿಲ್ಲ. ಕೆಲವು ಅಕ್ಷರಗಳು ದ್ರಾವಿಡ ಲಿಪಿಗಳನ್ನು, ಕೆಲವು ಅಕ್ಷರಗಳು ನಾಗರಿ ಲಿಪಿಗಳನ್ನು ಹೋಲುತ್ತಿರುವುದನ್ನು ವಿದ್ವಾಂಸರು ಗುರುತಿಸಿದ್ದಾರೆ.

ಸಿಂಧೂ ನಾಗರಿಕತೆಯಲ್ಲಿ ಕಂಡು ಬಂದ ಲಿಪಿಯು ಬ್ರಾಹ್ಮಿಲಿಪಿಯ ಪೂರ್ವರೂಪ. ಸಿಂಧು ನಾಗರಿಕತೆಯ ಲಿಪಿ ಮತ್ತು ಬ್ರಾಹ್ಮಿಲಿಪಿ ನಡುವಿನ ಬೆಳವಣಿಗೆ ಮಿಸ್ಸಿಂಗ್‌ ಲಿಂಕ್ ಆಗಿದೆ ಎಂಬುದು ಲಿಪಿ ತಜ್ಞರ ಅಭಿಪ್ರಾಯವಾಗಿದೆ.

ಅದೇನೇ ಇದ್ದರೂ ಭಾರತದಲ್ಲಿ ಈಗಿರುವ ಎಲ್ಲ ಲಿಪಿಗಳ ಮೂಲ ಬ್ರಾಹ್ಮಿಲಿಪಿಯೇ ಆಗಿದೆ ಎಂಬುದು ಬಗ್ಗೆ ಸಂಶಯವಿಲ್ಲದಂತೆ ಸಾಬೀತಾಗಿದೆ. ಆದರೂ ಲಿಪಿಗಳು ಜನಸಾಮಾನ್ಯರಿಗೆ ಅಷ್ಟಾಗಿ ಅಗತ್ಯ ಬಿದ್ದಿಲ್ಲ. ಒಂದೆಡೆ ನಿಂತ ಮನುಷ್ಯ ನಿಧಾನಕ್ಕೆ ತನ್ನ ಪರೀಧಿಯನ್ನು ಗುರುತಿಸಿದ ಮೇಲೆ, ಅವುಗಳನ್ನು ನೋಡಿಕೊಳ್ಳಲು ಒಬ್ಬ ಮುಖ್ಯಸ್ಥ ಆದ ಮೇಲೆ, ಮುಂದೆ ಅದುವೇ ರಾಜ್ಯಗಳಾದ ಮೇಲೆ ಶಾಸನಗಳನ್ನು ರೂಪಿಸಲು, ಜನ ಜೀವನ ಕಟ್ಟಳೆಗಳನ್ನು (ಈ ಕಟ್ಟಳೆಗಳೇ ಮುಂದೆ ಧಾರ್ಮಿಕ ಗ್ರಂಥಗಳಿಗೆ ಕಾರಣವಾಯಿತು) ವಿಧಿಸಲು ಲಿಪಿ ಬೇಕಾಯಿತು.

ಇಂಥ ಅನಿವಾರ್ಯತೆಯ ಸಂದರ್ಭದಲ್ಲಿಯೇ ದೇಶದ ಎಲ್ಲ ಕಡೆಗೆ ಲಿಪಿಯನ್ನು ಹರಡಿದ ಶ್ರೇಯಸ್ಸು ಮೌರ್ಯದೊರೆ ಸಾಮ್ರಾಟ ಅಶೋಕನಿಗೆ ಸಲ್ಲುತ್ತದೆ. ಕ್ರಿಶ್ತಪೂರ್ವ ಮೂರನೇ ಶತಮಾನದಲ್ಲಿ ಆಳಿದ ಆಶೋಕ ತನ್ನ ಸಾಮ್ರಾಜ್ಯದ ಮೂಲೆ ಮೂಲೆಗಳಲ್ಲಿ ಶಾಸನಗಳನ್ನು ಬರೆಸಿ ಹಾಕಿದೆ. ಕಂದಹಾರ್‌, ಹಿಮಾಲಯದಿಂದ ಹಿಡಿದು ಚಿತ್ರದುರ್ಗದವರೆಗೂ ಎಲ್ಲ ಕಡೆ ಬ್ರಾಹ್ಮಿಲಿಪಿಯಲ್ಲಿ ಅಶೋಕನ ಶಾಸನಗಳು ದೊರೆತಿವೆ.

ಬ್ರಾಹ್ಮಿಲಿಪಿಯೇ ಉತ್ತರ ಭಾರತದಲ್ಲಿ ನಾಗರಿ ಲಿಪಿಯಾಗಿ ಹರಡಿತು. ದಕ್ಷಿಣದಲ್ಲಿ ಕನ್ನಡ ಬ್ರಾಹ್ಮಿಲಿಪಿ, ತಮಿಳು ಬ್ರಾಹ್ಮಿಲಿಪಿ, ತೆಲುಗು ಬ್ರಾಹ್ಮಿಲಿಪಿಗಳಾಗಿ ಬದಲಾದವು. ಇವೆಲ್ಲ ಆಯಾ ಪ್ರದೇಶದಲ್ಲಿ ಆಯಾ ರೂಪಗಳನ್ನು ಪಡೆದವು. ಆ ನಂತರ ಬ್ರಾಹ್ಮಿ ಸಂಪೂರ್ಣ ಬದಲಾಗಿ ಕನ್ನಡ, ತಮಿಳು, ತೆಲುಗು ಲಿಪಿಗಳಾದವು.

ಬ್ರಾಹ್ಮಿ ಲಿಪಿಯು ಕನ್ನಡ ಲಿಪಿಗೂ ಮೂಲ ಬೇರು ಎಂಬುದು ಇದರಿಂದ ಸ್ಪಷ್ಟವಾಯಿತು. ಕನ್ನಡದ ಲಿಪಿ ಬಗ್ಗೆಯೇ ಹೇಳುವುದಾದರೆ ಕ್ರಿಶ್ತ ಶಕ 5ನೇ ಶತಮಾನದಲ್ಲಿ ಕನ್ನಡ ಬ್ರಾಹ್ಮಿಲಿಪಿಯು ಕದಂಬ ಲಿಪಿಯ ಸ್ವರೂಪವನ್ನು ಪಡೆಯಿತು. ಇದು ಕನ್ನಡ ಲಿಪಿಯ ಆರಂಭಿಕ ರೂಪ. ಮುಂದೆ ಕದಂಬ ಲಿಪಿಯು ಹಳಗನ್ನಡ ಮತ್ತು ತೆಲುಗು-ಕನ್ನಡ ಲಿಪಿಯಾಗಿ ಬೆಳೆಯಿತು. ಕ್ರಿಸ್ತ ಶಕ 450ರಲ್ಲಿ ದೊರಕಿದ ಹಲ್ಮಿಡಿ ಶಾಸನವು ಕನ್ನಡದ ಅತ್ಯಂತ ಪ್ರಾಚೀನ ಶಾಸನ ಎಂದು ಗುರುತಿಸಲಾಗಿದೆ.

ಗಂಗರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಈ ಲಿಪಿಯು ಚೌಕಾಕಾರದಿಂದ ವೃತ್ತಾಕಾರದ ಸುಂದರ ರೂಪಕ್ಕೆ ಬದಲಾವಣೆ ಹೊಂದುತ್ತಾ ಸಾಗಿ ಆಧುನಿಕ ರೂಪವನ್ನು ತಲುಪಿದೆ

Dailyhunt
Disclaimer: This content has not been generated, created or edited by Dailyhunt. Publisher: Prajavani