'ಅದು ನನ್ನ ಜೀವನವೇ ಬದಲಾದ ಕ್ಷಣ. ದೂರದ ಕೆನಡಾದ ನಾನು ಈ ಕನ್ನಡ ಮಣ್ಣಿಗೆ ಬಂದದ್ದೇ ಒಂದು ರೀತಿಯ ಪವಾಡ. 'ಕಾಂತಾರ: ಅಧ್ಯಾಯ 1'ರ 'ಗೊತ್ತಿಲ್ಲ ಶಿವನೇ...' (ಬ್ರಹ್ಮಕಲಶ) ಹಾಡಿಗಾಗಿ ನನ್ನನ್ನು ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕಿಸಿದವರು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ತಂಡದ ಸಿ.ಆರ್.ಬಾಬಿ.
ಅಲ್ಲಿಂದ ಕನ್ನಡದ ಪಯಣ. ಜೀವನದಲ್ಲೊಂದು ಹೊಸ ಮೈಲಿಗಲ್ಲು. ಸುಂದರವಾದ ಭಾಷೆಯ ಸಂಪರ್ಕ.
ಆರಂಭದಲ್ಲಿ ಕನ್ನಡ ಭಾಷೆಯನ್ನು ಹಾಗೂ ಅದರ ಸಂಗೀತವನ್ನು ಆಸ್ವಾದಿಸುವಾಗ, ಅನ್ವೇಷಿಸುವಾಗ ಕರ್ನಾಟಕದ ಜನರ ಪ್ರೀತಿ ಈ ಮಟ್ಟಿಗೆ ನನ್ನ ಮೇಲೆ ಸುರಿಯಲಿದೆ ಎನ್ನುವ ಬಗ್ಗೆ ಕಿಂಚಿತ್ತೂ ಅರಿವು ಇರಲಿಲ್ಲ. ಸಂಗೀತದ ಮೂಲಕ ನಾನು ಇಲ್ಲಿನ ಜನರೊಂದಿಗೆ ಬೆಸೆದುಕೊಂಡಿರುವ ಬಗೆಗೆ ಯಾವ ಹೋಲಿಕೆಯೂ ಇಲ್ಲ. ಈ ಸುಂದರವಾದ ಕನ್ನಡ ಭಾಷೆಯ ಮೂಲಕ ನನ್ನ ಭಾವನೆಗಳನ್ನು ಪ್ರಕಟಿಸುವುದೇ ಒಂದು ರೀತಿಯ ಹೆಮ್ಮೆ.
'ನಗುವ ನಯನ...', 'ಜೀವ ಹೂವಾಗಿದೆ...', 'ಸಂತೋಷಕ್ಕೆ ಹಾಡು ಸಂತೋಷಕ್ಕೆ..' ಮುಂತಾದ ಕನ್ನಡದ ಹಳೆಯ ಹಾಡುಗಳನ್ನು ಹಾಡುತ್ತಾ ಬೆಂಗಳೂರಿನಲ್ಲಿ ಓಡಾಡಿದ ದಿನಗಳು ಸದಾ ಹಸಿರು. 'ಗೊತ್ತಿಲ್ಲಾ ಶಿವನೇ..' ಹಾಡಿಗೆ ದೊರೆತ ಪ್ರತಿಕ್ರಿಯೆಯನ್ನು ವಿವರಿಸಲು ಪದಗಳು ಸಾಲವು. ಈ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ನಾಡಿನ ಸಂಸ್ಕೃತಿ, ಇಲ್ಲಿನ ಜನ ಹಾಗೂ ಭಾಷೆಗೆ ನನ್ನ ಗೌರವವನ್ನು ಅರ್ಪಿಸುತ್ತೇನೆ. ಇನ್ನಷ್ಟು ಕನ್ನಡ ಹಾಡುಗಳನ್ನು ಹಾಡುವುದಕ್ಕೆ ಎದುರು ನೋಡುತ್ತಿದ್ದೇನೆ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

