ಇವತ್ತಿನ ಕನ್ನಡ ಜಗತ್ತನ್ನು ಕರ್ನಾಟಕದ ಭೌಗೋಳಿಕ - ರಾಜಕೀಯ ವ್ಯಾಪ್ತಿಯಲ್ಲಿ ಮಾತ್ರ ಇರಿಸಿ ನೋಡಲಾಗದು. ಅದನ್ನು ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚೌಕಟ್ಟಿನಲ್ಲಿರಿಸಿ ನೋಡಬೇಕು.
ಪ್ರಾದೇಶಿಕ ಸಮಸ್ಯೆಗಳು...
ಪ್ರಾದೇಶಿಕವಾಗಿ, ಅಂದರೆ ರಾಜ್ಯಮಟ್ಟದಲ್ಲಿ ಕನ್ನಡ ಇವತ್ತು ಎದುರಿಸುತ್ತಿರುವ ಬಹಳ ದೊಡ್ಡ ಸಮಸ್ಯೆ ಎಂದರೆ ಕನ್ನಡ ಮಾಧ್ಯಮ ಶಾಲೆಗಳ ಕುಸಿತ ಮತ್ತು ಕನ್ನಡಿಗರಿಗೆ ಉದ್ಯೋಗ ದೊರೆಯದಿರುವುದು.
ಈ ಸಮಸ್ಯೆಗಳನ್ನು ಪರಿಹರಿಸಲು ಕರ್ನಾಟಕ ರಾಜ್ಯ ಸರಕಾರವು ʼಕನ್ನಡ ಭಾಷಾ ಕಲಿಕಾ ಅಧಿನಿಯಮ -2015ʼ ಮತ್ತು ʼಸಮಗ್ರ ಕನ್ನಡ ಅನುಷ್ಠಾನ ವಿಧೇಯಕ-2022ʼ ಅನ್ನು ಜಾರಿಗೆ ತಂದಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಕನ್ನಡ ಬೆಳೆಯುತ್ತಿಲ್ಲ.
ಇವತ್ತು ಶಾಲೆಗಳಲ್ಲಿ ಕನ್ನಡ ಕಲಿಕೆ ಬಹುತೇಕವಾಗಿ ಕುಸಿದಿದೆ. ಖಾಸಗಿ ಶಾಲೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಮೂಲೆಗುಂಪಾಗಿದೆ. ಕೇಂದ್ರೀಯ ಪಠ್ಯಕ್ರಮವನ್ನು ಅನುಸರಿಸುವ ಶಾಲೆಗಳು ಕನ್ನಡವನ್ನು ಮೂರನೇ ಭಾಷೆಯಾಗಿ ಕಲಿಸುತ್ತಿವೆ. 1970-80ರ ದಶಕಗಳಲ್ಲಿ ಕನ್ನಡವನ್ನು ಒಂದು ವಿಷಯವಾಗಿ (ಮೇಜರ್) ಪದವಿ ತರಗತಿಗಳಲ್ಲಿ ವಿದ್ಯಾರ್ಥಿಗಳು ಓದುತ್ತಿದ್ದರು. ಅದೀಗ ಬಹುತೇಕ ನಿಂತು ಹೋಗಿದೆ. ಸ್ನಾತಕೋತ್ತರ ಅಧ್ಯಯನಗಳಲ್ಲಿ ಕನ್ನಡ ಓದುವವರ ಸಂಖ್ಯೆ ಬಹಳ ಕಡಿಮೆಯಾಗಿದೆ. ವೃತ್ತಿಪರ ಶಿಕ್ಷಣದಲ್ಲಿ ಕನ್ನಡವನ್ನು ಓದಬೇಕೆಂಬ ನಿಯಮವಿದ್ದರೂ ಅದೀಗ ಒಂದು ತಿಂಗಳ ಅಧ್ಯಯನಕ್ಕೆ ಮಾತ್ರ ಸೀಮಿತವಾಗಿದೆ ಮತ್ತು ಅನೇಕ ಕಡೆಗಳಲ್ಲಿ ಅದನ್ನು ಕನ್ನಡದಲ್ಲಿ ಪದವಿ ಪಡೆದವರು ಬೋಧಿಸುತ್ತಿಲ್ಲ. ಕನ್ನಡ ಅಧ್ಯಾಪಕರ ನೇಮಕಾತಿಗಳೂ ಸರಿಯಾಗಿ ನಡೆಯುತ್ತಿಲ್ಲ.
ಪ್ರೌಢ ಶಾಲಾ ಮಟ್ಟದಲ್ಲಿ ಇವತ್ತು ಕನ್ನಡದಲ್ಲಿಯೇ ಮಕ್ಕಳು ದೊಡ್ಡ ಸಂಖ್ಯೆಯಲ್ಲಿ ನಪಾಸಾಗುತ್ತಿರುವುದು ಆಘಾತಕಾರಿ ವಿಷಯವಾಗಿದೆ. 2024-25ರ ಶೈಕ್ಷಣಿಕ ವರ್ಷದ 10ನೇ ತರಗತಿಯ ಪರೀಕ್ಷೆಗಳಿಗೆ ಸುಮಾರು ಎಂಟು ಲಕ್ಷದ ನಲ್ವತ್ತು ಸಾವಿರ ಮಕ್ಕಳು ಹಾಜರಾಗಿದ್ದು ಅದರಲ್ಲಿ 1,65,080 ಮಕ್ಕಳು ಕನ್ನಡದಲ್ಲಿಯೇ ಅನುತ್ತೀರ್ಣರಾಗಿದ್ದಾರೆ. ಅಂದರೆ ಶೇಕಡಾ 22ರಷ್ಟು ಮಕ್ಕಳು ಮಾತೃಭಾಷೆಯಲ್ಲಿಯೇ ತೇರ್ಗಡೆಯಾಗಿಲ್ಲ. ಈ ಅಂಕಿ ಅಂಶಗಳು ಶಿಕ್ಷಣ ಕ್ಷೇತ್ರದಲ್ಲಿ ಕನ್ನಡವು ತೀವ್ರವಾಗಿ ಕುಸಿಯುತ್ತಿರುವುದನ್ನು ಸಂಕೇತಿಸುತ್ತವೆ. ಇದನ್ನು ಸರಿಪಡಿಸಲು ಕರ್ನಾಟಕವು ʼರಾಜ್ಯ ಶಿಕ್ಷಣ ನೀತಿʼ ಯನ್ನು ಸಿದ್ಧಪಡಿಸಿದ್ದರೂ ಅದಿನ್ನೂ ಜಾರಿಗೆ ಬಂದಿಲ್ಲ. ಇವತ್ತು 10ನೇ ತರಗತಿಯ ಮಗುವಿಗೆ ಕನ್ನಡವನ್ನು ಸರಿಯಾಗಿ ಬರೆಯಲು ಆಗುತ್ತಿಲ್ಲ.
ಇದಕ್ಕೆ ಕಾರಣ ಸ್ಪಷ್ಟವೇ ಇದೆ. 1990ರ ಆನಂತರ ತೀವ್ರವಾಗಿ ಕಾಣಿಸಿಕೊಂಡ ಮಾರುಕಟ್ಟೆ ಕೇಂದ್ರಿತವಾದ ಜಾಗತೀಕರಣವು ಕನ್ನಡದಂಥ ಸ್ಥಳೀಯ ಭಾಷೆಯನ್ನು ಮೂಲೆಗೆ ತಳ್ಳಿದೆ. ಕನ್ನಡದ ಜಾಗದಲ್ಲಿ ಇಂಗ್ಲಿಷ್ ಪ್ರತಿಷ್ಠಾಪನೆಗೊಂಡಿದೆ. 'ಇಂಗ್ಲಿಷ್ ಭಾಷೆ ಕಲಿತರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು' ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಜನರೂ ಈ ಬೆಳವಣಿಗೆಯನ್ನು ಒಪ್ಪಿಕೊಂಡಿದ್ದಾರೆ. ಹೊಸ ತಲೆಮಾರಿನ ಜನರು ಇಂಗ್ಲಿಷನ್ನು ಅನ್ನದ ಭಾಷೆಯಾಗಿ ಗ್ರಹಿಸಿದ್ದಾರೆ. ಶೈಕ್ಷಣಿಕ ವಲಯಗಳಲ್ಲಿ ಭಾಷೆಗಳ ಅಧ್ಯಯನಗಳನ್ನು 'ಅನುತ್ಪಾದಕ' ಎಂದು ಭಾವಿಸಲಾಗುತ್ತಿದೆ. ಜಗತ್ತಿನಾದ್ಯಂತ ಮಾನವಿಕ ವಿಭಾಗಗಳು ಮುಚ್ಚಿಹೋಗುತ್ತಿವೆ. ಸ್ಪರ್ಧಾತ್ಮಕ ಆರ್ಥಿಕತೆಯ ಹಿಂದೆ ಬಿದ್ದಿರುವ ಜನರಿಗೆ ಭಾಷೆ ಮತ್ತು ಸಾಹಿತ್ಯದ ಅಧ್ಯಯನಗಳು ಬೇಡವಾಗಿವೆ. ಇಂಥ ಬೆಳವಣಿಗೆಗಳ ಪರಿಣಾಮವೆಂಬಂತೆ, ಕನ್ನಡ ಮಾಧ್ಯಮದ ಕುರಿತಾದ ಚಿಂತನೆಗಳು ಇವತ್ತು ತೀವ್ರವಾದ ಬಿಕ್ಕಟ್ಟುಗಳನ್ನು ಎದುರಿಸುತ್ತಿವೆ. ಶಿಕ್ಷಣವು ಲಾಭ- ನಷ್ಟದ ಪ್ರಶ್ನೆಯಾಗಿದೆಯೇ ವಿನಾ ಮಾನವಾಭ್ಯುಯದ ವಿಷಯವಾಗಿ ಉಳಿದಿಲ್ಲ.
ಕನ್ನಡದ ಬಳಕೆ ಮತ್ತು ಕನ್ನಡಿಗರಿಗೆ ಉದ್ಯೋಗ...
ಇವತ್ತು ಕರ್ನಾಟಕಕ್ಕೆ ದೊಡ್ಡ ಸಂಖ್ಯೆಯಲ್ಲಿ ಬೇರೆ ರಾಜ್ಯಗಳಿಂದ ಜನರು ವಲಸೆ ಬರುತ್ತಿರುವುದರಿಂದ ಕರ್ನಾಟದಲ್ಲಿರುವ ಭಾಷೆಗಳ ಸಂಖ್ಯೆ 290ಕ್ಕೆ ಏರಿದೆ. ವಲಸಿಗರು ಕನ್ನಡವನ್ನು ಕಲಿಯುತ್ತಿಲ್ಲ. ಒಂದು ಕಾಲಕ್ಕೆ ಕರ್ನಾಟಕವು ಹೋಟೆಲ್ ಉದ್ಯಮಕ್ಕೆ ಹೆಸರಾಗಿತ್ತು. ಇವತ್ತು ಹೋಟೆಲ್ಗಳಲ್ಲಿ ಕೆಲಸ ಮಾಡುತ್ತಿರುವವರು ಕನ್ನಡೇತರರು. ಗ್ರಾಮೀಣ ಕರ್ನಾಟಕದ ಕೃಷಿ ಕ್ಷೇತ್ರದಲ್ಲಿಯೂ ಅನ್ಯ ಭಾಷಿಕರು ಕೆಲಸ ಮಾಡುತ್ತಿದ್ದಾರೆ. ಕಟ್ಟಡ ಕಾರ್ಮಿಕರಲ್ಲಿ ಕನ್ನಡಿಗರು ಇಲ್ಲವೆಂಬಷ್ಟು ಕಡಿಮೆ. ಅನೇಕ ವರ್ಷಗಳಿಂದ ಕರ್ನಾಟಕದಲ್ಲಿ ವಾಸಿಸುವ ವಲಸಿಗರು ಒಂದಕ್ಷರ ಕನ್ನಡ ಕಲಿಯದೆಯೂ ಇಲ್ಲಿ ಬದುಕು ಸಾಗಿಸುತ್ತಿದ್ದಾರೆ. ಏಕೆಂದರೆ, ಸ್ಥಳೀಯ ಕನ್ನಡಿಗರು ವಲಸಿಗರ ಭಾಷೆಯಲ್ಲಿಯೇ ಮಾತಾಡುತ್ತಾರೆ. ಸಾಂವಿಧಾನಿಕವಾಗಿ ವಲಸೆ ತಪ್ಪಲ್ಲ, ಆದರೆ ವಲಸಿಗರು ಸ್ಥಳೀಯ ಭಾಷೆಯನ್ನು ಕಲಿಯದಿರುವುದು ಸರಿಯಲ್ಲ.
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ ಎಂಬ ಮಾತು ನಿಜ. ಕರ್ನಾಟಕದ ವೇಗವಾದ ಆರ್ಥಿಕ ಬೆಳವಣಿಗೆಗೆ ಇಲ್ಲಿ ಹುಟ್ಟಿಕೊಂಡ ಬೃಹತ್ ಪ್ರಮಾಣದ ಉದ್ಯಮಗಳು ಕಾರಣ ಎಂಬುದನ್ನೂ ಅಲ್ಲಗಳೆಯುವಂತಿಲ್ಲ. ಬೆಂಗಳೂರಿನ ಅತ್ಯುತ್ತಮ ಹವಾಮಾನ, ಕನ್ನಡಿಗರ ಸಜ್ಜನಿಕೆಯ ನಡವಳಿಕೆ, ಸಮತಟ್ಟಾದ ನೆಲ, ಸಂಪರ್ಕ ಸಾಧನಗಳ ಉಪಲಬ್ಧತೆ, ನೀರಿನ ಒದಗಣೆಯೇ ಮೊದಲಾದ ಅನೇಕ ಅಂಶಗಳು ನೂರಾರು ಸಣ್ಣ ಮತ್ತು ದೊಡ್ಡ ಉದ್ಯಮಗಳನ್ನು ಕರ್ನಾಟಕಕ್ಕೆ ಬರಮಾಡಿಕೊಂಡಿವೆ. ಇನ್ಫೊಸಿಸ್, ವಿಪ್ರೊ, ಮೊಟೊರೊಲಾ, ಡೆಲ್, ಗೂಗಲ್, ಬಯೋಕಾನ್ , ಅಡೋಬ್, ಅಮೆಜಾನ್, ಮೈಕ್ರೊಸಾಫ್ಟ್ ಮೊದಲಾದ ಅಂತಾರಾಷ್ಟ್ರೀಯ ಖ್ಯಾತಿಯ ಸಂಸ್ಥೆಗಳು ಬೆಂಗಳೂರಿನ ಹೆಸರನ್ನು ವಿಶ್ವದಾದ್ಯಂತ ಪಸರಿಸಿವೆ. ಇವುಗಳ ಜೊತೆಗೆ ಅನೇಕ ಕೇಂದ್ರೀಯ ಉದ್ಯಮಗಳೂ ಕರ್ನಾಟದಲ್ಲಿವೆ. ಉದಾಹರಣೆಗೆ, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಭಾರತ್ ಹೆವಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್, ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್, ಇತ್ಯಾದಿ. 1970-80ರ ದಶಕದಲ್ಲಿ ಇಲ್ಲೆಲ್ಲಾ ಸಾವಿರಕ್ಕೂ ಹೆಚ್ಚು ಕನ್ನಡಿಗರು ಕೆಲಸ ಮಾಡುತ್ತಿದ್ದರು. ಈಗ ಅವರ ಸಂಖ್ಯೆ ನೂರಕ್ಕೂ ಕಡಿಮೆ. ಕೇಂದ್ರ ಸರಕಾರದ ಪರೀಕ್ಷೆಗಳು ಕನ್ನಡದಲ್ಲಿ ನಡೆಯುತ್ತಿಲ್ಲವಾದ್ದರಿಂದ ಅಲ್ಲಿ ಕನ್ನಡಿಗರ ಅವಕಾಶದ ಬಾಗಿಲುಗಳು ಮುಚ್ಚಿ ಹೋಗಿವೆ. ಹೊರಗುತ್ತಿಗೆ ನೌಕರರಲ್ಲೂ ಕನ್ನಡಿಗರನ್ನು ದೂರ ಇಡಲಾಗಿದೆ.
ಕಾಯ್ದೆಯಾಗದ ಮಹಿಷಿ ವರದಿ...
ಇಂಥ ಬೆಳವಣಿಗೆಗಳನ್ನು ಊಹಿಸಿಯೇ ಡಾ. ಸರೋಜಿನಿ ಮಹಿಷಿಯವರು 1969ರಲ್ಲಿ, ʼಸ್ಥಳೀಯರಿಗೆ ಉದ್ಯೋಗʼ ಎಂದು ಘೋಷಿಸಿಸುವುದರ ಜೊತೆಗೆ, ರೈತರು ನೀರಾವರಿ ಜಮೀನನ್ನು ಪರಪ್ರಾಂತದವರಿಗೆ ಮಾರುವುದು, ಬೆಂಗಳೂರಲ್ಲಿಅನ್ಯಪ್ರಾಂತೀಯರು ಪಡೆಯುವ ನಿವೇಶನಗಳಿಗೆ ಕಡಿವಾಣ ಹಾಕುವುದು, ಪ್ರತ್ಯೇಕ ರೈಲ್ವೇ ವಲಯದ ಸ್ಥಾಪನೆ, ಮೊದಲಾದ 58 ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಅದರಲ್ಲಿʼಸಿʼಮತ್ತುʼಡಿʼವರ್ಗದ ಹುದ್ದೆಗಳಿಗೆ ನೂರಕ್ಕೆ ನೂರರಷ್ಟು ಕನ್ನಡಿಗರನ್ನೇ ನೇಮಕ ಮಾಡಿಕೊಳ್ಳಬೇಕು, ಬ್ಯಾಂಕುಗಳಲ್ಲಿ ಕೆಲಸ ಮಾಡುತ್ತಿರುವ ಗುಮಾಸ್ತರಿಗೆ ಕನ್ನಡ ಭಾಷಾಜ್ಞಾನ ಕಡ್ಡಾಯವಾಗಿರಬೇಕು, ಗುತ್ತಿಗೆ ಮತ್ತು ಹೊರಗುತ್ತಿಗೆ ನೇಮಕಾತಿಯಲ್ಲಿ ಕನ್ನಡಿಗರೇ ಇರಬೇಕು, ಎಂಬಿತ್ಯಾದಿ ಉತ್ತಮ ಮತ್ತು ಅನುಷ್ಠಾನ ಯೋಗ್ಯ ಶಿಫಾರಸುಗಳಿದ್ದವು. ಆದರೆ ಮಹಿಷಿ ವರದಿ ಕಾಯ್ದೆಯ ಅಡಿಯಲ್ಲಿ ಬರಲೇ ಇಲ್ಲವಾದ್ದರಿಂದ ಇದರ ಪ್ರಯೋಜನವೂ ಕನ್ನಡಿಗರಿಗೆ ಆಗಲಿಲ್ಲ.
ರಾಷ್ಟ್ರೀಯತೆ ಮತ್ತು ಕನ್ನಡ...
2014ರ ಆನಂತರದ ರಾಜಕೀಯ ಬೆಳವಣಿಗೆಗಳು ಸ್ಥಳೀಯತೆಯನ್ನು ಗೌಣಗೊಳಿಸಿ ರಾಷ್ಟ್ರೀಯತೆಯನ್ನು ಬಲಗೊಳಿಸುತ್ತಿರುವುದರಿಂದ, ರಾಜ್ಯಗಳ ಅಸ್ಮಿತೆಯ ಪ್ರಶ್ನೆ ಹಿಂದೆ ಸರಿದು, ರಾಷ್ಟ್ರೀಯ ಅಸ್ಮಿತೆ ಪ್ರಬಲವಾಗುತ್ತಿದೆ. ಕರ್ನಾಟಕದಲ್ಲಿ ಪ್ರಬಲವಾದ ಪ್ರಾದೇಶಿಕ ಪಕ್ಷವೂ ಇಲ್ಲದ್ದರಿಂದ ರಾಜ್ಯದ ಅಸ್ಮಿತೆಯ ಪ್ರಶ್ನೆ ಮುನ್ನೆಲೆಗೆ ಬರುತ್ತಿಲ್ಲ. ಹೀಗಾಗಿ ʼಕನ್ನಡಿಗರಿಗೆ ಉದ್ಯೋಗʼಎಂಬ ಜಾಗದಲ್ಲಿʼಭಾರತೀಯರಿಗೆ ಉದ್ಯೋಗʼಎಂಬ ಕೂಗು ಕೇಳಿಬರುತ್ತಿದೆ. ಭಾರತದ ಒಕ್ಕೂಟ ವ್ಯವಸ್ಥೆಯು ಕೂಡಾ ರಾಜ್ಯಗಳು ತಮ್ಮದೇ ಆದ ಕಾನೂನುಗಳನ್ನು ರೂಪಿಸಿಕೊಳ್ಳಲು ಪೂರ್ಣಮಟ್ಟದ ಸ್ವಾತಂತ್ರ್ಯವನ್ನು ಕೊಟ್ಟಿಲ್ಲ. ʼ ನಮಗೆ ರಾಜ್ಯ ಭಾಷೆಯಾದ ಕನ್ನಡವನ್ನೇ ಪ್ರಾಥಮಿಕ ಹಂತದಲ್ಲಿ ಮಾಧ್ಯಮವಾಗಿ ಬಳಸಲು ಅಧಿಕಾರ ಇಲ್ಲʼ ಅಂತ ಸುಪ್ರಿಂ ಕೋರ್ಟ್ ಹೇಳಿದೆ.
ಹಿಂದಿ ಹೇರಿಕೆ...
ಈಚಿನ ದಿನಗಳಲ್ಲಿ ರಾಷ್ಟ್ರೀಯತೆಯ ಭಾಗವಾಗಿ ಹಿಂದಿ ಭಾಷೆಯನ್ನು ಎಲ್ಲೆಡೆಯೂ ತುರುಕಲಾಗುತ್ತಿದೆ. 2001ರ ಜನಗಣತಿಯ ಪ್ರಕಾರ ಹತ್ತು ಲಕ್ಷಕ್ಕಿಂತ ಹೆಚ್ಚು ಜನರು ಮಾತಾಡುವ 40 ಭಾಷೆಗಳು ಭಾರತದಲ್ಲಿವೆ. ಒಂದು ಲಕ್ಷಕ್ಕಿಂತ ಹೆಚ್ಚು ಜನರು ಮಾತಾಡುವ ಭಾಷೆಗಳ ಸಂಖ್ಯೆ 60. 122 ಭಾಷೆಗಳನ್ನು 10 ಸಾವಿರಕ್ಕಿಂತ ಹೆಚ್ಚು ಜನರು ಮಾತಾಡುತ್ತಾರೆ. ಭಾರತದಲ್ಲಿರುವ ಒಟ್ಟು ತಾಯ್ನುಡಿಗಳ ಸಂಖ್ಯೆ 19,569. ಇವುಗಳಲ್ಲಿ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿರುವ ಭಾಷೆಗಳ ಸಂಖ್ಯೆ 22. ಈಗ ಎಂಟನೇ ಪರಿಚ್ಚೇದದಲ್ಲಿ ಮನ್ನಣೆ ಪಡೆಯಲು ಹೋರಾಡುತ್ತಿರುವ ಭಾಷೆಗಳ ಸಂಖ್ಯೆ 135ಕ್ಕೂ ಹೆಚ್ಚು. ಆದರೆ ದೇಶ ಮಾತಾಡುತ್ತಿರುವುದು ಕೇವಲ ಹಿಂದಿಯ ಬಗ್ಗೆ!
ಎಂಟನೇ ಪರಿಚ್ಛೇದಕ್ಕೆ ಸೇರಿರುವ ಭಾಷೆಗಳಲ್ಲಿ ಹಿಂದಿಯನ್ನು ಶೇಕಡಾ 43.63 ರಷ್ಟು ಜನರು ಮಾತಾಡುತ್ತಿರುವುದು ನಿಜ. ಹಿಂದಿಯ ಜನಪ್ರಿಯತೆಗೆ ಅನೇಕ ಕಾರಣಗಳಿವೆ. ಹಿಂದಿ ಭಾಷೆಯನ್ನು ಗೃಹ ಇಲಾಖೆಯ ಅಡಿಯಲ್ಲಿ ತಂದು ಉಳಿದ ಭಾಷೆಗಳನ್ನು ಮಾನವ ಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಇರಿಸಲಾಗಿದೆ. ಹಿಂದಿಗೆ ಸಂವಿಧಾನದ ಬಲವಾದ ಬೆಂಬಲವಿದ್ದು, ೩೫೧ನೇ ವಿಧಿಯು ಭಾರತದ ಒಕ್ಕೂಟ ವ್ಯವಸ್ಥೆಯ ಅಭಿವ್ಯಕ್ತಿ ಮಾಧ್ಯಮವಾಗಿ ಹಿಂದಿ ಭಾಷೆಯನ್ನು ಉತ್ತೇಜಿಸಲು ಮತ್ತು ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ನಿರ್ದೇಶನ ನೀಡುತ್ತದೆ. ಸಂವಿಧಾನದ ವಿಧಿ 343(1)ರ ಪ್ರಕಾರ, ಸಂಸತ್ತು ಕಾನೂನಿನ ಮೂಲಕ ಕೆಲವು ಉದ್ದೇಶಗಳಿಗಾಗಿ ಇಂಗ್ಲಿಷ್ ಜೊತೆಗೆ ಹಿಂದಿಯನ್ನು ಬಳಸಬಹುದು. ಜೊತೆಗೆ ಹಿಂದಿ ಸಿನಿಮಾಗಳನ್ನು ಬಹುತೇಕ ಭಾರತೀಯರು ನೋಡುತ್ತಾರೆ. ಟಿವಿಗಳಲ್ಲಿ ಬರುತ್ತಿರುವ ರಾಮಾಯಣ, ಮಹಾಭಾರತಗಳ ಜೊತೆಗೆ ಅತ್ತೆ ಸೊಸೆ ಜಗಳಾಡುವ ಅನೇಕ ಧಾರವಾಹಿಗಳನ್ನೂ ದೊಡ್ಡ ಸಂಖ್ಯೆಯಲ್ಲಿ ಜನರು ನೋಡುತ್ತಾರೆ. ಇಂಥ ಹಲವು ಕಾರಣಗಳಿಂದ ಹಿಂದಿ ಜನಪ್ರಿಯವಾಗುತ್ತಲೇ ಇದೆ.
ಆದರೆ ಹಿಂದಿಯ ಕುರಿತು ನಾವು ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ಮೊದಲನೆಯದಾಗಿ, 1968ರಿಂದ ಕರ್ನಾಟಕ ತ್ರಿಭಾಷಾ ಸೂತ್ರವನ್ನು ಅಂಗೀಕರಿಸಿದ್ದರಿಂದ ರಾಜ್ಯಕ್ಕೆ ಏನು ಲಾಭವಾಗಿದೆ? 1968ರಿಂದ ದ್ವಿಭಾಷಾ ಸೂತ್ರವನ್ನು ಅಂಗೀಕರಿಸಿದ್ದರಿಂದ ತಮಿಳುನಾಡಿಗೆ ಏನು ನಷ್ಟವಾಗಿದೆ? ಅವರಿಗೆ ಏನಾದರೂ ಲಾಭವಾಗಿದ್ದರೆ, ನಮಗೆ ನಷ್ಟವಾಗಿರಬೇಕಲ್ಲ! ಈ ಕುರಿತು ವಿಶ್ಲೇಷಣೆ ಬೇಕು. ಎರಡನೆಯದಾಗಿ, ಕನ್ನಡಿಗರು ಹಿಂದಿ ಕಲಿತದ್ದರಿಂದ ಎಷ್ಟು ಜನರಿಗೆ ಉದ್ಯೋಗ ದೊರಕಿದೆ? ಅದರ ನಿಖರವಾದ ಅಂಕಿ- ಅಂಶಗಳು ಬೇಕು. ಮೂರನೆಯದಾಗಿ, 1968ರಿಂದಲೇ ಹಿಂದಿ ಓದುತ್ತಾ ಬಂದಿರುವ ಕನ್ನಡಿಗರು ಬ್ಯಾಂಕ್, ಅಂಚೆ ಕಚೇರಿ, ಯುಜಿಸಿ, ಪ್ರಸಾರ ಭಾರತಿ ಮೊದಲಾದೆಡೆಗಳಲ್ಲಿ ಏಕೆ ಕಾಣಸಿಗುವುದಿಲ್ಲ? ನಾಲ್ಕನೆಯದಾಗಿ, 2011ರ ಜನಗಣತಿ ಪ್ರಕಾರ ಹಿಂದಿ ಮಾತಾಡುವ ಮುಖ್ಯ ರಾಜ್ಯಗಳಲ್ಲಿರುವ ಕನ್ನಡಿಗರ ಒಟ್ಟು ಸಂಖ್ಯೆ 25,000 ಮೀರುವುದಿಲ್ಲ. ಉದ್ಯೋಗ ಕಾರಣವಾಗಿ ಅವರೆಲ್ಲ ಅಲ್ಲಿದ್ದಾರೆ ಮತ್ತು ಹಿಂದಿ ಕಲಿತಿದ್ದಾರೆ. ಈ 25,000 ಜನರಿಗಾಗಿ ಕರ್ನಾಟಕದ ಏಳೂವರೆ ಲಕ್ಷ ವಿದ್ಯಾರ್ಥಿಗಳು ಹಿಂದಿ ಕಲಿಯಬೇಕೇ? ವಾಸ್ತವ ಹೀಗಿದ್ದರೂ ಕನ್ನಡವನ್ನು ಬಲಿಕೊಟ್ಟು ಹಿಂದಿಯನ್ನು ಬೆಳೆಸುವುದರ ಹಿಂದಿನ ಉದ್ದೇಶಗಳೇನು?
ಅಂತರರಾಷ್ಟ್ರೀಯ ಬೆಳವಣಿಗೆಗಳು ಮತ್ತು ಕನ್ನಡ...
ಕಳೆದ ಶತಮಾನದ ತೊಂಭತ್ತರ ದಶಕದಿಂದ ಕಾಣಿಸಿಕೊಂಡ ಜಾಗತೀಕರಣ ಪ್ರಕ್ರಿಯೆಯು ಜಗತ್ತಿನ ಭಾಷೆಗಳ ವ್ಯಾಕರಣವನ್ನು ಏಕರೂಪಿಯಾಗಿ ಮಾರ್ಪಡಿಸಿತು. ಖಾಸಗೀಕರಣ, ವ್ಯಾಪಾರೀಕರಣ ಹಾಗೂ ಮಾರುಕಟ್ಟೆಯ ನೀತಿಗಳು ಜಗತ್ತನ್ನು ಅಮೂಲಾಗ್ರವಾಗಿ ಬದಲಾಯಿಸಿವೆ. ಅದೇ ಪ್ರಕಾರ ಅವು ನಮ್ಮ ಶಿಕ್ಷಣ ಕ್ಷೇತ್ರವನ್ನೂ ಆಕ್ರಮಿಸಿಕೊಂಡಿವೆ. ಪರಿಣಾಮವಾಗಿ ಶಿಕ್ಷಣದ ಅಂತಾರಾಷ್ಟ್ರೀಯಕರಣ ಇಂದಿನ ತೀವ್ರವಾದ ಪ್ರಕ್ರಿಯೆಗಳಲ್ಲಿ ಒಂದಾಗಿದೆ. ವಿಶ್ವದ ಕುರಿತಾದ ಭಾರತದ ತಿಳಿವಳಿಕೆಗಳಿಗಾಗಿ ಹಾಗೂ ಭಾರತದ ಕುರಿತಾಗಿ ವಿಶ್ವದ ತಿಳಿವಳಿಕೆಗಾಗಿ ಈ ಅಂತಾರಾಷ್ಟ್ರೀಯಕರಣ ಪ್ರಕ್ರಿಯೆ ಅಗತ್ಯ ಎಂದು ಹೊಸ ಶಿಕ್ಷಣ ನೀತಿಯಲ್ಲಿ ಪ್ರತಿಪಾದಿಸಲಾಗಿದೆ. ಉನ್ನತ ಶಿಕ್ಷಣದ ಜಾಗತೀಕರಣದ ಪರವಾಗಿ ಯುನೆಸ್ಕೋ ಮತ್ತು ವಿಶ್ವವಿದ್ಯಾಲಯಗಳ ಅಂತಾರಾಷ್ಟ್ರೀಯ ಸಂಸ್ಥೆಯು ಜಂಟಿಯಾಗಿ ಪ್ರಬಲವಾದ ವಾದ ಮಂಡಿಸಿವೆ. ಇದನ್ನು ಕಾರ್ಪೋರೇಟ್ ವಲಯ ಬಲವಾಗಿ ಬೆಂಬಲಿಸಿದೆ. ಪರಿಣಾಮವಾಗಿ ಶಿಕ್ಷಣದ ಖಾಸಗೀಕರಣ ಪ್ರಕ್ರಿಯೆ ಆರಂಭವಾಯಿತು. ಸರಕಾರಗಳು ಶಿಕ್ಷಣ ಕ್ಷೇತ್ರದಿಂದ ಹಿಂದೆ ಸರಿಯತೊಡಗಿದವು. ಖಾಸಗಿ ಶಿಕ್ಷಣ ಸಂಸ್ಥೆಗಳು ತಲೆ ಎತ್ತಲಾರಂಭಿಸಿದುವು. 2005ರಲ್ಲಿ ಶಿಕ್ಷಣವನ್ನು ಕೈಗಾರಿಕೆಗಳ ಭಾಗವಾಗಿ ಪರಿಗಣಿಸಿದ ಆನಂತರ ಭಾರತವೂ ಸೇರಿದಂತೆ ಅನೇಕ ದೇಶಗಳು ಶಿಕ್ಷಣದ ಅಂತಾರಾಷ್ಟ್ರೀಕರಣಕ್ಕೆ ಮಹತ್ವ ನೀಡಿದವು. ಈ ಬೆಳವಣಿಗೆಗಳ ಪ್ರಕಾರ, ಮೊದಲನೆಯದಾಗಿ, ಶಿಕ್ಷಣ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಹಾಜರಾತಿ ಇರಬೇಕು ಮತ್ತು ಈ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಪಠ್ಯಕ್ರಮ, ಅಧ್ಯಯನದ ಅವಧಿ ಮತ್ತು ಮೌಲ್ಯಮಾಪನ ವಿಧಾನಗಳಲ್ಲಿ ಸೂಕ್ತವಾದ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಎರಡನೆಯದಾಗಿ, ದೇಶೀಯ ಮತ್ತು ವಿದೇಶೀಯ ವಿದ್ಯಾಲಯಗಳು ಒಟ್ಟಿಗೆ ಕೆಲಸ ಮಾಡುವ ಅವಳಿ ಕಾರ್ಯಕ್ರಮಗಳು ಹಾಗೂ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳು ನಡೆಯಬೇಕು ಮತ್ತು ಮೂರನೆಯದಾಗಿ, ಅತ್ಯುತ್ತಮ ಶಿಕ್ಷಣದ ರಫ್ತಿಗಾಗಿ ವಿಶೇಷ ಶಿಕ್ಷಣ ವಲಯಗಳ ಸ್ಥಾಪನೆ ಆಗಬೇಕು. ಈ ವಲಯಗಳಲ್ಲಿ ಭಾರತೀಯ ಮತ್ತು ವಿದೇಶೀ ಶಿಕ್ಷಣ ಸಂಸ್ಥೆಗಳು ಜಂಟಿಯಾಗಿ ಕೆಲಸ ಮಾಡುತ್ತವೆ. ಇಲ್ಲಿನ ಪಠ್ಯಕ್ರಮಗಳನ್ನು ಎರಡೂ ದೇಶಗಳ ಸಂಸ್ಥೆಗಳು ಜಂಟಿಯಾಗಿ ರೂಪಿಸುತ್ತವೆ. ಹಾಗೆಯೇ ಎರಡು ದೇಶಗಳ ಅಧ್ಯಾಪಕರು ಈ ಕ್ಷೇತ್ರದಲ್ಲಿ ಜೊತೆಯಾಗಿ ಕೆಲಸ ಮಾಡುತ್ತಾರೆ. ಇಂಥ ಬೆಳವಣಿಗೆಗಳ ಪರಿಣಾಮವಾಗಿ ಇಂದು ಶಿಕ್ಷಣವು ಒಂದು ರಾಜ್ಯದ, ಒಂದು ವಿಶ್ವವಿದ್ಯಾಲಯದ, ಅಥವಾ ಒಂದು ದೇಶದ ಗಡಿಗೆ ಸೀಮಿತವಾಗಿ ಉಳಿದಿಲ್ಲ. ಶಿಕ್ಷಣವು ಇದೀಗ 'ಸೀಮಾತೀತವಾಗಿದೆ. ಇಂಥ ಸಂದರ್ಭದಲ್ಲಿ ಕನ್ನಡ ಭಾಷೆಯನ್ನು ಅಂತಾರಾಷ್ಟ್ರೀಯಗೊಳಿಸುವ ಹೇಗೆ ಎಂಬುದು ನಮಗಿನ್ನೂ ಪ್ರಶ್ನೆಯಾಗಿಯೇ ಉಳಿದಿದೆ.
ಇಂಥ ಹಲವು ಸಮಸ್ಯೆಗಳ ನಡುವೆ ಕನ್ನಡವನ್ನು ಬೆಳೆಸುವ ಜವಾಬ್ದಾರಿಯನ್ನು ನಾವೆಲ್ಲ ಹೊರಬೇಕು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಅಧ್ಯಯನ ಕೇಂದ್ರಗಳು ಸ್ಥಾಪನೆ ಆಗಬೇಕು. ಹಾಗೆ ಆಗಲಿ ಎಂದು ಆಶಿಸುತ್ತೇನೆ.
Kannada Rajyotsava: 'ಕರುನಾಡೋತ್ಸವ'ಕ್ಕೆ ಸಂಭ್ರಮದ ತೆರೆಕರುನಾಡೋತ್ಸವ: ನೋ ಕ್ಯಾಪ್ ಬ್ರೋ...!
