Dailyhunt Logo
  • Light mode
    Follow system
    Dark mode
    • Play Story
    • App Story
ಕರುನಾಡೋತ್ಸವ: ರಾಜ್ಯದ ಅಭಿವೃದ್ಧಿಗೆ ವಿಕೇಂದ್ರೀಕರಣವೇ ಮದ್ದು

ಕರುನಾಡೋತ್ಸವ: ರಾಜ್ಯದ ಅಭಿವೃದ್ಧಿಗೆ ವಿಕೇಂದ್ರೀಕರಣವೇ ಮದ್ದು

ಕರ್ನಾಟಕಕ್ಕೆ ಮತ್ತೊಂದು ರಾಜಧಾನಿ ಬೇಕೇ? ಬೇಕಿದ್ದರೆ ಅದು ಎಲ್ಲಿರಬೇಕು, ಅದರ ಸ್ವರೂಪ ಏನಾಗಿರಬೇಕು? ಈ ಪ್ರಶ್ನೆಗಳು ಆಗಾಗ ಸಾರ್ವಜನಿಕ ಚರ್ಚೆಯ ಮುಂಚೂಣಿಗೆ ಬರುತ್ತಿವೆ. ಇವು ಕನ್ನಡಿಗರಲ್ಲಿ ಪುಳಕದ ಜೊತೆಗೆ ಗೊಂದಲ ಮತ್ತು ಆತಂಕವನ್ನೂ ಹುಟ್ಟಿಸುತ್ತಿವೆ. ಸುಮಾರು ಎರಡು ಲಕ್ಷ ಚದರ ಕಿಲೋಮೀಟರ್ ವಿಸ್ತೀರ್ಣವಿರುವ ಇಡೀ ಕರ್ನಾಟಕದ ಆಡಳಿತ, ವ್ಯಾಪಾರ ಮತ್ತು ಉದ್ಯೋಗಾವಕಾಶಗಳು 700 ಚದರ ಕಿ.ಮೀ.

ವಿಸ್ತೀರ್ಣದ ಬೆಂಗಳೂರಿನಲ್ಲೇ ಕೇಂದ್ರೀಕೃತವಾಗಿರುವುದು ಸೋಜಿಗದ ಸಂಗತಿ. ಈ (ಅ)ವ್ಯವಸ್ಥೆಯಿಂದ ಎದುರಾಗಿರುವ ಸಮಸ್ಯೆಗಳನ್ನು ಪರಿಶೀಲಿಸಿ, ಅವಲೋಕಿಸಿ ಅಧ್ಯಯನ ಮಾಡಿ, ಯೋಜಿತವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು.

ಬೆಂಗಳೂರು ನಗರವು ಇಂದು ಈ ಮಟ್ಟಕ್ಕೆ ಬೆಳೆದು ನಿಂತಿರುವುದು ಯಾವುದೋ ಒಂದು ಘಟನೆಯ ಅಥವಾ ಯಾವುದೋ ಒಂದು ಕಾರಣದ ಪರಿಣಾಮದಿಂದ ಅಲ್ಲ. ಬೆಂಗಳೂರಿನ ಬೆಳವಣಿಗೆಯ ಹಿಂದೆ ಹಲವು ಶತಮಾನಗಳ ಇತಿಹಾಸವಿದೆ. ಕೆಂಪೇಗೌಡರು 1537ರಲ್ಲಿ ಬೆಂಗಳೂರಿನ ಕೋಟೆ ಮತ್ತು ಪೇಟೆಗಳನ್ನು ನಿರ್ಮಿಸಿ ವ್ಯಾಪಾರ, ಕುಶಲಕರ್ಮ ಮತ್ತು ಉತ್ಪಾದನಾ ಚಟುವಟಿಕೆಗಳಿಗೆ ನೆಲೆ ಕಲ್ಪಿಸಿದರು. 1809ರಲ್ಲಿ ಬ್ರಿಟಿಷರು ದಂಡು ಪ್ರದೇಶವನ್ನು ಸ್ಥಾಪಿಸಿದ ಬಳಿಕ ಈ ನಗರದ ಸ್ವರೂಪ ಬದಲಾಯಿತು. ಹಳೆಯ ಪೇಟೆ ಮತ್ತು ದಂಡು ಪ್ರದೇಶಗಳು ಪ್ರತ್ಯೇಕ ನಗರ ಭಾಗಗಳಾಗಿ ಬೆಳೆದವು. ಸೇನೆಗೆ ಅಗತ್ಯವಾದ ಸರಕು, ಸಾರಿಗೆ ಮತ್ತು ಸೇವೆಗಳ ಮೂಲಕ ಹೊಸ ವಾಣಿಜ್ಯ ಚಟುವಟಿಕೆಗಳು ರೂಪುಗೊಂಡವು. ಬ್ರಿಟಿಷರ ಆಡಳಿತ ಮತ್ತು ರೈಲು ಸಂಪರ್ಕವೂ ಬೆಂಗಳೂರಿನ ಮಹತ್ವವನ್ನು ಹೆಚ್ಚಿಸಿದವು. ಇದೇ ವೇಳೆ, ಮೈಸೂರು ಸಂಸ್ಥಾನವು ಆಧುನಿಕ ಕೈಗಾರಿಕೀಕರಣಕ್ಕೆ ಬುನಾದಿ ಹಾಕಿತು. ದಿವಾನ್ ಸರ್ ಎಂ. ವಿಶ್ವೇಶ್ವರಯ್ಯ ಅವರಂತಹ ದೂರದೃಷ್ಟಿಯ ಆಡಳಿತಗಾರರು ಕೈಗಾರಿಕೆ, ತಾಂತ್ರಿಕ ಶಿಕ್ಷಣ ಮತ್ತು ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಿದರು.

ಸ್ವಾತಂತ್ರ್ಯದ ನಂತರ ಬೆಂಗಳೂರಿನಲ್ಲಿ ಎಚ್‌ಎಎಲ್, ಬಿಇಎಲ್, ಎಚ್‌ಎಂಟಿ, ಐಟಿಐ ಮುಂತಾದ ಸಾರ್ವಜನಿಕ ವಲಯದ ಸಂಸ್ಥೆಗಳು ಸ್ಥಾಪನೆಗೊಂಡವು. ಇವು ಎಂಜಿನಿಯರ್‌ಗಳು, ತಂತ್ರಜ್ಞರು ಮತ್ತು ನುರಿತ ಕಾರ್ಮಿಕರ ದೊಡ್ಡ ಸಮೂಹವನ್ನು ರೂಪಿಸಿದವು. ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಈ ಬೆಳವಣಿಗೆಗೆ ಪೂರಕವಾದವು. ನಂತರದ ದಶಕಗಳಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳು ಬೆಂಗಳೂರಿನ ಬೆಳವಣಿಗೆಗೆ ಹೊಸ ವೇಗ ನೀಡಿದವು. ಐಟಿ ಕಂಪನಿಗಳ ಆಗಮನದಿಂದ ಉದ್ಯೋಗ, ಹೂಡಿಕೆ ಮತ್ತು ಜಾಗತಿಕ ಸಂಪರ್ಕ ಹೆಚ್ಚಿತು. ದೇಶದ ವಿವಿಧ ಭಾಗಗಳಿಂದ ವಲಸಿಗರು ಬೆಂಗಳೂರಿಗೆ ಬಂದರು. ಅವರ ಅಗತ್ಯಗಳಿಗೆ ಅನುಗುಣವಾಗಿ ವಸತಿ, ಸಾರಿಗೆ, ವ್ಯಾಪಾರ ಮತ್ತು ಇತರ ಸೇವೆಗಳೂ ವಿಸ್ತರಿಸಿದವು. ಹೀಗೆ ಕೈಗಾರಿಕೆಗಳು, ಕೌಶಲಗಳು, ಉದ್ಯೋಗಗಳು ಮತ್ತು ಸೇವೆಗಳು ಒಂದೇ ನಗರದಲ್ಲಿ ಕೇಂದ್ರೀಕೃತವಾಗಿ ಪರಸ್ಪರ ಬೆಳವಣಿಗೆಯನ್ನು ವೇಗಗೊಳಿಸಿದವು. ಮೈಸೂರು ಸಂಸ್ಥಾನದ ಕೈಗಾರಿಕಾ ಪರಂಪರೆ, ಬ್ರಿಟಿಷರ ಕಾಲದ ಮೂಲಸೌಕರ್ಯ, ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಮಾಹಿತಿ ತಂತ್ರಜ್ಞಾನ ಕ್ರಾಂತಿ- ಇವೆಲ್ಲವೂ ಸೇರಿ ಬೆಂಗಳೂರನ್ನು ಕರ್ನಾಟಕದ ಪ್ರಮುಖ ಆಡಳಿತ, ವ್ಯಾಪಾರ ಮತ್ತು ತಂತ್ರಜ್ಞಾನ ಕೇಂದ್ರವನ್ನಾಗಿ ರೂಪಿಸಿವೆ. ಈ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಂಡರೆ ಮತ್ತೊಂದು ಬೆಂಗಳೂರನ್ನು ಕಟ್ಟುವ ಪ್ರಕ್ರಿಯೆಯ ಸಂಕೀರ್ಣತೆ ಅರ್ಥವಾಗುತ್ತದೆ.

ಬೆಂಗಳೂರಿಗೆ ಬದಲಿ ಏಕೆ?

ಈಗಿನ ನಗರದ ಬೆಳವಣಿಗೆಯ ವೇಗವನ್ನು ಗಮನಿಸಿದರೆ, ಈ ನಗರದ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಶಕ್ತಿ ನಾಡಿಗೆ ಇಲ್ಲದಿರುವುದು ಎದ್ದುಕಾಣುತ್ತದೆ. ಈಗಾಗಲೇ 1.29 ಕೋಟಿ ಜನರನ್ನು ಮತ್ತು ಒಂದು ಕೋಟಿಯಷ್ಟು ವಾಹನಗಳನ್ನು ಹೊಂದಿರುವ ಬೆಂಗಳೂರಿನ ಜನದಟ್ಟಣೆ, ಸಂಚಾರ ದಟ್ಟಣೆ, ಮಾಲಿನ್ಯ ಮಟ್ಟ, ವಿದ್ಯುತ್ ಪೂರೈಕೆ, ಕುಡಿಯುವ ನೀರಿನ ಪೂರೈಕೆ, ತ್ಯಾಜ್ಯ ನಿರ್ವಹಣೆ ಮುಂತಾದವುಗಳು ವ್ಯವಸ್ಥೆಯ ಮೇಲೆ ಸಹಿಸಲಸಾಧ್ಯವಾದ ಒತ್ತಡ ಉಂಟುಮಾಡಿದ್ದು, ಇಡೀ ವ್ಯವಸ್ಥೆಯೇ ಕುಸಿದು ಬೀಳುವ ಪರಿಸ್ಥಿತಿ ಇದೆ. ಹಾಗಾದರೆ, ಈ ಒತ್ತಡಗಳನ್ನು ನಿವಾರಿಸುವುದು, ಇಲ್ಲಿನ ಜನರ ಬದುಕು ದುರ್ಭರವಾಗದಂತೆ ನೋಡಿಕೊಳ್ಳುವುದು ಹೇಗೆ?

ಬೆಂಗಳೂರಿನ ಬೆಳವಣಿಗೆಯನ್ನು ಸ್ಥಗಿತಗೊಳಿಸುವುದು!? ಇನ್ನು ಮುಂದೆ ಬೆಂಗಳೂರಿನಲ್ಲಿ ಯಾವುದೇ ಹೊಸ ಉದ್ದಿಮೆಗಳು ಬರುವಂತಿಲ್ಲ, ಇಲ್ಲಿ ಯಾವುದೇ ಹೊಸ ವಾಹನಗಳನ್ನು ಕೊಳ್ಳುವಂತಿಲ್ಲ, ಒಬ್ಬ ವ್ಯಕ್ತಿಗೆ ಇಂತಿಷ್ಟೇ ಪ್ರಮಾಣದಲ್ಲಿ ನೀರು ಪೂರೈಕೆ ಮಾಡಲಾಗುವುದು ಮತ್ತು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಎಲ್ಲರೂ ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನು ಮಾತ್ರವೇ ಬಳಸಬೇಕು, ಖಾಸಗಿ ವಾಹನಗಳ ಬಳಕೆಗೆ ನಿಯಂತ್ರಣ; ಜನರ ಮೇಲೆ ಹೆಚ್ಚೆಚ್ಚು ತೆರಿಗೆ, ಪಾರ್ಕಿಂಗ್‌ನಿಂದ ಪಾರ್ಕುಗಳ ಪ್ರವೇಶದವರೆಗೆ ಕಂಡಕಂಡದ್ದಕ್ಕೆಲ್ಲ ಸಿಕ್ಕಾಪಟ್ಟೆ ಶುಲ್ಕ... ಈ ರೀತಿಯ ಅತಿರೇಕದ ಕ್ರಮಗಳು ಈ ನಗರದ ಬೆಳವಣಿಗೆಯನ್ನು ಸ್ಥಗಿತಗೊಳಿಸಬಲ್ಲವೇ?

ಇಂಥದ್ದನ್ನು ಕಲ್ಪಿಸಿಕೊಳ್ಳಲಾಗದು

ಇನ್ನೊಂದು ಬೆಂಗಳೂರು ನಗರವನ್ನು ಕಟ್ಟೋಣವೇ? ಇಷ್ಟೇ ದೊಡ್ಡದಾದ ಪ್ರದೇಶವನ್ನು, ಈಗಾಗಲೇ ತಕ್ಕಮಟ್ಟಿಗೆ ಬೆಳೆದಿರುವ ನಗರವನ್ನು ಆಯ್ದುಕೊಂಡು, ಅಲ್ಲಿ ಇನ್ನೊಂದು ಬೆಂಗಳೂರು ನಗರವನ್ನು ಕಟ್ಟುವುದು ಪರಿಹಾರವಾಗುವುದೇ? ಅಥವಾ ಹಾಗೆ ಮಾಡುವುದು ಸಾಧ್ಯವೇ? ಗುಲ್ಬರ್ಗ, ಬೆಳಗಾವಿ, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿಗಳ ಜೊತೆಯಲ್ಲಿ ದಾವಣಗೆರೆಯಂಥ ಊರುಗಳನ್ನೂ ಈ ಪಟ್ಟಿಯಲ್ಲಿ ಸೇರಿಸಿಕೊಂಡು, ಅವುಗಳಲ್ಲಿ ಒಂದನ್ನು ಆಯ್ದುಕೊಂಡು ಅದನ್ನು ಬೆಂಗಳೂರಿನಂತಾಗಿಸಬಹುದೇ? ಹಾಳೆಯ ಮೇಲೆ ಸಾಧ್ಯ, ವಾಸ್ತವದಲ್ಲಿ ಅಸಾಧ್ಯ! ಬೆಂಗಳೂರಿನಲ್ಲಿರುವ ಮಾನವ ಸಂಪನ್ಮೂಲ, ಆರ್ಥಿಕ ಮತ್ತು ರಾಜಕೀಯ ಸಂಪನ್ಮೂಲಗಳ ವರ್ಗಾವಣೆ ಸಾಧ್ಯವೇ? ಆಕಸ್ಮಿಕವಾಗಿ ಹಾಗೆ ಮಾಡಿದರೂ ಆಗುವುದು ಏನು? ಬೆಂಗಳೂರು ನಗರವನ್ನು ಒಂದು ಸಮಸ್ಯೆಯ ತವರು ಎಂದು ನೋಡುವುದಾದರೆ, ಇದರಿಂದಾಗಿ ಇನ್ನೊಂದು ಸಮಸ್ಯೆಯ ತವರನ್ನು ಹುಟ್ಟುಹಾಕಿದಂತಾಗುತ್ತದೆ. ಅಂತಹ ರಾಜಧಾನಿಯೊಂದಕ್ಕೆ ದೇಶದ ಮೂಲೆಮೂಲೆಗಳಿಂದ ವಲಸಿಗರ ಪ್ರವಾಹ ನುಗ್ಗಿ ಬಂದು, ಪರಿಸ್ಥಿತಿಯನ್ನು ದುರ್ಭರಗೊಳಿಸಬಲ್ಲುದೇ ಹೊರತು ತಿಳಿಗೊಳಿಸುವುದಿಲ್ಲ. ಹಾಗೆ ಆಯ್ಕೆಯಾಗುವ ನಗರಕ್ಕೆ ಬೆಂಗಳೂರಿಗೆ ಇಂದು ಇರುವ ತಾಳಿಕೆಯ ಮತ್ತು ಏಳಿಗೆಯ ಸಾಮರ್ಥ್ಯ ಇರುವುದು ಸಾಧ್ಯವೇ? ಈ ಎರಡೂ ಪರಿಹಾರ ಕ್ರಮಗಳು ನಿಜವಾದ ಮತ್ತು ಪರಿಣಾಮಕಾರಿಯಾದ ಪರಿಹಾರ ಕ್ರಮಗಳಲ್ಲ. ಅಷ್ಟೇ ಅಲ್ಲ, ಕಾರ್ಯಸಾಧುವಾದ ಕ್ರಮಗಳೂ ಅಲ್ಲ.

ಕನ್ನಡನಾಡು ಹೀಗಾಗಲಿ

ನಮ್ಮ ನಾಡಿನ ಈ ಸಮಸ್ಯೆಗೆ ಪರಿಹಾರ ಇರುವುದು ಬೆಂಗಳೂರಿನ ಒಳಹರಿವನ್ನು ನಿಲ್ಲಿಸುವುದರಲ್ಲಿ. ಅದನ್ನು ಒತ್ತಾಯಪೂರ್ವಕವಾಗಿ ಆಗಿಸುವುದು ಅಸಾಧ್ಯ. ಬದಲಿಗೆ, ವಿಕೇಂದ್ರೀಕರಣದ ಮೂಲಕ ಸಾಧಿಸಬಹುದು. ನಮ್ಮದೇ ದೇಶದಲ್ಲಿನ ತಮಿಳುನಾಡು, ಗುಜರಾತ್, ಮಹಾರಾಷ್ಟ್ರ, ಒಡಿಶಾ ಮುಂತಾದ ಕೆಲವು ರಾಜ್ಯಗಳನ್ನು ನೋಡಿದರೆ, ಅಲ್ಲಿ ರಾಜಧಾನಿಯಿಂದಾಚೆಗೂ ಹಲವಾರು ನಗರಗಳು ಆರ್ಥಿಕ ಚಟುವಟಿಕೆಯ ಕೇಂದ್ರಗಳಾಗಿರುವುದು ಕಂಡುಬರುತ್ತದೆ. ಕರ್ನಾಟಕದಲ್ಲಿ ಅಂತಹ ಕೇಂದ್ರಗಳ ಸಂಖ್ಯೆ ತೀರಾ ಕಡಿಮೆಯಿದೆ. ನಮ್ಮ ಗುರಿ ಕರ್ನಾಟಕದ ಸಮಗ್ರ ಅಭಿವೃದ್ಧಿ. ಹಾಗೆಂದಾಗ ಪ್ರತಿಯೊಂದು ಊರೂ ಬೆಂಗಳೂರು ಆಗಬೇಕು ಅಂತಲ್ಲ. ಪ್ರತಿಯೊಂದು ಊರಿಗೂ, ಪ್ರದೇಶಕ್ಕೂ ತನ್ನದೇ ಆದ ಸ್ವಂತಿಕೆ, ಸಾಮರ್ಥ್ಯ ಹಾಗೂ ಮಿತಿಗಳು ಇರುತ್ತವೆ. ಇವುಗಳನ್ನು ಅರಿತುಕೊಂಡು ಯೋಜನೆಗಳನ್ನು ರೂಪಿಸಬೇಕು. ಮಹಾತ್ಮ ಗಾಂಧಿಯವರು ಗ್ರಾಮಸ್ವರಾಜ್ಯದ ಕನಸನ್ನು ಕಂಡಿದ್ದರು. ಪ್ರತಿಯೊಂದು ಹಳ್ಳಿಯೂ ಸ್ವಾವಲಂಬಿಯಾಗಬೇಕು ಎನ್ನುವ ಕನಸು ಅದು.

ನಮ್ಮ ನಾಡಿನ ಯಾವುದೇ ವ್ಯಕ್ತಿಗೆ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳಲು ತನ್ನ ಜಿಲ್ಲೆಯಿಂದ ಹೊರಗೆ ಹೋಗಬೇಕಾದ ಅನಿವಾರ್ಯ ಇಲ್ಲದಂತಹ ವ್ಯವಸ್ಥೆಯನ್ನು ನಿರ್ಮಿಸಬೇಕು. ಆಡಳಿತದ ವಿಷಯದಲ್ಲಂತೂ ಇಂದಿನ ತಂತ್ರಜ್ಞಾನದ ಯುಗದಲ್ಲಿ ಇದು ಸುಲಭವಾದ ಕೆಲಸ. ಯಾವುದೇ ಇಲಾಖೆ, ಸಂಸ್ಥೆ, ಕಚೇರಿಗಳ ಕೆಲಸಕ್ಕಾಗಿ ವ್ಯಕ್ತಿಯೊಬ್ಬ ರಾಜಧಾನಿಗೆ ಹೋಗಬೇಕಾದ ಅನಿವಾರ್ಯವನ್ನು ಇಲ್ಲವಾಗಿಸಬೇಕು. ಅದು ಸಣ್ಣ ಪಡಿತರ ಚೀಟಿ, ಮತದಾನದ ಗುರುತಿನ ಚೀಟಿಯಿಂದ ಹಿಡಿದು ಪಾಸ್‌ಪೋರ್ಟ್, ಉದ್ದಿಮೆ ಪರವಾನಗಿ ತನಕದ ಯಾವುದನ್ನೇ ಆದರೂ ಜನ ಇದ್ದಲ್ಲಿಯೇ ಪಡೆಯುವ ಏರ್ಪಾಟು ಮಾಡಬೇಕು. ಕಲಿಕೆಯ ದೃಷ್ಟಿಯಿಂದ ನೋಡಿದರೆ, ಪ್ರತಿಯೊಂದು ಜಿಲ್ಲೆಗೂ ಅಗತ್ಯವಿರುವಷ್ಟು ಅಂಗನವಾಡಿ, ಶಿಶುವಿಹಾರದಿಂದ ಹಿಡಿದು ವೈದ್ಯಕೀಯ, ತಾಂತ್ರಿಕ ಶಿಕ್ಷಣದ ಪದವಿ ಹಂತದವರೆಗಿನ ಕಾಲೇಜುಗಳು ಜಿಲ್ಲೆಯ ವ್ಯಾಪ್ತಿಯಲ್ಲಿಯೇ ಇರಬೇಕು. ಕೌಶಲಾಭಿವೃದ್ಧಿಯ ವೃತ್ತಿಪರ ಶಿಕ್ಷಣ ಕೇಂದ್ರಗಳು ಜಿಲ್ಲೆಯ ಎಲ್ಲೆಡೆ ಸ್ಥಾಪನೆಯಾಗಬೇಕು. ಇದರಿಂದಾಗಿ ಮಾನವ ಸಂಪನ್ಮೂಲವನ್ನು ಸಿದ್ಧಪಡಿಸುವ ಕಾರ್ಯಕ್ಕೆ ಚಾಲನೆ ಸಿಗುತ್ತದೆ. ನಾಲ್ಕು ಜಿಲ್ಲೆಗಳ ಸಮೂಹವನ್ನು ಒಂದು ವಲಯವಾಗಿ ಮಾಡಿ, ಅದರಲ್ಲಿ ಎಲ್ಲಾ ಉನ್ನತ ಕಲಿಕೆಗಳ ಕೇಂದ್ರವೂ ಒಂದು ವಿಮಾನ ನಿಲ್ದಾಣವೂ ಇರಬೇಕು. ರಸ್ತೆ ಹಾಗೂ ರೈಲು ಸಂಪರ್ಕಗಳು ಪ್ರತಿಯೊಂದು ಭಾಗವನ್ನೂ ಸುಲಭವಾಗಿ ಜೋಡಿಸಬೇಕು.

ಭಾರತದ ಇಂದಿನ ವ್ಯವಸ್ಥೆಯಲ್ಲಿ ವಲಸೆಯನ್ನು ನಿಯಂತ್ರಿಸಲು ಯಾವುದೇ ಅವಕಾಶವಿಲ್ಲ. ಬದಲಿಗೆ, ಸರ್ಕಾರಗಳು ನೇಮಕಾತಿಯಲ್ಲಿ ಸ್ಥಳೀಯರಿಗೆ ಸುಲಭವಾಗಿ ಕೆಲಸ ದೊರೆಯುವಂತಹ ಅವಕಾಶವನ್ನು ಹುಟ್ಟುಹಾಕುವ ನಿಯಮಗಳನ್ನು ರೂಪಿಸಬೇಕು. ಉದಾಹರಣೆಗೆ, ಒಂದು ಪ್ರದೇಶದ ಉದ್ಯಮವೊಂದು ಕ್ಯಾಂಪಸ್ ಆಯ್ಕೆಗಾಗಿ ತನ್ನ ಪ್ರದೇಶದ ವಿದ್ಯಾಸಂಸ್ಥೆಗಳಿಂದಲೇ ಅಭ್ಯರ್ಥಿಗಳನ್ನು ಆಯ್ದುಕೊಳ್ಳುವ ನಿಯಮ. ಅದರಂತೆಯೇ ಆಯಾ ಪ್ರದೇಶದ ಸಾಮರ್ಥ್ಯಕ್ಕೆ ಅನುಗುಣವಾಗಿ ಕೃಷಿ ಉತ್ಪನ್ನಗಳೂ ಸೇರಿದಂತೆ, ಆಯಾ ಪ್ರದೇಶಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳಿಗೆ ಅನುಸಾರವಾದ ಉದ್ದಿಮೆಗಳ ಸ್ಥಾಪನೆಗೆ ಉತ್ತೇಜನ ನೀಡಬೇಕು. ತಮ್ಮ ತಮ್ಮ ಹಳ್ಳಿಗಳಲ್ಲಿ ಇದ್ದುಕೊಂಡೇ ಮೃಷ್ಟಾನ್ನ ಸಂಪಾದನೆ ಮಾಡಲು ಸಾಧ್ಯವಾಗುವಂತೆ ಜಿಲ್ಲೆಗಳನ್ನು ಅವುಗಳ ಕ್ಷಮತೆ ಮತ್ತು ಸಾಮರ್ಥ್ಯಗಳಿಗೆ ಅನುಗುಣವಾಗಿ ಬೆಳೆಸುವುದರಿಂದ ನಗರಗಳಿಗೆ ವಲಸೆ ತಪ್ಪುತ್ತದೆ. ಜತೆಗೆ, ಬೆಂಗಳೂರಿನಿಂದ ತಮ್ಮ ತಮ್ಮ ತವರಿಗೆ ಹಿಂತಿರುಗುವ ಜನಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚಲಿದೆ. ಇದು ಈಗಿನ ಬೆಂಗಳೂರಿನ ಒತ್ತಡವನ್ನೂ ನಿವಾರಿಸುತ್ತದೆ, ಸಮಗ್ರ ಕರ್ನಾಟಕದ ಅಭಿವೃದ್ಧಿಯ ಕನಸನ್ನೂ ಸಾಕಾರಗೊಳಿಸುತ್ತದೆ.

ಲೇಖಕ: ಬನವಾಸಿ ಬಳಗದ ಅಧ್ಯಕ್ಷರು

 ಆನಂದ್ ಬನವಾಸಿ ಬಳಗದ ಅಧ್ಯಕ್ಷರುಕನ್ನಡ ಬಾವುಟ
Dailyhunt
Disclaimer: This content has not been generated, created or edited by Dailyhunt. Publisher: Prajavani