ಉಡುಪಿ: ಕುಮ್ಕಿ, ಗೇರು ಲೀಸ್ ಭೂಮಿ, ಕಸ್ತೂರಿ ರಂಗನ್ ವರದಿ ಮತ್ತು ಕಾಡುಪ್ರಾಣಿ ಹಾವಳಿ ಬಗ್ಗೆ ಚರ್ಚಿಸಲು ಇದೇ 5ರಂದು ಬೆಳಿಗ್ಗೆ 10.30ಕ್ಕೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕ್ ಕುಮಾರ್ ಕೊಡ್ಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲಾ ಕೃಷಿಕ ಸಮಾಜ ಹಾಗೂ ಉಡುಪಿ ಜಿಲ್ಲಾ ತೋಟಗಾರಿಕಾ ಬೆಳೆಗಾರರ ಸಹಕಾರ ಸಂಘದ ಸಹಯೋಗದಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸಂಸದರು ಹಾಗೂ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರೈತರೂ ಪಾಲ್ಗೊಂಡು ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ ಎಂದರು.
ರೈತರಿಗೆ ಕುಮ್ಕಿ ಭೂಮಿಯ ಸಂಪೂರ್ಣ ಹಕ್ಕು ನೀಡುವಲ್ಲಿ ಸರ್ಕಾರ ವಿಳಂಬ ಮಾಡುತ್ತಿರುವುದು ಪ್ರಮುಖ ಕಳವಳದ ವಿಷಯವಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಕರಾವಳಿ ಜಿಲ್ಲೆಗಳ ರೈತರು ಕುಮ್ಕಿ ಭೂಮಿಯನ್ನು ಜಾನುವಾರುಗಳ ಮೇಯಿಸಲು, ಮೇವು ಬೆಳೆಸಲು ಹಾಗೂ ಮನೆ ಬಳಕೆಗೆ ಬೇಕಾದ ಸಣ್ಣ ಪ್ರಮಾಣದ ಮರಮಟ್ಟು ಸಂಗ್ರಹಿಸಲು ಬಳಸುತ್ತಿದ್ದರು ಎಂದರು.
ಮದ್ರಾಸ್ ಬೋರ್ಡ್ ಆಫ್ ರೆವೆನ್ಯೂ ಆದೇಶ ಹಾಗೂ ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ಕೃಷಿ ಉದ್ದೇಶಗಳಿಗೆ ಕುಮ್ಕಿ ಭೂಮಿ ಬಳಸುವ ರೈತರ ಹಕ್ಕುಗಳನ್ನು ಮಾನ್ಯ ಮಾಡಲಾಗಿದೆ. ಆದರೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸುಮಾರು ನಾಲ್ಕು ಲಕ್ಷ ಕುಟುಂಬಗಳಿಗೆ ಈ ಭೂಮಿಯ ಸಂಪೂರ್ಣ ಹಕ್ಕು ಇನ್ನೂ ದೊರೆತಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರದೀಪ್ ಹೆಬ್ಬಾರ್ ನಂಚಾರ್, ವೈಕುಂಠ ಹೇರಳೆ, ಅತುಲ್ ಕುಮಾರ್ ಶೆಟ್ಟಿ, ಉಪೇಂದ್ರ ನಾಯಕ್ ಉಪ್ಥಿತರಿದ್ದರು.
261104-28-172596958

