Dailyhunt Logo
  • Light mode
    Follow system
    Dark mode
    • Play Story
    • App Story
ಕತಾರ್‌ ಉಡುಗೊರೆ ನೀಡಿದ್ದ ವಿಮಾನದಲ್ಲಿ ಚೊಚ್ಚಲ ಹಾರಾಟ ನಡೆಸಿದ ಟ್ರಂಪ್

ಕತಾರ್‌ ಉಡುಗೊರೆ ನೀಡಿದ್ದ ವಿಮಾನದಲ್ಲಿ ಚೊಚ್ಚಲ ಹಾರಾಟ ನಡೆಸಿದ ಟ್ರಂಪ್

ವಾಷಿಂಗ್ಟನ್‌: ಕತಾರ್ ಉಡುಗೊರೆಯಾಗಿ ನೀಡಿದ್ದ 'ಏರ್‌ ಪೋರ್ಸ್‌ ಒನ್‌' ವಿಮಾನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೊದಲ ಬಾರಿಗೆ ಪ್ರಯಾಣ ಮಾಡಿದ್ದಾರೆ.

ಈ ವಿಮಾನವು(ಬೋಯಿಂಗ್ 747-800), ಹೊಸ ಏರ್ ಫೋರ್ಸ್ ಒನ್ ವಿಮಾನ ಹಸ್ತಾಂತರವಾಗುವವರೆಗೆ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸಲಿದೆ.

ವಿಮಾನದ ಕೆಳಭಾಗದಲ್ಲಿ ತಿಳಿ ನೀಲಿ ಬಣ್ಣದ ಬದಲು, ಟ್ರಂಪ್‌ ಅವರ ಇಷ್ಟದಂತೆ ಗಾಢ ನೀಲಿ ಬಣ್ಣವನ್ನು ಬಳಸಲಾಗಿದೆ. ಕೆಂಪು ಮತ್ತು ಹೊನ್ನಿನ ಬಣ್ಣದ ಪಟ್ಟಿಗಳು ಇವೆ. ವಿಮಾನದ ಒಳಾಂಗಣ ವಿನ್ಯಾಸವು ವುಡನ್‌ ಪ್ಯಾನೆಲಿಂಗ್, ಮೃದುವಾದ ಕಾರ್ಪೆಟ್‌ಗಳು, ಸಂಪೂರ್ಣವಾಗಿ ಮಲಗಬಹುದಾದ ಆಸನಗಳು ಮತ್ತು ಅಧ್ಯಕ್ಷೀಯ ಮುದ್ರೆ ಹೊಂದಿರುವ ಸೀಟ್ ಬೆಲ್ಟ್‌ಗಳನ್ನು ಒಳಗೊಂಡಿದೆ.

ಅಮೆರಿಕ ಅಧ್ಯಕ್ಷರ ಪ್ರಯಾಣಕ್ಕೆ ದುಬಾರಿ ವಿಮಾನ ನೀಡಿದ ಕತಾರ್‌: ವಿಶೇಷಗಳೇನು?

ವಿಮಾನವನ್ನು ಉಡುಗೊರೆ ನೀಡಿದ್ದಕ್ಕೆ ಕತಾರ್‌ಗೆ ಧನ್ಯವಾದ ತಿಳಿಸಿರುವ ಟ್ರಂಪ್‌, ಇಂತಹ ವಿಮಾನವನ್ನು ನಾವು ನಿರ್ಮಿಸಲು ಸಾಧ್ಯವಿಲ್ಲ' ಎಂದಿದ್ದಾರೆ.

ತಾತ್ಕಾಲಿಕವಾಗಿ ಬಳಕೆ:

ಬೋಯಿಂಗ್ ಸಂಸ್ಥೆಯು ಹೊಸ ಏರ್‌ ಫೋರ್ಸ್‌ ಒನ್ ವಿಮಾನವನ್ನು ಪೂರೈಸುವವರೆಗೆ ಈ ವಿಮಾನವನ್ನು ಅಧ್ಯಕ್ಷರ ಪ್ರಯಾಣಕ್ಕೆ ತಾತ್ಕಾಲಿಕವಾಗಿ ಬಳಸಲಾಗುತ್ತದೆ ಎಂದು ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಅಧಿಕಾರಕ್ಕೆ ಮರಳಿದ ನಂತರ ಟ್ರಂಪ್ ಅವರು ಕತಾರ್‌ನ ಈ ವಿಮಾನವನ್ನು ಪರಿಶೀಲಿಸಿದ್ದರು. ಹೊಸ ವಿಮಾನದ ತಯಾರಿಯಲ್ಲಿ ಆಗುತ್ತಿರುವ ವಿಳಂಬವನ್ನು ಗಮನಿಸಿದ ಟ್ರಂಪ್‌, ಈ ವಿಮಾನವನ್ನು ಅಧ್ಯಕ್ಷರ ಪ್ರಯಾಣಕ್ಕಾಗಿ ಆದಷ್ಟು ಬೇಗ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಕಡಿಮೆ ಅವಧಿಯಲ್ಲೇ ವಿಮಾನವನ್ನು ನವೀಕರಿಸಿದ್ದರಿಂದ, ಪ್ರಸ್ತುತ ಇರುವ ಏರ್ ಫೋರ್ಸ್ ಒನ್ ವಿಮಾನದಲ್ಲಿ ಕಂಡುಬರುವ ಎಲ್ಲ ತಾಂತ್ರಿಕ ವ್ಯವಸ್ಥೆಗಳನ್ನು ಇದಕ್ಕೆ ಅಳವಡಿಸಲು ಸಾಧ್ಯವಾಗಿಲ್ಲ. ಅಧ್ಯಕ್ಷರು ಪ್ರಯಾಣಿಸುವ ವಿಮಾನಗಳಲ್ಲಿ ಇರುವಂತಹ ಕ್ಷಿಪಣಿ ಪತ್ತೆ ಮತ್ತು ರಕ್ಷಣಾ ವ್ಯವಸ್ಥೆಗಳೂ ಈ ವಿಮಾನದಲ್ಲಿ ಇಲ್ಲ.

'ಇದು ಅಂತರರಾಷ್ಟ್ರೀಯ ಪ್ರಯಾಣಗಳಿಗಿಂತ ದೇಶೀಯ ಪ್ರಯಾಣಕ್ಕೆ ಹೆಚ್ಚು ಸೂಕ್ತವಾಗಿದೆ' ಎಂದು ವಾಯುಯಾನ ಮತ್ತು ರಕ್ಷಣಾ ಸಲಹಾ ಸಂಸ್ಥೆ 'ಟೀಲ್ ಗ್ರೂಪ್'ನ ಹಿರಿಯ ವಿಶ್ಲೇಷಕ ಜೆರೆಮಿಯಾ ಗರ್ಟ್ಲರ್ ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani