Dailyhunt Logo
  • Light mode
    Follow system
    Dark mode
    • Play Story
    • App Story
ಕಥೆ - ಪ್ರಕಾಶ್ ಪುಟ್ಟಪ್ಪ ಅವರ 'ವರ್ತುಲ'

ಕಥೆ - ಪ್ರಕಾಶ್ ಪುಟ್ಟಪ್ಪ ಅವರ 'ವರ್ತುಲ'

ಟಪಟನೆ ಸುರಿಯುತ್ತಿದ್ದ ಸೋನೆ ಸದ್ದು ಕಿವಿಗೆ ತಾಕುತ್ತಿತ್ತು. ಚುಮುಚುಮು ಚಳಿಗೆ ಆಗ ತಾನೆ ಎದ್ದ ಹಕ್ಕಿಗಳು ಚಿಲಿಪಿಲಿಗುಟ್ಟಲು ಆರಂಭಿಸಿದ್ದವು. ಮೂಡಣದ ಸೂರ್ಯ ಮನೆಗೆ ಬರುವ ಹೊತ್ತಾಗುವಂತೆ ಬೆಳಕು ನಿಧಾನವಾಗಿ ಕಣ್ತೆರೆಯುತ್ತಿತ್ತು. ಮಂಕುಹಿಡಿಯುತ್ತಿದ್ದ ಬೀದಿ ದೀಪಗಳು ಸೋಲುಂಡು ಸಪ್ಪೆ ಮೋರೆ ಹಾಕಿ ನಂದಲಾರಂಭಿಸಿದ್ದವು.

ಶಿವ ದಡಬಡನೆ ಎದ್ದು ಮಂಜಿನಂತೆ ಕುಳಗರಿಯುತ್ತಿದ್ದ ತಣ್ಣೀರನ್ನು ಮೈಮೇಲೆ ಸುರಿದುಕೊಂಡು ಬೀದಿಯತ್ತ ಓಡಿದ. ತಂಡ ಕಟ್ಟಿಕೊಂಡ ಗುಂಪೊಂದು ಅದಾಗಲೆ ಬೀದಿಯಲ್ಲಿ ಭಜನೆ ಹಾಡಿಕೊಂಡು ಮನೆಮನೆಗೆ ತೆರಳುತ್ತಿತ್ತು. ಭಜನೆ ಹಾಡುವುದರಲ್ಲಿ ಗುಬ್ಬಿ ಹಾಕುವುದರಲ್ಲಿ ಶಿವ ಒಂದು ಕೈ ಮುಂದಿದ್ದರಿಂದ ತಂಡಕ್ಕೆ ಇವನು ಬಲುಬೇಡಿಕೆ ಸದಸ್ಯನಾಗಿದ್ದ. ಮಾರ್ಗಳ್ಳಿ ತಿಂಗಳಿನಲ್ಲಿ ಪ್ರತಿದಿನ ಬೆಳಿಗ್ಗೆ ಬೀದಿಗಳಲ್ಲಿ ಭಜನೆಯ ತಂಡ ಹೊರಟಾಗ ಕೆಲ ಮನೆಗಳಲ್ಲಿ ಟೀ, ಕಾಫಿ, ತಿಂಡಿ ಜೊತೆಗೊಂದಷ್ಟು ದುಡ್ಡು ಕೊಟ್ಟು ಕಳುಹಿಸುತ್ತಿದ್ದರೆ, ಕೆಲವರು ಏನನ್ನೂ ನೀಡದೆ ಕೇವಲ ಆರತಿ ಎತ್ತಿ ಕಳುಹಿಸಿಬಿಡುತ್ತಿದ್ದರು.ಇಂತಹ ಕೆಲ ಸಂದರ್ಭಗಳಲ್ಲಿ ಶಿವ ಸಿಟ್ಟಿಗೇಳುತ್ತಿದ್ದ. ಅದೇ ಮನೆ ಎದುರು 'ಇಕ್ಕಲಾರೆ ಕೈ ಎಂಜಲು ಚಿಕ್ಕ ಮಕ್ಕಳು ಅಳುತಾವೆ ಹೋಗೋ ದಾಸಯ್ಯ' ಎನ್ನುವ ಭಜನೆಯನ್ನು ಜೋರು ದನಿಯಲ್ಲಿ ಹಾಡುತ್ತಿದ್ದ. ಅವಮಾನಕ್ಕೊಳಗಾದವರಂತೆ ಮನೆಯವರು ಮುಖ ತಗ್ಗಿಸಿ ಒಳನುಗ್ಗುತ್ತಿದ್ದರೆ ಶಿವ ನಕ್ಕು ಮುಂದೆ ಸಾಗುತ್ತಿದ್ದ.

ಭಜನೆಯ ಮಾಸ್ಟರ್ ಎಂದೇ ಊರಲ್ಲೆಲ್ಲಾ ಪರಿಚಿತರಾಗಿದ್ದ ವೀರಪ್ಪ ಜೋಯೀಷರ ಮಗ ಶಿವ ಜೋಯೀಷರು ಭಜನೆ ಹೇಳುವುದರಲ್ಲಿ ಕಾಲಾಂತರದಿಂದಲೂ ಹೆಸರು ಮಾಡಿದ್ದರು. ಅನೇಕ ಜಾನಪದ ಭಜನೆ ಹಾಡುಗಳ ಜೊತೆಗೆ ತಾವೇ ಸೃಷ್ಟಿಸಿಕೊಂಡ ಒಂದಷ್ಟು ಭಜನೆಗಳನ್ನು ರಾಗಬದ್ಧವಾಗಿ ಹಾರ್ಮೋನಿಯಂ ಬಳಸಿ ಹಾಡುತ್ತಿದ್ದರೆ ಊರಿನಲ್ಲಿ ಹಬ್ಬದ ವಾತಾವರಣ ಕಳೆಕಟ್ಟಿಬಿಡುತ್ತಿತ್ತು. ಮಾರ್ಗಳ್ಳಿ ಕಾಲ ಬಂದರೆ ಊರಿಗೆ ಏನೋ ಒಂದು ವಿಶೇಷ ರೂಪು. ಜನ ಬೆಳಗಾಗು ತ್ತಲೇ ಮನೆ ಮುಂದೆ ಸಗಣಿ ಹಚ್ಚಿ, ರಂಗೋಲಿ ಬಿಡಿಸಿ ಧೂಪ ಹಾಕುವ ಘಮಲು ರಸ್ತೆ ತಾಕುತ್ತಿದ್ದರೆ ಅಲ್ಲಿ ಸಾಗುವ ಮಜವೇ ಬೇರೆ. ಅಂತಹ ಬೀದಿಗಳಲ್ಲಿ ಜೋಯೀಷರು ಮತ್ತು ಸಂಗಡಿಗರು ಹಾರ್ಮೋನಿಯಂ ಮತ್ತು ಕಂಸಾಳೆ ಹಿಡಿದು ಭಜನೆ ಹಾಡುತ್ತಾ ಸಾಗುತ್ತಿದ್ದರು. ಮಾರ್ಗಳ್ಳಿಯ ಮೊದಲ ದಿನ ಶುರುವಾಗುತ್ತಿದ್ದ ಭಜನೆಗೆ ಸಂಕ್ರಾಂತಿಯ ಹಿಂದಿನ ದಿನ ವಿದಾಯ ಹಾಡಲಾಗುತ್ತಿತ್ತು. ಕಾಲಿಗೆ ಗೆಜ್ಜೆ ಹಾಕಿ, ಕೆಂಪು ಟವಲ್ ನಡುಗೆ ಸುತ್ತಿ, ವಠಾರದಲ್ಲೊಂದು ಗುಬ್ಬಿ ಹಾಕುವುದು ಒಂದು ತಂಡದ ಕೆಲಸವಾಗಿತ್ತು. ವೀರಪ್ಪನ ಭಜನೆ ಹಾಡಿಗೆ ಕಂಸಾಳೆ ಹಿಡಿದ ಯುವಕರ ಒಂದು ತಂಡ

'ಹರಹರ ಹರನೇ ಜಯಾತೋ
ಹರಮೂರು ಪುರವನೆ ತರುವ ಜಯಾತೋ
ಕರುಣಿಸೋ ಕಾಲ ಕಂದರಹರ ಮಹದೇವ
ಪಾಲಿಸೋ ಜಗವೆಲ್ಲವೋ'

ಎಂದು ಗುಬ್ಬಿ ಹಾಕಲಾರಂಭಿಸಿದರೆ ಬೀದಿಗೆ ಬೀದಿಯೇ ಅಲ್ಲಿ ಸೇರಿಬಿಡುತ್ತಿತ್ತು. ಜನ ನಾ ಮುಂದು ತಾ ಮುಂದು ಎಂದು ಐದರದೋ ಹತ್ತರದೋ ಕೆಲವರು ನೂರು ಇನ್ನೂರದೋ ನೋಟುಗಳಿಗೆ ಪಿನ್ನು ಚುಚ್ಚಿ ಜೋಯೀಷರು, ಸಂಗಡಿಗರ ಉಡುಪಿಗೆ ಸಿಕ್ಕಿಸಿ ಸಂಭ್ರಮಿಸುತ್ತಿದ್ದರು. ಒಟ್ಟಿನಲ್ಲಿ ಜೋಯೀಷರು ಭಜನಾ ಕಾರ್ಯಕ್ಕೆ ಒಂದು ವಿದಾಯ ಹೇಳುವುದರೊಳಗೆ ಐದರಿಂದ ಆರು ಸಾವಿರ ಹಣ ಜೇಬಿಗಿಳಿಸಿಬಿಡುತ್ತಿದ್ದರು. ಹಾಗಾಗಿ ಮಾರ್ಗಳ್ಳಿ ತಿಂಗಳು ಎಂದರೆ ಊರಿಗೊಂದು ಹಬ್ಬದ ಕಳೆ ಒಂದೆಡೆಯಾದರೆ ಜೋಯೀಷರ ಆದಾಯಕ್ಕೊಂದು ದಾರಿಯೂ ಆಗುತ್ತಿತ್ತು. ಇರೋ ಎರಡು ಎಕರೆ ಜಮೀನನ್ನು ಗುತ್ತಿಗೆಗೆ ಕೊಟ್ಟು ಒಂದು ಸಣ್ಣ ಪೆಟ್ಟಿ ಅಂಗಡಿ ಇಟ್ಟುಕೊಂಡಿದ್ದ ಜೋಯೀಷರ ಜೀವನ ನಿರ್ವಹಣೆ ಮತ್ತು ಅಂಗಡಿಗೆ ಸಾಮಾನು ಸರಂಜಾಮಿಗೆ ಈ ಭಜನೆಯಿಂದ ಬಂದ ದುಡ್ಡೇ ಆಶ್ರಯವಾಗಿತ್ತು.

ಚಿಕ್ಕಂದಿನಲ್ಲೇ ಹೆಂಡತಿ ಮಂಗಳಮ್ಮನ ಕಳೆದುಕೊಂಡಿದ್ದ ಜೋಯೀಷರಿಗೆ ಶಿವನಿಗೆ ಚಿಕ್ಕಂದಿನಿಂದಲೇ ಓದು ಬಿಡಿಸಲು ಒಂದು ಕಾರಣವೂ ಇತ್ತು. ಹೊಸದಾಗಿ ಬಂದಿದ್ದ ಮಾಸ್ತರೊಬ್ಬರು ಶಾಲೆಯಲ್ಲಿ ಹೊಡೆದರು ಎಂಬ ಕಾರಣಕ್ಕೆ ಒಂದು ದಿನ ಅವರಿಗೆ ನೀರು ತರಲು ಕಳುಹಿಸಿದರೆ ಅದಕ್ಕೆ ಶಿವ ತನ್ನ ಉಚ್ಚೆ ಬೆರಸಿಕೊಂಡು ಹೋಗಿ ಕೊಟ್ಟಿದ್ದನಂತೆ. ಇದನ್ನು ತಿಳಿದ ಮಾಸ್ತರ್, ಜೋಯೀಷರನ್ನು ಕರೆದು ಅವರ ಎದುರಿಗೇ ಅವನಿಗೆ ಮನಬಂದಂತೆ ಥಳಿಸಿದ್ದರು. ಅಂದೇ ಜೋಯೀಷರು ಶಿವನ ಓದಿನ ದಾರಿಗೆ ಒಂದು ವಿದಾಯದ ಚುಕ್ಕಿ ಇಟ್ಟು ಬಿಟ್ಟರು. ಹೇಗೋ ಅಂಗಡಿಯನ್ನು ನೋಡಿಕೊಂಡು ಮನೆಯಲ್ಲೇ ಇರು ಎಂದು ಅಂಗಡಿಯ ಜವಾಬ್ದಾರಿಯನ್ನು ಶಿವನಿಗೆ ವಹಿಸಿದ್ದರು. ಶಿವ ಕೆಲವು ವರ್ಷಗಳ ಕಾಲ ಅಂಗಡಿಯನ್ನೇ ನೆಚ್ಚಿಕೊಂಡು ಜೀವನ ನಡೆಸಿದ್ದ. ತಂದೆಯಿಂದ ಬಂದ ಬಳುವಳಿಯೋ ಎನ್ನುವಂತೆ ಚಿಕ್ಕಂದಿನಿಂದಲೇ ಹಾಡು, ಭಜನೆ ಇದನ್ನೆಲ್ಲಾ ಸರಾಗವಾಗಿ ಕಲಿತುಬಿಟ್ಟಿದ್ದ. ಹಾರ್ಮೋನಿಯಂ ಅನ್ನು ಜೋಯೀಷರಿಗಿಂತಲೂ ಸೊಗಸಾಗಿ ನುಡಿಸಲಾರಂಭಿಸಿದ್ದ. ಮಾರ್ಗಳ್ಳಿ ತಿಂಗಳಿನಲ್ಲಿ ಗುಂಪುಕಟ್ಟಿಕೊಂಡು ಭಜನೆ ಹಾಡುವುದು, ಗುಬ್ಬಿ ಹಾಕುವುದು ಅವನಿಗೆ ವೃತ್ತಿಯಾಯಿತು. ಕಾಲ ಕಳೆದಂತೆ ಭಜನೆಯಲ್ಲಿ ವಿಶೇಷವಾದ ಹೆಸರು ಗಳಿಸಿಬಿಟ್ಟ. ಊರಲ್ಲದೆ ಪಕ್ಕದ ಹಳ್ಳಿಗಳಲ್ಲೂ ಸಾವು, ನೋವು, ಹಬ್ಬಗಳಲ್ಲಿ ಇವನ ತಂಡ ಗೋಷ್ಠಿಗಳನ್ನು ನಡೆಸುತ್ತಿತ್ತು.

ಚಿಕ್ಕ ವಯಸ್ಸಿನಲ್ಲೇ ಊರಲ್ಲೆಲ್ಲಾ ಹೆಸರು ಮಾಡಿದ್ದ ಶಿವನ ವೈಯುಕ್ತಿಕ ಬದುಕು ಜೋಯೀಷರ ನಿದ್ದೆಗೆಡಿಸಿತ್ತು. ಅಂಗಡಿಯಲ್ಲಿ ತನ್ನದೊಂದು ಗುಂಪುಕಟ್ಟಿಕೊಂಡು ಇಸ್ಪೀಟು ಆಡುವುದು, ಆಗಾಗ್ಗೆ ಅಲ್ಲಿ ಇಲ್ಲಿ ಪಾರ್ಟಿ ಎಂದು ಎಣ್ಣೆ ಹೊಡೆಯುವುದು, ಅಂಗಡಿಗೆ ಬರುವ ವಯಸ್ಸಿನ ಹೆಣ್ಣು ಮಕ್ಕಳ ಜೊತೆ ಸಲ್ಲಾಪ ಆಡುವುದು ಇಂತಹದೇ ಕೆಲವು ಕೆಟ್ಟ ಚಟಗಳಿಗೆ ಶಿವ ದಾಸನಾಗಿ ಹೋಗಿದ್ದ. ಒಳಿತು ಕೆಡುಕು ಅವನ ಒಟ್ಟೊಟ್ಟಿಗೆ ಬೆರೆತು ಹೆಜ್ಜೆ ಹಾಕಲಾರಂಭಿಸಿದವು. ಸಭೆ ಸಮಾರಂಭಗಳಲ್ಲಿ ಭಜನೆ ಹಾಡುತ್ತಿದ್ದ ಶಿವ ಈಗ ಕೆಟ್ಟ ಕೆಟ್ಟ ಮಾತುಗಳನ್ನೂ ಆಡಲಾರಂಭಿಸಿದ್ದ. ಒಮ್ಮೊಮ್ಮೆ ರಾತ್ರಿಯೆಲ್ಲಾ ನಶೆಯೇರಿಸಿ ಬೆಳಿಗ್ಗೆ ಅಚ್ಚುಕಟ್ಟಾಗಿ ವಿಭೂತಿ ಹೊಡೆದು ಭಜನೆಗೆ ಅಣಿಯಾಗುತ್ತಿದ್ದ. ಯಾವ ಜನ ಶಿವನ ಹಾಡುಗಾರಿಕೆಗೆ ಉಘೇ ಎನ್ನುತ್ತಿದ್ದರೋ ಅವರೇ ಈಗಿನ ಅವನ ವರ್ತನೆಗೆ ಛೀಮಾರಿ ಹಾಕಲಾರಂಭಿಸಿದರು. 'ಭೂತದ ಬಾಯಲ್ಲಿ ಭಗವದ್ಗೀತೆ' ಎಂದು ಚುಚ್ಚಿ ಮಾತನಾಡಲಾರಂಭಿಸಿದರು. ತಾಯಿ ಇಲ್ಲದ ತಬ್ಬಲಿ ಎಂದು ಅತೀ ಪ್ರೀತಿ
ಕೊಟ್ಟು ಬೆಳೆಸಿದ್ದ ಜೋಯೀಷರು ಜನರೆದುರು ತಲೆ ಎತ್ತಿ ನಡೆಯಲಾಗದ ಸ್ಥಿತಿಗೆ ತಲುಪಿದ್ದರು. ಶಿವ ತನ್ನೊಳಗೇ ಹರಿಯಲಾರಂಭಿಸಿದ್ದ ಬೇಗುದಿಯೊಳಗೆ ತನಗೆ ಅರಿವಿಲ್ಲದಂತೆ ಬೇಯಲಾರಂಭಿಸಿದ್ದ.

ಊರು, ಅಂಗಡಿ, ಅಷ್ಟೇ ಏಕೆ ಸಾಕಿದ ಅಪ್ಪನೂ ಈಗ ಅವನಿಗೆ ವಿರೋಧಿಗಳಾಗಲಾರಂಭಿಸಿದರು. ತನ್ನದೇ ದಾರಿಯಲಿ ತಾನೇ ಎಳೆದುಕೊಂಡು ಹಾಕಿದ ಮುಳ್ಳುಗಳ ಮೇಲೆ ಶಿವ ತನಗರಿವಿಲ್ಲದೆ ಹೆಜ್ಜೆ ಹಾಕಲಾರಂಭಿಸಿದ್ದ. ಬದುಕು ಜಿಗುಪ್ಸೆಯಾಯಿತು. ಭಕ್ತಿಯ ಪರಕಾಷ್ಠೆಯಲ್ಲಿ ತೇಲುತ್ತಿದ್ದ ಅವನ ಹೃದಯವೀಗ ವಿಮುಖವಾಗತೊಡಗಿತು. ಏಕಾಂತ ಸುಡಲಾರಂಭಿಸಿತು. ಮಗನ ವಿಚಾರವಾಗಿ ಜೋಯೀಷರು ಚಿಂತಾಕ್ರಾಂತರಾಗಿ ದಿನೇ ದಿನೇ ಕುಗ್ಗತೊಡಗಿದರು. ಅಷ್ಟೋ ಇಷ್ಟೋ ಸಂಪಾದಿಸಿಕೊಡುತ್ತಿದ್ದ ಮಾರ್ಗಳ್ಳಿ ತಿಂಗಳ ಭಜನೆ, ಗುಬ್ಬಿ ಹಾಕುವ ಕಾಯಕಕ್ಕೆ ಶಿವನ ಹೊರತು ನೆನಸಿಕೊಳ್ಳಲು ಆಗದ ಸ್ಥಿತಿ ಜೋಯೀಷರಿಗೆ ಅಗಾಧವಾದ ಚಿಂತೆಯನ್ನುಂಟುಮಾಡಿತ್ತು.

ಶಿವನ ಬಾಲ್ಯ ಸ್ನೇಹಿತ ರಾಕೇಶ ಚಿಕ್ಕಂದಿನಿಂದ ಬೆಂಗಳೂರಿನಲ್ಲಿ ಬಣ್ಣ ಬಳಿಯುವ ಮೇಸರಿಯಾಗಿ ಸಂಪಾದನೆಯ ಜೊತೆಗೆ ಒಳ್ಳೇ ಹೆಸರನ್ನೂ ಮಾಡಿದ್ದ. ಊರಿನ ಅದೆಷ್ಟೋ ಅವಿದ್ಯಾವಂತ ಹುಡುಗರಿಗೆ ಬಣ್ಣ ಬಳಿಯುವ ಕೆಲಸ ನೀಡಿ ಉದ್ಯೋಗದಾತ ಆಗಿದ್ದ. ಬೆಂಗಳೂರಿನ ನಾಯಂಡನಹಳ್ಳಿಯಲ್ಲಿ ಬಣ್ಣದ ಮೇಸರಿ ರಾಕಿ ಎಂತಲೇ ಹೆಸರು ಮಾಡಿದ್ದ. ಅದನ್ನ ಅಷ್ಟೇ ಸೊಗಸಾಗಿ ಹೇಳಿಕೊಳ್ಳುತ್ತಿದ್ದ ಕೂಡಾ. ಯಾರಾದರು 'ಏನ್ ರಾಕೇಶಣ್ಣ ಬೆಂಗಳೂರಾಗೆ ಎಲ್ಲಪ್ಪ ನಿನ್ನ ಹುಡ್ಕೋದು ?' ಎಂದರೆ, 'ಹ್ಹೇ! ನಾಯಂಡಳ್ಳಿಗೆ ಬಂದು ಮೇಸರಿ ರಾಕಿ ಅಂದ್ರೆ ಸಾಕು, ಒಂದೊಂದ್ ಕಲ್ಲೂ ನನ್ ದಾರಿ ತೋರ್ಸ್ತವೆ' ಎಂದು ಬೀಗುತ್ತಿದ್ದ. ಇಡೀ ನಾಯಂಡಳ್ಳಿಯಲ್ಲಿ ನಿಜಕ್ಕೂ ಅಷ್ಟೇ ಹೆಸರುವಾಸಿಯಾಗಿದ್ದ.

ಮೊನ್ನೆ ಹಬ್ಬಕ್ಕೆ ಊರಿಗೆ ಬಂದಿದ್ದ ರಾಕೇಶನಿಗೆ ಶಿವ ಕಣ್ಣಿಗೆ ಬಿದ್ದ, ಊರಲೆಲ್ಲಾ ಭಜನೆಯಲ್ಲಿ ಹೆಸರುಗಳಿಸಿದ್ದ ಅವನ ಈಗಿನ ಸ್ಥಿತಿ ಕಂಡು ಅವನಿಗೂ ಮರುಕ ಉಂಟಾಯಿತು. ಅವನಿಗಿಂತಲೂ ಜೋಯೀಷರ ಅಸಹಾಯಕ ಸ್ಥಿತಿ ಕಂಡು ರಾಕೇಶ ಮಮ್ಮುಲ ಮರುಗಿದ್ದ. ಇಲ್ಲ, ಇವನನ್ನು ಈ ಊರು ಬಿಡಿಸಿ ಹೇಗಾದರು ಬೆಂಗಳೂರಿಗೆ ಕರೆದುಕೊಂಡು ಹೋಗಿ ಬಣ್ಣ ಬಳಿಯುವ ಕೆಲಸಕ್ಕೆ ಹಾಕಿ ಜೀವನಕ್ಕೆ ಒಂದು ದಾರಿ ರೂಪಿಸಬೇಕೆಂದುಕೊಂಡು ಜೋಯೀಷರನ್ನು ಭೇಟಿ ಮಾಡಿ ವಿಷಯ ಮುಟ್ಟಿಸಿದ. ಅವರಿಗೂ ಇಲ್ಲಿ ಹೀಗೆ ಅವನು ಹಾಳಾಗುವುದಕಿಂತ ದೂರದಲ್ಲಿ ನೆಮ್ಮದಿಯಾಗಿರಲಿ ಎನಿಸಿ ಅವನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ಅನುಮತಿ ನೀಡಿದರು. ಆದರೆ, ಅಷ್ಟು ಸುಲಭಕ್ಕೆ ಶಿವನನ್ನು ಕರೆದುಕೊಂಡು ಹೋಗುವುದು ಅಸಾಧ್ಯ ಎಂದು ತಿಳಿದ ರಾಕೇಶ ಅವನನ್ನು ಮನೆಗೆ ಕರೆಸಿ, ತಿಳಿಯಾಗಿ ಬುದ್ಧಿ ಹೇಳಿದ. ದಿನಕ್ಕೆ ಮಾಡಬಹುದಾದ ಸಂಪಾದನೆಯ ಲೆಕ್ಕ ಹೇಳಿ ಹೇಗೋ ಅವನ ಮನ ಪರಿವರ್ತಿಸಿ ಮಾರನೆ ದಿನವೇ ಬೆಂಗಳೂರಿಗೆ ಹೊರಡಲು ಅಣಿ ಮಾಡಿದ. ಒಲ್ಲದ ಮನಸ್ಸಿನಲ್ಲೇ ಬಟ್ಟೆ ಬರೆ ಸಿದ್ಧ ಮಾಡಿಕೊಂಡು ಅಪ್ಪನ ಕಾಲಿಗೆರಗಿ ಆಶೀರ್ವದಿಸುವಂತೆ ಕೇಳಿದ ಶಿವ. ಒಬ್ಬನೇ ತಬ್ಬಲಿ ಮಗನನ್ನು ಬಿಟ್ಟು ಒಂಟಿ ಮನೆಯಲ್ಲಿ ಒಬ್ಬಂಟಿಯಾಗಿ ಕಾಲ ಕಳೆಯುವ ಯೋಚನೆ ಒಮ್ಮೆಗೆ ಬಂದರೂ ಜೋಯೀಷರು ದುಃಖವನ್ನು ಹಿಡಿದು ತಲೆಯ ಮೇಲೆ ಕೈ ಇಟ್ಟು ಹೋಗಿ ಬಾ ಮಗನೆ ಎನ್ನುತ್ತಿದ್ದಂತೆ ಶಿವನ ಕಣ್ಣಿನಿಂದ ಬಿದ್ದ ನೀರು ಜೋಯೀಷರ ಪಾದ ಮುಟ್ಟುತ್ತಿತ್ತು.

ಮಾರನೆ ದಿನ ಬಸ್ಸು ಹತ್ತಿ ರಾಕೇಶನ ಜೊತೆಗೆ ಶಿವ ಬೆಂಗಳೂರಿನತ್ತ ನಡೆದ. ಕಲೆ ಎಲ್ಲರನ್ನು ಕೈ ಬೀಸಿ ಕರೆಯುವಂತೆ ಬೆಂಗಳೂರು ಎಲ್ಲರನ್ನು ಕೈ ಬೀಸಿ ಕರೆಯುತ್ತದೆ. ಕಲೆಯಂತೇ ಬೆಂಗಳೂರು ಕೂಡಾ ಕೆಲವರನ್ನಷ್ಟೇ ಆಯ್ಕೆ ಮಾಡಿ ಉಳಿಸಿಕೊಳ್ಳುತ್ತದೆ. ಎಲ್ಲೂ ಸಲ್ಲದವರೂ ಇಲ್ಲಿ ಸಲ್ಲುವಂತೆ ಈ ಊರು ಎಷ್ಟೋ ಬಡ ಹೊಟ್ಟೆಗಳಿಗೆ ಅನ್ನ ನೀಡುತ್ತದೆ. ಹಾಗೆಯೇ ಶಿವನ ಬದುಕಿಗೂ ಒಂದು ದಾರಿ ತೋರಬೇಕಾದ್ದು ಇದೇ ಬೆಂಗಳೂರು. ಶಿವನು ನಾಯಂಡನಹಳ್ಳಿ ತಲುಪುವ ಷ್ಟರಲ್ಲಿ ತನ್ನ ಸ್ನೇಹಿತನಿಗೆ ಹೇಳಿ ರಾಕೇಶ ಒಂದು ಚಿಕ್ಕ ಶೀಟಿನ ಮನೆಯನ್ನು ಬಾಡಿಗೆಗೆ ತಯಾರು ಮಾಡಿದ್ದ. ಗಲ್ಲಿಯ ವಠಾರದಲ್ಲಿ ಏಳೆಂಟು ಮನೆಗಳಿಗೆ ಇದ್ದುದು ಒಂದೇ ಒಂದು ಟಾಯ್ಲೆಟ್. ಆಧಾರ್ ಕಾರ್ಡಿಗಾಗಿ ಕ್ಯೂ ನಿಲ್ಲುವಂತೆ ಜನರು ಬೆಳಿಗ್ಗೆ ಟಾಯ್ಲೆಟ್‌ ಹೋಗಲು ಸಾಲಿನಲ್ಲಿ ನಿಂತಿರುತ್ತಿದ್ದರು. ಬೆಂಗಳೂರು ಜೀವನ ಏನೆಲ್ಲಾ ಕಲಿಸುತ್ತದೆ. ಆದರೂ ಶಿವನು ಬೆಂಗಳೂರಿನ ಜೀವನಕ್ಕೆ ಹೊಂದಿಕೊಳ್ಳಲು ಪರದಾಡಲಾರಂಭಿಸಿದ.

ರಾಕೇಶನ ಪರಮ ಶಿಷ್ಯ ಪರಮೇಶ. ಅವನು ಆರ್ಡರ್‌ಗಳನ್ನು ತೆಗೆದುಕೊಂಡು ಪರಮೇಶನಿಗೆ ಬಿಲ್ಡಿಂಗುಗಳನ್ನು ಒಪ್ಪಿಸಿ ಬಿಟ್ಟರೆ ಆಳುಗಳನ್ನು ಕಟ್ಟಿಕೊಂಡು ಅವನು ಕೆಲಸ ಮುಗಿಸುತ್ತಿದ್ದ. ನಂತರ ವಾರಕ್ಕೊಮ್ಮೆ ರಾಕೇಶ ಆಳುಗಳಿಗೆ ಲೆಕ್ಕ ಕಳೆಯುತ್ತಿದ್ದ. ಪರಮೇಶನ ಜೊತೆ ಬಣ್ಣ ಬಳಿಯಲು ಹೋಗುವಂತೆ ರಾಕೇಶ ಶಿವನಿಗೂ ಆದೇಶಿಸಿದ್ದ. ಜೊತೆಗೆ ಒಂದು ಬ್ಯಾಗನ್ನು ನೀಡಿ ಅದರಲ್ಲಿ ಒಂದಷ್ಟು ಬ್ರಶ್ಶುಗಳನ್ನು ಕೊಟ್ಟು 'ಬೇಗ ಕೆಲ್ಸ ಕಲುತ್ಕೊ ಶಿವ, ಎಲ್ಲ ಪರಮೇಶ ಹೇಳ್ಕೊಡ್ತಾನೆ, ಅವ ಹೆಂಗ್ ಹೇಳ್ತಾನೋ ಅಂಗ್ ಕೇಳು' ಎಂದು ಬುದ್ಧಿ ಹೇಳಿ ಕಳುಹಿಸಿದ್ದ.

ಅತ್ತಿಬೆಲೆಯಲ್ಲಿ ಕಾಂಟ್ರಾಕ್ಟ್ ಪಡೆದಿದ್ದ ಅಪಾರ್ಟ್‌ಮೆಂಟ್‌ ಒಂದಕ್ಕೆ ಪರಮೇಶ ಶಿವನನ್ನು ಕರೆತಂದ. ಅವನೊಟ್ಟಿಗೆ ಕೆಲಸ ಮಾಡುತ್ತಿದ್ದ ಆಳುಗಳು ಅದಾಗಲೆ ಕಂಬಗಳನ್ನು ಕಟ್ಟಿ, ಮೇಲಿನಿಂದ ಹಗ್ಗಗಳನ್ನು ಇಳಿಬಿಟ್ಟು ನೇತುಕೊಂಡು ಬಣ್ಣ ಬಳಿಯುತ್ತಿದ್ದರು. ಈ ದೃಶ್ಯ ಶಿವನ ಎದೆಯಲ್ಲಿ ಒಮ್ಮೆಗೆ ಝಲ್ ಎನ್ನಿಸಲಾರಂಭಿಸಿತು. ಅಷ್ಟು ಎತ್ತರದಿಂದ ಹಗ್ಗದಲ್ಲಿ ನೇತಾಡಿಕೊಂಡು ಬಣ್ಣ ಬಳಿಯುವುದು ಅಸಾಧ್ಯವೆನಿಸಿತು. ಇಲ್ಲ ನನ್ನಿಂದ ಈ ಕೆಲಸ ಆಗುವುದಿಲ್ಲ. ಅಲ್ಲಿಂದ ಒಂದು ಚೂರು ಆಯ ತಪ್ಪಿದರೆ ಕಥೆಯೇ ಮುಗಿಯಿತು ಎಂದು ಅವಲತ್ತುಕೊಂಡ. ಹೇಗೋ ಸ್ವಲ್ಪ ದಿನ ಹೊಂದಿಕೊಳ್ಳಲಿ ಎಂದು ಪರಮೇಶ ಅವನಿಗೆ ಬಣ್ಣ ಬಳಿಯುವ ಕೆಲಸದ ಬದಲು ಕೆಳಗೆ ನಿಂತು ಬಣ್ಣ ಮಿಕ್ಸ್ ಮಾಡುವ ಕೆಲಸ ಮಾಡಲಿ ಎಂದು ನೇಮಿಸಿದ್ದ. ಯಾವ ಬಣ್ಣಕ್ಕೆ ಯಾವ ಬಣ್ಣ ಏನೂ ಎತ್ತ ಏನೂ ಅರಿಯದ ಶಿವ ಅದರಲ್ಲೂ ತಡಕಾಡಲಾರಂಭಿಸಿದ್ದ. ಇನ್ನು ಈ ಕೆಲಸವೂ ಆಗದಿದ್ದರೆ ರಾಕೇಶನ ಕೆಂಗಣ್ಣಿಗೆ ಗುರಿ ಆಗಬೇಕಾದಿತು ಎಂದುಕೊಂಡು ಹೇಗೋ ಆ ಬಣ್ಣದೊಂದಿಗೆ ಈ ಬಣ್ಣದೊಂದಿಗೆ ಮಿಕ್ಸ್ ಮಾಡಿ ಅಂದಿನ ಕೆಲಸ ಮುಗಿಸಿದ್ದ.

ಅಪಾರ್ಟ್‌ಮೆಂಟ್‌ನ ಓನರ್ ರಾಜೇಂದ್ರ ಅಂದು ವೀಕ್ಷಣೆಗೆಂದು ಬಿಲ್ಡಿಂಗ್ ಹತ್ತಿರ ಬಂದಿದ್ದರು. ರಾಕೇಶನು ಅವರೊಟ್ಟಿಗೆ ಹಾಜರಾಗಿದ್ದ. ಪರಮೇಶ ಆಳುಗಳನ್ನು ಕಟ್ಟಿಕೊಂಡು ಬಣ್ಣ ಬಳಿಸುತ್ತಿದ್ದ. ರಾಕೇಶ ಶಿವನನ್ನು ಕರೆದು ಅವನ ವೃತ್ತಾಂತವನ್ನೆಲ್ಲಾ ವಿವರಿಸಿ, ಈಗ ಕೆಲಸ ಕಲಿಯುತ್ತಿದ್ದಾನೆ ಎಂದು ಪರಿಚಯಿಸಿದ. ಯಾವ ಜನ್ಮದ ಋಣವೋ ತನ್ನ ಅಣ್ಣನಂತೆ ನನ್ನನ್ನು ಸಲಹುತ್ತಿರುವ ರಾಕೇಶನ ಮೇಲೆ ಶಿವನಿಗೆ ಇನ್ನಿಲ್ಲದ ಗೌರವ ಶುರುವಾಯಿತು. ತಾವಾಯಿತು ತಮ್ಮ ಪಾಡಾಯಿತು ಎಂದು ಇನ್ನೊಬ್ಬರ ಬಗ್ಗೆ ಕಿಂಚಿತ್ತೂ ಯೋಚಿಸದ ಜಗತ್ತಿನಲ್ಲಿ ರಾಕೇಶ ದೇವರಂತೆ ಕಾಣಲಾರಂಭಿಸಿದ. ತಮ್ಮನಂತೆ ಪ್ರೀತಿ ತೋರುವ ರಾಕೇಶ ಶಿವನಿಗೆ ವಿಶೇಷ ವ್ಯಕ್ತಿಯಾಗಿ ಕಾಣಲಾರಂಭಿಸಿದ.

ಮಧ್ಯಾಹ್ನ ಮೀರಿತ್ತು. ರಾಜೇಂದ್ರ ಶಿವನನ್ನು ಕರೆದು ಕುಡಿಯಲು ನೀರು ತರುವಂತೆ ಆದೇಶಿಸಿದ. ಶಿವ ಸೀದಾ ಅಪಾ ರ್ಟ್‌ಮೆಂಟ್‌ನ ಒಳಹೊಕ್ಕವನೆ ಮೂಲೆಯಲ್ಲಿ ಜೋಡಿಸಿದ್ದ ಒಂದು ಬಾಟಲಿಯನ್ನು ಎತ್ತುಕೊಂಡು ಓಡಿ ಬಂದು ರಾಜೇಂದ್ರನ ಕೈಗಿತ್ತ. ಯಾವುದೋ ಮಾತುಕತೆಯಲ್ಲಿದ್ದ ಓನರ್ ಮುಚ್ಚಳ ತೆಗೆದು ಗಟಗಟನೆ ಕುಡಿದ. ಕುಡಿದ ಘಳಿಗೆಯಲ್ಲೆ ಅದರ ವಾಸನೆಗೆ ರಾಜೇಂದ್ರ ವಾಂತಿ ಮಾಡಲಾರಂಭಿಸಿದ. ತಡಮಾಡದೆ ಎದ್ದು ಶಿವನ ಕೆನ್ನೆಗೆ ರಪ್ ಎಂದು ಬಡಿದ. ಬಡಿದ ಸದ್ದಿಗೆ ಎಲ್ಲರೂ ಓಡಿ ಬಂದರು. ಶಿವನಿಗೆ ದಿಕ್ಕೇ ತೋಚದಂತಾಯಿತು. ತಾನು ಮಾಡಿದ ತಪ್ಪಾದರು ಏನು? ಅವನು ಏಕೆ ತನ್ನ ಕೆನ್ನೆಗೆ ಬಡಿದ? ಪ್ರಶ್ನೆ ಪಟ್ಟನೆ ಉತ್ಪತ್ತಿಯಾಯಿತು. ದಿಢೀರನೆ ಓಡಿ ಬಂದ ರಾಕೇಶ ಅವರ ಕೈಯ್ಯಲ್ಲಿದ್ದ ಬಾಟಲಿಯನ್ನು ನೋಡಿ... 'ಹೇ ಎಂಥಾ ಕೆಲ್ಸ ಮಾಡ್ದೊಲೇ, ಅದು ನೀರಲ್ಲ ಮಾರಾಯ ಬಣ್ಣಕ್ಕೆ ಮಿಕ್ಸ್ ಮಾಡೋ ಟಿನ್ನರ್' ಎಂದ. ಎಂದೂ ಕಣ್ಣಿಂದಲೂ ನೋಡಿರದ ಶಿವನಿಗೆ ತನ್ನ ಒಂದು ಸಣ್ಣತಪ್ಪು ಎಂಥಾ ಒಂದು ಅನಾಹುತ ಸೃಷ್ಟಿಸಿಬಿಟ್ಟಿತು ಎಂಬುದು ಈಗ ಅರಿವಿಗೆ ಬಂತು. 'ತಪ್ಪಾಯ್ತು ಅಣ್ಣ ಗೊತ್ತಾಗ್ಲಿಲ್ಲ' ಎನ್ನುವಷ್ಟರಲ್ಲಿ 'ನೀರ್ ಯಾವ್ದೂ, ಟಿನ್ನರ್ ಯಾವ್ದು ಅಂತ ಗೊತ್ತಿಲ್ದಿರೋ ಬಡ್ಡೇತ್ತೋವ್ನೆಲ್ಲಾ ಕೆಲ್ಸಕ್ಕರ್ಕೊ ಬತ್ತೀರಲ್ರಿ ರಾಕೇಶ್, ಮೊದ್ಲು ಈ ಲೋಫರ್ನ ಕೆಲಸದಿಂದ ಕಿತ್ತಾಕ್ರಿ' ಎಂದು ರಾಜೇಂದ್ರ ಅಬ್ಬರಿಸಲಾರಂಭಿಸಿದ್ದ. ಶಿವ ಎಂದು ಮೊದಲು ಶುರುಮಾಡಿದ ಕೆಲಸವೆ ಶಿವನಿಗೆ ಮುಖಭಂಗ ಮಾಡಿತ್ತು. ಯಾವ ಊರು ತನಗೆ ಕೆಲಸ ನೀಡುತ್ತದೆ, ಸಲಹಿಟ್ಟುಕೊಳ್ಳುತ್ತದೆ ಎಂದು ಶಿವ ನೂರು ಆಸೆ ಕಟ್ಟಿಕೊಂಡಿದ್ದನೋ ಅದರ ಮೊದಲ ಭಾಗವೇ ವೈಫಲ್ಯವಾಗಿ ಹೋಗಿತ್ತು.ಶಿವ ಈಗ ಕೆಲಸವಿಲ್ಲದೆ ಮನೆ ಕಾಯುವ ಸ್ಥಿತಿಯಲ್ಲಿ ತನ್ನ ಕೋಣೆಯಲ್ಲಿ ದಿನ ಕಳೆಯಲಾರಂಭಿಸಿದ್ದ.

'ಮಹದೇಶ್ವರ ಕಲಾ ಸಂಘ' ಎಂಬ ಒಂದು ಸಣ್ಣ ಸಂಘವನ್ನು ಸ್ಥಾಪಿಸಿಕೊಂಡು ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಆಗಾಗ್ಗೆ ಸಣ್ಣ ಪುಟ್ಟ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ ನೀಲಕಂಠಪ್ಪನ ಪರಿಚಯ ಶಿವನಿಗೆ ಹೇಗೋ ಆಯಿತು. ಹಾಡುಗಾರಿಕೆಯ ಒಂದು ತಂಡವನ್ನಿಟ್ಟುಕೊಂಡು ನೀಲಕಂಠಪ್ಪ ವಾದ್ಯಗೋಷ್ಠಿ, ಹಾಡಿನಗೋಷ್ಠಿಗಳನ್ನ ನಡೆಸುತ್ತಿದ್ದ. ಹಾರ್ಮೋನಿಯಂ ಅನ್ನು ಲೀಲಾಜಾಲವಾಗಿ ನುಡಿಸುತ್ತಿದ್ದ, ಅಷ್ಟೇ ಸೊಗಸಾಗಿ ಭಜನಾ ಗೀತೆಗಳನ್ನು ಹಾಡುತ್ತಿದ್ದ, ಕಂಸಾಳೆ ಹಿಡಿದು ಗುಬ್ಬಿ ಹಾಕುತ್ತಿದ್ದ ಶಿವನ ಕಲೆ ನೀಲಕಂಠಪ್ಪನನ್ನು ಬಹುಬೇಗ ಆಕರ್ಷಿಸಿತು. ಅಷ್ಟೇ ವೇಗವಾಗಿ ಶಿವ ಮಹದೇಶ್ವರ ಕಲಾ ಸಂಘದ ಸದಸ್ಯನಾದ. ಬೆಂಗಳೂರಿನ ಸುತ್ತ ಮುತ್ತಲ ಏರಿಯಾಗಳಲ್ಲಿ ಶಿವನ ಹಾಡುಗಾರಿಕೆ ಪ್ರಸಿದ್ಧಿಯಾಗಿ ಹೋಯಿತು. ಭಜನೆ ಗೀತೆಗಳ ಜೊತೆ ಜಾನಪದಗೀತೆ, ಭಕ್ತಿಗೀತೆ, ಜೊತೆಗೆ ಹರಿಕಥೆ ಹಾಡುವುದನ್ನು ಶಾಸ್ತ್ರಿಗಳು ಶಿವನಿಗೆ ಅಭ್ಯಾಸ ಮಾಡಿಸಿದರು. ದಿನಕಳೆಯುವುದರೊಳಗೆ ಶಿವ ಪ್ರಸಿದ್ಧ ಗಾಯಕನಾಗಿ ನಾಯಂಡನಹಳ್ಳಿಯಲ್ಲಿ ಗೌರವಾನ್ವಿತ ವ್ಯಕ್ತಿಯಾಗಿ ಹೋದ.

ಶಾಸ್ತ್ರಿಗಳ ಒಬ್ಬಳೇ ಮಗಳು ಪ್ರೇಮ. ಅವಳನ್ನು ತಲಘಟ್ಟಪುರದಲ್ಲಿ ವಾಸವಿದ್ದ ಕೃಷ್ಣನಿಗೆ ಮದುವೆ ಮಾಡಿಕೊಡಲಾಗಿತ್ತು. ಕೃಷ್ಣ ಅಗರಬತ್ತಿ ವ್ಯಾಪಾರಿಯಾಗಿದ್ದ .ಆಗಾಗ್ಗೆ ಬೇರೆ ಬೇರೆ ಊರುಗಳಿಗೆ ಅಗರಬತ್ತಿ ಮಾರಾಟಕ್ಕೆಂದು ಹೊರಟು ಹೋಗುತ್ತಿದ್ದ. ಅವನ ಅನುಪಸ್ಥಿತಿಯಲ್ಲಿ ಪ್ರೇಮ ಅಪ್ಪನ ಮನೆಯಲ್ಲಿ ವಾಸ್ತವ್ಯ ಹೂಡುತ್ತಿದ್ದಳು. ಆಗಿಂದಾಗ್ಗೆ ಶಾಸ್ತ್ರಿಯವರ ಮನೆಗೆ ಭೇಟಿ ನೀಡುತ್ತಿದ್ದ ಶಿವ ಪ್ರೇಮಳತ್ತ ಬಹು ಬೇಗನೆ ಆಕರ್ಷಿತನಾಗಿದ್ದ. ಇವನ ಹಾಡುಗಾರಿಕೆ ಪ್ರಸಿದ್ಧಿಗೆ ಪ್ರೇಮಳೂ ಇವನ ಮೇಲೆ ಮೋಹಗೊಂಡಳು, ಒಮ್ಮೊಮ್ಮೆ ಶಾಸ್ತ್ರಿಗಳಿಗೆ ಗೊತ್ತಾಗದ ಹಾಗೆ ಶಿವ ಪ್ರೇಮಳನ್ನು ಹೊರಗೆ ಕರೆದುಕೊಂಡು ಹೋಗಿ ಸುತ್ತಾಡಿ ಬರುತ್ತಿದ್ದ. ಈ ವಿಷಯ ಗುಟ್ಟಾಗೇನು ಉಳಿದಿರಲಿಲ್ಲ. ಹೀಗೆ ಮದುವೆಯಾಗದವನ ಜೊತೆಗೆ ಪ್ರೇಮ ಸುತ್ತಾಡುವುದು ಸುತ್ತಮುತ್ತಲಿನವರ ಬಾಯಿಗೆ ಆಹಾರವಾಗಿತ್ತು. ಇದೇ ವಿಷಯ ಶಾಸ್ತ್ರಿಯವರಿಗೂ ತಿಳಿದು ಒಮ್ಮೆ ಶಿವನಿಗೂ ಶಾಸ್ತ್ರಿಗಳಿಗೂ ಸಣ್ಣ ಮಾತುಕತೆಯೂ ನಡೆದಿತ್ತು. ಅಂದಿನಿಂದ ಶಾಸ್ತ್ರಿಗಳು ತಮ್ಮ ಮನೆಗೆ ಕಾಲಿಡದಂತೆ ಶಿವನಿಗೆ ಬಯ್ದು ಕಳಿಸಿದ್ದರು. ಆದರೂ ಕದ್ದು ಮುಚ್ಚಿ ಶಿವ ಪ್ರೇಮಳ ಜೊತೆ ಸುತ್ತಾಡಲಾರಂಭಿಸಿದ್ದ. ಈ ವಿಷಯ ಕಿವಿಗೆ ಬಿದ್ದ ರಾಕೇಶ ಶಿವನಿಗೆ ಬುದ್ದಿ ಹೇಳಿದ್ದ. ಯಾವ ತಂದೆ ಊರಲ್ಲಿ ಭಜನೆ ಮಾಡಿಕೊಂಡು ಮರ್ಯಾದೆಯಿಂದ ಬದುಕುತ್ತಿದ್ದಾರೋ ಅವರ ಮಾನವನ್ನಾದರೂ ಉಳಿಸು ಎಂದು ಅವಲತ್ತಿದ್ದ. ಆದರೆ ಮೋಹದಲ್ಲಿದ್ದ ಶಿವನಿಗೆ ಇದು ಕಿವಿ ತಾಕಲಿಲ್ಲ. ದಿನಕಳೆದಂತೆ ವಿಷಯ ಕೃಷ್ಣನಿಗೆ ಮುಟ್ಟಲು ಹೆಚ್ಚಿನ ಸಮಯವೇನೂ ಬೇಕಾಗಲಿಲ್ಲ. ಒಮ್ಮೆ ಶಿವನ ಮನೆಗೆ ಬಂದು ಬಾಯಿಗೆ ಬಂದಂತೆ ಬೈದಿದ್ದ. ಪರಿಸ್ಥಿತಿ ನೆಟ್ಟಗಿರಲಾರದು ಎಂದು ವಾರ್ನ್ ಮಾಡಿಯೂ ಹೋಗಿದ್ದ.

ಮಾರ್ಗಳ್ಳಿ ತಿಂಗಳು ಸಮೀಪಿಸುತ್ತಿದ್ದಂತೆ ಜೋಯೀಷರಿಗೆ ಭಜನೆಗೆ ತನ್ನ ಮಗನ ಉಪಸ್ಥಿತಿಯ ಅರಿವಾಗತೊಡಗಿತು. ಬೆಂಗಳೂರಿಗೆ ಹೋದ ತನ್ನ ಮಗ ಏನಾದ? ಏನು ಮಾಡುತ್ತಿದ್ದಾನೆ? ಎಂಬುದು ತಿಳಿಯದ ಜೋಯೀಷರು ಊರಿಗೆ ಬಂದಿದ್ದ ರಾಕೇಶನನ್ನು ಭೇಟಿ ಮಾಡಿ ಮಾರ್ಗಳ್ಳಿ ತಿಂಗಳು ಮಾತ್ರ ಅವನನ್ನು ಊರಿಗೆ ಕಳುಹಿಸಿಕೊಡುವಂತೆ ಕೇಳಿಕೊಂಡರು. ಹೇಗಾದರೂ ಮಾಡಿ ಅವನನ್ನು ಊರಿಗೆ ಕಳುಹಿಸುವುದೇ ಮೇಲು ಎಂದುಕೊಂಡು 'ಇಲ್ಲ ತಾತ ಅವ್ನಿಗೂ ಅಲ್ಲಿ ಯಾವುದೇ ಕೆಲಸ ಅಡ್ಜೆಸ್ಟ್ ಆಗ್ತಿಲ್ಲ. ನಾಳೆನೆ ಹೋಗಿ ಅವ್ನ ಊರಿಗ್ ಕಳಸ್ತೇನೆ. ಯೋಚ್ನೆ ಮಾಡ್ಬೇಡಿ' ಎಂದು ಸಾಗಹಾಕಿದ್ದ. ಮಾರನೆಗೆ ಶಿವನನ್ನು ಭೇಟಿ ಮಾಡಿ ಮನೆ ಖಾಲಿ ಮಾಡಿ ಊರು ಸೇರುವಂತೆ ತಿಳಿ ಹೇಳಿದ. ಅಪ್ಪನ ಅಸಹಾಯಕತೆ, ಏರುತ್ತಿರುವ ವಯಸ್ಸು ಕುರಿತಾಗಿ ರಾಕೇಶ ಹೇಳಿ ಆತನನ್ನು ಮನೆ ಖಾಲಿ ಮಾಡುವಂತೆ ತಿಳಿಸಿ ಹೋಗಿದ್ದ.ಶಿವ ಇದ್ಯಾವುದರ ಪರಿವೆ ಇಲ್ಲದಂತೆ ಆ ದಿನವೂ ತಲಗಟ್ಟಪುರಕ್ಕೆ ಹೋಗಿ ಬಂದಿದ್ದ. ಈ ಸುದ್ದಿ ಕೃಷ್ಣನಿಗೂ ತಿಳಿದು ದೊಡ್ಡ ರಂಪವೇ ಆದ ವಿಷಯ ನಾಯಂಡಹಳ್ಳಿಯ ಮನೆಮನೆಯಲ್ಲೂ ಹರಿದಾಡತೊಡಗಿತ್ತು.

ಆದಿನ ಬೆಳಿಗ್ಗೆ ಮನೆ ಖಾಲಿ ಮಾಡಿಸಿ ಹೇಗಾದರೂ ಶಿವನನ್ನು ಊರಿಗೆ ಅಟ್ಟಬೇಕೆಂದು ರಾಕೇಶ ಶಿವನ ಮನೆಯತ್ತ ಬಂದ.

ಬೆಳಕು ಹರಿದು ತಾಸಾದರೂ ಬಾಗಿಲು ತೆರೆಯದಾಗಿತ್ತು. ರಾಕೇಶ ಎಷ್ಟು ಕೂಗಿದರೂ ಎಷ್ಟು ಬಡಿದರೂ ಮುಚ್ಚಿದ್ದ ಬಾಗಿಲ ಚಿಲಕ ತೆರೆಯಲೇ ಇಲ್ಲ. ಗಾಬರಿಯಾದ ರಾಕೇಶ ರಪರಪನೆ ಮೇಲೆ ಹತ್ತಿದವನೇ ಹೊದಿಸಿದ್ದ ಶೀಟು ಹೊಡೆದು ಇಣುಕಿ ನೋಡಿದ. ಕಣ್ಣು ಕಟ್ಟಿ ಮಂಜೆನಿಸಿದಂತಾಯಿತು. ಫ್ಯಾನಿನ ರೆಕ್ಕೆಗಳಿಗೆ ಬಿಗಿದ ಹಗ್ಗದಲ್ಲಿ ಶಿವ ನೇತಾಡತೊಡಗಿದ್ದ. ಬದುಕು ಕಟ್ಟಿಕೊಳ್ಳಲಿ ಎಂದು ಯಾರನ್ನು ಆತ ಬೆಂಗಳೂರಿಗೆ ಕರೆ ತಂದನೋ ಆತ ಈಗ ಹೆಣವಾಗಿ ನೇತಾಡುವ ದೃಶ್ಯ ಅವನ ಕಣ್ಣಾಲಿಗಳ ತೇವವಾಗಿಸಿತ್ತು. ಕೃಷ್ಣನೇ ಈತನನ್ನು ಕೊಂದಿರಬೇಕೆಂಬ ಗುಮಾನಿ ಇದ್ದರೂ ಏರಿಯಾದಲ್ಲೆಲ್ಲಾ ಶಿವ ಆತ್ಮಹತ್ಯೆ ಮಾಡಿಕೊಂಡನೆಂಬ ಸುದ್ದಿಯನ್ಧು ಸರಾಗವಾಗಿ ಹರಿಬಿಡಲಾಗಿತ್ತು.

ಇತ್ತ ಜೋಯಿಷರು ಮಗ ಬರುತ್ತಾನೆ ಎಂದು ಮಾರ್ಗಳ್ಳಿಯ ಭಜನೆಗೆ ಬೇಕಾದ ಹಾರ್ಮೋನಿಯಂ, ತಬಲ, ತಾಳಗಳನ್ನೆಲ್ಲಾ ತೊಳೆದು ಸ್ವಚ್ಚಗೊಳಿಸುತ್ತಿದ್ದರು. ಅಷ್ಟರಲ್ಲೇ ಆಂಬುಲೆನ್ಸಿನ ಸೈರನ್ ಸದ್ದು ಮಾಡುತ್ತಾ ಬರುತ್ತಿದ್ದಂತೆ ಶಿವ ಸತ್ತ ಸುದ್ದಿ ಊರೆಲ್ಲಾ ವ್ಯಾಪಕವಾಗಿ ಹಬ್ಬಿತು. ಯಾವ ಮಗ ಮಾರ್ಗಳ್ಳಿಗೆ ಮತ್ತೆ ಬರುವೆನೆಂದು ಹೋದನೋ ಅವನು ಈಗ ಹೆಣವಾಗಿ ಮನೆ ಅಂಗಳಕ್ಕೆ ಬಂದದ್ದು ಜೋಯೀಷರ ಎದೆಯನ್ನೇ ಹೊಡೆದು ಹಾಕಿತ್ತು. ಕತ್ತಲಿನಲಿ ಗುಲಾಬಿಯೊಂದು ಎಣ್ಣೆಯಲಿ ಬೇಯುವಂತೆ ಜೋಯೀಷರ ಕಣ್ಣುಗಳಲ್ಲಿ ಶಿವನ ಹೆಣದ ಬಿಂಬಗಳು ಕಾಣತೊಡಗಿದವು. ಅಪ್ಪನಾದವನಿಗೆ ಮಗನ ಹೆಣಕ್ಕೆ ಹೆಗಲು ಕೊಡುವುದಕ್ಕಿಂತ ದೊಡ್ಡ ಪಾಪ ಯಾವುದು ಇರಲಾರದಂತೆ. ಜೋಯೀಷರು ಅದೇ ದುಃಖದಲಿ ಶಿವನ ಚಿತೆಗೆ ಬೆಂಕಿ ಇಟ್ಟರು. ಬೆಂಕಿಯ ಜ್ವಾಲೆಗಳು ಆಕಾಶವನ್ನೆ ನುಂಗುವವೋ ಎನ್ನುವ ಹಾಗೆ ತಮ್ಮ ಕಬಂದ ಬಾಹುಗಳ ಚಾಚುತ್ತಿದ್ದರೆ 'ಯಾರಿಗೆ ಯಾರಿಲ್ಲ ಲಿಂಗಾವೆ ನಮಗ್ಯಾರಿದ್ದರೇನಯ್ಯ ಲಿಂಗಾವೆ' ಎಂದು ಹಾಡುತ್ತಾ ದಾಸಯ್ಯನೊಬ್ಬ ಬೀದಿಯಲ್ಲಿ ಸಾಗುತ್ತಿದ್ದ.

Dailyhunt
Disclaimer: This content has not been generated, created or edited by Dailyhunt. Publisher: Prajavani