Tuesday, 02 Mar, 6.08 am ಪ್ರಜಾವಾಣಿ

ಬೆಂಗಳೂರು
ಕೆಎಎಸ್‌ ಅಧಿಕಾರಿಗಳು ಸೇರಿ 53 ಮಂದಿ ವಿರುದ್ಧ ಎಫ್‌ಐಆರ್‌

ಬೆಂಗಳೂರು: ಹೊಸಕೆರೆಹಳ್ಳಿ ಕೊಳೆಗೇರಿಯಲ್ಲಿ ಒಕ್ಕಲೆಬ್ಬಿಸಿದ ಕುಟುಂಬಗಳಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ನಿವೇಶನ ಹಂಚಿಕೆ ಮಾಡುವಾಗ ಅಕ್ರಮ ನಡೆಸಿದ ಆರೋಪದ ಮೇರೆಗೆ ಪ್ರಾಧಿಕಾರದಲ್ಲಿ ಈ ಹಿಂದೆ ಉಪಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದ ಮೂವರು ಕೆಎಎಸ್‌ ಅಧಿಕಾರಿಗಳು, 10 ಸಿಬ್ಬಂದಿ ಸೇರಿದಂತೆ ಒಟ್ಟು 53 ಮಂದಿ ವಿರುದ್ಧ ಶೇಷಾದ್ರಿಪುರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಎಫ್‌ಐಆರ್‌ ದಾಖಲಾದ ಅಧಿಕಾರಿಗಳಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿ ಅನಿಲ್‌ ಕುಮಾರ್‌, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಭಾಸ್ಕರ್‌, ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಇತ್ತೀಚೆಗೆ ಅಮಾನತುಗೊಂಡಿದ್ದ ಜೈವಿಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಡಳಿತಾಧಿಕಾರಿ ಬಿ.ಸುಧಾ ಸೇರಿದ್ದಾರೆ. ಸುಧಾ ಬಿಡಿಎ ಉಪಕಾರ್ಯದರ್ಶಿ-1, ಅನಿಲ್‌ ಕುಮಾರ್‌ ಹಾಗೂ ಭಾಸ್ಕರ್‌ ಉಪಕಾರ್ಯದರ್ಶಿ-3 ಆಗಿ ಕರ್ತವ್ಯ ನಿರ್ವಹಿಸಿದ್ದ ಅವಧಿಯಲ್ಲಿ ನಿವೇಶನಗಳ ಅಕ್ರಮ ಹಂಚಿಕೆ ನಡೆದಿದೆ ಎಂಬ ಆರೋಪವಿದೆ.

ಉಪಕಾರ್ಯದರ್ಶಿ-3 ಕಚೇರಿಯ ಮೇಲ್ವಿಚಾರಕಿ ವಿ.ಮಹದೇವಮ್ಮ (ಪ್ರಸ್ತುತ ದಾಖಲೆ ವಿಭಾಗದಲ್ಲಿದ್ದಾರೆ), ಇದೇ ಕಚೇರಿಯಲ್ಲಿ ಮೇಲ್ವಿಚಾರಕಿಯರಾಗಿದ್ದ ಕಮಲಮ್ಮ (ಇತ್ತೀಚೆಗೆ ಖಾಸಗಿ ಸಂಸ್ಥೆ ಕಚೇರಿಯಲ್ಲಿ ಬಿಡಿಎ ಕುರಿತ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದ ಪ್ರಕರಣದಲ್ಲಿ ಅಮಾನತಾಗಿದ್ದಾರೆ), ಇದೇ ಕಚೇರಿ ಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿದ್ದ ಮುನಿಬಚ್ಚೇ ಗೌಡ (ನಿವೃತ್ತರಾಗಿದ್ದಾರೆ), ಇದೇ ಕಚೇರಿಯಲ್ಲಿ ಸಿಬ್ಬಂದಿಯಾಗಿದ್ದ ವೆಂಕಟ ರಮಣಪ್ಪ (ಕಂದಾಯ ಪಶ್ಚಿಮ ವಿಭಾಗದಲ್ಲಿದ್ದ ಇವರು ಕಾಡುಗೋಡಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿದ ಪ್ರಕರಣದಲ್ಲಿ ಅಮಾನತಿನಲ್ಲಿದ್ದಾರೆ) ಉಪಕಾರ್ಯದರ್ಶಿ-1 ಕಚೇರಿಯ ಮೇಲ್ವಿಚಾರಕ ರಾಗಿದ್ದ ಕೆ.ಎಂ.ರವಿಶಂಕರ್‌ (ಪ್ರಸ್ತುತ ಉತ್ತರ ಕಂದಾಯ ವಿಭಾಗದಲ್ಲಿದ್ದಾರೆ), ಇದೇ ಕಚೇರಿಯಲ್ಲಿ
ಮೇಲ್ವಿಚಾರಕರಾಗಿದ್ದ ಅಶ್ವತ್ಥನಾರಾಯಣ (ಪ್ರಸ್ತುತ ಪಶ್ಚಿಮ ಕಂದಾಯ ವಿಭಾಗದಲ್ಲಿದ್ದಾರೆ), ವಿಷಯ ನಿರ್ವಾಹಕ ಸಂಜಯ ಕುಮಾರ್‌ ಎಫ್‌ಐಆರ್‌ನಲ್ಲಿ ಹೆಸರಿರುವ ಇತರ ಬಿಎಇಎ ಸಿಬ್ಬಂದಿ. ಸುಳ್ಳು ಮಾಹಿತಿ ನೀಡಿ ನಿವೇಶನ ಪಡೆದ 43 ಮಂದಿಯ ಹೆಸರೂ ಎಫ್‌ಐಆರ್‌ನಲ್ಲಿದೆ.

ಏನಿದು ಪ್ರಕರಣ?: ಬನಶಂಕರಿ 3ನೇ ಹಂತದ ಹೊಸಕೆರೆಹಳ್ಳಿ ಗ್ರಾಮದಲ್ಲಿ ಬಿಡಿಎಯ ಜಾಗದಲ್ಲಿ (ಸರ್ವೆ ನಂಬರ್‌ 89, 90, 91 ಹಾಗೂ 94) ಗುಡಿಸಲುಗಳಲ್ಲಿ ವಾಸವಾಗಿದ್ದ ಕೆಲವು ಕುಟುಂಬಗಳನ್ನು ಒಕ್ಕಲೆಬ್ಬಿಸಲಾಗಿತ್ತು. ಅವರ ಪುನರ್ವಸತಿಗೆ ಒತ್ತಾಯಿಸಿ ಕರ್ನಾಟಕ ಅನಾಥ ಮಕ್ಕಳ ಅಭಿವೃದ್ಧಿ ಸಂಸ್ಥೆ ಹೋರಾಟ ನಡೆಸಿತ್ತು. 541 ಮಂದಿಗೆ ನಿವೇಶನ ಹಂಚಿಕೆ ಮಾಡಲು ಸರ್ಕಾರ ಆದೇಶ ಮಾಡಿತ್ತು. ಹೊಸಕೆರೆಹಳ್ಳಿ ಗ್ರಾಮದ ಸರ್ವೆ ನಂಬರ್‌ 90ರಲ್ಲಿ 20x30 ಅಡಿ ವಿಸ್ತೀರ್ಣದ ಒಟ್ಟು 238 ನಿವೇಶನಗಳನ್ನು 2005ರ ಮಾ.11ರಂದು ಬಿಡಿಎ ಹಂಚಿಕೆ ಮಾಡಿತ್ತು. ಕೆಲವು ಅರ್ಹ ಫಲಾನುಭವಿಗಳಿಗೆ ನಿವೇಶನ ಸಿಕ್ಕಿರಲಿಲ್ಲ. ಬಿಡಿಎ ದಕ್ಷಿಣ ವಿಭಾಗದ ಅಧಿಕಾರಿಗಳು ಮಹಜರು ನಡೆಸಿ 180 ಮಂದಿ ಮಾತ್ರ ಇನ್ನು ನಿವೇಶನ ಪಡೆಯಲು ಅರ್ಹರಿದ್ದಾರೆ ಎಂದು ವರದಿ ನೀಡಿದ್ದರು.

2017ರ ಅ.7ರಂದು ಕೆಲವರು ಪುನರ್ವಸತಿ ವೇಳೆ ಕೈಬಿಟ್ಟವರಿಗೂ ನಿವೇಶನ ನೀಡುವಂತೆ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದ್ದರು. ಈಗಿನ ದರ ಕಟ್ಟಿಸಿಕೊಂಡು ನಿಯಮಾವಳಿಯಂತೆ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡುವಂತೆ ಸರ್ಕಾರ ಆದೇಶಿಸಿತ್ತು. 2018ರ ಅ.31ರಂದು ನಡೆದಿದ್ದ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ಅರ್ಹ 180 ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ನಿರ್ಣಯಿಸಲಾಗಿತ್ತು.

ಜ್ಞಾನಭಾರತಿ (ನಾಗದೇವನಹಳ್ಳಿ), ನಾಗರಬಾವಿ, ಎಚ್‌ಬಿಆರ್‌ ಬಡಾವಣೆ, ಬಿಟಿಎಂ ಬಡಾವಣೆಗಳಲ್ಲೂ ನಿವೇಶನ ಹಂಚಿಕೆ ಮಾಡಲಾಗಿತ್ತು. ಇದರಲ್ಲಿ ಅಕ್ರಮ ನಡೆದಿದೆ ಎಂದು ಪ್ರಶಾಂತನಗರದ ನವೀನ್‌ ಕುಮಾರ್‌ ಇತ್ತೀಚೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು.

ಎಫ್‌ಐಆರ್‌ನಲ್ಲಿ ಉಪಕಾರ್ಯದರ್ಶಿ ಚಿದಾನಂದ್‌ ಹೆಸರಿಲ್ಲ

ಈ ಪ್ರಕರಣ ಸಂಬಂಧ ಬಿಡಿಎ ಉಪಕಾರ್ಯದರ್ಶಿ -1 ಚಿದಾನಂದ್‌ ಅವರಿಗೂ ಬಿಡಿಎ ಆಯುಕ್ತ ಎಚ್‌.ಆರ್‌.ಮಹದೇವ್‌ ನೋಟಿಸ್‌ ಜಾರಿಗೊಳಿಸಿದ್ದರು. ಆದರೆ, ಎಫ್‌ಐಆರ್‌ನಲ್ಲಿ ಚಿದಾನಂದ್‌ ಹೆಸರಿಲ್ಲ.

ಈ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಮಹದೇವ್‌, 'ನಾವು ಕಾರಣ ಕೇಳಿ ಜಾರಿಗೊಳಿಸಿದ್ದ ನೋಟಿಸ್‌ಗೆ ಸಮರ್ಪಕ ಉತ್ತರ ನೀಡಿದವರನ್ನು ಹೊರತಾಗಿ ಉಳಿದ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ' ಎಂದರು.

'ಈ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಮಾನತು ಮಾಡುವಂತೆ ತನಿಖೆ ನಡೆಸಿರುವ ಪೊಲೀಸರೇ ಸರ್ಕಾರಕ್ಕೆ ಕೋರಿಕೆ ಸಲ್ಲಿಸಬಹುದು. ಅವರು ನಮ್ಮ ಮೂಲಕ ಕೋರಿಕೆ ಸಲ್ಲಿಸುವು
ದಕ್ಕೂ ಅವಕಾಶವಿದೆ. ಅಧಿಕಾರಿಗಳನ್ನು ಅಮಾನತುಗೊಳಿಸುವ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ' ಎಂದರು.

ಅಕ್ರಮಗಳೇನು?

l ಅರ್ಹರಲ್ಲದವರಿಗೆ ನಿವೇಶನ ಹಂಚಿಕೆ

l 20x30 ಅಡಿಯ ನಿವೇಶನ ನೀಡಲು ಮಾತ್ರ ಅವಕಾಶವಿದ್ದರೂ ಅದಕ್ಕಿಂತ ಹೆಚ್ಚು ವಿಸ್ತೀರ್ಣದ ನಿವೇಶನಗಳ ಹಂಚಿಕೆ

l ಒಮ್ಮೆ ನಿವೇಶನ ಪಡೆದವರಿಗೆ ಕಾನೂನುಬಾಹಿರವಾಗಿ ಮತ್ತೆ ನಿವೇಶನ ಹಂಚಿಕೆ

l ನಿವೇಶನದ ಮೌಲ್ಯ ಪಾವತಿಸಿಕೊಳ್ಳದೇ ಹಂಚಿಕೆ

l ಅನುಮೋದಿತ ನಕ್ಷೆಯಲ್ಲಿರದ ನಿವೇಶನಗಳ ಹಂಚಿಕೆ

l ಕಾನೂನುಬಾಹಿರವಾಗಿ ಮೂಲೆ ನಿವೇಶನಗಳ ಹಂಚಿಕೆ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top