ಕೆಜಿಎಫ್: ಬಹುದಿನಗಳ ನಂತರ ತಾಲ್ಲೂಕಿನಲ್ಲಿ ಗುರುವಾರ ಸಾಧಾರಣ ಮಳೆಯಾಗಿದ್ದು, ಆಷಾಢ ಗಾಳಿಯಿಂದ ತತ್ತರಿಸಿದ್ದ ಜನತೆಗೆ ಕೊಂಚ ಸಮಾಧಾನವನ್ನು ತಂದಿದೆ.
ಪ್ರತಿದಿನ ಬರುವ ಕಪ್ಪು ಮೋಡಗಳು ಮಳೆ ಸುರಿಸುತ್ತದೆಯೇ ಎಂದು ಕಾತುರದಿಂದ ಕಾಯುತ್ತಿದ್ದ ಜನತೆಗೆ ಗುರುವಾರ ಸಂಜೆ ಸುರಿದ ಸಾಧಾರಣ ಮಳೆ ಕೊಂಚ ನಿಟ್ಟುಸಿರು ಬಿಟ್ಟಂತಾಗಿದೆ.
ಮಳೆ ಆಶ್ರಯಿಸಿ ಬಿತ್ತಿತ್ತ ಬೆಳೆಗೆ ಕೊಂಚ ನೀರಿನ ಸಿಂಪರಣೆಯಾಗಿದೆ. ತಾಲ್ಲೂಕಿನಲ್ಲಿ ಬಿತ್ತನೆಯಾಗಿರುವ ನೆಲಗಡಲೆ ಈಗಾಗಲೇ ನೀರಿಲ್ಲದೆ ಬಾಡಿಹೋಗಿದೆ. ಈಗ ಬಿದ್ದ ಮಳೆ ಶೇಂಗಾ ಬೆಳೆಗೆ ಅಷ್ಟೇನೂ ಉಪಯೋಗವಿಲ್ಲ ಎಂಬುದು ರೈತರ ಮಾತಾಗಿದೆ.
ಮಳೆಯಿಲ್ಲದೆ ತಾಲ್ಲೂಕಿನಲ್ಲಿ ಬಹುತೇಕ ಕಡೆಗಳಲ್ಲಿ ಉಳುಮೆ ಕೂಡ ಮಾಡಿಲ್ಲ. ಈಗ ಉತ್ತಮ ಮಳೆ ಬಿದ್ದರೆ ಹುರುಳಿ, ಸಾಮೆ, ಉಚ್ಚೆಳ್ಳು, ಅಲಸಂದಿ ಬೆಳೆ ಮಾತ್ರ ಬೆಳೆಯಬಹುದು. ಕೊಳವೆ ಬಾವಿ ಇರುವ ರೈತರು ನೀರಿನ ಅಭಾವದಿಂದ ಪಾರಾಗಿದ್ದರೂ, ಮಳೆಯಿಂದ ಬೇಸಾಯ ಮಾಡುವವರಿಗೆ ಈಗಿನ ಮಳೆ ಉಪಯೋಗವಾಗುವುದಿಲ್ಲ. ಹಸಿ ಹುಲ್ಲು ಬೆಳೆದು ಜಾನುವಾರುಗಳಿಗೆ ಕೊಂಚ ಉಪಯೋಗವಾಗಬಹುದು ಎಂಬುದು ರೈತ ಕೋದಂಡಪ್ಪ ಅವರ ಮಾತಾಗಿದೆ.
ಆಷಾಢವಾಗಿದ್ದರಿಂದ ಸೈನೈಡ್ ಗುಡ್ಡದಿಂದ ಬೀಸುತ್ತಿರುವ ಗಾಳಿಯಲ್ಲಿ ದೂಳು ಮಿಶ್ರಣವಾಗಿ ನಗರದಲ್ಲಿ ಪರಿಸರ ಹಾಳಾಗಿತ್ತು. ಈಗಿನ ಮಳೆಯಿಂದಾಗಿ ದೂಳು ಕಡಿಮೆಯಾಗಬಹುದು ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260807-18-948895677

