ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಸುರಂಗ ನಿರ್ಮಿಸಿದರೆ ನಗರದ ಹೆಗ್ಗುರುತು, ನಾಲ್ಕು ಶತಮಾನಗಳಿಗೂ ಹೆಚ್ಚು ಹಳೆಯದಾದ ಕೆಂಪೇಗೌಡರ ಕಾವಲು ಗೋಪುರಕ್ಕೆ ಹಾನಿಯಾಗಲಿದೆ. ಸುರಂಗ ಕೊರೆಯುವುದು ಮತ್ತು ಉತ್ಖನನ ಮಾಡುವುದರಿಂದ ಕಾವಲುಗೋಪುರ ಹಾಗೂ ಪ್ರಾಚೀನ ಬಂಡೆಯಲ್ಲಿ ಬಿರುಕು ಮೂಡಬಹುದು ಅಥವಾ ಹಾನಿಯಾಗಬಹುದು ಎಂದು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ (ಜಿಎಸ್‌ಐ) ಎಚ್ಚರಿಸಿದೆ.
ಉತ್ತರ-ದಕ್ಷಿಣ ಸುರಂಗ ರಸ್ತೆ (17.65 ಕಿಮೀ) ಯೋಜನೆಯಲ್ಲಿ ರ‍್ಯಾಂಪ್, ಟನಲ್ ಬೋರಿಂಗ್ ಮಷಿನ್ (ಟಿಬಿಎಂ) ಅನ್ನು ಲಾಲ್‌ಬಾಗ್ ಬಂಡೆ ಮತ್ತು ಕೆಂಪೇಗೌಡ ಕಾವಲುಗೋಪುರದ ಹತ್ತಿರ ಯೋಜಿಸಿರುವುದರಿಂದ, ಬಂಡೆಯ ಅಡಿಯಲ್ಲಿ ಅಥವಾ ಪಕ್ಕದಲ್ಲಿ ಸುರಂಗ ನಿರ್ಮಾಣ ಮತ್ತು ಉತ್ಖನನದಿಂದ ಒತ್ತಡ ಹೆಚ್ಚಾಗಲಿದೆ. ಅಲ್ಲದೆ ಬಂಡೆಯ ದ್ರವ್ಯರಾಶಿಯಲ್ಲಿ ಸಣ್ಣ ಪ್ರಮಾಣದ ಪಲ್ಲಟಗಳು ಅಥವಾ ಬಿರುಕುಗಳನ್ನು ಉಂಟುಮಾಡಬಹುದು ಎಂದು 27 ಪುಟಗಳ ವರದಿಯಲ್ಲಿ ತಿಳಿಸಲಾಗಿದೆ.
ಒಂದು ಐತಿಹಾಸಿಕ ದಾಖಲೆ ಪ್ರಕಾರ ಕ್ರಿಸ್ತಶಕ 1537ರಲ್ಲಿ, ಇನ್ನೊಂದು ದಾಖಲೆ ಪ್ರಕಾರ ಕ್ರಿಸ್ತಶಕ 1606ರಲ್ಲಿ ಈ ಗೋಪುರ ನಿರ್ಮಾಣವಾಗಿದೆ. ಬೆಂಗಳೂರಿನ ಸಂಸ್ಥಾಪಕರಾದ ಒಂದನೇ ಕೆಂಪೇಗೌಡರು ನಿರ್ಮಿಸಿದ 16ನೇ ಶತಮಾನದ ರಚನೆ ಎಂದು ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಜಾಲತಾಣದಲ್ಲಿದೆ. ಕೆಂಪೇಗೌಡರ ಪರಂಪರೆಯನ್ನು ಗೌರವಿಸಲು ಹಲವು ಕ್ರಮಗಳನ್ನು ಘೋಷಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ವಿಚಾರದಲ್ಲಿ ಸೂಕ್ಷ್ಮವಾಗಬೇಕು ಎಂದು ತಜ್ಞರು ತಿಳಿಸಿದ್ದಾರೆ.
ಕೆಂಪೇಗೌಡರ ಗೋಪುರವು ಸಾಧಾರಣ ರಚನೆಯಲ್ಲ ಮತ್ತು ಬೆಂಗಳೂರಿನ ಸಂಸ್ಕೃತಿ ಹಾಗೂ ಪರಂಪರೆಗೆ ಸಂಬಂಧಿಸಿದ ಇತಿಹಾಸದ ಗುರುತು. ಕೆಂಪೇಗೌಡರ ಗೋಪುರಗಳು ಬೆಂಗಳೂರಿನ ಗಡಿಗಳನ್ನು ಗುರುತಿಸಿವೆ ಎಂಬ ಗ್ರಹಿಕೆಯಿದೆ. ಆದರೆ, ಒಂದನೇ ಕೆಂಪೇಗೌಡರು ಬೆಂಗಳೂರನ್ನು ನಿರ್ಮಿಸಿದ್ದರು. ಎರಡನೇ ಕೆಂಪೇಗೌಡರು ಕಾವಲು ಗೋಪುರ ನಿರ್ಮಿಸಿದ್ದರು. ಈ ಗೋಪುರ ಬೆಂಗಳೂರು ನಗರ ಪಾಲಿಕೆಯ ಲಾಂಛನವೂ ಆಯಿತು ಎಂದು ಇತಿಹಾಸಕಾರ ಸುರೇಶ್ ಮೂನಾ ತಿಳಿಸಿದರು.

