ಬೆಂಗಳೂರು: ನಾಡಪ‍್ರಭು ಕೆಂಪೇಗೌಡರ 517ನೇ ಜಯಂತಿಯ ಅಂಗವಾಗಿ ಜೂನ್ 27ರಂದು 12 ಗಂಟೆಗಳಲ್ಲಿ 13 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಗಿನ್ನಿಸ್ ದಾಖಲೆ ಸೃಷ್ಟಿಸಿದೆ.
ಬಿಡಿಎ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡ, ಡಾ.
ಶಿವರಾಮ ಕಾರಂತ ಹಾಗೂ ಬನಶಂಕರಿ ಬಡಾವಣೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರ ನೆರವಿನೊಂದಿಗೆ ಶನಿವಾರ ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಸಸಿಗಳನ್ನು ನೆಡಲಾಯಿತು. 'ಗಿನ್ನಿಸ್ ವರ್ಲ್ಡ್ ರೆಕಾರ್ಡ್' ಸಂಸ್ಥೆಯ ಸುಮಾರು ಒಂದು ಸಾವಿರ ಮಂದಿ ಗಿಡಗಳನ್ನು ನೆಟ್ಟಿರುವ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿದರು.
'ಹಸಿರು ಬೆಂಗಳೂರು' ಅಭಿಯಾನದಡಿ ಸುಮಾರು 250 ಎಕರೆ ಪ್ರದೇಶದಲ್ಲಿ ಸ್ಥಳೀಯ ಜಾತಿಯ 15 ಲಕ್ಷ ಸಸಿಗಳನ್ನು ನೆಡುವ ಗುರಿಯನ್ನು ಬಿಡಿಎ ಹೊಂದಿತ್ತು. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ದಶಪಥ ರಸ್ತೆಗೆ ಚಾಲನೆ ನೀಡಿ ನಂತರ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 'ಬಸವನ ಪಾದ' ಗಿಡ ನೆಟ್ಟು ನೀರೆರೆದು, ದಾಖಲೆಯಲ್ಲಿ ತಮ್ಮ ಹೆಸರನ್ನೂ ಬರೆದರು.
ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಬಿಡಿಎ ಆಯುಕ್ತ ಪಿ. ಮಣಿವಣ್ಣನ್
ಅವರೂ ಗಿಡ ನೆಟ್ಟರು.
'ಪೂರ್ಣ ಪ್ರಮಾಣದ ಅಂಕಿ-ಅಂಶ ಪ್ರಕಟವಾಗಲು ಇನ್ನೂ ಮೂರ್ನಾಲ್ಕು ದಿನದ ಅಗತ್ಯವಿದ್ದು, ನಂತರವಷ್ಟೇ ಅಧಿಕೃತ ಮಾಹಿತಿ ಲಭ್ಯವಾಗಲಿದೆ. ಶನಿವಾರ ರಾತ್ರಿ ವೇಳೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, 13 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ' ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು.
ಮಧ್ಯಪ್ರದೇಶದ ಇಂದೋರ್‌ನಲ್ಲಿ 2024ರ ಜುಲೈ 13ರಿಂದ 14ರ 24 ಗಂಟೆಗಳಲ್ಲಿ 11 ಲಕ್ಷ ಗಿಡಗಳನ್ನು ನೆಟ್ಟಿರುವುದು ಈವರೆಗಿನ 'ಗಿನ್ನಿಸ್ ದಾಖಲೆ' ಆಗಿದೆ.

