ಬೆಂಗಳೂರು: ಕೆಪಿಎಸ್‌ಸಿ 2011ರಲ್ಲಿ ನಡೆಸಿದ್ದ 362 ಹುದ್ದೆಗಳ ನೇಮಕಾತಿಯನ್ನು ಸಿಂಧುಗೊಳಿಸಲು ರಾಜ್ಯ ಸರ್ಕಾರ ತಂದಿರುವ ಕಾಯ್ದೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ; ರಾಜ್ಯ ಸರ್ಕಾರವು ಸ್ವಂತ ಅಧಿಕಾರ ಬಳಸಿ ಈ ನೇಮಕಾತಿಯನ್ನು ಮುಂದು ವರಿಸಬಾರದು ಎಂದು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಹೇಳಿದೆ.
362 ಅಭ್ಯರ್ಥಿಗಳ ನೇಮಕಕ್ಕೆ ರಾಜ್ಯ ಸರ್ಕಾರ ತಂದಿದ್ದ ಕರ್ನಾಟಕ ಸಿವಿಲ್ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್‌ಗಳ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ಕಾಯ್ದೆ- 2022 'ಅಸಾಂವಿಧಾನಿಕ' ಎಂದು ಸುಪ್ರೀಂ ಕೋರ್ಟ್ ಅ. 29ರಂದು ತೀರ್ಪು ನೀಡಿತ್ತು. ಹೀಗಾಗಿ, ಈ ಸಾಲಿನ ನೇಮಕಾತಿಯಲ್ಲಿ ಆಯ್ಕೆ ಆಗಿರುವವರು ಹುದ್ದೆ ಕಳೆದುಕೊಳ್ಳುವ ಆತಂಕದಲ್ಲಿ
ದ್ದಾರೆ. ಈ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಮರು ಪರಿಶೀಲನೆಗೆ ಅವಕಾಶ ಇದೆಯೇ ಎಂದು ಅಭಿಪ್ರಾಯ ನೀಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು (ಡಿಪಿಎಆರ್) ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯನ್ನು ಕೋರಿತ್ತು.
ಡಿಪಿಎಆರ್‌ಗೆ ನಾಲ್ಕು ಪುಟಗಳಲ್ಲಿ ವಿವರವಾದ ಅಭಿಪ್ರಾಯ ನೀಡಿರುವ ಇಲಾಖೆ, 'ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಪರಿಹಾರವಾಗಿ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ನೀಡಿರುವ ನಿರ್ದೇಶನವನ್ನಷ್ಟೇ ಮಾನವೀಯ ನೆಲೆಯಲ್ಲಿ ರಾಜ್ಯ ಸರ್ಕಾರ ಅನುಸರಿಸಲು ಅವಕಾಶವಿದೆ' ಎಂದು ಶಿಫಾರಸು ಮಾಡಿದೆ.
'ಸುಪ್ರೀಂ ಕೋರ್ಟ್ ತನ್ನ ತೀರ್ಪಿನ ಪ್ಯಾರಾ 19ರಲ್ಲಿ ಹೇಳಿರುವುದನ್ನು ಅನುಸರಿಸಬೇಕು ಮತ್ತು ಅಸ್ತಿತ್ವ ದಲ್ಲಿರುವ ನಿಯಮಗಳ ಅಡಿಯಲ್ಲಿ ಖಾಲಿ ಇರುವ ಗ್ರೂಪ್ 'ಎ' ಮತ್ತು 'ಬಿ' ಹುದ್ದೆಗಳಿಗೆ ಒಂದು ಬಾರಿ ವಯೋಮಿತಿ ಸಡಿಲಿಸಿ, ಮುಕ್ತ ಸ್ಪರ್ಧಾತ್ಮಕ ಪ್ರಕ್ರಿಯೆ ಯಲ್ಲಿ ನೇಮಕಾತಿ ನಡೆಸಬೇಕು' ಎಂದು ಇಲಾಖೆ ಹೇಳಿದೆ. '2011ರ ಸಾಲಿನ ಅಭ್ಯರ್ಥಿಗಳಿಗೆ ಸೀಮಿತವಾಗಿ ಪರೀಕ್ಷೆ ನಡೆಸಬಾರದು' ಎಂದು ಸ್ಪಷ್ಟಪಡಿಸಿದೆ.
ಅಷ್ಟೇ ಅಲ್ಲ, ತೀರ್ಪಿನಲ್ಲಿ ಹೇಳಿರುವ ಅಂಶಗಳ ಕ್ರಮಬದ್ಧವಾದ ಅನುಷ್ಠಾನದ ವಿಚಾರದಲ್ಲಿ ಸಂದೇಹಗಳಿದ್ದರೆ ಸ್ಪಷ್ಟೀಕರಣ ಪಡೆಯಲು ತಕ್ಷಣವೇ ಕೋರ್ಟ್‌ಗೆ ಹೋಗಬೇಕು. ಹಾಗೆಂದು, ಹುದ್ದೆಯಲ್ಲಿರುವ ಅಭ್ಯರ್ಥಿ ಗಳ ಹಿರಿತನ ಮತ್ತು ಕಾಯಮಾತಿ ವಿಷಯವನ್ನು ಪ್ರಸ್ತಾಪಿಸುವಂತೆ ಇಲ್ಲ. ಯಾವುದೇ ಮರುಪರಿಶೀಲನಾ ಅರ್ಜಿ ಸಲ್ಲಿಸುವ ಮೊದಲು, ಪ್ರಕರಣದ ಕುರಿತಾಗಿ ಯಾವುದಾದರೂ ಮರು ಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆಯೇ ಎಂದು ಪರಿಶೀಲಿಸಬೇಕು ಮತ್ತು ಸುಪ್ರೀಂ ಕೋರ್ಟಿನ ನಿಯಮದಂತೆ 30 ದಿನಗಳ ಒಳಗೆ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಬೇಕಾಗಿರುವುದನ್ನು ಸರ್ಕಾರವು ದೃಷ್ಟಿಯಲ್ಲಿ ಇಟ್ಟುಕೊಳ್ಳಬೇಕು. ಈ ಅಭ್ಯರ್ಥಿಗಳಿಗೆ ಸೀಮಿತವಾಗಿ ನಿಯಮ ರಚಿಸಲು ಮುಂದಾಗಬಾರದು' ಎಂದೂ ಅಭಿಪ್ರಾಯಪಟ್ಟಿದೆ.
ಮಾನವೀಯ ಪ್ರಕರಣ, ಕಾನೂನಿನ ನಿಯಮ
2022ರ ಕಾಯ್ದೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ, ಅದರ ಸಿಂಧುತ್ವವನ್ನು ಬೆಂಬಲಿಸಲು ಈಗ ಯಾವುದೇ ಮಾನವೀಯ ದೃಷ್ಟಿಕೋನದ ಸಮರ್ಥನೆ ನೀಡಲು ಕೂಡಾ ಸಾಧ್ಯ ಇಲ್ಲ ಎಂದು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಹೇಳಿದೆ.
2011ನೇ ಸಾಲಿನ ಪ್ರಕರಣದಲ್ಲಿ ಸಿಐಡಿ ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ ಕೆಪಿಎಸ್‌ಸಿಯ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ ಮತ್ತು ಮಧ್ಯವರ್ತಿಗಳನ್ನು ಮಾತ್ರ ಹೆಸರಿಸಲಾಗಿದೆ. ಯಾವುದೇ ಅಭ್ಯರ್ಥಿಗಳನ್ನು ಹೆಸರಿಸಲಾಗಿಲ್ಲ. ಅಧಿಕಾರಿಗಳ ದುಷ್ಕೃತ್ಯಕ್ಕಾಗಿ ಅಭ್ಯರ್ಥಿಗಳಿಗೆ ಶಿಕ್ಷೆ ವಿಧಿಸುವುದು ಅನ್ಯಾಯ ಎಂದು ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆಯಲ್ಲಿ ವಾದಿಸಲಾಗಿದೆ. ಆದರೆ, ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹಲವು ಪ್ರಕರಣಗಳನ್ನು ಉಲ್ಲೇಖಿಸಿ, ಈ ನೇಮಕಾತಿ ರದ್ದತಿಗೆ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ಕಾರಣವಾಗಿದ್ದವು ಎಂದು ಹೇಳಿದೆ. ಅಲ್ಲದೆ, ಕಳಂಕಿತರಲ್ಲದ ಅಭ್ಯರ್ಥಿಗಳನ್ನು ರಕ್ಷಿಸಬೇಕೆಂಬ ವಾದವನ್ನೂ ಒಪ್ಪಿಲ್ಲ. ಹೀಗಾಗಿ, ಸಂಕಷ್ಟಗಳನ್ನು ನ್ಯಾಯಾಂಗದ ಅಂತಿಮ ತೀರ್ಪಿನ ಮಿತಿಗಳೊಳಗೆ ಮಾತ್ರ ಪರಿಹರಿಸಬಹುದು. ನ್ಯಾಯಾಲಯವೇ ಪರಿಹಾರವನ್ನು ನೀಡುವ ಮೂಲಕ ಅದನ್ನು ಮಾಡಿದೆ. ಮಾನವೀಯ ಕಾಳಜಿಗಳನ್ನು ಉಳಿಸಿಕೊಳ್ಳಲು ಇದೊಂದೇ ಕಾನೂನುಬದ್ಧ ಮಾರ್ಗ ಎಂದು ಇಲಾಖೆ ಹೇಳಿದೆ.
ಈ ಸಾಲಿನ ಅಭ್ಯರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆಗೆ ಕೋರ್ಟ್ ಅನುಮತಿ ನೀಡುವ ಸಾಧ್ಯತೆ ತುಂಬಾ ಕಡಿಮೆ. ಹೊಸ ನೇಮಕಾತಿ ಪೂರ್ಣಗೊಳ್ಳುವವರೆಗೆ ಹುದ್ದೆಯಲ್ಲಿ ಮುಂದುವರಿಯಬಹುದೆಂದು ಕೂಡ ಕೋರ್ಟ್ ಹೇಳಿಲ್ಲ. ಅಸಾಂವಿಧಾನಿಕವೆಂದು ಘೋಷಿಸಿರುವ ಕಾಯ್ದೆಯ ಮೇಲೆ ನೇಮಕಾತಿ ನಿಂತಿದೆ. ಹೀಗಾಗಿ, ರಾಜ್ಯವು ತನ್ನ ಅಧಿಕಾರ ಬಳಸಿ, ಆಯ್ಕೆಗೊಂಡಿರುವ ಅಭ್ಯರ್ಥಿಗಳನ್ನು ಹುದ್ದೆಗಳಲ್ಲಿ ಮುಂದುವರಿಸಬಾರದು. ತಾತ್ಕಾಲಿಕ ಅಥವಾ ಮಧ್ಯಂತರ ವ್ಯವಸ್ಥೆಯು ನ್ಯಾಯಾಲಯದ ಮೂಲಕ ಮಾತ್ರ ಲಭ್ಯ ಇರುತ್ತದೆ. ರಾಜ್ಯ ಸರ್ಕಾರ ಅಥವಾ ಬಾಧಿತ ಅಭ್ಯರ್ಥಿಗಳು ಅದನ್ನು ಕೇಳಲು ಬಯಸುವುದಾದರೆ ಅರ್ಜಿ ಸಲ್ಲಿಸಬಹುದು ಎಂದೂ ಇಲಾಖೆ ಹೇಳಿದೆ.
2013ರ ಕಾಯ್ದೆ ವರ್ಸಸ್ 2022ರ ಕಾಯ್ದೆ
550 ಸಹಾಯಕ ಎಂಜಿನಿಯರ್‌ಗಳ ನೇರ ನೇಮಕಾತಿಗಾಗಿ ಸರ್ಕಾರವು 2013ರಲ್ಲಿ 'ಕರ್ನಾಟಕ ನಾಗರಿಕ ಸೇವೆಗಳು (ಜಲ ಸಂಪನ್ಮೂಲ ಸೇವೆ) (ಸಹಾಯಕ ಎಂಜಿನಿಯರ್‌ಗಳು ಮತ್ತು ಜೂನಿಯರ್ ಎಂಜಿನಿಯರ್‌ಗಳ ವಿಶೇಷ ನೇಮಕಾತಿ) ಕಾಯ್ದೆ'ಯನ್ನು ತಂದಿತ್ತು. ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಎಂಜಿನಿಯರ್‌ಗಳ ಸುದೀರ್ಘ ಸೇವೆಯನ್ನು ಕಾಯಂಗೊಳಿಸಲು ಇದನ್ನು ತರಲಾಗಿತ್ತು.
ಇಲಾಖೆಯ ಅಗತ್ಯಕ್ಕಾಗಿ ಈ ಕಾಯ್ದೆಯನ್ನು ರೂಪಿಸಲಾಗಿತ್ತು ಮತ್ತು ಆಯ್ಕೆಗೂ ಮೊದಲು ಯಾವುದೇ ಕಳಂಕ ಇರಲಿಲ್ಲ. ಆದರೆ, 2022ರ ಕಾಯ್ದೆಯನ್ನು ಅದಾಗಲೇ ರದ್ದುಗೊಂಡ ಆಯ್ಕೆಯ ಪಟ್ಟಿಯನ್ನು ಸಿಂಧುಗೊಳಿಸಲು ತರಲಾಗಿದೆ. ಈ ಆಯ್ಕೆಯು ಭ್ರಷ್ಟಾಚಾರ ಮತ್ತು ಸ್ವಜನಪಕ್ಷ
ಪಾತದಿಂದ ಕೂಡಿತ್ತು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಈ ಆಯ್ಕೆ ಪಟ್ಟಿಯನ್ನು ರದ್ದುಪಡಿಸಿದ್ದವು ಎಂದು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯು ಎರಡೂ ಕಾಯ್ದೆಗಳನ್ನು ತುಲನಾತ್ಮಕವಾಗಿ ವಿಮರ್ಶಿಸಿದೆ.
ಮುಂದಿನ ದಾರಿ ಏನು?
ತೀರ್ಪಿನ ಮರುಪರಿಶೀಲನಾ ಅರ್ಜಿ ಸಲ್ಲಿಸುವುದಾದರೆ, 30 ದಿನಗಳ ಒಳಗೆ ಸಲ್ಲಿಸಬೇಕು. ತೀರ್ಪು ನೀಡಿರುವ ಪೀಠದ (ಜೆ.ಬಿ.ಪಾರ್ದೀವಾಲಾ ಹಾಗೂ ವಿನೋದ್ ಚಂದ್ರನ್ ) ಮುಂದೆಯೇ ಈ ಅರ್ಜಿಯ ಭವಿಷ್ಯ ನಿರ್ಧಾರ ವಾಗಲಿದೆ. ಒಂದು ವೇಳೆ, ಮರುಪರಿಶೀಲನಾ ಅರ್ಜಿ ಸ್ವೀಕೃತಗೊಂಡರೆ, ಪ್ರಕರಣದ ಇತ್ಯರ್ಥವು
ನ್ಯಾಯಮೂರ್ತಿಗಳ ಕೊಠಡಿಯೊಳಗೆ ನಡೆಯುತ್ತದೆ. ಇದನ್ನು ಕೂಡ ಅದೇ ಪೀಠ ನಿರ್ಧರಿಸಲಿದೆ. ಒಂದು ವೇಳೆ ಅರ್ಜಿಯನ್ನು ವಜಾಗೊಳಿಸಿದರೆ, ಉಳಿದಿರುವ ಏಕೈಕ ಪರಿಹಾರ ಕ್ಯುರೇಟಿವ್ ಅರ್ಜಿ. ಇದನ್ನು ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಪುರಸ್ಕರಿಸ
ಲಾಗುತ್ತದೆ ಎಂದೂ ಇಲಾಖೆ ಹೇಳಿದೆ.

