Dailyhunt Logo
  • Light mode
    Follow system
    Dark mode
    • Play Story
    • App Story
ಕೆಪಿಎಸ್‌ಸಿ ಅಕ್ರಮ: ಇ.ಡಿ ಕಸ್ಟಡಿಗೆ ಘ್ಯಾನೇಂದ್ರ, ಕನ್ನಾಳೆ

ಕೆಪಿಎಸ್‌ಸಿ ಅಕ್ರಮ: ಇ.ಡಿ ಕಸ್ಟಡಿಗೆ ಘ್ಯಾನೇಂದ್ರ, ಕನ್ನಾಳೆ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಪಶುವೈದ್ಯಾಧಿಕಾರಿ ನೇಮಕಾತಿಯ ಅಕ್ರಮದಲ್ಲಿ, ಆಯೋಗದ ಹಿಂದಿನ ಪರೀಕ್ಷಾ ನಿಯಂತ್ರಕರಾಗಿದ್ದ ಘ್ಯಾನೇಂದ್ರ ಕುಮಾರ್ ಗಂಗ್ವಾರ್ ಮತ್ತು ಮಧ್ಯವರ್ತಿ ಬಸವರಾಜ ಕನ್ನಾಳೆ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಕಸ್ಟಡಿಗೆ ಪಡೆದಿದ್ದಾರೆ.

ಈ ಪ್ರಕರಣದಲ್ಲಿ ಗಂಗ್ವಾರ್ ಮತ್ತು ಕನ್ನಾಳೆ ಅವರನ್ನು ಸಿಐಡಿ ಈ ಹಿಂದೆಯೇ ಬಂಧಿಸಿತ್ತು. ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದ ಇಬ್ಬರು ಆರೋಪಿಗಳ ವಿಚಾರಣೆಗೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದ್ದ ಇ.ಡಿ ಅಧಿಕಾರಿಗಳು, ಜೈಲಿನಲ್ಲಿಯೇ ವಿಚಾರಣೆ ನಡೆಸಿದ್ದರು.

'ನಾಲ್ಕು ದಿನಗಳ ವಿಚಾರಣೆಯ ನಂತರ ಶುಕ್ರವಾರ ರಾತ್ರಿ ಅವರನ್ನು ವಶಕ್ಕೆ ಪಡೆದುಕೊಂಡರು. ಶಾಂತಿನಗರದಲ್ಲಿರುವ ಇ.ಡಿ ಕಚೇರಿಗೆ ಕರೆತಂದು ಕೆಲಕಾಲ ವಿಚಾರಣೆ ನಡೆಸಿದರು. ನಸುಕಿನ ವೇಳೆಗೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು' ಎಂದು ಮೂಲಗಳು ತಿಳಿಸಿವೆ.

ಇಬ್ಬರು ಆರೋಪಿಗಳೂ ವಿಚಾರಣೆ ವೇಳೆ ಸಹಕರಿಸುತ್ತಿಲ್ಲ. ಈವರೆಗೆ ಲಭ್ಯವಾಗಿರುವ ಪುರಾವೆಗಳ ಪ್ರಕಾರ ಇಬ್ಬರ ನಡುವೆ ಹತ್ತಾರು ಕೋಟಿ ರೂಪಾಯಿ ಕೈಬದಲಾಗಿದೆ. ಗಂಗ್ವಾರ್‌ ಪದೇ-ಪದೇ ಅಯೋಧ್ಯೆಗೆ ಹೋಗಿದ್ದು, ಆ ಪ್ರಯಾಣದ ಎಲ್ಲ ವೆಚ್ಚವನ್ನೂ ಕನ್ನಾಳೆ ಭರಿಸಿದ್ದಾರೆ. ಅಭ್ಯರ್ಥಿಗಳಿಂದ ಪಡೆದುಕೊಂಡ ಹಣವನ್ನು ಇದಕ್ಕೆ ಬಳಸಿದ್ದಾರೆ. ಈ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲು, ಇಬ್ಬರನ್ನು ಏಳು ದಿನಗಳವರೆಗೆ ಕಸ್ಟಡಿಗೆ ನೀಡುವಂತೆ ಕೋರಿದ್ದರು ಎಂದು ಮಾಹಿತಿ ನೀಡಿವೆ.

ನ್ಯಾಯಾಧೀಶರು ಐದು ದಿನಗಳವರೆಗೆ ಕಸ್ಟಡಿಗೆ ನೀಡಿ ಆದೇಶಿಸಿದ್ದಾರೆ. ನಂತರ ಆರೋಪಿಗಳನ್ನು ಶಾಂತಿನಗರದ ಕಚೇರಿಗೆ ಕರೆತಂದು ವಿಚಾರಣೆ ಮುಂದುವರೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Dailyhunt
Disclaimer: This content has not been generated, created or edited by Dailyhunt. Publisher: Prajavani