ಮುಂಬೈ: ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆಗೆ ಪಿತೂರಿ ನಡೆಸಿದ ಆರೋಪದ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿನಕ್ಕೊಳಗಾದ ಮೂರನೇ ಆರೋಪಿಯಾಗಿದ್ದಾನೆ.
ಬಂಧಿತ ಆರೋಪಿಯನ್ನು ರಿತೇಶ್ ಹಾಂಗೆ ಎಂದು ಗುರುತಿಸಲಾಗಿದೆ.
ಈತ ಅಗರ್ವಾಲ್ ಅವರ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸಿಯಾ ಗೋಯಲ್ ಅವರ ಪ್ರಿಯಕರ ಎನ್ನಲಾದ ಚೇತನ್ ಚೌಧರಿಯ ಸ್ನೇಹಿತನಾಗಿದ್ದಾನೆ.
ಕೇತನ್ ಹತ್ಯೆ ಪ್ರಕರಣ ಸಂಬಂಧ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.
ಜೂನ್ 18ರಂದು ಪುಣೆ ಹೊರವಲಯದ ಲೋಹಗಢ ಕೋಟೆಗೆ ಚಾರಣಕ್ಕೆಂದು ಭಾವಿ ಪತ್ನಿ ಸಿಯಾ ಗೋಯೆಲ್ ಅವರೊಂದಿಗೆ ತೆರಳಿದ್ದ ಉದ್ಯಮಿ ಕೇತನ್ ಅಗರ್ವಾಲ್, ಪ್ರಪಾತಕ್ಕೆ ಬಿದ್ದು ಸಾವಿಗೀಡಾಗಿದ್ದರು.
ಕೇತನ್ ಜತೆಗೆ ಮದುವೆ ಒಲ್ಲದ ಸಿಯಾ, ತನ್ನ ಪ್ರಿಯಕರ ಚೇತನ್ ಚೌಧರಿ ಜತೆ ಸೇರಿ ಕೇತನ್ ಕೊಲೆ ಮಾಡಿದ್ದರು ಎನ್ನುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

