ಕೊಳಾರ(ಕೆ)(ಜನವಾಡ): ಜಿಲ್ಲೆಯ ಖಾಸಗಿ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಒದಗಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಅಭಿಯಾನ ಆರಂಭಿಸಿದೆ.
ವೇದಿಕೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಅಭಿಯಾನದ ಮೊದಲ ದಿನವಾದ ಭಾನುವಾರ ಬೀದರ್ ತಾಲ್ಲೂಕಿನ ಕೊಳಾರ(ಕೆ) ಕೈಗಾರಿಕಾ ಪ್ರದೇಶದಲ್ಲಿ ಇರುವ ಖಾಸಗಿ ಕೈಗಾರಿಕೆಗಳ ಮುಖ್ಯಸ್ಥರಿಗೆ ಆಗ್ರಹ ಪತ್ರ ನೀಡಿದರು.'ಕರ್ನಾಟಕದ ನೆಲ, ಜಲ, ಮೂಲಸೌಕರ್ಯ ಹಾಗೂ ಸರ್ಕಾರದ ನೀತಿಗಳ ಪ್ರಯೋಜನ ಪಡೆದು ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅನೇಕ ಖಾಸಗಿ ಕೈಗಾರಿಕೆಗಳು ಕನ್ನಡಿಗರಿಗೆ ಉದ್ಯೋಗ ನಿರಾಕರಿಸುತ್ತಿರುವ ಹಾಗೂ ತಾರತಮ್ಯ ಮಾಡುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ವೇದಿಕೆಯ ರಾಜ್ಯ ಅಧ್ಯಕ್ಷ ಟಿ.ಎ.
ನಾರಾಯಣಗೌಡರ ಸೂಚನೆ ಮೇರೆಗೆ ಅಭಿಯಾನ ಪ್ರಾರಂಭಿಸಿದ್ದು, ನ. 30 ರವರೆಗೆ ನಡೆಯಲಿದೆ' ಎಂದು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ತಿಳಿಸಿದರು.
'ಜಿಲ್ಲೆಯ ಖಾಸಗಿ ಕೈಗಾರಿಕೆಗಳು ಹೊರ ರಾಜ್ಯದವರಿಗೆ ಆದ್ಯತೆ ನೀಡುವುದನ್ನು ಕೈಬಿಡಬೇಕು. ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು' ಎಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ಕೈಗಾರಿಕೆ ಪ್ರದೇಶದಲ್ಲಿ ಪಾದಯಾತ್ರೆ ನಡೆಸಿದರು.
ವೇದಿಕೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಸೋಮಶೇಖರ ಸಜ್ಜನ್, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಗೌಡ, ಭಾಲ್ಕಿ ತಾಲ್ಲೂಕು ಅಧ್ಯಕ್ಷ ಬಂಡೆಪ್ಪ ಕರಸಣ್ಣ, ಹುಮನಾಬಾದ್ ತಾಲ್ಲೂಕು ಅಧ್ಯಕ್ಷ ಸಚಿನ್ ತಿಬಶೆಟ್ಟಿ, ಬೀದರ್ ತಾಲ್ಲೂಕು ಅಧ್ಯಕ್ಷ ಲಕ್ಷ್ಮಣ ಅಟಕಾರ್, ವಿನಾಯಕ ರೆಡ್ಡಿ, ಮಲ್ಲಿಕಾರ್ಜುನ ಸಿಕೇನಪುರೆ, ಪರಮೇಶ್ ಮೈಲಾರೆ, ನಾಗಯ್ಯ ಸ್ವಾಮಿ ಹಳ್ಳಿಖೇಡ, ಪ್ರದೀಪ್ ಬಿರಾದಾರ, ಶ್ರೀಮಂತ ಬಿರಾದಾರ, ದತ್ತು ಧನಗರ ಮತ್ತಿತರರು ಪಾಲ್ಗೊಂಡಿದ್ದರು.
261103-33-872650067

