Dailyhunt Logo
  • Light mode
    Follow system
    Dark mode
    • Play Story
    • App Story
ಖಗೋಳ ಕೌತುಕ ಬಿತ್ತಿದ ಮೇಷ್ಟ್ರು

ಖಗೋಳ ಕೌತುಕ ಬಿತ್ತಿದ ಮೇಷ್ಟ್ರು

ಪಿವಿಸಿ ಪೈಪ್‌ನಿಂದ ಟೆಲಿಸ್ಕೋಪ್‌ ತಯಾರಿಸಿ, ಊರೂರು ಸುತ್ತಿ ಖಗೋಳ ವಿಜ್ಞಾನದ ಪಾಠ ಹೇಳಿದ ಎಚ್‌.ಎಸ್‌.ಟಿ. ಸ್ವಾಮಿ, ಸಾವಿರಾರು ವಿದ್ಯಾರ್ಥಿಗಳಲ್ಲಿ ಆಕಾಶ ಕುರಿತು ಕುತೂಹಲ ಬಿತ್ತಿದ್ದಾರೆ. ನೂರಾರು ವಿಜ್ಞಾನ ಲೇಖನಗಳ ಮೂಲಕವೂ ಈ ಪಯಣವನ್ನು ಮುಂದುವರಿಸಿದ್ದಾರೆ.

ನಾಲ್ಕನೇ ತರಗತಿಯಲ್ಲಿದ್ದಾಗಲೇ ದೀಕ್ಷಾ ಎಂ. ಗಂಧವಿಡಿಗೆ ಆಕಾಶದ ಮೇಲೆ ಪ್ರೀತಿ ಹುಟ್ಟಿತ್ತು. ನಕ್ಷತ್ರ, ಉಲ್ಕೆ, ಗ್ರಹಗಳ ಬಗ್ಗೆ ಕೌತುಕ ಬೆಳೆದಿತ್ತು. ಮುಂದೆ ಖಗೋಳ ವಿಜ್ಞಾನಿಯಾಗಬೇಕು ಎಂಬ ಕನಸೂ ಆಗಲೇ ಮೂಡಿತ್ತು. ಪಿಯುಸಿ ಮುಗಿದ ಬಳಿಕ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಐಐಎಸ್‌ಇಆರ್‌) ಪ್ರವೇಶ ಪರೀಕ್ಷೆ ಬರೆದರು. ಇಷ್ಟಪಟ್ಟ ಸಂಸ್ಥೆಯಲ್ಲಿ ಅವಕಾಶ ಸಿಗದಾಗ ಮೈಸೂರಿನ ಯುವರಾಜ ಕಾಲೇಜಿನಲ್ಲಿ ಬಿಎಸ್‌ಸಿ ಸೇರಿದರು. ಮನೆ ಬಾಗಿಲಿಗೆ ಬಂದಿದ್ದ ಎಂಜಿನಿಯರಿಂಗ್‌ ಸೀಟನ್ನು ಬಿಟ್ಟು ಮೂಲವಿಜ್ಞಾನವನ್ನು ಆಯ್ಕೆ ಮಾಡಿಕೊಂಡರು. ಈಗ ಅಂತಿಮ ವರ್ಷದ ಬಿಎಸ್‌ಸಿ ವಿದ್ಯಾರ್ಥಿನಿಯಾಗಿರುವ ಅವರು ಐಐಟಿ-ಜೆಎಎಂ ಮತ್ತು ಗೇಟ್‌ ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ. ಗುರಿ ಒಂದೇ-ಖಗೋಳ ಭೌತವಿಜ್ಞಾನಿಯಾಗುವುದು.

ದೀಕ್ಷಾ ಅವರ ಆಕಾಶದ ಮೇಲಿನ ಆಸಕ್ತಿ ಪುಸ್ತಕದ ಪುಟಗಳಲ್ಲಿ ಉಳಿಯಲಿಲ್ಲ. ಬಾಲ್ಯದಲ್ಲೇ ವಿಜ್ಞಾನ ಸಮಾವೇಶಗಳಲ್ಲಿ ಭಾಗವಹಿಸಿದರು. ಕೇಂದ್ರ ಸರ್ಕಾರದ ಎನ್‌ಸಿಎಸ್‌ಟಿಸಿ ನಡೆಸುವ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟ ತಲುಪಿದರು. 2020ರಲ್ಲಿ ರಾಷ್ಟ್ರಮಟ್ಟಕ್ಕೂ ಆಯ್ಕೆಯಾದರು. ಕೋವಿಡ್‌ ಕಾರಣ ಗುಜರಾತ್‌ನಲ್ಲಿ ನಡೆಯಬೇಕಿದ್ದ ಸಮಾವೇಶ ರದ್ದಾಯಿತು.

ಹತ್ತು ವರ್ಷದವರಾಗಿದ್ದಾಗಲೇ ಖಗೋಳ ಕೌತುಕಗಳ ಬಗ್ಗೆ ಸರಾಗವಾಗಿ ಮಾತನಾಡುತ್ತಿದ್ದ ದೀಕ್ಷಾ, ಒಂದು ದಿನ ತಾವೇ ತಯಾರಿಸಿದ ದೂರದರ್ಶಕದಲ್ಲಿ ಚಂದ್ರನನ್ನು ನೋಡಿದರು. '3.85 ಲಕ್ಷ ಕಿಲೋಮೀಟರ್‌ ದೂರದಲ್ಲಿರುವ ಚಂದ್ರ ನನ್ನ ಕಣ್ಣೊಳಗೆ ಬಂದಿದ್ದಾನೆ' ಎಂದು ಸಂಭ್ರಮಿಸಿದರು.

ಆ ಚಂದ್ರನನ್ನು ಅವರ ಕಣ್ಣಿಗೆ ತಂದವರು ವಿಜ್ಞಾನ ಶಿಕ್ಷಕ ಎಚ್‌.ಎಸ್‌.ಟಿ. ಸ್ವಾಮಿ.

ದೀಕ್ಷಾ ಅವರೊಬ್ಬರೇ ಅಲ್ಲ. ಶಾಲಾ ದಿನಗಳಲ್ಲೇ ಆಕಾಶಕಾಯಗಳ ಮಾದರಿ ತಯಾರಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಚಿತ್ರದುರ್ಗದ ವೈ.ಡಿ. ಅಭಿಲಾಷ್‌ ಈಗ ಅಮೆರಿಕದಲ್ಲಿ ಭೌತ ವಿಜ್ಞಾನಿ. ದೂರದರ್ಶಕದ ಜೊತೆ ಗೆಳೆತನ ಬೆಳೆಸಿಕೊಂಡು ದುರ್ಗದ ಗುಡ್ಡಗಳ ಮೇಲಿನಿಂದ ಆಕಾಶ ವೀಕ್ಷಿಸುತ್ತಿದ್ದ ಶಂಕರದಾಸ್‌ ಈಗ ಬಹುರಾಷ್ಟ್ರೀಯ ಕಂಪನಿಯಲ್ಲಿ ರೋಬೊಟಿಕ್‌ ತಜ್ಞ. ಎಂಜಿನಿಯರಿಂಗ್‌ ಓದಿದರೂ ಶಾಲಾ ದಿನಗಳ ಖಗೋಳ ಆಸಕ್ತಿಯನ್ನು ಬಿಟ್ಟುಕೊಡದ ಎಸ್‌.ಎಂ. ಪೃಥ್ವೀಶ್‌ ತಮ್ಮ ಮಾಲೀಕತ್ವದ ವಿದ್ಯಾವಿಕಾಸ ಶಾಲೆಯಲ್ಲಿ ಖಗೋಳ ಲೋಕವನ್ನೇ ಸೃಷ್ಟಿಸಿದ್ದಾರೆ.

ಇವರ ಹಿಂದೆ ಒಂದೇ ರೀತಿಯ ಕಥೆಯಿದೆ. ಅದು ಆಕಾಶದತ್ತ ನೋಡುವಂತೆ ಮಾಡಿದ ಒಬ್ಬ ಶಿಕ್ಷಕನ ಕಥೆ.

ಪಿವಿಸಿ ಪೈಪ್‌, ಸಾಮಾನ್ಯ ಮಸೂರ, ಕನ್ನಡಿ ತುಣುಕುಗಳನ್ನು ಬಳಸಿ ದೂರದರ್ಶಕ ತಯಾರಿಸುವ ಸ್ವಾಮಿ, ನಾಲ್ಕು ದಶಕಗಳಿಂದ ರಾಜ್ಯದಾದ್ಯಂತ ಖಗೋಳ ಕುರಿತು ಕೌತುಕ ಮೂಡಿಸುತ್ತಿದ್ದಾರೆ. ಅವರ ಟೆಲಿಸ್ಕೋಪ್‌ಗಳು ದುಬಾರಿ ಪ್ರಯೋಗಾಲಯಗಳಲ್ಲ; ಮಕ್ಕಳ ಕೈಗೆಟುಕುವ ವಿಜ್ಞಾನ ಉಪಕರಣಗಳು.

ಚಿತ್ರದುರ್ಗವನ್ನು ಸುತ್ತುವರಿದಿರುವ ಸಾಲು ಬೆಟ್ಟಗಳ ನಡುವೆ ಅಡಗಿರುವಂತೆ ಕಾಣುವ ಆಕಾಶವನ್ನು ಮಕ್ಕಳಿಗೆ ತೋರಿಸುತ್ತಾ, ಅದರಾಚೆ ಏನಿದೆ ಎಂಬ ಪ್ರಶ್ನೆಯನ್ನು ಹುಟ್ಟಿಸುತ್ತಾರೆ. ಆಕಾಶಕಾಯಗಳು, ಸೌರವ್ಯೂಹ, ಬಾಹ್ಯಾಕಾಶದ ಕುತೂಹಲವನ್ನು ಕಥೆಗಳ ರೂಪದಲ್ಲಿ ಹೇಳುತ್ತಾರೆ. ಸರಳ ಕನ್ನಡದಲ್ಲಿ ಖಗೋಳ ವಿಜ್ಞಾನವನ್ನು ವಿವರಿಸುವ ಮೂಲಕ ಮೂಲವಿಜ್ಞಾನದತ್ತ ಮಕ್ಕಳನ್ನು ಸೆಳೆಯುತ್ತಾರೆ.

ರಾಜ್ಯದ 150ಕ್ಕೂ ಹೆಚ್ಚು ಶಾಲೆಗಳಿಗೆ ಟೆಲಿಸ್ಕೋಪ್‌ ತಯಾರಿಸಿ ಕೊಟ್ಟಿದ್ದಾರೆ. ರಾಜ್ಯ, ಅಂತರರಾಜ್ಯ ಮತ್ತು ರಾಷ್ಟ್ರಮಟ್ಟದ ವಿಜ್ಞಾನ ಉತ್ಸವ, ಸಮಾವೇಶ, ಸ್ಪರ್ಧೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಿದ್ದಾರೆ. ಕೇಂದ್ರ ಸರ್ಕಾರದ ಇನ್‌ಸ್ಪೈರ್‌ ಸ್ಪರ್ಧೆಯಲ್ಲೂ ಭಾಗವಹಿಸಲು ಮಾರ್ಗದರ್ಶನ ನೀಡಿದ್ದಾರೆ.

ರಾಜ್ಯದಾದ್ಯಂತ 2,000ಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿರುವ ಸ್ವಾಮಿ, ಪತ್ರಿಕೆಗಳಿಗೆ 1,000ಕ್ಕೂ ಹೆಚ್ಚು ವಿಜ್ಞಾನ ಲೇಖನಗಳನ್ನು ಬರೆದಿದ್ದಾರೆ. 'ನಾ ಕಂಡ ಖಗೋಳ' ಕೃತಿಯನ್ನೂ ರಚಿಸಿದ್ದಾರೆ. ತಮ್ಮ ಮನೆಗೆ 'ಖಗೋಳ' ಎಂದು ಹೆಸರಿಟ್ಟಿದ್ದಾರೆ.

ಆಕಾಶದಿಂದ ವಿಜ್ಞಾನಕ್ಕೆ

ಮೊದಲು ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗಿ ಆಕಾಶ ತೋರಿಸುತ್ತಾರೆ. ನಂತರ ಕಾಣುವ ನಕ್ಷತ್ರ, ಗ್ರಹ, ಚಂದ್ರನ ಹಿಂದಿರುವ ವಿಜ್ಞಾನವನ್ನು ಕಥೆಯ ರೂಪದಲ್ಲಿ ವಿವರಿಸುತ್ತಾರೆ. ವಿಜ್ಞಾನವೆಂದರೆ ಪ್ರಯೋಗಾಲಯದಲ್ಲಿರುವ ಯಾವುದೋ ದೂರದ ಸಂಗತಿಯಲ್ಲ; ಹಾಸಿಗೆಯಿಂದ ಮೇಲೇಳುವುದರಿಂದ ಹಿಡಿದು ಹಲ್ಲುಜ್ಜುವ ಬ್ರಷ್‌, ಊಟ, ನಾವು ಬಳಸುವ ಪ್ರತಿಯೊಂದು ವಸ್ತುವಿನಲ್ಲೂ ವಿಜ್ಞಾನವಿದೆ ಎಂದು ತಿಳಿಸುತ್ತಾರೆ. ಆಟ, ಪ್ರಯೋಗ, ಪ್ರಾತ್ಯಕ್ಷಿಕೆಗಳ ಮೂಲಕ ಮಕ್ಕಳ ಕುತೂಹಲವನ್ನು ಜೀವಂತವಾಗಿಡುತ್ತಾರೆ.

ಎಂಬತ್ತರ ದಶಕದಲ್ಲಿ ಸ್ಲೈಡ್‌ಗಳ ಮೂಲಕ ಸೌರವ್ಯೂಹವನ್ನು ತೋರಿಸುತ್ತಿದ್ದ ಅವರು ಕಾಲಕ್ಕೆ ತಕ್ಕಂತೆ ಬದಲಾಗಿದ್ದಾರೆ. ಪ್ರೊಜೆಕ್ಟರ್‌, ಡಿಜಿಟಲ್‌ ತಂತ್ರಜ್ಞಾನ ದಾಟಿ ಈಗ ಪಿಪಿಟಿ ಮೂಲಕ ಪ್ರಾತ್ಯಕ್ಷಿಕೆ ನೀಡುತ್ತಿದ್ದಾರೆ. ಆದರೆ ಬದಲಾಗದಿರುವುದು ಅವರ ಉದ್ದೇಶ-ಮಕ್ಕಳು ಆಕಾಶವನ್ನು ಕೇವಲ ನೋಡುವವರಾಗದೆ, ಪ್ರಶ್ನಿಸುವವರಾಗಬೇಕು.

'ನಾವು ಹಗಲು-ರಾತ್ರಿ ಎನ್ನದೇ ಕಂಪ್ಯೂಟರ್‌, ಮೊಬೈಲ್‌ ಬಳಸಿ ಒತ್ತಡದಲ್ಲಿ ಬದುಕುತ್ತಿದ್ದೇವೆ. ಹೊರಗೆ ಬಂದು ಆಗಸದತ್ತ ನೋಡಿದಾಗ ಮನಸ್ಸಿಗೆ ಕೊಂಚ ಆರಾಮ ಸಿಗುತ್ತದೆ. ಸ್ವಾಮಿ ಸರ್‌ ನಮ್ಮಲ್ಲಿ ಆಕಾಶದ ಬಗ್ಗೆ ಮಾತ್ರವಲ್ಲ, ವಿಜ್ಞಾನದ ಬಗ್ಗೆ ಕನಸುಗಳನ್ನು ಹುಟ್ಟಿಸಿದ್ದಾರೆ. ಅವರ ಮೂಲಕ ರಾಜ್ಯದ ವಿವಿಧೆಡೆ ವಿಜ್ಞಾನ ಶಿಕ್ಷಕರ ತಂಡವೇ ಬೆಳೆದಿದೆ' ಎನ್ನುತ್ತಾರೆ ವಿಜ್ಞಾನ ಶಿಕ್ಷಕ ಎಸ್‌. ಮಹೇಶ್‌.

ಸ್ವಾಮಿ ಅವರು ಶಾಲಾ ಮಕ್ಕಳಿಗೂ ವಿಜ್ಞಾನಿಗಳಿಗೂ ಸೇತುವೆಯಾಗಿದ್ದಾರೆ. ಹಲವು ಶಾಲೆಗಳ ವಿದ್ಯಾರ್ಥಿಗಳನ್ನು ಇಸ್ರೊಗೆ ಕರೆದೊಯ್ದು ಉಪಗ್ರಹ ಉಡಾವಣೆಯ ಬಗ್ಗೆ ಮಾಹಿತಿ ಕೊಡಿಸಿದ್ದಾರೆ. ಇಸ್ರೊ, ಡಿಆರ್‌ಡಿಒ, ಐಐಎಸ್‌ಸಿ ವಿಜ್ಞಾನಿಗಳನ್ನು ಶಾಲೆಗಳಿಗೆ ಕರೆಸಿ ಮಕ್ಕಳಿಗೆ ನೇರವಾಗಿ ಪಾಠ ಮಾಡಿಸಿದ್ದಾರೆ.

ಟೆಲಿಸ್ಕೋಪ್‌ನೊಳಗೆ ಕಾಣಿಸಿದ ಶನಿ

ಸ್ವಾಮಿ ಅವರ ಟೆಲಿಸ್ಕೋಪ್‌ನಲ್ಲಿ ಆಕಾಶವನ್ನು ನೋಡುವ ಮಕ್ಕಳ ಅನುಭವವೇ ಬೇರೆ.

'ಶನಿ ಗ್ರಹದ ಸುತ್ತಲಿರುವ ಬಳೆಗಳನ್ನು ನೋಡುವುದು ನನಗೆ ಬಹಳ ಇಷ್ಟ. ಶನಿ ಎಂದರೆ ಎಲ್ಲರೂ ಭಯಪಡುತ್ತಾರೆ. ಆದರೆ ಗ್ರಹಗಳಲ್ಲಿ ಶನಿಯೇ ಅತ್ಯಂತ ಸುಂದರ. ಬರಿಗಣ್ಣಿಗೆ ನಕ್ಷತ್ರದಂತೆ ಕಾಣುವ ಶನಿ, ಟೆಲಿಸ್ಕೋಪ್‌ನಲ್ಲಿ ಕಾಣಿಸಿದಾಗ ರೋಮಾಂಚನವಾಗುತ್ತದೆ' ಎನ್ನುತ್ತಾರೆ ಚಿತ್ರದುರ್ಗದ ಪ್ರಕೃತಿ ಶಾಲೆಯ ವಿದ್ಯಾರ್ಥಿ ಶ್ರೇಯಸ್‌.

ಟೆಲಿಸ್ಕೋಪ್‌ ತಯಾರಿಕೆಯ ಹಿಂದೆಯೂ ಸ್ವಾಮಿ ಮಕ್ಕಳನ್ನು ಸೇರಿಸಿಕೊಳ್ಳುತ್ತಾರೆ. ಗೆಲಿಲಿಯೊ ಮಾದರಿಯ ಟೆಲಿಸ್ಕೋಪ್‌ನಲ್ಲಿ ಮಸೂರಗಳನ್ನು ಬಳಸಲಾಗುತ್ತದೆ. ಪಿವಿಸಿ ಪೈಪ್‌ನ ಉದ್ದವನ್ನು ಸಂಗಮ ದೂರಕ್ಕೆ ಅನುಗುಣವಾಗಿ ಅಳವಡಿಸಿ, ವಸ್ತುಮಸೂರ ಮತ್ತು ದೃಷ್ಟಿಮಸೂರ ಜೋಡಿಸಿದರೆ ಸರಳ ಟೆಲಿಸ್ಕೋಪ್‌ ಸಿದ್ಧ. ನ್ಯೂಟನ್‌ ಮಾದರಿಯಲ್ಲಿ ದರ್ಪಣಗಳನ್ನು ಬಳಸಲಾಗುತ್ತದೆ.

ಮಕ್ಕಳಿಗೆ ಇದು ಕೇವಲ ಉಪಕರಣ ತಯಾರಿಕೆಯಲ್ಲ. 'ನೋಡಬೇಕು, ಅರ್ಥಮಾಡಿಕೊಳ್ಳಬೇಕು, ಮತ್ತೆ ಪ್ರಶ್ನಿಸಬೇಕು' ಎಂಬ ವಿಜ್ಞಾನ ಮನೋಭಾವದ ಮೊದಲ ಪಾಠ.

ಗ್ರಹಣದ ರಾತ್ರಿ ನಡೆದ ಮದುವೆ

2023ರ ಅಕ್ಟೋಬರ್‌ 28ರ ರಾತ್ರಿ ಚಂದ್ರಗ್ರಹಣ. ಮಧ್ಯರಾತ್ರಿ 1.30ರ ವೇಳೆಗೆ ಸಂಪೂರ್ಣ ಚಂದ್ರಗ್ರಹಣ ಸಂಭವಿಸಬೇಕಿತ್ತು. ಗ್ರಹಣದ ವೇಳೆ ಚಂದ್ರನನ್ನು ನೋಡಬಾರದು, ಆಕಾಶದತ್ತ ನೋಡಬಾರದು ಎಂಬ ನಂಬಿಕೆಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದವು.

ಅದೇ ಸಮಯದಲ್ಲಿ ಚಿತ್ರದುರ್ಗದ ಮುರುಘರಾಜೇಂದ್ರ ಮಠದಲ್ಲಿ ಮರಡಿರಂಗನಾಯಕ- ವಸಂತಕುಮಾರಿ ವಿವಾಹ ನಡೆಯಿತು. ಮಧ್ಯರಾತ್ರಿ 1.30ಕ್ಕೆ ನಡೆದ ಮದುವೆಗೆ ಪ್ರೇರಣೆ ನೀಡಿದವರಲ್ಲಿ ಸ್ವಾಮಿಯೂ ಒಬ್ಬರು. ಆ ಸಂದರ್ಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ನವಜೋಡಿಗೆ 'ಮಗ ಹುಟ್ಟಿದರೆ ಚಂದ್ರ, ಮಗಳು ಹುಟ್ಟಿದರೆ ಮಂಗಳಾ ಎಂದು ಹೆಸರಿಡಿ' ಎಂದು ಸಲಹೆ ನೀಡಿದರು. ಮುಂದೆ ಅವರಿಗೆ ಮಗ-ಮಗಳು ಜನಿಸಿದರು. ಚಂದ್ರ ಮತ್ತು ಮಂಗಳಾ ಎಂದು ಹೆಸರಿಟ್ಟರು.

ಗ್ರಹಣದ ಬಗ್ಗೆ ಮೂಡಿದ್ದ ಭಯಕ್ಕೆ ವಿಜ್ಞಾನದ ಮೂಲಕ ಉತ್ತರ ನೀಡುವ ಸ್ವಾಮಿ, ಆಕಾಶವನ್ನು ಭಯದ ವಸ್ತುವಾಗಿ ಅಲ್ಲ, ಅರಿಯಬೇಕಾದ ಲೋಕವಾಗಿ ನೋಡುತ್ತಾರೆ. ಗ್ರಹಣದ ಸಂದರ್ಭದಲ್ಲಿ ಮಕ್ಕಳಿಗೆ ಸೌರಮಂಡಲದ ನೆರಳು-ಬೆಳಕಿನಾಟವನ್ನು ತೋರಿಸುತ್ತಾರೆ. ಮಠ-ಮಾನ್ಯಗಳಲ್ಲೂ ವಿಜ್ಞಾನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.

ಜೀವ ವಿಜ್ಞಾನದಲ್ಲಿ ಬಿಎಸ್‌ಸಿ, ಬಿಇಡಿ ಮಾಡಿ ಶಿಕ್ಷಕರಾಗಿದ್ದ ಸ್ವಾಮಿ ಅವರಿಗೆ ಖಗೋಳ ವಿಜ್ಞಾನದತ್ತ ಆಸಕ್ತಿ ಮೂಡಲು ಚಳ್ಳಕೆರೆ ಯರ್ರಿಸ್ವಾಮಿ ಅವರ ಚಟುವಟಿಕೆಗಳು ಪ್ರೇರಣೆಯಾದವು. 1995ರಲ್ಲಿ ಬೆಂಗಳೂರಿನ ನೆಹರೂ ತಾರಾಲಯದಲ್ಲಿ ನಡೆದ 30 ದಿನಗಳ ಟೆಲಿಸ್ಕೋಪ್‌ ತಯಾರಿಕಾ ಶಿಬಿರ ಅವರ ಬದುಕಿನ ದಿಕ್ಕನ್ನೇ ಬದಲಿಸಿತು.

ಅಲ್ಲಿಂದ ಮುಂದೆ ಟೆಲಿಸ್ಕೋಪ್‌ ತಯಾರಿಕೆ, ಖಗೋಳ ವೀಕ್ಷಣೆ ಮತ್ತು ಪ್ರಾತ್ಯಕ್ಷಿಕೆಗಳು ಅವರ ಬೋಧನೆಯ ಭಾಗವಾದವು. ಶಾಲೆಯ ತರಗತಿಯ ಗಡಿಯನ್ನು ದಾಟಿ ಆಕಾಶವೇ ಅವರ ಪಾಠಶಾಲೆಯಾಯಿತು. ಇಂದು ಅವರು ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿದ್ದಾರೆ. ಆದರೆ ಖಗೋಳ ಬೋಧನೆಯಿಂದ ನಿವೃತ್ತರಾಗಿಲ್ಲ.

'ಕನ್ನಡದಲ್ಲಿ ಸುಲಲಿತವಾಗಿ ಖಗೋಳ ವಿಜ್ಞಾನ ಹೇಳುವವರ ತಲೆಮಾರು ಮುಗಿದೇ ಹೋಯಿತು ಎನ್ನುವ ಹೊತ್ತಿನಲ್ಲಿ ಎಚ್‌.ಎಸ್‌.ಟಿ. ಸ್ವಾಮಿ ಆ ಕೊರತೆಯನ್ನು ತುಂಬಿದ್ದಾರೆ. ರಾಜ್ಯದಾದ್ಯಂತ ಪ್ರವಾಸ ಮಾಡಿ ಪ್ರಾಯೋಗಿಕವಾಗಿ ಖಗೋಳ ವಿಜ್ಞಾನ ಬೋಧಿಸುತ್ತಿರುವವರು ಸದ್ಯಕ್ಕೆ ಅವರೊಬ್ಬರೇ. ಅದಕ್ಕೆ ಗೌರವಧನವೂ ಇಲ್ಲ, ಪ್ರಶಸ್ತಿಯೂ ಇಲ್ಲ. ಆದರೂ ಬದ್ಧತೆಯಿಂದ ಕೆಲಸ ಮುಂದುವರಿಸಿದ್ದಾರೆ' ಎನ್ನುತ್ತಾರೆ ತಾರಾಮಂಡಲ ವಿಜ್ಞಾನ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಚಳ್ಳಕೆರೆ ಯರ್ರಿಸ್ವಾಮಿ.

ವಿಜ್ಞಾನ ಶಿಕ್ಷಣದ ಇಂದಿನ ಸ್ಥಿತಿಯ ಬಗ್ಗೆ ಸ್ವಾಮಿಗೆ ಕೆಲವು ಅಸಮಾಧಾನಗಳಿವೆ. ಪ್ರೌಢಶಾಲಾ ಹಂತದಲ್ಲಿ ಮೂಲವಿಜ್ಞಾನ ಮತ್ತು ಖಗೋಳ ವಿಜ್ಞಾನಕ್ಕೆ ಸಿಗುತ್ತಿದ್ದ ಪ್ರಾಮುಖ್ಯ ಕಡಿಮೆಯಾಗಿರುವುದು ಅವರಿಗೆ ನೋವು ತಂದಿದೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ದೇಶದ ಸಾಧನೆಗಳ ಬಗ್ಗೆ ಹೆಮ್ಮೆಪಡುವುದರ ಜತೆಗೆ, ಮಕ್ಕಳಲ್ಲಿ ಮೂಲವಿಜ್ಞಾನದ ಆಸಕ್ತಿ ಬೆಳೆಸುವ ಕೆಲಸವೂ ಸಮಾನವಾಗಿ ನಡೆಯಬೇಕು ಎಂಬುದು ಅವರ ಒತ್ತಾಯ.

ಸಮಾನ ಮನಸ್ಕರ 'ಚಿತ್ರದುರ್ಗ ವಿಜ್ಞಾನ ಫೌಂಡೇಷನ್‌' ಪ್ರಯತ್ನದ ಫಲವಾಗಿ 2025ರ ರಾಜ್ಯ ಬಜೆಟ್‌ನಲ್ಲಿ ಚಿತ್ರದುರ್ಗಕ್ಕೆ ಪ್ರಾದೇಶಿಕ ವಿಜ್ಞಾನ ಕೇಂದ್ರ ಘೋಷಣೆಯಾಗಿದ್ದು, ಚಳ್ಳಕೆರೆ ತಾಲ್ಲೂಕಿನ ಕುದಾಪುರದಲ್ಲಿರುವ ಐಐಎಸ್‌ಸಿ ಅದಕ್ಕಾಗಿ 10 ಎಕರೆ ಜಾಗ ಮೀಸಲಿಟ್ಟಿದೆ. ಈ ಕೇಂದ್ರ ಶೀಘ್ರ ಸಾಕಾರಗೊಳ್ಳಬೇಕು ಎಂಬುದು ಸ್ವಾಮಿಯ ಆಶಯ.

ದೀಕ್ಷಾ ಅವರ ಕನಸು ಈಗ ಆಕಾಶದಾಚೆ ಸಾಗುತ್ತಿದೆ. ಅಭಿಲಾಷ್‌ ಅಮೆರಿಕದಲ್ಲಿ ಭೌತ ವಿಜ್ಞಾನಿಯಾಗಿದ್ದಾರೆ. ಶಂಕರದಾಸ್‌ ರೋಬೋಟಿಕ್ಸ್‌ ಕ್ಷೇತ್ರದಲ್ಲಿದ್ದಾರೆ. ಪೃಥ್ವೀಶ್‌ ತಮ್ಮ ಶಾಲೆಯಲ್ಲೇ ಮಕ್ಕಳಿಗೆ ಖಗೋಳ ಲೋಕ ತೆರೆದಿದ್ದಾರೆ.

ಇವರಲ್ಲಿ ಪ್ರತಿಯೊಬ್ಬರ ಕಥೆಯ ಆರಂಭದಲ್ಲಿ ಶಿಕ್ಷಕ ಸ್ವಾಮಿ ಇದ್ದಾರೆ. ಅವರು ಮಕ್ಕಳಿಗೆ ಉತ್ತರಗಳನ್ನು ಮಾತ್ರ ಕಲಿಸಲಿಲ್ಲ. ಆಕಾಶದತ್ತ ನೋಡಲು ಕಲಿಸಿದರು. ಆಕಾಶವನ್ನು ನೋಡಿದ ಮಕ್ಕಳು ನಂತರ ಪ್ರಶ್ನೆಗಳನ್ನು ಕೇಳಿದರು. ಪ್ರಶ್ನೆಗಳು ಕನಸುಗಳಾದವು. ಕನಸುಗಳು ಅವರ ಬದುಕಿನ ದಿಕ್ಕಾದವು.

ಜೀವ ವಿಜ್ಞಾನದಲ್ಲಿ ಬಿಎಸ್ಸಿ, ಬಿಇಡಿ ಮಾಡಿ ಶಿಕ್ಷಕರಾದ ಸ್ವಾಮಿ ಅವರಿಗೆ ಖಗೋಳ ವಿಜ್ಞಾನದತ್ತ ಆಸಕ್ತಿ ಮೂಡಲು ಚಳ್ಳಕೆರೆ ಯರ್‍ರಿಸ್ವಾಮಿ ಅವರ ಚಟುವಟಿಕೆಗಳು ಪ್ರೇರಣೆಯಾದವು. 1995ರಲ್ಲಿ ಬೆಂಗಳೂರಿನ ನೆಹರೂ ತಾರಾಲಯದಲ್ಲಿ ನಡೆದ 30 ದಿನಗಳ ಟೆಲಿಸ್ಕೋಪ್‌ ತಯಾರಿಕಾ ಶಿಬಿರ ಅವರ ಬದುಕಿನ ದಿಕ್ಕನ್ನೇ ಬದಲಿಸಿತು.

ವಿಜ್ಞಾನ ಶಿಕ್ಷಣದ ಇಂದಿನ ಸ್ಥಿತಿಯ ಬಗ್ಗೆ ಸ್ವಾಮಿ ಅವರಿಗೆ ಕೆಲವು ಅಸಮಾಧಾನಗಳಿವೆ. ಪ್ರೌಢಶಾಲಾ ಹಂತದಲ್ಲಿ ಮೂಲವಿಜ್ಞಾನ ಮತ್ತು ಖಗೋಳ ವಿಜ್ಞಾನಕ್ಕೆ ಸಿಗುತ್ತಿದ್ದ ಪ್ರಾಮುಖ್ಯ ಕಡಿಮೆಯಾಗಿರುವುದು ಅವರಿಗೆ ನೋವು ತಂದಿದೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ದೇಶದ ಸಾಧನೆಗಳ ಬಗ್ಗೆ ಹೆಮ್ಮೆಪಡುವುದರ ಜತೆಗೆ, ಮಕ್ಕಳಲ್ಲಿ ಮೂಲವಿಜ್ಞಾನದ ಆಸಕ್ತಿ ಬೆಳೆಸುವ ಕೆಲಸವೂ ಸಮಾನವಾಗಿ ನಡೆಯಬೇಕು ಎಂಬುದು ಅವರ ಒತ್ತಾಯ.

ಇವರಲ್ಲಿ ಪ್ರತಿಯೊಬ್ಬರ ಕಥೆಯ ಆರಂಭದಲ್ಲಿ ಶಿಕ್ಷಕರಾದ ಸ್ವಾಮಿ ಇದ್ದಾರೆ. ಅವರು ಮಕ್ಕಳಿಗೆ ಉತ್ತರಗಳನ್ನು ಮಾತ್ರ ಕಲಿಸಲಿಲ್ಲ. ಆಕಾಶದತ್ತ ನೋಡಲು ಕಲಿಸಿದರು. ಆಕಾಶವನ್ನು ನೋಡಿದ ಮಕ್ಕಳು ನಂತರ ಪ್ರಶ್ನೆಗಳನ್ನು ಕೇಳಿದರು. ಪ್ರಶ್ನೆಗಳು ಕನಸುಗಳಾದವು. ಕನಸುಗಳು ಅವರ ಬದುಕಿನ ದಿಕ್ಕಾದವು. ಒಬ್ಬ ಶಿಕ್ಷಕ ತಯಾರಿಸಿದ ಟೆಲಿಸ್ಕೋಪ್‌ ಎಷ್ಟು ದೂರ ತೋರಿಸಬಹುದು ಎಂಬುದಕ್ಕೆ ಮಿತಿ ಇರಬಹುದು. ಆದರೆ ಅವರು ಮಕ್ಕಳ ಮನಸ್ಸಿನಲ್ಲಿ ತೆರೆದ ಆಕಾಶಕ್ಕೆ ಮಿತಿ ಇಲ್ಲ. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260906-51-143894941

Dailyhunt
Disclaimer: This content has not been generated, created or edited by Dailyhunt. Publisher: Prajavani