ನವದೆಹಲಿ: ಅಮೆರಿಕ ನಡೆಸಿದ ದಾಳಿಯಲ್ಲಿ ಹತರಾದ ಇರಾನ್‌ನ ಮಾಜಿ ಪರಮೋಚ್ಚ ನಾಯಕ, ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಸಂಸ್ಕಾರದ ವಿಧಿವಿಧಾನಗಳು ಜುಲೈ 5ರಿಂದ 9ರವರೆಗೆ ನಡೆಯಲಿದ್ದು, ಇರಾನ್ ಅಧ್ಯಕ್ಷ ಮಸೂದ್ ಪಜೆಶ್ಕಿಯಾನ್ ಅವರು ಪ್ರಧಾನಿ ಮೋದಿ ಅವರನ್ನು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಆಹ್ವಾನಿಸಿದ್ದಾರೆ ಎಂದು ರಾಜತಾಂತ್ರಿಕ ಮೂಲಗಳು ಹೇಳಿವೆ.
ಆದರೆ, ಪ್ರಧಾನಿ ಮೋದಿ ಅವರಿಗೆ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಆಹ್ವಾನ ಬಂದಿರುವುದನ್ನು ಪ್ರಧಾನಿ ಕಚೇರಿ ಅಧಿಕೃತವಾಗಿ ಪ್ರಕಟಿಸಿಲ್ಲ.
ಇಸ್ರೇಲ್ ಮತ್ತು ಅಮೆರಿಕ ಪಡೆಗಳು ಫೆಬ್ರುವರಿ 28ರಂದು ಟೆಹರಾನ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಖಮೇನಿ ಹತರಾಗಿದ್ದರು. ಇದರ ಬೆನ್ನಲ್ಲೇ ಪಶ್ಚಿಮ ಏಷ್ಯಾ ಸಂಘರ್ಷ ತೀವ್ರಗೊಂಡಿದ್ದರಿಂದ ಅವರ ಅಂತ್ಯಕ್ರಿಯೆಯನ್ನು ಮುಂದೂಡಲಾಗಿತ್ತು. ಆಯತೊಲ್ಲಾ ಅಲಿ ಖಮೇನಿ ಸ್ಥಾನಕ್ಕೆ ಅವರ ಪುತ್ರ ಮೊಜ್ತಬಾ ಖಮೇನಿ (56) ಮಾರ್ಚ್‌ನಲ್ಲಿ ನೇಮಕಗೊಂಡಿದ್ದರು.
ಟೆಹರಾನ್ ಮತ್ತು ಕೋಮ್ ನಗರದಲ್ಲಿ ಜುಲೈ 5, 6 ಮತ್ತು 7ರಂದು ಅಂತ್ಯಕ್ರಿಯೆಯ ವಿಧಿಗಳು ನಡೆಯಲಿವೆ. ಖಮೇನಿ ಅವರ ತವರು ಮಶಾದ್‌ನಲ್ಲಿ ಜುಲೈ 9ರಂದು ಅಂತ್ಯಕ್ರಿಯೆ ನಡೆಯಲಿದೆ.

