Dailyhunt Logo
  • Light mode
    Follow system
    Dark mode
    • Play Story
    • App Story
ಖಮೇನಿ ಅಂತ್ಯಸಂಸ್ಕಾರದ ಹಿಂದೆ ಅಡಗಿರುವ ಇರಾನ್‌ನ ಧಾರ್ಮಿಕ-ರಾಜಕೀಯ ಲೆಕ್ಕಾಚಾರಗಳು!

ಖಮೇನಿ ಅಂತ್ಯಸಂಸ್ಕಾರದ ಹಿಂದೆ ಅಡಗಿರುವ ಇರಾನ್‌ನ ಧಾರ್ಮಿಕ-ರಾಜಕೀಯ ಲೆಕ್ಕಾಚಾರಗಳು!

ಟೆಹರಾನ್: ಇರಾನ್‌ನ ಪರಮೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳ ಕಾರ್ಯಕ್ರಮವನ್ನು ಪಶ್ಚಿಮ ಏಷ್ಯಾದಲ್ಲಿ ಇರಾನ್ ಸರ್ಕಾರವು ತನ್ನ ರಾಜಕೀಯ ಹಾಗೂ ಧಾರ್ಮಿಕ ಸಂದೇಶಗಳನ್ನು ಬಿತ್ತರಿಸಲು ಬಳಸಿಕೊಳ್ಳುತ್ತಿದೆ.

ಅಮೆರಿಕ ಹಾಗೂ ಇಸ್ರೇಲ್‌ ಜಂಟಿಯಾಗಿ ಫೆಬ್ರುವರಿ 28ರಂದು ನಡೆಸಿದ್ದ ದಾಳಿಯಲ್ಲಿ ಖಮೇನಿ ಮೃತಪಟ್ಟಿದ್ದರು.

ಸುದೀರ್ಘ ಸಮಯದ ಬಳಿಕವೀಗ ವಾರವಿಡೀ ನಡೆಯುತ್ತಿರುವ ಅಂತ್ಯಕ್ರಿಯೆಯ ವಿಧಿವಿಧಾನಗಳು ಹೆಚ್ಚಿನ ಗಮನ ಸೆಳೆದಿದೆ.

ಇರಾನ್ ಒಗ್ಗಟ್ಟಿನ ನಡೆ...

ಇರಾನ್ ಪ್ರಕಾರ ಖಮೇನಿ ಅಂತ್ಯಸಂಸ್ಕಾರದಲ್ಲಿ 70ಕ್ಕೂ ಅಧಿಕ ದೇಶದ ಪ್ರತಿನಿನಿಧಿಗಳು ಭಾಗವಹಿಸಿದ್ದು, ಅಂತಿಮ ಗೌರವ ಸಲ್ಲಿಸಿದ್ದಾರೆ. ಅಂತ್ಯಕ್ರಿಯೆಯ ಕಾರ್ಯಕ್ರಮದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರುವಂತೆಯೂ ಇರಾನ್ ಕರೆ ನೀಡಿತ್ತು.

ಖಮೇನಿ ಅಂತ್ಯಕ್ರಿಯೆಯಲ್ಲಿ ಇರಾನ್ ಅತ್ಯಂತ ಎಚ್ಚರಿಕೆಯಿಂದ ನಡೆ ಇರಿಸುತ್ತಿದೆ. ಅಮೆರಿಕ-ಇಸ್ರೇಲ್ ವಿರುದ್ಧ ಯುದ್ಧವನ್ನು ಎದುರಿಸಿದ್ದ ರೀತಿಯಲ್ಲೇ ರಾಜತಾಂತ್ರಿಕವಾಗಿಯೂ ಚಾಣಕ್ಷ್ಯ ನಡೆಯನ್ನು ಇರಿಸಿದೆ.

ಅತ್ಯಂತ ಜಾಗರೂಕತೆಯಿಂದ ರೂಪಿಸಲಾದ ಸರ್ಕಾರದ ಹೇಳಿಕೆಗಳಿಂದ ಹಿಡಿದು ವ್ಯವಸ್ಥಿತವಾಗಿ ಆಯೋಜಿಸಲಾದ ಕಾರ್ಯಕ್ರಮವು, 1979ರ ಕ್ರಾಂತಿಯ ನಂತರ ಇರಾನ್ ಸರ್ಕಾರದ ಬೆಂಬಲಿಗರಲ್ಲಿ ಒಗ್ಗಟ್ಟಿನ ಭಾವನೆಯನ್ನು ಮೂಡಿಸಲು ಯತ್ನಿಸಲಾಗುತ್ತಿದೆ.

ಖಮೇನಿ ಅವರ ಅಂತ್ಯಸಂಸ್ಕಾರದ ವಿಧಿವಿಧಾನಗಳು ಟೆಹರಾನ್‌ನಲ್ಲಿ ಮೂರು ದಿನಗಳ ಶೋಕಾಚರಣೆಯೊಂದಿಗೆ ಪ್ರಾರಂಭವಾಗಿದ್ದು, ಆ ನಂತರ ಇರಾನ್‌ನ ವಿವಿಧ ನಗರಗಳ ಮೂಲಕ ಮೆರವಣಿಗೆ ಸಾಗಲಿದೆ. ಈ ಇಡೀ ಪ್ರಕ್ರಿಯೆಯು ಪರಮೋಚ್ಚ ನಾಯಕನ ಜೀವನ ಮತ್ತು ಶಿಯಾ ಇಸ್ಲಾಂ ಧರ್ಮದ ಬಲವಾದ ಸಂಕೇತಗಳನ್ನು ಒಳಗೊಂಡಿದೆ.

ಆಯತೊಲ್ಲಾ ಅಲಿ ಖಮೇನಿ ಅಂತಿಮ ದರ್ಶನಕ್ಕೆ ಸೇರಿದ್ದ ಜನಸ್ತೋಮ

'ಹುತಾತ್ಮ' ಖಮೇನಿ

1989ರಿಂದ ಅಧಿಕಾರದಲ್ಲಿದ್ದ ಖಮೇನಿ ಅವರು ಫೆಬ್ರವರಿ 28 ರಂದು ಅಮೆರಿಕ-ಇಸ್ರೇಲ್ ಜಂಟಿ ವೈಮಾನಿಕ ದಾಳಿಯಲ್ಲಿ ಹತ್ಯೆಯಾಗಿದ್ದರು. ಬಳಿಕ ನೂತನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಅಧಿಕಾರ ವಹಿಸಿಕೊಂಡಿದ್ದರು.

ಇರಾನ್ ಅಧಿಕಾರಿಗಳ ಅಧಿಕೃತ ಪ್ರಕಟಣೆಗಳಲ್ಲಿ ಖಮೇನಿ ಅವರ ಸಾವನ್ನು 'ಹುತಾತ್ಮ' ಎಂದು ಬಿಂಬಿಸಲಾಗಿದೆ. ದೇಶದೆಲ್ಲೆಡೆ 'ನಾವು ಮತ್ತೆ ಎದ್ದು ನಿಲ್ಲಬೇಕು' ಎಂಬ ಪೋಸ್ಟರ್ ಹಾಗೂ ಬ್ಯಾನರ್‌ಗಳು ರಾರಾಜಿಸುತ್ತಿವೆ. 'ಧರ್ಮಕ್ಕಾಗಿ ಹೋರಾಡಬೇಕು' ಎಂಬ ಅರೇಬಿಕ್ ಘೋಷಣೆಯನ್ನು ಪ್ರದರ್ಶಿಸಲಾಗಿದೆ. ಈ ಎರಡೂ ಘೋಷಣೆಗಳು ಮುಸ್ಲಿಮರು ದೈವಿಕ ಕಾರ್ಯಕ್ಕಾಗಿ ಒಗ್ಗಟ್ಟಾಗಿ ನಿಲ್ಲಬೇಕು ಎಂದು ಕರೆ ನೀಡುವ ಕುರಾನ್‌ನ ಪವಿತ್ರ ಶ್ಲೋಕಗಳನ್ನು ಆಧರಿಸಿವೆ.

ಮುಷ್ಟಿ ಬಿಗಿದ ಖಮೇನಿ

ಅಂತ್ಯಕ್ರಿಯೆಯ ಅತ್ಯಂತ ಗಮನ ಸೆಳೆದ ಸಂಕೇತವೆಂದರೆ ಮುಷ್ಟಿ ಬಿಗಿದ ಖಮೇನಿ ಅವರ ಚಿತ್ರವಾಗಿದೆ. ಕೆಂಪು ಮತ್ತು ಕಪ್ಪು ಹಿನ್ನೆಲೆಯ ಮೇಲೆ ಮೂಡಿಬಂದ ಈ ಚಿತ್ರವನ್ನು ಸರ್ಕಾರದ ಬಹುತೇಕ ಎಲ್ಲ ಪ್ರಚಾರದಲ್ಲೂ ಬಳಸಲಾಯಿತು. ಈ ಸಂಕೇತಕ್ಕೆ ಒಂದು ಹಿನ್ನೆಲೆಯೂ ಇದೆ.

1981ರಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಖಮೇನಿ ಅವರ ಬಲಗೈ ತೀವ್ರವಾಗಿ ಗಾಯಗೊಂಡಿತ್ತು. ಶಸ್ತ್ರಚಿಕಿತ್ಸೆಯ ನಂತರ ಆ ಕೈಯ ಕಾರ್ಯಕ್ಷಮತೆ ಬಹುತೇಕ ಕಳೆದುಹೋಗಿತ್ತು. ಆದರೆ ಅವರು ಕೊನೆಯುಸಿರೆಳೆಯುವ ಮುನ್ನ ಅವರ ಆ ಆರೋಗ್ಯಕರ ಕೈ ಮುಷ್ಟಿ ಬಿಗಿದಿತ್ತು ಎಂದು ಮೊಜ್ತಬಾ ಸಂದೇಶ ಕಳುಹಿಸಿದ್ದರು ಎನ್ನಲಾಗಿದೆ.

ಇಲ್ಲಿ ಬಳಸಿರುವ ಕಪ್ಪು ಬಣ್ಣವು ದುಃಖವನ್ನು ಸೂಚಿಸಿದರೆ, ಕೆಂಪು ಬಣ್ಣವು ಹುತಾತ್ಮ ಮತ್ತು ಪ್ರತೀಕಾರದ ಸಂಕೇತವಾಗಿದೆ.

ಟೆಹರಾನ್‌ನ ಅತಿ ದೊಡ್ಡ ಧಾರ್ಮಿಕ ಕೇಂದ್ರ 'ಗ್ರ್ಯಾಂಡ್ ಮೊಸಲ್ಲಾ' ಮೇಲೆ ಕೆಂಪು ಧ್ವಜವನ್ನು ಹಾರಿಸಲಾಗಿದೆ. ಅದರ ಮೇಲೆ ಅರೇಬಿಕ್ ಭಾಷೆಯಲ್ಲಿ 'ಓ ಹುಸೇನ್ ಅವರ ಪ್ರತೀಕಾರ ತೀರಿಸಿಕೊಳ್ಳುವವರೇ' ಎಂದು ಬರೆಯಲಾಗಿದೆ. ಇದರ ಮೂಲಕ ಖಮೇನಿ ಅವರ ಹತ್ಯೆಯನ್ನು 1,300 ವರ್ಷಗಳ ಹಿಂದೆ ಕರ್ಬಲಾದಲ್ಲಿ ನಡೆದ ಪ್ರವಾದಿ ಮೊಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಅವರ ಹತ್ಯೆಗೆ ಹೋಲಿಸಲಾಗಿದೆ. ಅಂದರೆ, ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಹೋರಾಟವನ್ನು ಧಾರ್ಮಿಕ ಕರ್ತವ್ಯ ಎಂಬಂತೆ ಬಿಂಬಿಸಲಾಗುತ್ತಿದೆ.

ಆಯತೊಲ್ಲಾ ಅಲಿ ಖಮೇನಿ ಅಂತಿಮ ದರ್ಶನಕ್ಕೆ ಸೇರಿದ್ದ ಜನಸ್ತೋಮ

ಖಮೇನಿ ಪಾರ್ಥಿವ ಶರೀರದ ಮೆರವಣಿಗೆ:

ಖಮೇನಿ ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯುವ ಮಾರ್ಗವನ್ನು ಸಹ ರಾಜಕೀಯವಾಗಿ ಅತ್ಯಂತ ಚತುರತೆಯಿಂದ ಆಯ್ಕೆ ಮಾಡಲಾಗಿದೆ. ಇರಾನ್‌ನ ಪವಿತ್ರ ನಗರವಾದ ಕೋಮ್‌ನಿಂದ ಪ್ರಾರಂಭವಾಗಿ ಇರಾಕ್‌ನ ಪ್ರಮುಖ ಶಿಯಾ ಧಾರ್ಮಿಕ ಕೇಂದ್ರಗಳಾದ ನಜಾಫ್ ಮತ್ತು ಕರ್ಬಲಾ ಮೂಲಕ ಸಾಗಿ, ಅಂತಿಮವಾಗಿ ಇರಾನ್‌ನ ಮಶಾದ್‌ನಲ್ಲಿರುವ ಇಮಾಮ್ ರೆಜಾ ಅವರ ದರ್ಗಾದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಕೋಮ್ ನಗರವು ಇರಾನ್‌ನ ಇಸ್ಲಾಮಿಕ್ ಕ್ರಾಂತಿಯ ಉಗಮ ಸ್ಥಾನವಾಗಿದ್ದರೆ, ಇರಾಕ್‌ನ ನಜಾಫ್ ಇಡೀ ವಿಶ್ವದ ಶಿಯಾ ಮುಸ್ಲಿಮರ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಈ ಮೂಲಕ ಇರಾನ್ ತಾನು ಇಡೀ ಮಧ್ಯಪ್ರಾಚ್ಯದ ಶಿಯಾ ಜಗತ್ತಿನ ನಾಯಕ ಎಂಬುದನ್ನು ಸಾಬೀತುಪಡಿಸಲು ಹೊರಟಿದೆ.

ಇರಾನ್ ಬೆಂಬಲಿತ ಲೆಬನಾನ್‌ನ ಹಿಜ್ಬುಲ್ಲಾ, ಪ್ಯಾಲೆಸ್ಟೀನ್‌ನ ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್ ಹಾಗೂ ಯೆಮನ್‌ನ ಹುತಿ ಬಂಡುಕೋರರ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿದು ಬಂದಿದೆ. ಇರಾನ್‌ನೊಂದಿಗೆ ಮಾತುಕತೆಗೆ ಮಧ್ಯಸ್ಥಿಕೆ ವಹಿಸುತ್ತಿರುವ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾದ ಪ್ರತಿನಿಧಿಗಳೂ ಉಪಸ್ಥಿತರಿದ್ದಾರೆ. ಸೌದಿ ನಿಯೋಗದ ಮುಂದೆ ಓದಲಾದ ಕುರಾನ್ ಶ್ಲೋಕವು ಇಸ್ಲಾಮಿಕ್ ಇತಿಹಾಸದ ಪ್ರಸಿದ್ಧ 'ಬದ್ರ್ ಯುದ್ಧ'ವನ್ನು ಉಲ್ಲೇಖಿಸಿದ್ದು, ಇದು ರಾಜಕೀಯ ವಿಶ್ಲೇಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

(ಆಧಾರ: ಆಲ್ ಜಜೀರಾ)

Dailyhunt
Disclaimer: This content has not been generated, created or edited by Dailyhunt. Publisher: Prajavani