ಟೆಹರಾನ್: ಅಮೆರಿಕ ಮತ್ತು ಇಸ್ರೇಲ್ ಜಂಟಿ ಕಾರ್ಯಾಚರಣೆಯಲ್ಲಿ ಹತ್ಯೆಯಾಗಿರುವ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರ ನಿಧನ ಸುದ್ದಿಯನ್ನು ಪ್ರಕಟಿಸುವಾಗ ಇರಾನ್‌ನ ಸರ್ಕಾರಿ ಸ್ವಾಮ್ಯದ ಟಿವಿ ವಾಹಿನಿಯ ನಿರೂಪಕರೊಬ್ಬರು ತೀವ್ರ ಭಾವುಕರಾದ ಘಟನೆ ನಡೆದಿದೆ.
ಆ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಖಮೇನಿ ಅವರು ಹತ್ಯೆಗೀಡಾಗಿದ್ದಾರೆ ಎಂದು ಇರಾನ್ ಅಧಿಕಾರಿಗಳು ಘೋಷಿಸಿದ್ದು, ಅದೇ ಅಧಿಕೃತ ಹೇಳಿಕೆಯನ್ನು ವಾಹಿನಿ ವರದಿ ಮಾಡಿದೆ. ಈ ಸುದ್ದಿಯನ್ನು ಓದುವ ವೇಳೆ ನಿರೂಪಕರು ತಮ್ಮ ಸಂಯಮ ಕಾಯ್ದುಕೊಳ್ಳಲು ಹರಸಾಹಸ ಪಡುತ್ತಿರುವುದು ಕಂಡುಬಂದಿದೆ.
ಇತರ ಕೆಲವು ವರದಿಗಾರರು ಮತ್ತು ನಿರೂಪಕರು ಸಹ ಭಾವುಕರಾಗಿರುವ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

