Dailyhunt Logo
  • Light mode
    Follow system
    Dark mode
    • Play Story
    • App Story
ಖಮೇನಿಗೆ ವಿದಾಯ: ಬಿಕ್ಕಿ ಬಿಕ್ಕಿ ಅತ್ತ ಸ್ಪೀಕರ್‌ ಖಾಲೀಬಾಫ್‌, ಅಬ್ಬಾಸ್‌ ಅರಾಗ್ಚಿ

ಖಮೇನಿಗೆ ವಿದಾಯ: ಬಿಕ್ಕಿ ಬಿಕ್ಕಿ ಅತ್ತ ಸ್ಪೀಕರ್‌ ಖಾಲೀಬಾಫ್‌, ಅಬ್ಬಾಸ್‌ ಅರಾಗ್ಚಿ

ಟೆಹರಾನ್‌: ಇರಾನ್‌ನ ಪರಮೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಇಂದಿನಿಂದ (ಶನಿವಾರ) ಆರಂಭವಾಗಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಶುಕ್ರವಾರ ನಡೆದ ಖಮೇನಿ ಅವರ ಅಂತಿಮ ವಿದಾಯ ಸಮಾರಂಭದಲ್ಲಿ ಇರಾನ್‌ನ ಸಂಸತ್‌ ಸ್ಪೀಕರ್‌ ಮೊಹಮ್ಮದ್‌ ಬಾಖಿರ್‌ ಖಾಲೀಬಾಫ್‌, ವಿದೇಶಾಂಗ ಸಚಿವ ಸೈಯದ್‌ ಅಬ್ಬಾಸ್‌ ಅರಾಗ್ಚಿ, ಅಧ್ಯಕ್ಷ ಮಸೂದ್‌ ಪೆಜೆಶ್ಕಿಯಾನ್‌, ಧಾರ್ಮಿಕ ಮುಖಂಡರು ಕಣ್ಣೀರಿಟ್ಟಿದ್ದಾರೆ.

ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್‌ ಮೇಲೆ ಯುದ್ಧ ಆರಂಭಿಸಿದಾಗ, ಮೊದಲ ದಿನವಾದ ಫೆಬ್ರುವರಿ 28ರಂದು ನಡೆದ ದಾಳಿಯಲ್ಲಿ ಅಲಿ ಖಮೇನಿ ಅವರ ಹತ್ಯೆಯಾಗಿತ್ತು. ಅವರಿಗೆ 86 ವರ್ಷವಾಗಿತ್ತು.

ಈ ದಾಳಿಯಲ್ಲಿ ಖಮೇನಿ ಅವರ ಹಿರಿಯ ಮಗಳು, ಅಳಿಯ, 14 ತಿಂಗಳ ಮೊಮ್ಮಗಳು, ಇರಾನ್‌ನ ಈಗಿನ ಪರಮೋಚ್ಚ ನಾಯಕ ಆಯತೊಲ್ಲಾ ಮೊಜ್ತಬಾ ಖಮೇನಿ ಅವರ ಪತ್ನಿ ಮೃತಪಟ್ಟಿದ್ದರು.

'ಹುತಾತ್ಮ ನಾಯಕನ ಅಂತಿಮ ವಿದಾಯದ ಸಂದರ್ಭದಲ್ಲಿ ಉನ್ನತ ಮಟ್ಟದ ಭದ್ರತೆ ಮತ್ತು ಸುರಕ್ಷತೆಯನ್ನು ಕಲ್ಪಿಸಲಿದ್ದೇವೆ' ಎಂದು ಟೆಹರಾನ್‌ ಗವರ್ನರ್ ಮೊಹಮ್ಮದ್ ಸಾದೆಗ್ ಮೊತಮದಿಯನ್ ಹೇಳಿದ್ದಾರೆ.

'ಶನಿವಾರ ಮುಂಜಾನೆ ಟೆಹರಾನ್‌ನ ಪ್ರಾರ್ಥನಾ ಮೈದಾನದ ಬಾಗಿಲುಗಳು ತೆರೆಯಲಿವೆ. ಬೆಳಿಗ್ಗೆ 6ಕ್ಕೆ ಮುಂಚಿತವಾಗಿ ಯಾವುದೇ ಪ್ರವೇಶ ಇರುವುದಿಲ್ಲ. ಸಾರ್ವಜನಿಕರು ನಿಗದಿತ ಸಮಯದೊಳಗೆ ಮೈದಾನಕ್ಕೆ ಬರಲು ಯೋಜಿಸಬೇಕು' ಎಂದು ಗವರ್ನರ್ ತಿಳಿಸಿದ್ದಾರೆ.

ಇಸ್ಲಾಮಿಕ್ ಕ್ರಾಂತಿಯ ನಾಯಕನ ಅಂತ್ಯಕ್ರಿಯೆಯ ಮೆರವಣಿಗೆಯ ಹಿನ್ನೆಲೆಯಲ್ಲಿ ಬಾಗ್ದಾದ್ ಅನ್ನು ಸಂಪೂರ್ಣವಾಗಿ ಮುಚ್ಚಲಾಗುವುದು ಎಂದು ಬಾಗ್ದಾದ್ ಗವರ್ನರ್ ಅತ್ವಾನ್ ಅಲ್-ಅತ್ವಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತದ ಪರ ಹಲವು ಗಣ್ಯರು ಸೇರಿದಂತೆ ಇರಾಕ್, ಅಜೆರ್‌ಬೈಜಾನ್‌, ಬಾಂಗ್ಲಾದೇಶ, ಉಜ್ಬೇಕಿಸ್ತಾನ್, ಬೆಲಾರಸ್ ಮತ್ತು ಕಿರ್ಗಿಸ್ತಾನ್ ದೇಶಗಳ ಸಂಸತ್ತಿನ ಸ್ಪೀಕರ್‌ಗಳು, ನಿಕರಾಗುವಾ, ಕಾಂಗೊ ಮತ್ತು ಬುರ್ಕಿನಾ ಫಾಸೊ ದೇಶಗಳ ವಿದೇಶಾಂಗ ಸಚಿವರು, ಈಜಿಪ್ಟ್‌ನ ಸೆನೆಟ್ ಅಧ್ಯಕ್ಷರು, ಪ್ಯಾಲೆಸ್ಟೀನ್‌ ಇಸ್ಲಾಮಿಕ್ ಜಿಹಾದ್ ಚಳುವಳಿಯ ಪ್ರಧಾನ ಕಾರ್ಯದರ್ಶಿ ಮತ್ತು ಒಮಾನ್‌ನ ಸಂಸತ್ತಿನ ಸ್ಪೀಕರ್ ಕೂಡ ಉಪಸ್ಥಿತರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Prajavani