ಕೀವ್: ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ಭಾನುವಾರ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಹೈಪರ್ಸಾನಿಕ್ ಒರೆಶ್ನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ಸಹ ನಡೆಸಿದೆ.
ನಾಲ್ಕು ವರ್ಷಗಳಿಂದ ಉಕ್ರೇನ್ ವಿರುದ್ಧದ ನಡೆಯುತ್ತಿರುವ ಯುದ್ಧದಲ್ಲಿ ಈ ಶಸ್ತ್ರಾಸ್ತ್ರವನ್ನು ಮೂರನೇ ಬಾರಿಗೆ ಬಳಸಲಾಗಿದೆ.
ಮೊದಲ ಬಾರಿಗೆ 2024ರ ನವೆಂಬರ್‌ನಲ್ಲಿ ಬಳಸಲಾಗಿತ್ತು. ನಂತರ 2025ರ ಜನವರಿಯಲ್ಲಿ ಪಶ್ಚಿಮ ಎಲ್ವಿವ್ ಪ್ರದೇಶದ ಮೇಲೆ ಬಳಸಲಾಗಿತ್ತು.
ಕ್ಷಿಪಣಿ ದಾಳಿಯಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ ಮತ್ತು ಕನಿಷ್ಠ 83 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಭಾನುವಾರ ತಿಳಿಸಿದ್ದಾರೆ.
ತೀವ್ರವಾದ ವೈಮಾನಿಕ ದಾಳಿಯಿಂದಾಗಿ ಕೀವ್ ನಗರದಲ್ಲಿರುವ ಸರ್ಕಾರಿ ಕಚೇರಿಗಳು, ವಸತಿ ಕಟ್ಟಡಗಳು, ಶಾಲೆಗಳು, ಮಾರುಕಟ್ಟೆ ಮತ್ತು ಶಾಲೆಗಳ ಸಮೀಪವಿರುವ ಕಟ್ಟಡಗಳು ಹಾನಿಗೊಳಗಾಗಿವೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.
ಪರಮಾಣು ಅಥವಾ ಸಾಂಪ್ರದಾಯಿಕ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಒರೆಶ್ನಿಕ್, ಕೀವ್ ನಗರದ ಬಿಲಾ ತ್ಸೆರ್ಕ್ವಾ ಪ್ರದೇಶದ ಮೇಲೆ ತೀವ್ರ ದಾಳಿ ನಡೆಸಿದೆ ಎಂದು ಝೆಲೆನ್ಸ್ಕಿ ಟೆಲಿಗ್ರಾಮ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
'ಉಕ್ರೇನ್‌ನ ಮಿಲಿಟರಿ ಕಮಾಂಡ್ ಮತ್ತು ನಿಯಂತ್ರಣ ಸೌಲಭ್ಯಗಳು, ವಾಯುನೆಲೆಗಳು ಮತ್ತು ಮಿಲಿಟರಿ ಕೈಗಾರಿಕಾ ಉದ್ಯಮಗಳನ್ನು ಹೊಡೆದುರುಳಿಸಲು ಒರೆಶ್ನಿಕ್ ಜೊತೆಗೆ ಇತರೆ ಬೇರೆ ರೀತಿಯ ಕ್ಷಿಪಣಿಗಳನ್ನು ಬಳಸಲಾಗಿದೆ' ಎಂದು ರಷ್ಯಾದ ರಕ್ಷಣಾ ಸಚಿವಾಲಯವು ಭಾನುವಾರ ದೃಢಪಡಿಸಿದೆ.
ಯಾವುದನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂಬುದನ್ನು ಸಚಿವಾಲಯ ಸ್ಪಷ್ಟಪಡಿಸಿಲ್ಲ. ರಾತ್ರಿ ನಡೆದ ದಾಳಿಯಲ್ಲಿ ಯಾವುದೇ ನಾಗರಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಸಚಿವಾಲಯದ ಅಧಿಕಾರಿಗಳು ರಷ್ಯಾದ ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು ಟಾಸ್ ಸ್ಟೇಟ್ ಏಜೆನ್ಸಿ ಭಾನುವಾರ ವರದಿ ಮಾಡಿದೆ.
'ರಷ್ಯಾದ ಭೂಪ್ರದೇಶದಲ್ಲಿರುವ ನಾಗರಿಕ ಸೌಲಭ್ಯಗಳ ಮೇಲೆ ಉಕ್ರೇನ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ' ಎಂದು ಸಚಿವಾಲಯವು ಹೇಳಿದೆ.
ಕಿವ್ ರಾಜಧಾನಿಯ ಹಲವು ಜಿಲ್ಲೆಗಳಲ್ಲಿನ ವಸತಿ ಕಟ್ಟಡಗಳು, ಶಾಪಿಂಗ್ ಮಾಲ್‌ಗಳು, ಶಾಲೆಗಳು ಸೇರಿದಂತೆ 50 ಸ್ಥಳಗಳಲ್ಲಿ ಹಾನಿ ದಾಖಲಾಗಿದೆ.
'ಉಕ್ರೇನ್‌ನಲ್ಲಿ ವಾಯು ರಕ್ಷಣಾ ಕ್ಷಿಪಣಿ ಕೊರತೆ'
ರಷ್ಯಾ ಭಾರಿ ಪ್ರಮಾಣದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದ್ದು ರಾಜಧಾನಿ ಕೀವ್ ನಗರವೇ ದಾಳಿಯ ಮುಖ್ಯ ಗುರಿಯಾಗಿತ್ತು. ಎಲ್ಲಾ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆಹಿಡಿಯಲು ಸಾಧ್ಯವಾಗಿಲ್ಲ ಮತ್ತು ಕೀವ್‌ನಲ್ಲಿಯೇ ಹೆಚ್ಚಿನ ಹಾನಿಯಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಖಚಿತಪಡಿಸಿದ್ದಾರೆ.
ಉಕ್ರೇನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಡೆದುರುಳಿಸಬಲ್ಲ ಸುಧಾರಿತ ಕ್ಷಿಪಣಿಗಳ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ಇಂಥಹ ಶಸ್ತ್ರಾಸ್ತ್ರಗಳನ್ನು ಹೊಂದಲು ಉಕ್ರೇನ್ ಅಮೆರಿಕದ ಪೇಟ್ರಿಯಠ್ ವಾಯು ರಕ್ಷಣಾ ವ್ಯವಸ್ಥೆಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇಂಥ ಪ್ರತಿಬಂಧಕ ಕ್ಷಿಪಣಿಗಳ ಕೊರತೆ ಉಕ್ರೇನನ್ನು ಕಾಡುತ್ತಿದೆ.

