ಕೋಲ್ಕತ್ತ : ಹೊಸಮುಖ ಮುಕುಲ್ ಚೌಧರಿ (ಔಟಾಗದೇ 54;27ಎ) ಅವರ ಏಕಾಂಗಿ ಸಾಹಸದಿಂದ ಲಖನೌ ಸೂಪರ್ ಜೈಂಟ್ಸ್ ತಂಡವು ಐಪಿಎಲ್ ಪಂದ್ಯದಲ್ಲಿ ಗುರುವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಮೂರು ವಿಕೆಟ್‌ಗಳ ರೋಚಕ ಜಯ ದಾಖಲಿಸಿತು.
ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 182 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಲಖನೌ ತಂಡವು 128 ರನ್‌ಗಳಿಗೆ ಏಳು ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಹಾದಿಯಲ್ಲಿತ್ತು.
ಈ ಹಂತದಲ್ಲಿ ಐಪಿಎಲ್‌ನಲ್ಲಿ ಮೂರನೇ ಪಂದ್ಯವನ್ನು ಆಡಿದ ರಾಜಸ್ಥಾನದ 22 ವರ್ಷದ ಮುಕುಲ್ ಸ್ಮರಣೀಯ ಇನಿಂಗ್ಸ್ ಕಟ್ಟಿದರು.
ಏಳನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಅವರು ಆವೇಶ್ ಖಾನ್ (ಔಟಾಗದೇ 1;3ಎ) ಅವರೊಂದಿಗೆ ಮುರಿಯದ ಎಂಟನೇ ವಿಕೆಟ್‌ಗೆ 54 ರನ್ (24ಎಸೆತ) ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅವರ ಇನಿಂಗ್ಸ್‌ನಲ್ಲಿ ಎರಡು ಬೌಂಡರಿ ಮತ್ತು ಏಳು ಭರ್ಜರಿ ಸಿಕ್ಸರ್ ಸೇರಿತ್ತು.
ಕೊನೆಯ ಎರಡು ಓವರ್‌ಗಳಲ್ಲಿ ಗೆಲುವಿಗೆ 30 ರನ್ ಬೇಕಿತ್ತು. ಕ್ಯಾಮರೂನ್ ಗ್ರೀನ್ ಹಾಕಿದ 19ನೇ ಓವರ್‌ನಲ್ಲಿ ಹೆಲಿಕಾಪ್ಟರ್ ಶಾಟ್ ಮೂಲಕ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದ ಮುಕುಲ್ ಪಂದ್ಯಕ್ಕೆ ಮಹತ್ವದ ತಿರುವು ನೀಡಿದರು. ಮೊದಲ ಜಯದ ಆಸೆಯಲ್ಲಿದ್ದ ಕೋಲ್ಕತ್ತಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಸಿಗಲಿಲ್ಲ.
ಕೊನೆಯ ಓವರ್‌ನಲ್ಲಿ ಜಯಕ್ಕೆ 14 ರನ್ ಬೇಕಿತ್ತು. ವೈಭವ್ ಅರೋರಾ ಹಾಕಿದ ಮೊದಲ ಎಸೆತದಲ್ಲಿ ಸ್ಟೈಕ್‌ನಲ್ಲಿದ್ದ ಆವೇಶ್ ಒಂಟಿ ರನ್ ತೆಗೆದರು. ನಂತರ ಸ್ಟೈಕ್‌ಗೆ ಬಂದ ಮುಕುಲ್ ಎರಡನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದರು. ಮೂರು ಮತ್ತು ನಾಲ್ಕನೇ ಎಸೆತಗಳು ಡಾಟ್ ಆದವು. ಈ ಹಂತದಲ್ಲಿ ಕೋಲ್ಕತ್ತ ತಂಡದ ಪಾಳಯದಲ್ಲಿ ಸಂಭ್ರಮ ಮೂಡಿತು. ಆದರೆ, ಅದು ಹೆಚ್ಚು ಹೊತ್ತು ಇರಲಿಲ್ಲ. ಐದನೇ ಎಸೆತದಲ್ಲಿ ಮುಕುಲ್ ಮತ್ತೆ ಸಿಕ್ಸರ್ ಬಾರಿಸಿದ್ದರಿಂದ ರನ್ ಸಮನಾಯಿತು. ಕೊನೆಯ ಎಸೆತದಲ್ಲಿ 'ಬೈ' ಮೂಲಕ ಒಂಟಿ ರನ್ ತೆಗೆದು ಸಂಭ್ರಮಿಸಿದರು. ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗೆ 182 ರನ್ ಗಳಿಸಿತು. ಮಧ್ಯಮ ಕ್ರಮಾಂಕದಲ್ಲಿ ಆಯುಷ್ ಬಡೋನಿ (54;34ಎ) ಅವರು ತಂಡಕ್ಕೆ ಆಸರೆಯಾದರು. ನಾಯಕ ರಿಷಭ್ ಪಂತ್ (10) ನಿರಾಸೆ ಮೂಡಿಸಿದರು.
ಇದಕ್ಕೂ ಮುನ್ನ ಅಂಗಕ್ರಿಶ್ ರಘುವಂಶಿ (45; 33ಎ) ಮತ್ತು ನಾಯಕ ಅಜಿಂಕ್ಯ ರಹಾನೆ (41; 24ಎ) ಆಟದ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ಎದುರು 4 ವಿಕೆಟ್‌ಗೆ 181 ರನ್ ಗಳಿಸಿತು. ತಂಡವು 13.1 ಓವರ್‌ಗಳಲ್ಲಿ 111 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ರೋವ್ಮನ್ ಪೊವೆಲ್ (ಅಜೇಯ 39; 24ಎ, 4X4, 6X2) ಮತ್ತು ಕ್ಯಾಮರಾನ್ ಗ್ರೀನ್ (ಅಜೇಯ 32; 24ಎ, 4X3, 6X1) ಅವರು ಕೊನೆಯಲ್ಲಿ ಅಬ್ಬರಿಸಿದರು.
ಮುಕುಲ್ ಚೌಧರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಸಂಕ್ಷಿಪ್ತ ಸ್ಕೋರು:
ಕೋಲ್ಕತ್ತ ನೈಟ್ ರೈಡರ್ಸ್: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 181 (ಅಜಿಂಕ್ಯ ರಹಾನೆ 41, ಅಂಗಕ್ರಿಷ್ ರಘುವಂಶಿ 45, ಕ್ಯಾಮರಾನ್ ಗ್ರೀನ್ ಔಟಾಗದೇ 32, ರೋವ್ಮನ್ ಪೊವೆಲ್ ಔಟಾಗದೇ 39, ಮಣಿಮಾರನ್ ಸಿದ್ಧಾರ್ಥ್ 34ಕ್ಕೆ1, ದಿಗ್ವೇಶ್ ಸಿಂಗ್ ರಾಠಿ 25ಕ್ಕೆ1, ಆವೇಶ್ ಖಾನ್ 44ಕ್ಕೆ1).
ಲಖನೌ ಸೂಪರ್ ಜೈಂಟ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 182 (ಆಯುಷ್ ಬಡೋನಿ 54, ಮುಕುಲ್ ಚೌಧರಿ ಔಟಾಗದೇ 54; ವೈಭವ್ ಅರೋರಾ 38ಕ್ಕೆ 2, ಅನುಕೂಲ್ ರಾಯ್ 32ಕ್ಕೆ 2). ಪಂದ್ಯದ ಆಟಗಾರ: ಮುಕುಲ್ ಚೌಧರಿ

