ಕೋಲಾರ: ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷಗಳು ಇರುವಂತೆಯೇ ಕೋಲಾರ ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಚಾರವಾಗಿ ಈಗಲೇ ಕಿತ್ತಾಟ ಶುರುವಾದಂತಿದೆ. ಈ ಸಂಬಂಧ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮುಂದೆಯೇ ಎರಡು ಬಣಗಳ ಜಗಳ ನಡೆದಿದೆ.
ಕೋಲಾರ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಸಿಎಂಆರ್ ಶ್ರೀನಾಥ್ ಬೆಂಬಲಿಗರು ಹಾಗೂ ಇದೇ ಕ್ಷೇತ್ರದಲ್ಲಿ ಸ್ಪರ್ಧೆಗೆ ಸಿದ್ಧತೆಯಲ್ಲಿ ತೊಡಗಿದ್ದಾರೆ ಎನ್ನಲಾಗಿರುವ ಪೊಲೀಸ್ ಅಧಿಕಾರಿಯೊಬ್ಬರ ಬೆಂಬಲಿಗರ ನಡುವಿನ ವಾಕ್ಸಮರಕ್ಕೆ ಬೆಂಗಳೂರಿನ ಜೆ.ಪಿ.ಭವನದಲ್ಲಿ ಗುರುವಾರ ನಡೆದ ಈ ಸಭೆ ಸಾಕ್ಷಿಯಾಯಿತು.
ಕೋಲಾರ ಜಿಲ್ಲಾ ಮುಖಂಡರ ಈ ಸಭೆಯಲ್ಲಿ ಕ್ಷೇತ್ರದ ರಾಜಕೀಯ ವಿದ್ಯಮಾನಗಳ ಚರ್ಚೆ ನಡೆಯಿತು. ಸಂಘಟನೆ ಬಗ್ಗೆ ಕುಮಾರಸ್ವಾಮಿ ಮಾಹಿತಿ ಪಡೆದುಕೊಂಡರು. ಕೆಲ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ, ಸಲಹೆ ಆಲಿಸಿದರು.
ಈ ವೇಳೆ ಕೆಲವರು ಸಿಎಂಆರ್ ಶ್ರೀನಾಥ್ ವಿರುದ್ಧ ದೂರಿನ ಸುರಿಮಳೆ ಹರಿಸಿದರು. 'ಒಂದು ಕಾಲನ್ನು ಕೋಲಾರ ಕ್ಷೇತ್ರದಲ್ಲೂ, ಇನ್ನೊಂದು ಕಾಲನ್ನು ಶ್ರೀನಿವಾಸಪುರ ಕ್ಷೇತ್ರದಲ್ಲೂ ಇಟ್ಟುಕೊಂಡಿದ್ದಾರೆ. ಇದರಿಂದ ಕೋಲಾರದಲ್ಲಿ ಪಕ್ಷ ಸಂಘಟನೆಗೆ ಹಿನ್ನಡೆ ಆಗುತ್ತಿದೆ' ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು.
ಆಗ ಸಿಎಂಆರ್ ಶ್ರೀನಾಥ್ ಬೆಂಬಲಿಗರು ಪೊಲೀಸ್ ಅಧಿಕಾರಿಯ ಹೆಸರು ಹೇಳಿ, 'ಆ ಅಧಿಕಾರಿಯ ಜೊತೆ ಜೆಡಿಎಸ್‌ನ ಕೆಲ ಮುಖಂಡರು ಸುತ್ತಾಡುತ್ತಿದ್ದಾರೆ. ಇದರಿಂದ ಪಕ್ಷದಲ್ಲಿ ಒಡಕು ಸೃಷ್ಟಿಯಾದ ವಾತಾವರಣವಿದೆ. ಕಾರ್ಯಕರ್ತರಲ್ಲೂ ಗೊಂದಲ ಉಂಟಾಗಿದೆ. ಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದು, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದು ಶ್ರೀನಾಥ್ ಮಾತ್ರ' ಎಂದರು.
ಈ ಹಂತದಲ್ಲಿ ಎರಡೂ ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮುಖಂಡರೊಬ್ಬರು ಮಾತನಾಡಿ, 'ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬುದು ನಮಗೆ ಮುಖ್ಯ ಅಲ್ಲ; ಜೆಡಿಎಸ್ ಗೆಲುವು ಮುಖ್ಯ, ಕುಮಾರಣ್ಣ ಮುಖ್ಯಮಂತ್ರಿ ಆಗುವುದು ಮುಖ್ಯ. ಕ್ಷೇತ್ರದಲ್ಲಿ ಕೆಲವರು ವ್ಯಕ್ತಿ ಪೂಜೆಯಲ್ಲಿ ತೊಡಗಿದ್ದು, ಅದನ್ನು ಬಿಟ್ಟುಬಿಡಬೇಕು. ಯಾರಿಗಾದರೂ ಟಿಕೆಟ್ ಕೊಡಲಿ' ಎಂದರು.
ಮತ್ತೊಬ್ಬರು ಮಾತನಾಡಿ, 'ಕೋಲಾರ ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ವಾಸ್ತವವನ್ನು ಕೆಲವರು ತಮಗೆ ಸರಿಯಾಗಿ ತಲುಪಿಸುತ್ತಿಲ್ಲ. ಬದಲಾಗಿ ಸುಳ್ಳು ವಿಚಾರಗಳನ್ನು ತಮಗೆ ತಲುಪಿಸುತ್ತಿದ್ದಾರೆ' ಎಂದು ಆರೋಪಿಸಿದರು.
ಕೊನೆಯಲ್ಲಿ ಕುಮಾರಸ್ವಾಮಿ ಎರಡೂ ಗುಂಪುಗಳ ಮುಖಂಡರು, ಕಾರ್ಯಕರ್ತರನ್ನು ಸಮಾಧಾನಪಡಿಸಿದರು. ಕಿತ್ತಾಟ ಬಿಟ್ಟು ಪಕ್ಷ ಸಂಘಟನೆ ಮಾಡಿ ತಮ್ಮ ಸಾಮರ್ಥ್ಯ ತೋರಿಸಬೇಕು ಎಂದು ಸೂಚನೆ ನೀಡಿದರು.
ಭಾವನಾತ್ಮಕವಾಗಿ ಕೋಲಾರ ನನಗೆ ಅತ್ಯಂತ ಹತ್ತಿರದ ಜಿಲ್ಲೆ. ಸಂಘಟನೆ ಸೊರಗಿದೆ ಎಂಬ ಬಗ್ಗೆ ಕಾರ್ಯಕರ್ತರು ನಿರಂತರವಾಗಿ ಬೇಸರ ತೋಡಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಮುಖಂಡರು ಇದ್ದೀರಿ. ಇಬ್ಬರು ಶಾಸಕರಿದ್ದಾರೆ, ಒಬ್ಬ ಸಂಸದರೂ ಇದ್ದಾರೆ. ಪಕ್ಷವನ್ನು ಬಲಪಡಿಸಲು ಸಮಸ್ಯೆ ಏನು ಎಂದು ಕಟುವಾಗಿ ಪ್ರಶ್ನಿಸಿದರು.
ಆಗ ಎಲ್ಲಾ ಮುಖಂಡರು, 'ಪಕ್ಷ ಹಾಗೂ ವರಿಷ್ಠರ ನಿರ್ಧಾರಗಳಿಗೆ ಬದ್ಧವಾಗಿ ಕೆಲಸ ಮಾಡುತ್ತೇವೆ' ಎಂದು ಭರವಸೆ ನೀಡಿದರು.
ಸಭೆಯಲ್ಲಿ ಕೋಲಾರ ಜಿಲ್ಲೆಯಿಂದ ಸಂಸದ ಎಂ.ಮಲ್ಲೇಶ್ ಬಾಬು, ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಇಂಚರ ಗೋವಿಂದರಾಜು, ತೂಪಲ್ಲಿ ಚೌಡರೆಡ್ಡಿ, ಕೋಮುಲ್ ನಿರ್ದೇಶಕ ಚೆಲುವನಹಳ್ಳಿ ನಾಗರಾಜ್, ಮುಖಂಡರಾದ ಸಿಎಂಆರ್ ಶ್ರೀನಾಥ್, ವಡಗೂರು ಡಿ.ವಿ.ಹರೀಶ್, ಜೆ.ಇ.ರಾಮೇಗೌಡ, ಹೂಡಿ ವಿಜಯ್ ಕುಮಾರ್, ಬಾಬುಮೌನಿ, ವಕ್ಕಲೇರಿ ರಾಮು, ತಾಲ್ಲೂಕು ಘಟಕಗಳ ಅಧ್ಯಕ್ಷರು, ಕೆಲ ಕಾರ್ಯಕರ್ತರು ಪಾಲ್ಗೊಂಡಿದ್ದರು. ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ, ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಇದ್ದರು. ವಿದೇಶ ಪ್ರವಾಸದಲ್ಲಿರುವ ಕಾರಣ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಭಾಗವಹಿಸಿರಲಿಲ್ಲ.
ಗ್ಯಾಂಗ್ ಬಿಡಿ; ಸಂಘಟನೆ ಮಾಡಿ
'ನನ್ನ ಬಳಿ ತಮ್ಮ ಗ್ಯಾಂಗ್‌ಗಳ ಆಟ ನಡೆಯಲ್ಲ. ಪಕ್ಷದಲ್ಲಿ ಕಾರ್ಯಕರ್ತರೇ ಮೊದಲು, ಅವರ ಹಿತಕ್ಕೆ ಧಕ್ಕೆ ಬರಬಾರದು. ಮೊದಲು ಪಕ್ಷ ಸಂಘಟನೆ ಮಾಡಿ ತಮ್ಮ ಸಾಮರ್ಥ್ಯ ತೋರಿಸಬೇಕು' ಎಂದು ಎಚ್.ಡಿ.ಕುಮಾರಸ್ವಾಮಿ, ಕೋಲಾರ ಕ್ಷೇತ್ರದ ಮುಖಂಡರಿಗೆ ಸಭೆಯಲ್ಲಿ ಸೂಚನೆ ನೀಡಿರುವುದು ಗೊತ್ತಾಗಿದೆ.
2028ರ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಐದು ಸೀಟು ಗೆಲ್ಲಬೇಕು. ಆ ನಿಟ್ಟಿನಲ್ಲಿ ಸಿದ್ಧತೆ ನಡೆಸಬೇಕು. ಮುಂದಿನ ಎರಡು ವರ್ಷಗಳಲ್ಲಿ ಪಕ್ಷ ಬಲಪಡಿಸಬೇಕು. ತಮ್ಮ ದೂರುಗಳನ್ನು ಇಲ್ಲಿ ತಂದು ಹೇಳಬೇಡಿ. ಯಾರು ಪಕ್ಷವನ್ನು ಸಮರ್ಥವಾಗಿ ಸಂಘಟನೆ ಮಾಡಿ, ಕಾರ್ಯಕರ್ತರ ವಿಶ್ವಾಸ ಗಿಟ್ಟಿಸಿಕೊಳ್ಳುತ್ತಾರೋ ಅವರಿಗೆ ಟಿಕೆಟ್ ಸಿಗುತ್ತದೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ತಿಳಿಸಿದ್ದಾಗಿ ಮೂಲಗಳು ಹೇಳಿವೆ.
'ಕೋಲಾರ ಜಿಲ್ಲೆ ಪ್ರತಿ ಕ್ಷೇತ್ರದಲ್ಲಿ ನನ್ನದೇ ಆದ ಒಂದು ತಂಡವಿದೆ. ಅದು ಆಗಾಗ್ಗೆ ಮಾಹಿತಿ ರವಾನಿಸುತ್ತಿರುತ್ತದೆ' ಎಂದೂ ತಿಳಿಸಿದ್ದಾರೆ.
ವರ್ತೂರು ಜೊತೆ ತಿರುಗಾಟಕ್ಕೆ ಸಿಡಿಮಿಡಿ
ಕೆಲ ತಿಂಗಳ ಹಿಂದೆ ಕುರುಬ ಸಮುದಾಯದ ಮುಖಂಡರ ಸಭೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಟೀಕಿಸಿದ್ದ ಮಾಜಿ ಸಚಿವ ವರ್ತೂರು ಪ್ರಕಾಶ್ ಜೊತೆ ಸದಾ ತಿರುಗಾಡುತ್ತಿರುವುದಕ್ಕೆ, ಹೆಚ್ಚು ಒಡನಾಟ ಹೊಂದಿರುವುದಕ್ಕೆ ಹಾಗೂ ಅವರ ಬಗ್ಗೆ ಮೆಚ್ಚುಗೆ ಮಾತನಾಡುತ್ತಿರುವ ಸಂಬಂಧ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ವಿರುದ್ಧ ಕುಮಾರಸ್ವಾಮಿ ಬಳಿ ಕೆಲ ಮುಖಂಡರು ದೂರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜುಲೈ 20ರೊಳಗೆ ಜಿಲ್ಲಾಧ್ಯಕ್ಷರ ನೇಮಕ
ಎರಡು ಗುಂಪುಗಳ ಜಗಳದ ನಡುವೆಯೇ ಸಭೆಯಲ್ಲಿ ಕೋಲಾರ ಜಿಲ್ಲಾ ಜೆಡಿಎಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕ ಕುರಿತು ಚರ್ಚೆ ನಡೆಯಿತು.
ಜುಲೈ 20ರೊಳಗೆ ನೇಮಕ ಮಾಡಲಾಗುವುದು ಎಂದು ಕುಮಾರಸ್ವಾಮಿ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆಲವರು ಪಕ್ಷದ ಸಂಘಟನೆಯಲ್ಲಿ ಎಸ್.ಸಿ ಹಾಗೂ ಎಸ್.ಟಿ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕೆಂದು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತಂತೆಯೂ ಕುಮಾರಸ್ವಾಮಿ ಮಾಹಿತಿ ಪಡೆದರು.
ಕೋಲಾರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಸೃಷ್ಟಿಯಾಗಿದೆ. ಜನರ ಜತೆ ಸದಾ ಕೆಲಸ ಮಾಡಿ. ಅವರ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ನಡೆಸಿ. ಯುವ ಜನರನ್ನು ಪಕ್ಷಕ್ಕೆ ತನ್ನಿ ಎಂದು ನಿರ್ದೇಶನ ನೀಡಿದ್ದಾರೆ.
-ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಜೆಡಿಎಸ್ ಅಧ್ಯಕ್ಷಯಾರಿಗೆ ಟಿಕೆಟ್ ಕೊಡಬೇಕು, ಯಾರಿಗೆ ಕೊಡಬಾರದೆಂದು ನಿರ್ಧಾರ ಮಾಡಲು ಈ ಸಭೆ ಕರೆದಿದ್ದಲ್ಲ. ಸಭೆಯು ಸಂಘಟನೆ ಮತ್ತು ನೂತನ ಪದಾಧಿಕಾರಿಗಳನ್ನು ನೇಮಕ ಮಾಡುವ ಚರ್ಚೆಗಷ್ಟೇ ಸೀಮಿತ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260703-18-496277513

