Dailyhunt Logo
  • Light mode
    Follow system
    Dark mode
    • Play Story
    • App Story
ಕೋಲಾಟ, ಜಾನಪದ ನೃತ್ಯ, ಏಕಪಾತ್ರಾಭಿನಯ: ಮಹಿಳಾ ದಸರಾದಲ್ಲಿ ನಾರಿಯರ ಮಿಂಚು

ಕೋಲಾಟ, ಜಾನಪದ ನೃತ್ಯ, ಏಕಪಾತ್ರಾಭಿನಯ: ಮಹಿಳಾ ದಸರಾದಲ್ಲಿ ನಾರಿಯರ ಮಿಂಚು

ಶ್ರೀರಂಗಪಟ್ಟಣ: ಪಟ್ಟಣದ ಶ್ರೀರಂಗ ವೇದಿಕೆಯಲ್ಲಿ ದಸರಾ ಉತ್ಸವದ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಮಹಿಳಾ ದಸರಾದಲ್ಲಿ ಮಹಿಳೆಯರು ವಿವಿಧ ಪ್ರಕಾರದ ನೃತ್ಯ ಮತ್ತು ಹಾಡುಗಳ ಮೂಲಕ ಜನರನ್ನು ರಂಜಿಸಿದರು.

ಮಾದೇಶ್ವರನ ಮಹಿಮೆ ಸಾರುವ ಹಾಡು ಗಮನ ಸೆಳೆಯಿತು. ಕೋಲಾಟ ಮತ್ತು ಜಾನಪದ ನೃತ್ಯಗಳನ್ನು ಪ್ರದರ್ಶಿಸಿದರು.

ಭರತ ನಾಟ್ಯ, ಸೋಬಾನೆ ಪದ, ತತ್ವಪದ ಗಾಯನ ಮತ್ತು ಏಕಪಾತ್ರಾಭಿನಯ ಪ್ರದರ್ಶನಗಳು ನಡೆದವು.

ಪಟ್ಟಣದ ಮಿನಿ ವಿಧಾನಸೌಧದ ಆವಣದಲ್ಲಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಮಂದಿ ಬಣ್ಣ ಬಣ್ಣದ ಹಾಗೂ ವಿವಿಧ ನಮೂನೆಯ ರಂಗೋಲಿಗಳನ್ನು ಬಿಡಿಸಿದರು. ಶ್ರೀರಂಗನಾಥಸ್ವಾಮಿ, ನೃತ್ಯ ಮಾಡುವ ನವಿಲು, ಪುಷ್ಪ, ಹಂಸ, ತೋರಣಗಳ ರಂಗೋಲಿಗಳು ಕಂಡು ಬಂದವು. ಚುಕ್ಕಿ ಮತ್ತು ಎಳೆಗಳ ಮಾದರಿಯಲ್ಲಿ ರಂಗೋಲಿಗಳನ್ನು ಬಿಡಿಸಲಾಗಿತ್ತು.

ಮೆಹಂದಿ ಮತ್ತು ಕೇಶ ವಿನ್ಯಾಸ ಸ್ಪರ್ಧೆಗಳಲ್ಲಿ 60ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು ಹಾಗೂ ಎನ್‌ಆರ್‌ಎಲ್‌ಎಂ ಸದಸ್ಯರು ಹಾಗೂ ಬಾಲಕಿಯರ ಬಾಲ ಮಂದಿರದ ಮಕ್ಕಳು ಸಾಮೂಹಿಕ ನೃತ್ಯ ಮಾಡಿದರು. ಬಾಲ್ಯ ವಿವಾಹ ನಿಷೇಧ ಮತ್ತು ಪೋಕ್ಸೊ ಸಂಬಂಧಿತ ಕಿರು ನಾಟಕಗಳನ್ನು ಪ್ರದರ್ಶಿಸಿ ನೆರೆದಿದ್ದವರಲ್ಲಿ ಜಾಗೃತಿ ಮೂಡಿಸಿದರು.

ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ 100ಕ್ಕೂ ಹೆಚ್ಚು ಮಕ್ಕಳು ವಿವಿಧ ವೇಷ ಧರಿಸಿ ಶ್ರೀರಂಗ ವೇದಿಕೆಯ ಮೇಲೆ ಹೆಜ್ಜೆ ಹಾಕಿದರು. ಮಹಾತ್ಮ ಗಾಂಧಿ, ಅಂಬೇಡ್ಕರ್, ಸುಭಾಷ್‌ಚಂದ್ರ ಬೋಸ್, ಜವಾಹರಲಾಲ್ ನೆಹರೂ, ಒನಕೆ ಓಬವ್ವ, ಕಿತ್ತೂರು ರಾಣಿ ಚನ್ನಮ್ಮ, ಪೊಲೀಸ್, ಸೈನಿಕ, ಶ್ರೀಕೃಷ್ಣ ಇನ್ನಿತರ ವೇಷ ಧರಿಸಿ ಗಮನ ಸೆಳೆದರು.

ಮಹಿಳಾ ದಸರಾವನ್ನು ಸುಮತಿ ರಮೇಶ ಬಂಡಿಸಿದ್ದೇಗೌಡ ಉದ್ಘಾಟಿಸಿದರು. 'ಮಹಿಳೆಯರ ಸಂಗೀತ ಮತ್ತು ಕಲೆಗಳ ಅಭಿವ್ಯಕ್ತಿಗೆ ಮಹಿಳಾ ದಸರಾ ಸೂಕ್ತ ವೇದಿಕೆಯಾಗಿದೆ. ಮಹಿಳೆಯರು ಹಾಗೂ ಯುವತಿಯರು ನೃತ್ಯ, ಹಾಡು, ಗಾಯನ ಮತ್ತು ಆಟೋಟಗಳಲ್ಲಿ ಪಾಲ್ಗೊಂಡು ದಸರಾ ಉತ್ಸವಕ್ಕೆ ಮೆರಗು ತಂದಿದ್ದಾರೆ. ನಾಡ ಹಬ್ಬ ದಸರಾ ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕವಾಗಿದ್ದು, ಸಾರ್ವಜನಿಕರು ಹೆಚ್ಚು ಪಾಲ್ಗೊಳ್ಳಬೇಕು' ಎಂದು ಹೇಳಿದರು.

ತಹಶೀಲ್ದಾರ್‌ ಚೇತನಾ ಯಾದವ್, ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಎಸ್‌. ಸಕಲೇಶ್ವರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಚಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮನುಜಶ್ರೀ, ಆಚೀವರ್ಸ್‌ ಅಕಾಡೆಮಿ ಮುಖ್ಯಸ್ಥ ಆರ್‌. ರಾಘವೇಂದ್ರ, ಪುರಸಭೆ ಮುಖ್ಯಾಧಿಕಾರಿ ಎಂ. ರಾಜಣ್ಣ, ತಾಲ್ಲೂಕು ಯೋಜನಾಧಿಕಾರಿ ಎಂ.ಎಂ. ತ್ರಿವೇಣಿ ಇದ್ದರು.

ಗಮನಸೆಳೆದ ಆಟೋಟ ಸ್ಪರ್ಧೆ

ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಮೈದಾನದಲ್ಲಿ ಮಹಿಳೆಯರಿಗಾಗಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಿಕೆ ಒಡೆಯುವ, ಬಕೆಟ್‌ಗೆ ಚೆಂಡು ಹಾಕುವ ಮತ್ತು ಸಂಗೀತ ಕುರ್ಚಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿವಿಧ ವಯೋಮಾನಕ್ಕೆ ಅನುಗುಣವಾಗಿ ಸ್ಪರ್ಧೆಗಳು ನಡೆದವು.

ತಾಲ್ಲೂಕು ಕ್ರೀಡಾಂಗಣದಲ್ಲಿ ನೀರು ತುಂಬಿದ ಬಿಂದಿಗೆ ಹೊತ್ತು ಓಡುವ ಸ್ಪರ್ಧೆಯ ಕುತೂಹಲಕಾರಿಯಾಗಿತ್ತು. ಪಟ್ಟಣ ಮಾತ್ರವಲ್ಲದೆ ತಾಲ್ಲೂಕಿನ ವಿವಿಧ ಗ್ರಾಮಗಳ ಮಹಿಳೆಯರು ಈ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.

261019-40-1662865274

Dailyhunt
Disclaimer: This content has not been generated, created or edited by Dailyhunt. Publisher: Prajavani