Dailyhunt
ಕೊಳವೆಬಾವಿ ದುರಸ್ತಿಗೆ ಒತ್ತಾಯಿಸಿ ಪ್ರತಿಭಟನೆ

ಕೊಳವೆಬಾವಿ ದುರಸ್ತಿಗೆ ಒತ್ತಾಯಿಸಿ ಪ್ರತಿಭಟನೆ

ಕಲಬುರಗಿ: ನಗರದ ವಾರ್ಡ್‌ 39ನೇ ವಾರ್ಡ್‌ನಲ್ಲಿ ಬರುವ ಬಸವ ನಗರದಲ್ಲಿ ಕೆಟ್ಟಿರುವ ಎರಡು ಕೊಳವೆಬಾವಿಗಳನ್ನು ದುರಸ್ತಿ ಮಾಡಬೇಕು ಹಾಗೂ ಸಮರ್ಪಕವಾಗಿ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ (ಕಮ್ಯುನಿಸ್ಟ್) ‍ಪಕ್ಷದ ಸ್ಥಳೀಯ ಸಮಿತಿ ಕಾರ್ಯಕರ್ತರು ಮಹಾನಗರ ಪಾಲಿಕೆ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಈಗಾಗಲೇ ಹಲವು ಬಾರಿ ಅಧಿಕಾರಿಗಳನ್ನು ಭೇಟಿ ಮಾಡಿದಾಗಲೂ ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ಸಿಕ್ಕಿತ್ತು. ಆದರೆ, ಮೂರು ತಿಂಗಳಾದರೂ ಜನಗಳ ಸಮಸ್ಯೆಯು ಬಗೆಹರಿದಿಲ್ಲ. ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಸಮೀಪದಲ್ಲಿರುವ ಈ ಬಡಾವಣೆಯಲ್ಲಿ 800ಕ್ಕಿಂತ ಹೆಚ್ಚಿನ ಕುಟುಂಬಗಳು ವಾಸಿಸುತ್ತಿವೆ. ದಿನಗೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಮನೆ ಕೆಲಸ ಮಾಡುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿರುವ ಎರಡು ಕೊಳವೆಬಾವಿಗಳು ಕೆಟ್ಟು ಹೋಗಿದ್ದು, ತಕ್ಷಣವೇ ದುರಸ್ತಿ ಮಾಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ನೀರಿನ ಅಭಾವದಿಂದಾಗಿ ಇಲ್ಲಿನ ಜನರು ಕುಡಿಯುವ ನೀರಿಗಾಗಿ ಕಿಲೋಮೀಟರ್ ದೂರ ಹೋಗಿ ಹಣ ಕೊಟ್ಟು ಖರೀದಿ ಮಾಡುವ ಪರಿಸ್ಥಿತಿ ಬಂದೊದಗಿದೆ. ಗೃಹಬಳಕೆ ಮತ್ತು ಸ್ನಾನಕ್ಕೆ ನೀರು ಬೇಕಾದರೆ ಇಲ್ಲಿನ ಜನರು ಒಂದು ದಿನ ಕೆಲಸ ಬಿಟ್ಟು ನೀರು ತರಬೇಕಾದ ಅನಿವಾರ್ಯತೆ ಉದೆ. ಆದ್ದರಿಂದ ಕೂಡಲೇ ನೀರು ಪೂರೈಕೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿ ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ ಅವರಿಗೆ ಮನವಿ ಸಲ್ಲಿಸಿದರು.

ಪಕ್ಷದ ಸ್ಥಳೀಯ ಸಮಿತಿ ಕಾರ್ಯದರ್ಶಿ ಎಸ್‌.ಎಂ. ಶರ್ಮಾ, ಅಶ್ವಿನಿ, ಡಾ.ಸೀಮಾ ದೇಶಪಾಂಡೆ, ಭೀಮಾಶಂಕರ ಪಾಣೆಗಾಂವ ಹಾಗೂ ಬಡಾವಣೆಯ ನಿವಾಸಿಗಳಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Prajavani