ಚನ್ನರಾಯಪಟ್ಟಣ: ಹಿರೀಸಾವೆ ಪೊಲೀಸ್ ಠಾಣೆ ವ್ಯಾಪ್ತಿಯ ಅಯ್ಯಾರಹಳ್ಳಿ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣದ ಅಪರಾಧಿ ರಾಜೇಂದ್ರ ಎಂಬಾತನಿಗೆ ಚನ್ನರಾಯಪಟ್ಟಣದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಗ್ರಾಮದ ಸುಬ್ಬೇಗೌಡರು ಮುಸುಕಿನ ಜೋಳದ ಬಿತ್ತನೆ ಮಾಡಿದ್ದ ತೋಟಕ್ಕೆ ಬಂದಿದ್ದ ಆರೋಪಿ ರಾಜೇಂದ್ರ, ಪೈಪ್‌ಲೈನ್ ಹಾಕಲು ತೆಗೆದಿದ್ದ ಗುಂಡಿಯ ವಿಚಾರದಲ್ಲಿ ಜಗಳ ಉಂಟಾಗಿತ್ತು.
ಗುದ್ದಲಿ ಕಾವಿನಿಂದ ಸುಬ್ಬೇಗೌಡರ ತಲೆಯ ಹಿಂಭಾಗಕ್ಕೆ ಹೊಡೆದಿದ್ದ ಆರೋಪಿ ರಾಜೇಂದ್ರ ಕೊಲೆ ಮಾಡಿದ್ದ.
ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿ ಸಂತೋಷ್ ಎಸ್. ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕಲ್ಪನಾ ಎಂ.ಎಸ್., ಆರೋಪಿಯ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ತೀರ್ಮಾನಿಸಿ, ಜೀವಾವಧಿ ಶಿಕ್ಷೆ ಹಾಗೂ ₹45 ಸಾವಿರ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ ಒಂದು ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಪೈಕಿ ₹40 ಸಾವಿರ ಅನ್ನು ಸುಬ್ಬೇಗೌಡರ ಪತ್ನಿ ಸುಧಾ ಅವರಿಗೆ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಸಿ.ಡಿ.ಶ್ರೀನಿವಾಸ ಸರ್ಕಾರದ ಪರ ವಾದ ಮಂಡಿಸಿದರು.
261104-36-1772853054

