ನವದೆಹಲಿ: ಕೋಲ್ಕತ್ತದಲ್ಲಿ ಜೂನ್ 21ರಂದು ನಡೆಯಲಿರುವ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಮುಖ್ಯ ಕಾರ್ಯಕ್ರಮವು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆಯಲಿದೆ.
ಈ ವರ್ಷ 'ಆರೋಗ್ಯಕ್ಯರ ವೃದ್ಧಾಪ್ಯಕ್ಕಾಗಿ ಯೋಗ' ಎಂಬ ಘೋಷವಾಕ್ಯದಡಿ ಯೋಗ ದಿನವನ್ನು ಆಯೋಜಿಸಲಾಗುತ್ತಿದೆ ಎಂದು ಆಯುಷ್ ಖಾತೆ ರಾಜ್ಯ ಸಚಿವ ಪ್ರತಾಪರಾವ್ ಜಾಧವ್ ಅವರು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವೃದ್ಧಾಪ್ಯದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತೇಜಿಸುವಲ್ಲಿ ಯೋಗದ ಪಾತ್ರವನ್ನು ಇದು ಎತ್ತಿ ಹಿಡಿಯುತ್ತದೆ ಎಂದರು.
ಯೋಗ ದಿನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಅಂದು ಜಗತ್ತಿನಾದ್ಯಂತ ಒಟ್ಟು 2,500 ಯೋಗ ಕಾರ್ಯಕ್ರಮಗಳು ನಡೆಯಲಿವೆ. ಮೋದಿ ಅವರ ದೂರದೃಷ್ಟಿಯುಳ್ಳ ನಾಯಕತ್ವದಲ್ಲಿ ಯೋಗವು ಜಾಗತಿಕ ಮಟ್ಟದಲ್ಲಿ ಸಾಮೂಹಿಕ ಚಳವಳಿಯಾಗಿ ಬೆಳೆದಿದೆ. ಲಕ್ಷಾಂತರ ಜನರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಯೋಗವನ್ನು ಅಳವಡಿಸಿಕೊಂಡಿದ್ದಾರೆ' ಎಂದು ಜಾಧವ್ ಹೇಳಿದರು.

